ಆಳ್ವಾಸ್ ನುಡಿಸಿರಿ ಮತ್ತು ಎಡಪಂಥೀಯರ ಬೆಕ್ಕಿನ ಬಿಡಾರ
ಇಂದು ಹೊಸ ತಲೆಮಾರಿನ ಹೊಸ ಹುಡುಗರಿಗೆ ವೈಚಾರಿಕ, ಪ್ರಗತಿಪರ ಚಿಂತನೆ ದಕ್ಕದಂತೆ ಕೋಟೆ ಕಟ್ಟುವ ಪ್ರಯತ್ನವೊಂದು ನಡೆಯುತ್ತಿದೆ. ಅಂತಹ ಕೋಟೆಗಳನ್ನು ಮುರಿದು ಅವರೆಡೆಗೆ ತಮ್ಮ ಆಲೋಚನೆಗಳನ್ನು ಹೊತ್ತುಕೊಂಡು ಹೋಗುವ ಬರಹಗಾರರು ಹುಟ್ಟಬೇಕಾಗಿದೆ. ಅಂತಹವರು ಯಾವ ವೇದಿಕೆಯೇರಿದರೂ, ಆ ವೇದಿಕೆಯನ್ನೇ ತಮಗೆ ಪೂರಕವಾಗಿ ಬದಲಾಯಿಸಿ ಬಿಡುತ್ತಾರೆ. ಈ ನಿಟ್ಟಿನಲ್ಲಿ ವೇದಿಕೆಯನ್ನು ತನಗೆ ಪೂರಕವಾಗಿ ಮಲ್ಲಿಕಾ ಘಂಟಿ ಪರಿವರ್ತಿಸಬೇಕು ಎಂದು ಎಲ್ಲ ವಿಚಾರವಾದಿಗಳು ಅವರಿಗೆ ಒತ್ತಡ ಹೇರಬೇಕೇ ವಿನಃ ಅವರನ್ನು ವ್ಯಂಗ್ಯ ಮಾಡುತ್ತಾ, ತಮಾಷೆ ಮಾಡುತ್ತಾ ಕಾಲಹರಣ ಮಾಡುವುದಲ್ಲ. ನುಡಿಸಿರಿ ಎಂದಲ್ಲ, ಯಾವುದೇ ವೇದಿಕೆಯನ್ನು ನಮಗೆ ಪೂರಕವಾಗಿ ಬಳಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.
ಇತ್ತೀಚೆಗೆ ಓರ್ವ ಹಿರಿಯ ಚಿಂತಕ, ಪ್ರಗತಿಪರ ಲೇಖಕರಿಗೆ ಸಂಘ ಪರಿವಾರದ ‘ಧರ್ಮ ಸಂಸದ್’ ಸಮಾವೇಶದಲ್ಲಿ ಅತಿಥಿಯಾಗಿ ಭಾಗವಹಿಸಲು ಆಹ್ವಾನ ಬಂದಿತ್ತು. ಆ ಆಹ್ವಾನವನ್ನು ಹೇಗೆ ಸ್ವೀಕರಿಸಬೇಕು ಎಂಬ ಗೊಂದಲದಲ್ಲಿ ಅವರು, ಸಾಮಾಜಿಕ ತಾಣದಲ್ಲಿ ಕೆಲವರ ಅಭಿಪ್ರಾಯ ಕೇಳಿದ್ದರು. ಆ ಸಂದರ್ಭದಲ್ಲಿ ನಾನು ಸ್ಪಷ್ಟವಾಗಿ ನನ್ನ ಅಭಿಪ್ರಾಯ ಮಂಡಿಸಿದ್ದೆ. ‘‘ಸಂಘ ಪರಿವಾರಕ್ಕೆ ತನ್ನ ಸಿದ್ಧಾಂತದ ಕುರಿತಂತೆ ಸ್ಪಷ್ಟತೆಯಿದೆ. ಅಜೆಂಡಾವೂ ಇದೆ. ಧರ್ಮಸಂಸದ್ ನಡೆಸುತ್ತಿರುವುದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಯಾರಿ ನಡೆಸಲು. ಧರ್ಮ ಸಂಸದ್‌ನಲ್ಲಿ ಭಾಗವಹಿಸುವವರು ಸಂಘ ಪರಿವಾರದಿಂದ ತರಬೇತಿಗೊಂಡ ಕಾರ್ಯಕರ್ತರು. ಅಲ್ಲಿ ಶ್ರೀ ಸಾಮಾನ್ಯ ಕೇಳುಗರು ಬರುವುದಿಲ್ಲ. ನಮ್ಮ ವಾದವನ್ನು ಮಂಡಿಸಿದಾಕ್ಷಣ ಬದಲಾಗುವವರು