ಇದು ಭೂಷಣವಲ್ಲ
ಮಾನ್ಯರೇ,
ಇತ್ತೀಚೆಗೆ ದೇಶದಲ್ಲಿ, ರಾಜ್ಯದಲ್ಲಿ ಕೆಲ ನಟ, ನಟಿಯರು ವಿವಾದಗಳಿಗೆ ವಸ್ತುವಾಗುತ್ತಿದ್ದಾರೆ. ಸಿನೆಮಾ ಅಂದರೆ ಮನರಂಜನೆ ಜೊತೆಗೆ ವಿಚಾರಗಳನ್ನು ಕಲಿಸುವಂತಹದ್ದು. ಹೀಗಾಗಿ ನಮ್ಮಲ್ಲಿ ಚಿತ್ರ ತಾರೆಯರಿಗೆ ದೊಡ್ಡಮಟ್ಟದ ಗೌರವ ನೀಡಲಾಗುತ್ತದೆ. ಇದರ ಅರ್ಥ ನಟ, ನಟಿಯರು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂಬುದು. ಈ ಹಿಂದಿನ ಅನೇಕ ನಟ, ನಟಿಯರು ಮಾದರಿಯಾಗಿ ಗುರುತಿಸಿಕೊಂಡವರು. ಇವರು ಈಗಲೂ ಎಲ್ಲರ ಮನಸ್ಸಿನಲ್ಲಿ ಗೌರವ ಉಳಿಸಿಕೊಂಡಿದ್ದಾರೆ. ಇಂತಹ ನಟರ ಪ್ರೇರಣೆಯಿಂದಾಗಿಯೇ ಜನರು ಸಿನೆಮಾ ಕಲಾವಿದರನ್ನು ತಮ್ಮ ರೋಲ್ ಮಾಡೆಲ್ ಆಗಿ ಗುರುತಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಹಲ್ಲೆ, ವೈಯಕ್ತಿಕ ದ್ವೇಷ ಹೀಗೆ ನಾನಾ ಕಾರಣಗಳಿಂದ ತಾರೆಯರು ವಿವಾದಕ್ಕೊಳಗಾಗುವ ಸಂಗತಿ ಜನರಿಗೆ ನಕಾರಾತ್ಮಕ ಸಂದೇಶವನ್ನು ಸಾರಿದಂತಾಗುತ್ತದೆ. ವೃತ್ತಿ ಅಥವಾ ಪ್ರವೃತ್ತಿಯಾಗಿ ಸಿನೆಮಾ ಜಗತ್ತನ್ನು ಆಯ್ಕೆ ಮಾಡಿಕೊಂಡರೂ ಅಲ್ಲಿ ಸಾಮಾಜಿಕ ಜವಾಬ್ದಾರಿ ಇರುವುದನ್ನು ಮರೆಯಬಾರದು. ಕಲಾವಿದರು ರೀಲ್ ನಲ್ಲಿ ಮಾದರಿಯಾಗಿ ಕಂಡಂತೆ ರಿಯಲ್ ಲೈಫ್ನಲ್ಲೂ ಕೂಡಾ ಮಾದರಿಯಾಗಿರಬೇಕಾದದ್ದು ಅವರ ಮುಂದಿರುವ ಜವಾಬ್ದಾರಿ. ಈಗಿನ ತಲೆಮಾರಿನ ನಟ,ನಟಿಯರು ಈ ಜವಾಬ್ದಾರಿಯ ಮಹತ್ವ ಅರಿಯಬೇಕಾಗಿದೆ.