ಗೂಡಿನಬಳಿ ಬಾಲಕಿಯ ಅತ್ಯಾಚಾರ ಪ್ರಕರಣ: ಮೂವರು ಪೊಲೀಸ್ ವಶಕ್ಕೆ
ಆಕ್ರೋಶಿತ ಸಾರ್ವಜನಿಕರಿಂದ ಆರೋಪಿಗಳ ಮನೆ, ವಾಹನಕ್ಕೆ ಕಲ್ಲೆಸೆತ
ಬಂಟ್ವಾಳ, ಸೆ.20: ತಾಲೂಕಿನ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಎಂಬಲ್ಲಿ 4ನೆ ತರಗತಿಯ 8 ವರ್ಷದ ಬಾಲಕಿಯ ಮೇಲಿನ ಸರಣಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸರು ಮೂವರು ಆರೋಪಿಗಳನ್ನು ಬುಧವಾರ ರಾತ್ರಿಯೇ ವಶಕ್ಕೆ ಪಡೆದಿದ್ದಾರೆ.
ಗೂಡಿನಬಳಿಯ ನಿವಾಸಿ ಗುಜರಿ ವ್ಯಾಪಾರಿ ಶೇಕಬ್ಬ (65) ಬೇಕರಿ ಐಟಂ ಲೈನ್ಸೇಲ್ ವೃತ್ತಿಯ ಅಂಬಾರಿ ಯಾನೆ ರಝಾಕ್(35) ಹಾಗೂ ಹೊಟೇಲ್ ಕಾರ್ಮಿಕ ನವಾಝ್(22)ಎಂಬವರೇ ಪೊಲೀಸ್ ವಶದಲ್ಲಿರುವ ಆರೋಪಿಗಳು.
ಸಾರ್ವಜನಿಕರಿಂದ ಠಾಣೆಗೆ ಮುತ್ತಿಗೆ:
ದುಷ್ಕೃತ್ಯ ಬಯಲಿಗೆ ಬರುತ್ತಿದ್ದಂತೆ ಸಾರ್ವಜನಿಕರು ಬುಧವಾರ ರಾತ್ರಿ ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದರು. ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್ಗಳಡಿ ಪ್ರಕರಣಗಳನ್ನು ದಾಖಲಿಸಿ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಆರೋಪಿಗಳ ಮನೆ, ಕಾರಿಗೆ ಹಾನಿ
ರಾತ್ರಿಯ ವೇಳೆ ಗೂಡಿನಬಳಿ ಪರಿಸರದಲ್ಲೂ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರಿಂದ ಪರಿಸರದಲ್ಲಿ ಕೆಲ ಕಾಲ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭ ಕೆಲ ಯುವಕರು ದುಷ್ಕೃತ್ಯದ ಆರೋಪಿಗಳಲ್ಲಿ ಒಬ್ಬನೆನ್ನಲಾಗಿರುವ ರಝಾಕ್ನ ಮಾರುತಿ ಓಮ್ನಿ ಕಾರನ್ನು ಕಲ್ಲೆಸೆದು ಹಾನಿಗೊಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಆಕ್ರೋಶಿತರ ಗುಂಪನ್ನು ಚದುರಿಸಿ ಕಾರನ್ನು ಠಾಣೆಗೆ ಕೊಂಡೊಯ್ದಿದ್ದಾರೆ. ಇನ್ನೋರ್ವ ಆರೋಪಿ ಎನ್ನಲಾಗಿರುವ ಶೇಕಬ್ಬ ಎಂಬಾತನ ಮನೆಗೂ ಕಲ್ಲೆಸತ ನಡೆಸಿರುವ ಬಗ್ಗೆ ವರದಿಯಾಗಿದೆ.
ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ನೀಡಿದ ದೂರನ್ನು ಬಂಟ್ವಾಳ ನಗರ ಠಾಣೆಯಲ್ಲಿ ಸ್ವೀಕರಿಸಿದ್ದು, ದೌರ್ಜನ್ಯ ಎಸಗಿರುವ ಆರೋಪಿಗಳ ವಿರುದ್ಧ ಮೊ.ನ.388/18 ಕಲಂ: 376, 506, ಐಪಿಸಿ ಹಾಗೂ ಕಲಂ 4, 8, 12 ಫೋಕ್ಸೋ ಕಾಯ್ದೆ 2012ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಅವರು ತಿಳಿಸಿದ್ದಾರೆ.