ಯಾರೂ ಅಲ್ಲಿಲ್ಲ. ಆ ಧರ್ಮ ಸಂಸದ್ ಹೊರಬರಲು ಬಾಗಿಲಿಲ್ಲದ ಚಕ್ರವ್ಯೂಹ. ಅದರೊಳಗೆ ಹೋಗಿ ನೀವೇನೋ ಪಾರಾಗಿ ಬರಬಲ್ಲಿರಿ. ಆದರೆ ನಿಮ್ಮ ಹಿಂದುಗಡೆ ನೂರಾರು ಅಮಾಯಕ ಹಿಂದುಳಿದ ವರ್ಗಗಳ ಸಮೂಹವಿದೆ. ಅವರ ನಿಜವಾದ ಗುರಿ ನೀವಲ್ಲ, ನೀವು ಪ್ರತಿನಿಧಿಸುವ ಈ ಅಮಾಯಕ ಸಮೂಹ. ನೀವು ಸುಲಭವಾಗಿ ಅಲ್ಲಿಂದ ಕಳಚಿ ಬಂದಂತೆ, ನಿಮ್ಮನ್ನು ಹಿಂಬಾಲಿಸಿ ಅಲ್ಲಿಗೆ ಬರುವ ಅಮಾಯಕ ಹಿಂದುಳಿದ ಸಮೂಹ ಹೊರಬರಲಾರರು. ಇದೊಂದು ರೀತಿಯಲ್ಲಿ ಹಿಂದೂ ಸಮಾಜೋತ್ಸವಕ್ಕೆ ಸಕ್ಕರೆ ಕೊಟ್ಟು ಸೌಹಾರ್ದ ಮೆರೆಯಲು ಹೋದಂತೆ. ಯಾಕೆಂದರೆ ಸಮಾಜೋತ್ಸವದ ಅಜೆಂಡಾವೇ ಸೌಹಾರ್ದ ಕೆಡಿಸುವುದಾಗಿರುವಾಗ, ಸಕ್ಕರೆ ಕೊಟ್ಟು ಅವರ ಮನ ಬದಲಿಸಲು ಸಾಧ್ಯವೆ?’’ ಆ ಬಳಿಕ ಅವರು ಧರ್ಮ ಸಂಸದ್ ಸಮಾವೇಶದಲ್ಲಿ ಭಾಗವಹಿಸುವ ನಿರ್ಧಾರದಿಂದ ಕಾರಣಾಂತರದಿಂದ ಹಿಂದೆ ಸರಿದಿದ್ದರು.
ಇದೇ ಸಂದರ್ಭದಲ್ಲಿ ಸಂಘ ಪರಿವಾರದ ಹಿಡಿತದಲ್ಲೇ ದೊಡ್ಡ ಪ್ರಮಾಣದ ಶೋಷಿತ ಸಮುದಾಯವಿದೆ ಎನ್ನುವುದನ್ನು ನಾವು ಮರೆಯಬಾರದು. ಹೆಚ್ಚಿನವರು ದಾರಿ ತಪ್ಪಿ ಹೋದವರು. ಹಲವರು ಬೇರೆ ದಾರಿಗಳು ಹೊಳೆಯದೇ ಹೋದವರು. ಹಲವರು ಇದೇ ನಮ್ಮ ನಿಜವಾದ ದಾರಿ ಇರಬಹುದು ಎಂದು ನಂಬಿ ಹೋದವರು. ಸಂಘ ಪರಿವಾರಕ್ಕೆ ಒಂದು ದೊಡ್ಡ ಗುಣವಿದೆ. ಅವರು ಎಲ್ಲಿ ಖಾಲಿ ಜಾಗವಿದೆಯೋ ಅದನ್ನು ತಕ್ಷಣ ಆಕ್ರಮಿಸಿಕೊಂಡು ಬಿಡುತ್ತಾರೆ. ಜನಪರ ಶಕ್ತಿಗಳ ನಿಷ್ಕ್ರಿಯತೆಯನ್ನು ಬಳಸಿಕೊಂಡು ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗಿರುವ ವಿವಿಧ ಸಂಸ್ಥೆಗಳ ಖಾಲಿ ಜಾಗಗಳನ್ನು ಹುಡುಕಿ ಹುಡುಕಿ ತುಂಬಿಕೊಂಡರು. ಇದು ಕಾಂಗ್ರೆಸ್ ಸರಕಾರ, ಇದು ಕಮ್ಯುನಿಸ್ಟ್ ಸರಕಾರ ಎಂದು ಅವರು ಲೆಕ್ಕ ಹಾಕುತ್ತಾ ಕೂರಲಿಲ್ಲ. ಸರಕಾರದ ಒಳಗಿರುವ ಹಲವು ಪ್ರಾಧಿಕಾರಗಳಲ್ಲಿ, ಸಂಸ್ಥೆಗಳಲ್ಲಿ ಸಂಘ ಪರಿವಾರ ಬೇರು ಬಿಟ್ಟಿರುವುದನ್ನು ಸಾರಾಸಗಟಾಗಿ ಟೀಕಿಸುತ್ತೇವೆಯೇ ಹೊರತು, ಅದರೊಳಗೆ ಅವರು ಪ್ರವೇಶವಾಗಲು, ನಮ್ಮಿಳಗಿರುವ ‘ಮೇಲರಿಮೆ’ಯ ಕೊಡುಗೆ ಎಷ್ಟು ಎನ್ನುವುದನ್ನು ಯಾರೂ ಪ್ರಶ್ನಿಸಿಕೊಳ್ಳಲು ಹೋಗಲಿಲ್ಲ. ದೇವಸ್ಥಾನ, ಜಾತ್ರೆ, ಉತ್ಸವ ಎಲ್ಲವನ್ನೂ ತಮಗೆ ಪೂರಕವಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಆರೆಸ್ಸೆಸ್‌ನ ನಾಯಕರು ಆಲೋಚಿಸುತ್ತ ಕಾರ್ಯಯೋಜನೆಗಳನ್ನು ರೂಪಿಸುತ್ತಾ ಬಂದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಶ್ರೀಸಾಮಾನ್ಯರನ್ನು ತಲುಪಲು ಅದೇ ಶ್ರೀಸಾಮಾನ್ಯರ ಪರಿಭಾಷೆಗಳನ್ನು ಬಳಸಿದರು.
ಜನಸಾಮಾನ್ಯರು ಕೋಮುವಾದಿಗಳಾಗುತ್ತಿದ್ದಾರೆ, ಮೂಲಭೂತವಾದಿಗಳಾಗುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪಿಸುತ್ತಾ ಕಾಲಕಳೆಯುವ ಜನಪರ ಸಂಘಟಕರು, ಈ ಶ್ರೀಸಾಮಾನ್ಯರನ್ನು ತಲುಪಲು ಅವರ ಬಳಿಗೆ ಹೋಗುವ ಯಾವ ದಾರಿಯನ್ನು ಉಳಿಸಿಕೊಂಡಿವೆ? ಎಂದರೆ ಉತ್ತರವಿಲ್ಲ. ಶ್ರೀಸಾಮಾನ್ಯರು ನಮ್ಮ ಸಭೆಗೆ ಬರುವುದಿಲ್ಲ ಎಂದು ಹೇಳುವ ಇವರು, ಅವರನ್ನು ಅವರಿರುವ ಜಾಗಗಳಿಗೆ ಹುಡುಕಿಕೊಂಡು ಹೋಗಬೇಕಾದ ತಮ್ಮ ಹೊಣೆಗಾರಿಕೆಗಳಿಂದ ನುಣುಚಿಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್, ದಸರಾ, ನುಡಿಸಿರಿ ಇಲ್ಲೆಲ್ಲ ಸೇರುವ ಜನರು ಬರೀ ಸಂಘ ಪರಿವಾರ ಚಿಂತನೆಗಳನ್ನು ತುಂಬಿಕೊಂಡವರಲ್ಲ. ಅಲ್ಲಿ ಶ್ರೀಸಾಮಾನ್ಯರು, ವಿದ್ಯಾರ್ಥಿಗಳು, ರಾಜಕಿಯೇತರವಾಗಿ ಯೋಚಿಸುವ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗೆ ನೋಡಿದರೆ ಇಂದು ವೈದಿಕರು, ಉದ್ಯಮಿಗಳು ಆಕ್ರಮಿಸಿಕೊಳ್ಳದ ಒಂದೇ ಒಂದು ವೇದಿಕೆ ನಮ್ಮಲ್ಲಿಲ್ಲ. ಮೂಡುಬಿದರೆಯಲ್ಲಿ ನಡೆಯಲಿರುವ ನುಡಿಸಿರಿ ಸಮ್ಮೇಳನವನ್ನು