ಮಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿ ನಾಪತ್ತೆ
ಮಂಗಳೂರು, ಸೆ. 27: ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ನಿಂದ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋವಾ ಮೂಲದ ವಿದ್ಯಾರ್ಥಿ ರಾಹುಲ್ ರಾಘವ್ (23) ನಾಪತ್ತೆಯಾದ ವಿದ್ಯಾರ್ಥಿ.
ಈತ ನಗರದ ಹೊರವಲಯದ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಡಿ’ಫಾರ್ಮಸಿ ಓದುತ್ತಿದ್ದು, ಒಂದು ತಿಂಗಳ ಹಿಂದೆಯಷ್ಟೇ ಕಾಲೇಜಿಗೆ ಸೇರ್ಪಡೆಯಾಗಿದ್ದ. ಸೆ.18ರಂದು ಬೆಳಗ್ಗೆ ಹಾಸ್ಟೆಲ್ನಿಂದ ಕಾಲೇಜಿಗೆ ಹೋಗಿದ್ದಾನೆ.
ಬಳಿಕ ಕಾಲೇಜಿನ ಪ್ರಧಾನ ದ್ವಾರದಿಂದ ಹೊರಗೆ ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಆ ಬಳಿಕ ಹಾಸ್ಟೆಲ್ಗೂ ಬಾರದೆ, ಮನೆಗೂ ಹೋಗದೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಶೇಖರ್ ಎಂಬವರು ಸೆ.27ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಾರಾಷ್ಟ್ರಕ್ಕೆ ಪ್ರಯಾಣ?: ಸೆ.27ರಂದು ಪೊಲೀಸರು ಮೊಬೈಲ್ಗೆ ಕರೆ ಮಾಡಿದಾಗ ಮೊಬೈಲ್ ನೆಟ್ವರ್ಕ್ ಮಹಾರಾಷ್ಟ್ರ ವ್ಯಾಪ್ತಿಯಲ್ಲಿರುವುದು ಪತ್ತೆಯಾಗಿದೆ. ಆದರೆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ನಿಟ್ಟಿನಲ್ಲಿ ಯುವಕ ಮಹಾರಾಷ್ಟ್ರದತ್ತ ಹೋಗಿರುವ ಸಂಶಯವಿದೆ.
ಚಹರೆ: ನಾಪತ್ತೆಯಾದ ವ್ಯಕ್ತಿ 5.7 ಅಡಿ ಎತ್ತರವಿದ್ದು, ಬಿಳಿ ಮೈಬಣ್ಣ, ಕಪ್ಪು ಬಣ್ಣದ ಪ್ಯಾಂಟ್, ಪರ್ಪಲ್ ಅಂಗಿ ಧರಿಸಿದ್ದರು. ಹಿಂದಿ, ಇಂಗ್ಲಿಷ್ ಮಾತನಾಡಬಲ್ಲವರು. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಳ್ಳಲಾಗಿದೆ.