ಪುತ್ತೂರು: ತಂದೆಯ ಕೊಲೆ ಮಾಡಿದ ಪುತ್ರನಿಗೆ ಜೀವಾವಧಿ ಶಿಕ್ಷೆ
ಅಬೂಬಕರ್
ಪುತ್ತೂರು, ಸೆ. 28: ವರ್ಷದ ಹಿಂದೆ ತಂದೆಗೆ ಹಲ್ಲೆಗೈದು, ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಪುತ್ರನನ್ನು ಅಪರಾಧಿ ಎಂದು ಪರಿಗಣಿಸಿದ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2017ರ ಜ.14ರಂದು ಉಪ್ಪಿನಂಗಡಿಯಲ್ಲಿ ಘಟನೆ ಸಂಭವಿಸಿತ್ತು.
ಉಪ್ಪಿನಂಗಡಿಯ ಹಳೆ ಬಸ್ಸು ನಿಲ್ದಾಣದ ಬಳಿಯಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದ ಆದಂ (55) ಎಂಬವರನ್ನು ಅವರ ಪುತ್ರ ಹಿರೇಬಂಡಾಡಿ ರಾಮನಗರ ಕುದ್ಲೂರು ನಿವಾಸಿ ಅಬೂಬಕರ್ ಯಾನೆ ಮೋನು (35) ಕೊಲೆ ನಡೆಸಿ, ಶಿಕ್ಷೆಗೊಳಗಾದ ಅಪರಾಧಿ.
ಆಸ್ತಿ ವಿಚಾರದಲ್ಲಿ ತಂದೆ- ಮಗನ ನಡುವೆ ಭಿನ್ನಾಭಿಪ್ರಾಯವಿತ್ತು. 2017ರ ಜನವರಿ 14ರಂದು ಬೆಳಗ್ಗೆ 11 ಗಂಟೆಗೆ ಉಪ್ಪಿನಂಗಡಿ ಹಳೆ ಬಸ್ಟ್ಯಾಂಡ್ಗೆ ಆದಂ ಅವರು ತನ್ನ ಅಂಗಡಿಗೆ ಬರುವಾಗ ಅಬೂಬಕರ್ ವ್ಯಾಪಾರ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭ ತಂದೆಗೆ ಪುತ್ರ ಅಬೂಬಕರ್ ಕಬ್ಬಿಣದ ರಾಡ್ನಿಂದ ತಲೆಗೆ ಬಲವಾಗಿ ಹಲ್ಲೆ ನಡೆಸಿದ್ದ, ಗಂಭೀರ ಗಾಯಗೊಂಡ ಆದಂ ಅವರನ್ನು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಜ.16ರಂದು ಮೃತಪಟ್ಟರು.
ಆರೋಪಿ ವಿರುದ್ಧ ಉಪ್ಪಿನಂಗಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ 23 ಸಾಕ್ಷಿಗಳ ವಿಚಾರಣೆ ಹಾಗೂ 31 ದಾಖಲೆಗಳನ್ನು ಪರಿಶೀಲನೆ ನಡೆಸಿ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ತಪ್ಪಿದರೆ, 6 ತಿಂಗಳು ಸಾದಾ ಶಿಕ್ಷೆ ಎದುರಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.
ಸರಕಾರಿ ಅಭಿಯೋಜಕ ಉದಯ್ ಕುಮಾರ್ ವಾದಿಸಿದ್ದರು.