ತೆಗೆದುಕೊಳ್ಳೋಣ. ಸಾಹಿತ್ಯವನ್ನು ಕೇಂದ್ರವಾಗಿಟ್ಟು ಇವರು ಸಮ್ಮೇಳನವನ್ನು ನಡೆಸುತ್ತಿದ್ದಾರೆ. ಇಲ್ಲಿ ಸಂಘಟಕರು ವೈಯಕ್ತಿಕವಾಗಿ ತಮ್ಮದೇ ಆದ ಅಜೆಂಡಾ ಹೊಂದಿರಬಹುದು. ಆದರೆ ನುಡಿಸಿರಿಯಲ್ಲಿ ಸೇರುವ ಬಹುತೇಕ ಸಾಹಿತ್ಯಾಸಕ್ತರು ನಿರ್ದಿಷ್ಟವಾದ ಯಾವುದೇ ಅಜೆಂಡಾಗಳು ಇಲ್ಲದವರು ಎನ್ನುವುದನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ಇಂತಹ ವೇದಿಕೆಯಿಂದ ಆಹ್ವಾನ ಬಂದಾಗ ಪ್ರಗತಿ ಪರರ ಹೊಣೆಗಾರಿಕೆಯೇನು? ಇನ್ನಾದರೂ ಈ ಪ್ರಶ್ನೆಗೆ ಉತ್ತರವನ್ನು ಸ್ಪಷ್ಟಪಡಿಸಿಕೊಳ್ಳದೇ ಇದ್ದರೆ ಅಳಿದುಳಿದ ಶ್ರೀಸಾಮಾನ್ಯರನ್ನೂ ನಾವಾಗಿಯೇ ಸಂಘ ಪರಿವಾರದ ಬಾಯಿಗೆ ಒಪ್ಪಿಸಿದಂತಾಗುತ್ತದೆ.
ಒಬ್ಬ ಲೇಖಕನಿಗೆ, ಚಿಂತಕನಿಗೆ ವೇದಿಕೆ ಎಂದರೆ ಏನು? ಅದೊಂದು ಸ್ಥಾನವೆ? ಅದೊಂದು ಗೌರವವೆ? ಅಥವಾ ತನ್ನೊಳಗಿನ ವಿಚಾರಗಳನ್ನು ತೆರೆದಿಡಲು ಅವನಿಗೆ ದಕ್ಕಿದ ಒಂದು ಮಾಧ್ಯಮವೆ? ನುಡಿಸಿರಿಯಲ್ಲಿ ಖ್ಯಾತ ಲೇಖಕಿ ಮಲ್ಲಿಕಾ ಘಂಟಿ ಭಾಗವಹಿಸುತ್ತಿರುವ ಬಗ್ಗೆ ಕೆಲವು ಗೆಳೆಯರು ನಡೆಸುತ್ತಿರುವ ದಾಳಿಯನ್ನು ನೋಡುವಾಗ ಎದುರಾಗುವ ಪ್ರಶ್ನೆಗಳು ಇವು. ನನಗೆ, ಮಲ್ಲಿಕಾ ಘಂಟಿ ಯಾವ ವೇದಿಕೆಯನ್ನು ಏರಿದರು, ಯಾರ ವೇದಿಕೆಯನ್ನು ಏರಿದರು ಎನ್ನುವುದಕ್ಕಿಂತ ಅವರು ಆ ವೇದಿಕೆಯಲ್ಲಿ ನಿಂತು ಏನನ್ನು ಮಾತನಾಡಿದರು ಎನ್ನುವುದಷ್ಟೇ ಮುಖ್ಯ. ಸಾವಿರಾರು ಜನರು ಸೇರುವ ನುಡಿಸಿರಿ ವೇದಿಕೆಯಲ್ಲಿ ನಿಂತು ಮಲ್ಲಿಕಾ ಘಂಟಿ ದಲಿತಪರ, ಪ್ರಗತಿಪರ, ಶೋಷಿತರ ಪರ ಮಾತುಗಳನ್ನು ಆಡಿದರೆ ಅದು ಅವರು ಯಾವುದೋ ಪ್ರಗತಿಪರ ವೇದಿಕೆಯಲ್ಲಿ ನಿಂತು ಆಡುವುದಕ್ಕಿಂತ ಹೆಚ್ಚು ಅರ್ಥಪೂರ್ಣ. ಯಾಕೆಂದರೆ, ಅಂತಹ ಮಾತುಗಳು ತಲುಪಬೇಕಾದವರನ್ನು ಮೊದಲು ತಲುಪಬೇಕು. ಮಲ್ಲಿಕಾಘಂಟಿ ನುಡಿಸಿರಿ ವೇದಿಕೆಯಲ್ಲಿ ಅದನ್ನು ತಲುಪಿಸಲಿ ಎಂದು ನಾನು ಆಶಿಸುತ್ತೇನೆ.
