ಸೆ. 28: ದ.ಕ., ಉಡುಪಿ ಜಿಲ್ಲೆಯ ಮೆಡಿಕಲ್ ಅಂಗಡಿಗಳು ಬಂದ್
ಮಂಗಳೂರು, ಸೆ. 27: ಆನ್ಲೈನ್ ಮೂಲಕ ಔಷಧ ಖರೀದಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆಯಂತೆ ಸೆ. 28ರಂದು ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲ ಮೆಡಿಕಲ್ ಅಂಗಡಿಗಳು ಬಂದ್ ಆಗಲಿದೆ.
ಹಾಗಾಗಿ ದ.ಕ. ಜಿಲ್ಲೆಯ 625 ಮೆಡಿಕಲ್ ಶಾಪ್ಗಳಲ್ಲಿ ಶುಕ್ರವಾರ ಸೇವೆ ಲಭ್ಯವಿರುವುದಿಲ್ಲ. ಆನ್ಲೈನ್ ಮೂಲಕ ಔಷಧ ಖರೀದಿ ನಡೆದರೆ ಗುಣಮಟ್ಟ ಮತ್ತು ಬಳಕೆಯ ವಿಧಾನದ ಬಗ್ಗೆ ಜನರಿಗೆ ಮಾಹಿತಿ ಸಿಗುವುದಿಲ್ಲ. ಅಲ್ಲದೆ ರೋಗಿಗಳ ಆರೋಗ್ಯದ ಮೇಲೆಯೂ ಇದು ಅಡ್ಡ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಬಂದ್ ನಡೆಯಲಿದೆ. ಆದರೆ ತುರ್ತು ಜೀವ ರಕ್ಷಕ ಔಷಧಗಳನ್ನು ಒದಗಿಸಲು ಸದಾ ಬದ್ಧನಾಗಿದ್ದು, ಮೊ.ಸಂ: 9844043345ಕ್ಕೆ ಕರೆ ಮಾಡಿದರೆ ಔಷಧ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಂಘದ ದ.ಕ. ಜಿಲ್ಲಾಧ್ಯಕ್ಷ ಶ್ರೀಧರ್ ಕಾಮತ್ ತಿಳಿಸಿದ್ದಾರೆ.
ಆದರೆ ಆಸ್ಪತ್ರೆ, ನರ್ಸಿಂಗ್ ಹೋಂನ ಮೆಡಿಕಲ್ ಶಾಪ್ಗಳು ಶುಕ್ರವಾರ ತೆರೆದಿರುತ್ತವೆ. ಆನ್ಲೈನ್ ಔಷಧ ವ್ಯಾಪಾರ, ಔಷಧಗಳ ಕೊರತೆ, ಅಸಂಬದ್ಧ ಸ್ಪರ್ಧೆಗಳಿಗೆ ವಿರೋಧ, ರಿಟೇಲರ್ಗಳ ಜೀವನ ಭದ್ರತೆ ಆಗ್ರಹ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಸಂಘಟನೆ ಕರೆಯಂತೆ ಮುಷ್ಕರ ನಡೆಯಲಿದೆ.