ಅಂತಾರಾಷ್ಟ್ರೀಯ ಪ್ರಶಸ್ತಿಗೆ ಗುರಿಯಿಟ್ಟ ಮಜಿಝಿಯಾ ಬಾನುಗೆ ಬೇಕಿದೆ ಪ್ರೋತ್ಸಾಹ
ಹಿಜಾಬ್ ಧಾರಿ ಪವರ್ ಲಿಫ್ಟರ್ ಈಗ ದೇಹದಾರ್ಢ್ಯದಲ್ಲೂ ಚಾಂಪಿಯನ್
ಇತ್ತೀಚೆಗೆ ನಡೆದ ದೇಹದಾರ್ಢ್ಯ ಚಾಂಪಿಯನ್ ಶಿಪ್ ನಲ್ಲಿ 23 ವರ್ಷದ ಡೆಂಟಲ್ ಸೈನ್ಸಸ್ ವಿದ್ಯಾರ್ಥಿನಿ ವಿಜೇತರಾಗಿ ಹೊರಹೊಮ್ಮಿದ್ದರು. ಸಣ್ಣ ವಯಸ್ಸಿನಲ್ಲೇ ಹಲವಾರು ಸಾಧನೆ ಮಾಡಿರುವ ಈಕೆಗೆ ಸರಕಾರದಿಂದ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ.
ಕೋಝಿಕ್ಕೋಡ್ ಜಿಲ್ಲೆಯ ಒರ್ಕಟ್ಟೇರಿ ಗ್ರಾಮದವರಾದ ಮಜಿಝಿಯಾ ಬಾನು ಅಕ್ಟೋಬರ್ ನಲ್ಲಿ ಟರ್ಕಿಯಲ್ಲಿ ನಡೆಯಲಿರುವ ವರ್ಲ್ಡ್ ಆರ್ಮ್ ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದು, ಪ್ರೋತ್ಸಾಹಕ್ಕಾಗಿ ಎದುರು ನೋಡುತ್ತಿದ್ದಾರೆ. ಟರ್ಕಿಯ ಅಂಟಾಲ್ಯ ಎಂಬಲ್ಲಿ ಅಕ್ಟೋಬರ್ 13-22ರವರೆಗೆ ಟೂರ್ನಮೆಂಟ್ ನಡೆಯಲಿದೆ. ಮಜಿಝಿಯಾರ ತಂದೆ ಪ್ರೈವೇಟ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.
ಎಸ್ಸಿ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳಿಗೆ ಸರಕಾರದಿಂದ ಸಂಪೂರ್ಣ ಸಹಕಾರ ಲಭಿಸಿದೆ. ಆದರೆ ನಾನಿನ್ನೂ ಪ್ರಾಯೋಜಕರನ್ನು ಹುಡುಕುತ್ತಿದ್ದೇನೆ ಎಂದು ಮಜಿಝಿಯಾ ಬೇಸರಿಸುತ್ತಾರೆ. ಸೆಪ್ಟಂಬರ್ 9ರಂದು ಮಜಿಝಿಯಾ ಬೆಂಚ್ ಪ್ರೆಸ್ ಸ್ಪರ್ಧೆಗಾಗಿ ಆಲಪ್ಪುಳಕ್ಕೆ ತೆರಳುತ್ತಿದ್ದರು. ಆದರೆ ನೀವು ದೇಹದಾರ್ಢ್ಯದಲ್ಲಿ ಯಾಕೆ ಅದೃಷ್ಟ ಪರೀಕ್ಷೆ ಮಾಡಬಾರದು ಎಂದು ಯಾರೋ ಪ್ರಶ್ನಿಸಿದ್ದರು. ಮಜಿಝಿಯಾರ ಈ ಹೊಸ ಪ್ರಯತ್ನಕ್ಕೆ ಪತಿ ನೂರ್ ಅಹ್ಮದ್, ಪೋಷಕರಾದ ಅಬ್ದುಲ್ ಮಜೀದ್ ಮತ್ತು ರಝಿಯಾ ಪ್ರೋತ್ಸಾಹ ನೀಡಿದರು. ಹಿಜಾಬ್ ಧರಿಸಿಯೇ ಸ್ಪರ್ಧಾಕಣಕ್ಕಿಳಿದ ಮಜಿಝಿಯಾ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದರು.
