ಇಂಗ್ಲಿಷ್ ಒಂದು ಕಾಯಿಲೆಯೇ?
ಇಂಗ್ಲಿಷ್ ಒಂದು ಕಾಯಿಲೆಯೆಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹೇಳಿರುವುದು ಸರಿಯಲ್ಲ. ಮಾತೃ ಭಾಷೆಗೆ ಬೆಂಬಲವೆಂಬ ಒಂದು ನಾಟಕವಾಡುತ್ತಾ ಇಡೀ ರಾಷ್ಟ್ರಕ್ಕೆ ಒಂದೇ ಭಾಷೆಯನ್ನು ಹೇರುವ ಕೇಂದ್ರಸರಕಾರದ ಕಾರ್ಯಸೂಚಿ ಉಪರಾಷ್ಟ್ರಪತಿಗಳ ಸಲಹೆಯ ಹಿಂದಿದೆ ಎಂದು ಯಾರಾದರೂ ತಿಳಿದರೆ ಅದು ತಪ್ಪಾಗಲಾರದು.
ಆಧುನಿಕ ಭಾರತೀಯ ರಾಷ್ಟ್ರವನ್ನು ಒಂದುಗೂಡಿಸುವ ಅಂಶಗಳನ್ನು ಗಮನಿಸಿದರೆ ವಿಭಿನ್ನ ವಿಷಯಗಳನ್ನು ಒಂದುಗೂಡಿಸುವಲ್ಲಿ ಇಂಗ್ಲಿಷ್ ಅತ್ಯಂತ ಗರಿಷ್ಠ ಮಟ್ಟದಲ್ಲಿ ಒಂದು ಅಂಟಿನಂತೆ ಕೆಲಸ ಮಾಡಿದೆ. ಸಂಸ್ಕೃತಿಗಳು, ಭಾಷೆಗಳು ಮತ್ತು ಧರ್ಮಗಳು, ಇವುಗಳ ಬಹುತ್ವ ಮತ್ತು ವಿವಿಧತೆಗಳ ನಡುವೆ, ಇವುಗಳನ್ನೆಲ್ಲ ಸಂಪರ್ಕಿಸುವ ಒಂದು ಪ್ರಮುಖ ಕೊಂಡಿಯಾಗಿ ಇಂಗ್ಲಿಷ್ ಕಾರ್ಯವೆಸಗಿದೆ. ನಮಗೆ ನಮ್ಮೆಲ್ಲರ ಮೇಲೆ ಪ್ರಭಾವ ಹಾಗೂ ಪರಿಣಾಮ ಬೀರುವ ವಿಷಯಗಳಲ್ಲಿ ಅಖಿಲ ಭಾರತ ಮಟ್ಟದ ಒಂದು ಚಿತ್ರ ದೊರಕುವುದು ಇಂಗ್ಲಿಷ್‌ನ ಮೂಲಕವೇ.
ನಮ್ಮ ಮಾತೃಭಾಷೆಯ ಬಗ್ಗೆ ನಮಗೆ ಪ್ರೀತಿ ಸಹಜ. ಅಲ್ಲದೆ ಮಾತೃಭಾಷೆಯ ಮೂಲಕ ನೀಡುವ ಪ್ರಾಥಮಿಕ ಶಿಕ್ಷಣ ಕಲಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂಬುದು ನಿಜ. ಆದರೂ ಹೊಸ ವಿಚಾರಗಳು, ನವನವೀನ ತಂತ್ರವಿಜ್ಞಾನಗಳು, ಉನ್ನತ ಶಿಕ್ಷಣದ ಸವಲತ್ತುಗಳು ಎಲ್ಲ ರಂಗಗಳಲ್ಲೂ ಅವಕಾಶದ ಬಾಗಿಲು ತೆರೆಯುವುದು ಇಂಗ್ಲಿಷ್‌ನ ಮೂಲಕವೇ ಎಂಬುದನ್ನು ನಾವು ಮರೆಯಲಾಗದು. ಇಂಗ್ಲಿಷ್‌ನ ಹೊರತಾಗಿ ವಿದೇಶಗಳಲ್ಲಿ ನೌಕರಿ ಊಹಿಸಲೂ ಅಸಾಧ್ಯ.
ತಮ್ಮ ವೈಭವಯುತವಾದ ಸಾಹಿತ್ಯಕ ಪರಂಪರೆಯ ಹೊರತಾಗಿಯೂ ಯಾವುದೇ ಭಾರತೀಯ ಭಾಷೆ ಈ ಎಲ್ಲ ಪಾತ್ರಗಳನ್ನು ವಹಿಸಲಾಗದು ಮತ್ತು ಇಷ್ಟೆಲ್ಲ ಕೆಲಸಗಳನ್ನು ಮಾಡಲಾಗದು.
ಜನಸಂಖ್ಯಾ ದೃಷ್ಟಿಯಿಂದ ಮತ್ತು ಸರಕಾರದ ಆಶ್ರಯದ ಹೊರತಾಗಿಯೂ ಹಿಂದಿ ಭಾಷೆಯು ಹೊಸ ವಿಚಾರಗಳನ್ನು ಸ್ವೀಕರಿಸುವ ನಿಟ್ಟಿನಲ್ಲಿ ಹಲವು ದಕ್ಷಿಣ ಭಾರತೀಯ ಭಾಷೆಗಳಿಗೆ ಸರಿಸಾಟಿಯಲ್ಲ. ದಕ್ಷಿಣ ಭಾರತದ ಭಾಷೆಗಳ ಸಾಹಿತಿಗಳು, ನಾಟಕಕಾರರು ಮತ್ತು ಸಿನೆಮಾ ನಿರ್ಮಾಪಕರು ಪ್ರಾದೇಶಿಕ ಭಾಷೆಗಳಲ್ಲಿ ದಶಕಗಳ ಕಾಲ ಕ್ಷೇತ್ರ ಕಾರ್ಯ ಮಾಡಿದ್ದರು. ಪರಿಣಾಮವಾಗಿ ಹಿಂದಿ ಮಾತಾಡುವ ರಾಜ್ಯಗಳಿಗಿಂತ ಬಹಳ ಮೊದಲೇ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ, ಸಾರ್ವತ್ರಿಕ ಸಾಕ್ಷರತೆ, ಕೆಳಮಟ್ಟದಲ್ಲೂ ಪ್ರಜಾಪ್ರಭುತ್ವ, ಕೃಷಿ ಸುಧಾರಣೆಗಳು ಇತ್ಯಾದಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡವು. ಭೂಭಾಗಗಳಿಂದ ಸುತ್ತುವರಿಯಲ್ಪಟ್ಟ ಒಂದು ಪ್ರದೇಶದ ಭಾಷಾ ಮಾಧ್ಯಮವಾಗಿದ್ದ ಹಿಂದಿಗೆ ಕರಾವಳಿಯ ತೊರೆಗಳ ಮತ್ತು ಸಮುದ್ರದಾಚೆಯ ವ್ಯಾಪಾರಿಗಳೊಂದಿಗೆ ಸೃಜನಾತ್ಮಕ ಸಂವಹನ ನಡೆಸುವ ಸವಲತ್ತು ದೊರಕಲಿಲ್ಲ. ಈಗ ಇರುವ ಸ್ಥಾನದಿಂದ ಇಂಗ್ಲಿಷನ್ನು ಪದಚ್ಯುತಗೊಳಿಸಿದರೆ ಹಿಂದಿ ಶ್ರೀಮಂತವಾಗುವ ಅವಕಾಶದಿಂದ ವಂಚಿತವಾಗುತ್ತದೆ.
ಉತ್ತರ ಭಾರತೀಯರು ದಕ್ಷಿಣ ಭಾರತದ ಒಂದು ಭಾಷೆಯನ್ನು ಕಲಿಯಬೇಕು ಎನ್ನುವ ಶ್ರೀ ನಾಯ್ಡುರವರ ಸಲಹೆ ಅತಾರ್ಕಿಕ ಮತ್ತು ಅಪ್ರಾಯೋಗಿಕ. ಹೀಗೆ ಒಂದು ಭಾಷೆಯನ್ನು ಕಲಿತಲ್ಲಿ ಅದು ಯಾವುದೇ ರೀತಿಯಲ್ಲಿ ರಾಷ್ಟ್ರೀಯ ಏಕತೆಯನ್ನು ಸಾಧಿಸಲು ನೆರವಾಗುತ್ತದೆ ಎಂಬುದು ಅನುಮಾನಾಸ್ಪದ. ಭಾರತದ ರಾಜ್ಯಗಳಲ್ಲಿ ಭಾಷೆಗಳನ್ನು ಕಲಿಯುವ ಹೊರೆಯನ್ನು ಸಮಾನವಾಗಿಸುವ ಇಂತಹ ಒಂದು ಹೆಜ್ಜೆ ವಿಕೃತ ಹೆಜ್ಜೆಯಾದೀತು. ತ್ರಿವೆಂಡ್ರಮ್‌ನಲ್ಲಿ ನೆಲೆಸಿರುವ ಹಿಂದಿ ಭಾಷಿಕನೊಬ್ಬ ಮಲಯಾಳಂ ಕಲಿಯುವುದರಿಂದ ಅವನಿಗೆ ಲಾಭ ಸಿಗಬಹುದು; ಆದರೆ ಉತ್ತರ ಭಾರತದಲ್ಲಿ ಅಲ್ಲಿಯ ಶಾಲೆಗಳ ಮಕ್ಕಳಿಗೆ ದಕ್ಷಿಣ ಭಾರತದ ಒಂದು ಭಾಷೆಯನ್ನು ಕಲಿಸಿದಲ್ಲಿ ಅವರಿಗೆ ಸಮಾನವಾದ ಲಾಭಗಳಾಗುವುದಿಲ್ಲ. ಇದಕ್ಕೆ ಬದಲಾಗಿ ಆ ಮಕ್ಕಳಿಗೆ ಇಂಗ್ಲಿಷ್ ಕಲಿಸಿದಲ್ಲಿ ಇದರಿಂದ ಅವರಿಗೆ ನೌಕರಿಯ ಅವಕಾಶಗಳು ಗಣನೀಯವಾಗಿ ಏರುತ್ತವೆ; ಅವರ ಭಾಷಾ ಕೌಶಲ್ಯಗಳು ಹೆಚ್ಚುತ್ತವೆ.
ತ್ರಿಭಾಷಾ ಸೂತ್ರದ ಮೂಲಕ ಅವರಿಗೆ ಇಂಗ್ಲಿಷ್ ಕಲಿಸಬೇಕು. ಸತ್ಯ ಸಂಗತಿ ಎಂದರೆ ಈ ತ್ರಿಭಾಷಾ ಸೂತ್ರವನ್ನು ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾತ್ರ ಪ್ರಾಮಾಣಿಕವಾಗಿ ಅನುಷ್ಠಾನಿಸಲಾಗಿದೆ. ಉತ್ತರ ಭಾರತದ ರಾಜ್ಯಗಳು ಮುಖ್ಯವಾಗಿ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಬಿಹಾರ್, ಛತ್ತೀಸ್‌ಗಡ, ಉತ್ತರಾಖಂಡ, ಜಾರ್ಖಂಡ್ ತ್ರಿಭಾಷಾ ಸೂತ್ರ ಅನುಷ್ಠಾನವನ್ನು ಗಂಭೀರವಾಗಿ ಪರಿಗಣಿಸಲೂ ಇಲ್ಲ; ಆ ಬಗ್ಗೆ ಪ್ರಾಮಾಣಿಕವಾಗಿ ನಡೆದುಕೊಳ್ಳಲೂ ಇಲ್ಲ. ಉತ್ತರ ಪ್ರದೇಶ ಇಂಗ್ಲಿಷನ್ನು ಸಂಪೂರ್ಣವಾಗಿ ಬದಿಗೆ ತಳ್ಳಿದರೆ, ಬಿಹಾರವು ಯಶಸ್ವಿ ಅಭ್ಯರ್ಥಿಗಳ ಒಂದು ಹೊಸ ವರ್ಗವಾಗಿ, ಕೆಟಗರಿಯಾಗಿ ‘ಇಂಗ್ಲಿಷ್ ಇಲ್ಲದೆ ತೇರ್ಗಡೆ’ (ಪಾಸ್ ವಿದೌಟ್ ಇಂಗ್ಲಿಷ್) ಎಂಬ ನಿಯಮವನ್ನು ಜಾರಿಗೆ ತಂದಿತು. ಹಿಂದಿಯ ಹೊರತಾಗಿ ಬೇರೆ ಯಾವ ಭಾಷೆಯಲ್ಲೂ ವಿದ್ಯಾರ್ಥಿಗಳು ಹಿಡಿತ ಸಾಧಿಸಲಿಲ್ಲ. ಸ್ಥಳೀಯ ಭಾಷೆಗಳಾದ ಉರ್ದು ಮತ್ತು ಮೈಥಿಲಿಯಂತಹ ಭಾಷೆಗಳಿಗೆ ಕೂಡ ತ್ರಿಭಾಷಾ ಸೂತ್ರದಲ್ಲಿ ಸ್ಥಾನ ನಿರಾಕರಿಸಲಾಯಿತು.
ಯಾವುದು ನಮಗೆ ಸೇರಿದ್ದು ಮತ್ತು ಯಾವುದು ನಮಗೆ ಸೇರಿದ್ದಲ್ಲ ಎಂಬ ಚರ್ಚೆಗಳಲ್ಲಿ ಕಾಲಹರಣ ಮಾಡದೆ ನಮ್ಮ ರಾಷ್ಟ್ರವು ಅದರ ಬಹುತ್ವವನ್ನು ತುಂಬು ಮನಸ್ಸಿನಿಂದ ಅಪ್ಪಿಕೊಳ್ಳಬೇಕಾಗಿದೆ, ಒಪ್ಪಿಕೊಳ್ಳಬೇಕಾಗಿದೆ. ನಮ್ಮ ದೇಶದ ಮುಂದಿರುವ ನಿರುದ್ಯೋಗದ ಬೆಟ್ಟದ ಮುಂದೆ ಇಂಗ್ಲಿಷ್ ಭಾಷೆಯನ್ನು ಓಡಿಸಿ ಅಥವಾ ‘ಅದು ಒಂದು ಕಾಯಿಲೆ’ ಎಂದು ಹೇಳುವ ಲಕ್ಸುರಿ ನಮಗಿಲ್ಲ. ಇಂಗ್ಲಿಷ್‌ನ ಸರಳ ಸಾಕ್ಷರತೆ ಇದ್ದರೆ ಸಾಕು, ವ್ಯಕ್ತಿಯೊಬ್ಬ ನಾಮಫಲಕಗಳನ್ನು, ಬೀದಿಯ ಹೆಸರುಗಳನ್ನು ಇತ್ಯಾದಿ ಇತ್ಯಾದಿಗಳನ್ನು ಓದಲು ಸಮರ್ಥನಾಗುತ್ತಾನೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳೋಣ. ಆತ ಪಶ್ಚಿಮದ ಮೂರು ಭೂಖಂಡಗಳಲ್ಲಿ ವ್ಯವಹರಿಸಬಲ್ಲ ಎಂಬುದನ್ನೂ ಮರೆಯದಿರೋಣ.
ನಮ್ಮ ದೇಶದ ಮುಂದಿರುವ ನಿರುದ್ಯೋಗದ ಬೆಟ್ಟದ ಮುಂದೆ ಇಂಗ್ಲಿಷ್ ಭಾಷೆಯನ್ನು ಓಡಿಸಿ ಅಥವಾ ‘ಅದು ಒಂದು ಕಾಯಿಲೆ’ ಎಂದು ಹೇಳುವ ಲಕ್ಸುರಿ ನಮಗಿಲ್ಲ. ಇಂಗ್ಲಿಷ್‌ನ ಸರಳ ಸಾಕ್ಷರತೆ ಇದ್ದರೆ ಸಾಕು ವ್ಯಕ್ತಿಯೊಬ್ಬ ನಾಮಫಲಕಗಳನ್ನು, ಬೀದಿಯ ಹೆಸರುಗಳನ್ನು ಇತ್ಯಾದಿ ಇತ್ಯಾದಿಗಳನ್ನು ಓದಲು ಸಮರ್ಥನಾಗುತ್ತಾನೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳೋಣ. ಆತ ಪಶ್ಚಿಮದ ಮೂರು ಭೂಖಂಡಗಳಲ್ಲಿ ವ್ಯವಹರಿಸಬಲ್ಲ ಎಂಬುದನ್ನೂ ಮರೆಯದಿರೋಣ.