ಕಾಪು ಪುರಸಭೆ ಸ್ಥಾಯಿ ಸಮಿತಿ ಆಯ್ಕೆ ವಿಚಾರ: ಗೊಂದಲದಲ್ಲಿ ಸಭೆ ಮುಂದೂಡಿಕೆ
ಕಾಪು, ಸೆ.29: ಕಾಪು ಪುರಸಭೆಯ ಒಂದು ವರ್ಷದ ಅವಧಿಗೆ ಸ್ಥಾಯಿ ಸಮಿತಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಗೊಂದಲ ಉಂಟಾಗಿ ಸಭೆ ಮುಂದೂಡಿದ ಘಟನೆ ಶನಿವಾರ ನಡೆದಿದೆ.
ಕಾಪು ಪುರಸಭಾ ಸಭಾಂಗಣದಲ್ಲಿ ನಡೆದ ಪುರಸಭಾ ಅಧ್ಯಕ್ಷೆ ಮಾಲಿನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೊಸದಾಗಿ ಸ್ಥಾಯಿ ಸಮಿತಿಯ ಆಯ್ಕೆ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭ ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಗೊಂದಲ ಉಂಟಾಯಿತು. ಇದರಿಂದ ಅಧ್ಯಕ್ಷರು ಸಭೆಯನ್ನು ಮುಂದೂಡಿದರು.
ಸಭೆ ಮುಂದೂಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷ ಚರ್ಚೆ ನಡೆಸಲು ಆಗದೆ ಆಡಳಿತ ಪಕ್ಷ ಪಲಾಯಾನ ವಾದ ನಡೆಸಿದೆ. ಅಧ್ಯಕ್ಷ, ಉಪಾಧ್ಯಕ್ಷರು ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡಿ ಎಂದು ಒತ್ತಾಯಿಸಿದರು.
ಈ ವೇಳೆ ಸಭೆಗೆ ಆಗಮಿಸಿದ ಶಾಸಕ ಲಾಲಾಜಿ ಮೆಂಡನ್ರೊಂದಿಗೆ ಮಾತುಕತೆ ನಡೆಸಿದ ವಿಪಕ್ಷದ ಸದಸ್ಯರು ಪುರಸಭಾ ವ್ಯಾಪ್ತಿಯ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಇದಕ್ಕೆ ಶಾಸಕರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದರು.
Next Story