ಅಷ್ಟೇ ಅಲ್ಲ, ಸೇರಿದ ಅಷ್ಟೂ ಜನರ ಕೇಂದ್ರ ಬಿಂದು ಮಲ್ಲಿಕಾ ಘಂಟಿಯಾಗುತ್ತಾರೆ. ಮತ್ತು ಅವರು ಪ್ರತಿನಿಧಿಸುವ ಸಿದ್ಧಾಂತಗಳು ಕೆಲವರ ಗಮನಕ್ಕಾದರೂ ಬರಲು ಅದು ಕಾರಣವಾಗುತ್ತದೆ. ನುಡಿಸಿರಿಯಲ್ಲಿ ಈ ಹಿಂದೆ ಬರಗೂರು ರಾಮಚಂದ್ರಪ್ಪಅವರು ಭಾಗವಹಿಸಿ ಆಡಿದ ಮಾತುಗಳನ್ನು ನಾನು ಕೇಳಿದ್ದೇನೆ. ‘‘ಕನ್ನಡದ ಸಂಸ್ಕೃತಿ ದುರ್ಯೋಧನ ಸಂಸ್ಕೃತಿ’’ ಎಂದು, ಸ್ನೇಹ, ಛಲ, ಶೌರ್ಯಗಳನ್ನು ಹೊಸ ಪರಿಭಾಷೆಯಲ್ಲಿ ಅವರು ವಿವರಿಸಿದ್ದರು. ಹಾಗೆಯೇ ದಸರಾ ಸಮಾರಂಭವನ್ನು ಉದ್ಘಾಟಿಸಿ ಅವರು ಆಡಿದ ಮಾತುಗಳನ್ನೂ ಕೇಳಿದ್ದೇನೆ. ಅಲ್ಲಿ ಸೇರಿದ ಅಷ್ಟೂ ಜನರನ್ನು ದಂಗುಬಡಿಸುವಂತೆ, ಹಿಂಸೆಯ ಮೌಲ್ಯವನ್ನು ಪ್ರತಿಪಾದಿಸುವ ವಿಜಯದಶಮಿ ಆಚರಣೆಯ ಬಗ್ಗೆಯೇ ಪ್ರಶ್ನೆ ಎತ್ತಿದ್ದರು. ಈ ಮಾತುಗಳನ್ನು ವಿಚಾರವಾದಿಗಳ ವೇದಿಕೆಯಲ್ಲಿ ನಿಂತು ಆಡುವುದಕ್ಕಿಂತ, ಪುರೋಹಿತ ಶಾಹಿಗಳ ವೇದಿಕೆಯಲ್ಲಿ ನಿಂತು ಆಡುವುದಕ್ಕೆ ಹೆಚ್ಚು ಧೈರ್ಯಬೇಕು. ಶಕ್ತಿ ಬೇಕು. ವೈದಿಕ ಮೌಲ್ಯಗಳನ್ನು ನಂಬಿದವರು, ಆ ನಂಬಿಕೆಗೆ ಮೋಸ ಹೋದವರು ಸಹಿತ ಲಕ್ಷೋಪಲಕ್ಷ ಜನರು ಸೇರುವ ವೇದಿಕೆಯಲ್ಲಿ ನಿಂತು ಇಂತಹ ಮಾತುಗಳನ್ನು ಆಡಿದರೆ ಅವು ಹೆಚ್ಚು ಪ್ರಯೋಜನಕಾರಿ. ಈ ಮಾತುಗಳಿಂದ ಬೆರಳೆಣಿಕೆಯ ಜನರು ಪ್ರಭಾವಿತರಾದರೂ ಸಾಕು, ಅದು ಮುಂದಿನ ದಿನಗಳಲ್ಲಿ ವೈಚಾರಿಕತೆಗೆ ಹೊಸ ದಿಕ್ಕನ್ನು ನೀಡಬಹುದು. ನಾವು ದಸರಾದಂತಹ ಜಾತ್ರೆಗಳ ಮೂಲಕ ಪ್ರತಿಪಾದಿಸುವ ವೈದಿಕರ ಹುನ್ನಾರಗಳನ್ನು ವಿರೋಧಿಸಬೇಕೇ ಹೊರತು ಅಲ್ಲಿ ಸೇರಿರುವ ಈ ನಾಡಿನ ಅಸಂಖ್ಯ ಜನಸಾಮಾನ್ಯರನ್ನಲ್ಲ. ಆದರೆ ಕೆಲವು ಎಡಪಂಥೀಯ ಚಿಂತಕರದ್ದು ಇತ್ತೀಚಿನ ದಿನಗಳಲ್ಲಿ ಬೆಕ್ಕಿನ ಬಿಡಾರವಾಗುತ್ತಿದೆ. ತಮ್ಮ ಸುತ್ತ ತಾವೇ ಬೇಲಿಯನ್ನು ಕಟ್ಟಿ, ಗೆರೆಗಳನ್ನು ಹಾಕಿಕೊಂಡು ಬಹುದೊಡ್ಡ ಸಂಖ್ಯೆಯ ಜನರನ್ನು ವಿಚಾರಗಳಿಂದ ದೂರ ವಿಡುತ್ತಿದ್ದಾರೆ. ತನ್ನ ವಿಚಾರಗಳನ್ನು ಹಂಚಿಕೊಳ್ಳಲು ಎಲ್ಲ ಮಾಧ್ಯಮಗಳನ್ನ್ನು ಶಕ್ತವಾಗಿ ಬಳಸಿಕೊಳ್ಳುತ್ತಾ, ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾದವರು, ‘ಇದು ಯಾರ ಪತ್ರಿಕೆ, ಇದು ಯಾರ ವೇದಿಕೆ, ಯಾರು ಸಂಘಟಿಸಿದ ಸಮಾವೇಶ’ ಎಂದು ಮೂಸಿ ನೋಡುತ್ತಾ, ಹೊಸ ರೂಪದ ಅಸ್ಪಶ್ಯತೆ ಯೊಂದನ್ನು ಹುಟ್ಟು ಹಾಕುತ್ತಿದ್ದಾರೆ. ಇದರ ಸಂಪೂರ್ಣ ಲಾಭವನ್ನು ವೈದಿಕಶಾಹಿ, ಪುರೋಹಿತಶಾಹಿ ಶಕ್ತಿಗಳು ತಮ್ಮದಾಗಿಸಿಕೊಳ್ಳುತ್ತಿವೆ.
ನಾವೇ ಒಂದಷ್ಟು ಸಮಾನ ಮನಸ್ಕರು ಹಮ್ಮಿಕೊಂಡ ಸಮ್ಮೇಳನ ತನ್ನ ಉದ್ದೇಶವನ್ನು ಸಂಪೂರ್ಣವಾಗಿ ಸಾಧಿಸಿಕೊಳ್ಳುವುದಿಲ್ಲ. ನಾವೇ ಆಡಿದ ಮಾತುಗಳನ್ನು ನಾವೇ ಕುಳಿತು ಕೇಳಿ, ಎದ್ದು ಬಂದಂತೆ ಇದು. ಅದೇ ಸಂದರ್ಭದಲ್ಲಿ ಯಾರೋ ಒಬ್ಬ ಒಂದೈವತ್ತು ಸಾವಿರ ಜನರನ್ನು ಸೇರಿಸಿ ಒಬ್ಬ ವಿಚಾರವಾದಿಗೆ ಅಥವಾ ಎಡಪಂಥೀಯ ಚಿಂತಕನಿಗೆ ವೇದಿಕೆ ಕೊಟ್ಟಾಗ, ನಾನು ಭಾಗವಹಿಸುವುದಿಲ್ಲ ಎಂದರೆ ಅದರಿಂದ ನಷ್ಟ ಯಾರಿಗೆ? ಒಬ್ಬ ಭಾಷಣಕಾರ ಅಲ್ಲಿ ನರ್ತಿಸುವುದಕ್ಕೋ, ಮನರಂಜಿಸುವುದಕ್ಕೋ ವೇದಿಕೆ ಏರುವುದಿಲ್ಲ. ಅವನು ಆ ವೇದಿಕೆಯೇರಿ, ಆ ವೇದಿಕೆಯ ಮನಸ್ಥಿತಿಗೆ ಸಂಬಂಧ ಪಡದ ಹೊಸ ವಿಷಯವೊಂದನ್ನು ಮುಂದಿಟ್ಟಾಗ ಸೇರಿದ ಯುವಕರಲ್ಲಿ ನಾಲ್ಕು ಜನ ಆಲಿಸಿ ಅದನ್ನು ಒಪ್ಪಿಕೊಂಡರೂ ಅದು ಸಮಾಜಕ್ಕೆ ಸಿಗುವ ಅತಿ ದೊಡ್ಡ ಲಾಭ. ವೈಚಾರಿಕತೆ ಜನಸಾಮಾನ್ಯರಿಂದ ದೂರದಲ್ಲಿ ಬೆಕ್ಕಿನ ಬಿಡಾರ ಕಟ್ಟಿಕೊಂಡು ತಮಗೆ ತಾವೇ ಬದುಕಿಕೊಳ್ಳುತ್ತಿರುವಾಗ ಆರೆಸ್ಸೆಸ್‌ನಂತಹ ಸಂಘಟನೆಗಳು ಏನೇನೂ ತಿಳಿಯದ ಹುಡುಗರನ್ನು ಒಟ್ಟುಗೂಡಿಸಿ ಕಬಡ್ಡಿ ಆಡಿಸುತ್ತಾ, ಮೊಸರು ಕುಡಿಕೆ ಒಡೆಸುತ್ತಾ ತನ್ನ ಆಲೋಚನೆಗಳನ್ನು ಬಿತ್ತುತ್ತವೆ. ಯಾವ ವಿಚಾರಗಳನ್ನು ಹಂಚಲು ಯಾವ ವೇದಿಕೆ ಏರುವುದಕ್ಕೂ ಅವರು ಅಂಜುವುದಿಲ್ಲ. ಆದರೆ, ಇತ್ತೀಚಿನ ವೈಚಾರಿಕ ಚಿಂತಕರು ಮಾತ್ರ ಎಲ್ಲಿ ತಮ್ಮ ವೈಚಾರಿಕ ಇಸ್ತ್ರಿ, ಮಡಿ ಹಾಳಾಗಿ ಬಿಡುತ್ತದೆಯೋ ಎಂಬ ಆತಂಕದಲ್ಲಿದ್ದಾರೆ.
ಯಾವುದಾದರೂ ವೇದಿಕೆ ಏರುವುದಕ್ಕೆ ಅವಕಾಶ ಸಿಕ್ಕಿದರೆ ಅವರ ಎಂಜಲೆಲೆ ನೆಕ್ಕುವುದಕ್ಕೆ ಸಿದ್ಧರಿರುವ, ತನ್ನ ವಿಚಾರಗಳನ್ನು ಮಾರಿಬಿಡುವ ಒಂದು ವರ್ಗವಿದೆ. ಅವರ ಕುರಿತಂತೆ ನಾನಿಲ್ಲಿ ಮಾತನಾಡುತ್ತಿಲ್ಲ. ತಮ್ಮ ವಿಚಾರಗಳನ್ನು ಹಂಚಲು ವೇದಿಕೆಗಾಗಿ ಕಾಯುತ್ತಿರುವ ಚಿಂತಕರು, ನಾಯಕರು ನಮ್ಮ ನಡುವೆ ಸೃಷ್ಟಿಯಾಗಬೇಕು ಎನ್ನುವುದು ನನ್ನ ಬಯಕೆ. ನುಡಿಸಿರಿಯ ಅಸಂಖ್ಯ ಜನರ ನಡುವೆ, ನುಡಿಸಿರಿಯೊಳಗಿರುವ ವಿಪರ್ಯಾಸಗಳನ್ನು ಹೇಳುವ ಧೈರ್ಯವುಳ್ಳ ಚಿಂತಕರು ಬೇಕಾಗಿದ್ದಾರೆ. ಯಾಕೆಂದರೆ ಇಂದು ಹೊಸ ತಲೆಮಾರಿನ ಹೊಸ ಹುಡುಗರಿಗೆ ವೈಚಾರಿಕ, ಪ್ರಗತಿಪರ ಚಿಂತನೆ ದಕ್ಕದಂತೆ ಕೋಟೆ ಕಟ್ಟುವ ಪ್ರಯತ್ನವೊಂದು ನಡೆಯುತ್ತಿದೆ. ಅಂತಹ ಕೋಟೆಗಳನ್ನು ಮುರಿದು ಅವರೆಡೆಗೆ ತಮ್ಮ ಆಲೋಚನೆಗಳನ್ನು ಹೊತ್ತುಕೊಂಡು ಹೋಗುವ ಬರಹಗಾರರು ಹುಟ್ಟಬೇಕಾಗಿದೆ. ಅಂತಹವರು ಯಾವ ವೇದಿಕೆಯೇರಿದರೂ, ಆ ವೇದಿಕೆಯನ್ನೇ ತಮಗೆ ಪೂರಕವಾಗಿ ಬದಲಾಯಿಸಿ ಬಿಡುತ್ತಾರೆ. ಈ ನಿಟ್ಟಿನಲ್ಲಿ ವೇದಿಕೆಯನ್ನು ತನಗೆ ಪೂರಕವಾಗಿ ಮಲ್ಲಿಕಾ ಘಂಟಿ ಪರಿವರ್ತಿಸಬೇಕು ಎಂದು ಎಲ್ಲ ವಿಚಾರವಾದಿಗಳು ಅವರಿಗೆ ಒತ್ತಡ ಹೇರಬೇಕೇ ವಿನಃ ಅವರನ್ನು ವ್ಯಂಗ್ಯ ಮಾಡುತ್ತಾ, ತಮಾಷೆ ಮಾಡುತ್ತಾ ಕಾಲಹರಣ ಮಾಡುವುದಲ್ಲ.
