ಡಿವೈಡರ್ ಏರಿದ ಟೆಂಪೊ: ಮಹಿಳೆ ಮೃತ್ಯು
ಬ್ರಹ್ಮಾವರ, ಸೆ.22: ಅಪಘಾತ ತಪ್ಪಿಸುವ ಭರದಲ್ಲಿ ಟೆಂಪೊವೊಂದು ಡಿವೈಡರ್ ಮೇಲೆ ಹತ್ತಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ 11.45ರ ಸುಮಾರಿಗೆ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ನಡೆದಿದೆ.
ಮೃತರನ್ನು ಬಾಳ್ಕದ್ರು ಗ್ರಾಮದ ಹಂಗಾರಕಟ್ಟೆ ನಿವಾಸಿ ಸುಬ್ರಹ್ಮಣ್ಯ ಎಂಬವರ ಪತ್ನಿ ಗೀತಾ(36) ಎಂದು ಗುರುತಿಸಲಾಗಿದೆ.
ಸುಬ್ರಹ್ಮಣ್ಯ ತನ್ನ ಪತ್ನಿ ಹಾಗೂ ಮಗನೊಂದಿಗೆ ಬ್ರಹ್ಮಾವರ ಸರಕಾರಿ ಆಸ್ಪತ್ರೆ ಕಡೆಗೆ ಹೋಗಲು ಸರ್ವಿಸ್ ರಸ್ತೆಯನ್ನು ದಾಟಲು ಹೆದ್ದಾರಿಯ ಡಿವೈಡರ್ ಮೇಲೆ ನಿಂತಿದ್ದರೆನ್ನಲಾಗಿದೆ.
ಈ ವೇಳೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ 407 ಟೆಂಪೋ, ಬ್ರಹ್ಮಾವರ ಬಸ್ ನಿಲ್ದಾಣದ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಚಲಾಯಿ ಸಿಕೊಂಡು ಬಂದ ಬಸ್ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ರಸ್ತೆಯ ಎಡಬದಿಗೆ ಚಲಾಯಿಸಿದಾಗ ಟೆಂಪೋ ಡಿವೈಡರ್ ಮೇಲೆ ಹತ್ತಿತ್ತೆನ್ನ ಲಾಗಿದೆ.
ಇದರ ಪರಿಣಾಮ ಡಿವೈಡರ್ನಲ್ಲಿ ನಿಂತಿದ್ದ ಗೀತಾ ಟೆಂಪೋದ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.