ಪವರ್ ಲಿಫ್ಟಿಂಗ್ ನಲ್ಲಿ ಹಲವು ಪದಕಗಳನ್ನು ಗೆದ್ದಿರುವ ಮಜಿಝಿಯಾ ತನ್ನ ಧಿರಿಸು ಹಿಜಾಬ್ ನಿಂದ ಎಲ್ಲರ ಗಮನಸೆಳೆದಿದ್ದರು. ಪವರ್ ಲಿಫ್ಟಿಂಗ್ ಚಾಂಪಿಯನ್ ಆಗಿದ್ದ ಮಜಿಝಿಯಾಗೆ ದೇಹಧಾರ್ಢ್ಯ ಸ್ಪರ್ಧೆಯ ಬಗ್ಗೆ ಯಾವೊಂದು ಮಾಹಿತಿಯೂ ಇರಲಿಲ್ಲ. ವೇದಿಕೆಯಲ್ಲಿ ಹೇಗೆ ಪೋಸ್ ಕೊಡಬೇಕು ಎನ್ನುವುದೂ ಗೊತ್ತಿರಲಿಲ್ಲ. ಸೆಮಿಫೈನಲ್ ಬಗ್ಗೆ ವಿವರಿಸುವ ಮಜಿಝಿಯಾ ನಾನೆಷ್ಟು ನರ್ವಸ್ ಆಗಿದ್ದೆನೆಂದರೆ ನಗುವುದನ್ನೂ ಮರೆತುಬಿಟ್ಟೆ. ಆದರೂ ಫೈನಲ್ ಗೆ ಆಯ್ಕೆಯಾದೆ ಎನ್ನುತ್ತಾರೆ.
ಬಾಡಿಬಿಲ್ಡಿಂಗ್ ಅಸೋಸಿಯೇಶನ್ ಕೇರಳದ ಅಧಿಕಾರಿಗಳು ಕೂಡ ಮಜಿಝಿಯಾರನ್ನು ಪ್ರೋತ್ಸಾಹಿಸಿದರು, ಸೆಪ್ಟಂಬರ್ 10ರಂದು ನಡೆಯಲಿದ್ದ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಮಜಿಝಿಯಾ ಭಾಗವಹಿಸಬೇಕಿತ್ತು. 52 ಕೆಜಿ ವಿಭಾಗದಲ್ಲಿ ಮಜಿಝಿಯಾ ‘ಬೆಸ್ಟ್ ಲಿಫ್ಟರ್ ಆಫ್ ಕೇರಳ’ ಮುಡಿಗೇರಿಸಿಕೊಂಡರು.
ತನಗೆ ಬಾಕ್ಸರ್ ಆಗಬೇಕೆಂಬ ಆಸೆಯಿದೆ ಎಂದು ಮಜಿಝಿಯಾ ಹೇಳುತ್ತಾರೆ, ಕಾಲೇಜು ಮಟ್ಟದಿಂದಲೂ ಮಜಿಝಿಯಾ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿರುವ ಮಜಿಝಿಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಗುರಿಯಿರಿಸಿಕೊಂಡಿದ್ದಾರೆ. ಅದಕ್ಕಾಗಿ ತನ್ನ ಸಮುದಾಯದ ಹಾಗು ಸರಕಾರದ ನೆರವನ್ನು ಬಯಸಿದ್ದಾರೆ.
ಮಜಿಝಿಯಾರನ್ನು ವಾಟ್ಸ್ಯಾಪ್ ನಂ. . 95445-45411, cell: 94461-79069, email: majiziya.bhanu@gmail.com ಮೂಲಕ ಸಂಪರ್ಕಿಸಬಹುದು