ನುಡಿಸಿರಿ ಎಂದಲ್ಲ, ಯಾವುದೇ ವೇದಿಕೆಯನ್ನು ನಮಗೆ ಪೂರಕವಾಗಿ ಬಳಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಇಂದು ವಿಚಾರವಾದಿಗಳು ಒಟ್ಟು ಸೇರಿ ನಡೆಸುವ ಸಮ್ಮೇಳನದಲ್ಲಿ ಶ್ರೀಸಾಮಾನ್ಯರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಆದುದರಿಂದ, ಎಲ್ಲಿ ಶ್ರೀಸಾಮಾನ್ಯರಿರುತ್ತಾರೆಯೋ ಆ ವೇದಿಕೆಯನ್ನು ಹುಡುಕಿಕೊಂಡು ಹೋಗುವ ಪ್ರಯತ್ನ ನಡೆಯಬೇಕಾಗಿದೆ. ಹಾಗೆಯೇ ಅಲ್ಲಿ ಭಾಗವಹಿಸುವ ಚಿಂತಕರಿಗೆ, ವೇದಿಕೆಯನ್ನು ಸದ್ಬಳಕೆ ಮಾಡಲು ಒತ್ತಡಹೇರುವ ಕೆಲಸ ಹೆಚ್ಚು ಹೆಚ್ಚು ನಡೆಯಬೇಕು. ಆದುದರಿಂದ ಮಲ್ಲಿಕಾಘಂಟಿ ಅವರಿಂದ ವಿಶೇಷವಾದುದನ್ನು ನಿರೀಕ್ಷಿಸುತ್ತೇನೆ. ನುಡಿ ಸಿರಿಯಂತಹ ಸಮಾವೇಶಗಳು ಪ್ರಗತಿಪರರಿಗೆ ಚಕ್ರವ್ಯೆಹ ಇದ್ದ ಹಾಗೆ. ದ್ರೋಣ ಚಕ್ರವ್ಯೆಹವನ್ನು ನಿರ್ಮಿಸಿ ಪಾಂಡವರಿಗೆ ಆಹ್ವಾನ ಕೊಟ್ಟಂತೆಯೇ ನುಡಿಸಿರಿಯ ಸಂಘಟಕರು ಆಹ್ವಾನ ನೀಡುತ್ತಿದ್ದಾರೆ. ಇಂತಹ ಚಕ್ರವ್ಯೆಹದೊಳಗೆ ಪ್ರವೇಶಿಸಿ ಅದರೊಳಗೇ ಇಲ್ಲವಾದ ಹಲವರನ್ನು ನೋಡಿದ್ದೇನೆ. ಇಷ್ಟಿದ್ದರೂ, ಈ ಆಹ್ವಾನವನ್ನು ಸ್ವೀಕರಿಸುವುದು ಪ್ರಗತಿಪರರಿಗೆ ಅನಿವಾರ್ಯ. ಮಲ್ಲಿಕಾಘಂಟಿಯಂತಹ ಲೇಖಕಿಯರು ಇದರೊಳಗೆ ಪ್ರವೇಶಿಸಿ ತನ್ನ ಹೃದಯದ ಮಾತುಗಳನ್ನು ಹೇಳಿ, ಅಲ್ಲಿರುವ ಒಂದಿಷ್ಟು ವಿದ್ಯಾರ್ಥಿಗಳಲ್ಲಾದರೂ ವಿಚಾರಗಳ ಬೀಜ ಬಿತ್ತಿ, ಚಕ್ರವ್ಯೂಹದ ತಂತ್ರಗಳಿಗೆ ಬಲಿಯಾಗದೇ ಯಶಸ್ವಿಯಾಗಿ ಹೊರಬರಲಿ. ಅವರಿಗೆ ಶುಭಾಶಯಗಳು.