ಸಾಮಾಜಿಕ ಆರ್ಥಿಕ ಪ್ರಗತಿ: ಭಾರತದ ಕಳಪೆ ಸಾಧನೆ
ಭಾರತದಲ್ಲಿ ಮೇಲ್ಮುಖವಾದ ಚಲನಶೀಲತೆ ಕುರಿತು ಅಮೆರಿಕದ ಸಂಶೋಧಕರ ತಂಡವೊಂದು ಕಳೆದ ವಾರ ಬಿಡುಗಡೆಗೊಳಿಸಿರುವ ಅಧ್ಯಯನ ವರದಿಯು ಈ ನಿರಾಶಾದಾಯಕವಾದ ಸಂಗತಿಯನ್ನು ಬೆಳಕಿಗೆ ತಂದಿದೆ.
ಸ್ವಾತಂತ್ರಾನಂತರ ಭಾರತದ ಮೇಲ್ಮುಖ ಚಲನಶೀಲತೆ (ಜನತೆಯ ಸಾಮಾಜಿಕ ಆರ್ಥಿಕ ಪ್ರಗತಿ)ದರವು ಅಲ್ಪಸ್ವಲ್ಪ ಬದಲಾವಣೆಯನ್ನಷ್ಟೇ ಕಂಡಿದೆ. ಭಾರತದಲ್ಲಿ ಮೇಲ್ಮುಖವಾದ ಚಲನಶೀಲತೆ ಕುರಿತು ಅಮೆರಿಕದ ಸಂಶೋಧಕರ ತಂಡವೊಂದು ಕಳೆದ ವಾರ ಬಿಡುಗಡೆಗೊಳಿಸಿರುವ ಅಧ್ಯಯನ ವರದಿಯು ಈ ನಿರಾಶಾದಾಯಕವಾದ ಸಂಗತಿಯನ್ನು ಬೆಳಕಿಗೆ ತಂದಿದೆ. ಸಾಮಾಜಿಕ ಆರ್ಥಿಕತೆಯ ‘ಏಣಿ’ಯಲ್ಲಿ ಜನರು ಮೇಲಕ್ಕೆ ಸಾಗುವ ಪ್ರಕ್ರಿಯೆಯನ್ನು ಮೇಲ್ಮುಖ ಚಲನಶೀಲತೆ (upward mobiltiy) ಎಂದು ಕರೆಯಲಾಗುತ್ತದೆ.
1980ರ ದಶಕದಲ್ಲಿ ಜನಿಸಿದ ಭಾರತೀಯರು ಮಾತ್ರವೇ ಸಾಮಾಜಿಕ ಆರ್ಥಿಕ ಶ್ರೇಣಿಯಲ್ಲಿ ತಮ್ಮ ಹೆತ್ತವರನ್ನು ಹಿಂದಿಕ್ಕುವ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಅಧ್ಯಯನ ತಂಡದ ಸದಸ್ಯರಾದ ಡಾರ್ಟ್‌ವೌತ್ ಕಾಲೇಜ್‌ನ ಪಾವ್ಲ್ ನೊವೊಸಾಡ್, ಮೆಸ್ಯಾಚ್ಯೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಾರ್ಲಿ ರಾಫ್ಕಿನ್ ಹಾಗೂ ವಿಶ್ವಬ್ಯಾಂಕ್‌ನ ಸ್ಯಾಮ್ ಆ್ಯಶರ್ ಹೇಳಿದ್ದಾರೆ. ಆದಾಗ್ಯೂ, ಈ ಮಾತು 1970 ಹಾಗೂ 1980ರ ದಶಕಗಳಲ್ಲಿ ಜನಿಸಿದ ಮುಸ್ಲಿಮರಿಗೆ ಅನ್ವಯವಾಗುವುದಿಲ್ಲ. ಅವರ ಸಾಮಾಜಿಕ ಆರ್ಥಿಕ ಪ್ರಗತಿ ನಿಜಕ್ಕೂ ಕುಸಿದಿದೆ.
ಇದಕ್ಕೆ ವ್ಯತಿರಿಕ್ತವಾಗಿ ದಲಿತರು ಹಾಗೂ ಆದಿವಾಸಿಗಳಲ್ಲಿ ಕೆಲವೊಂದು ಸುಧಾರಣೆಗಳಾಗಿವೆ. ಈ ಅಧ್ಯಯನದ ವರದಿಯಲ್ಲಿ ಮೇಲ್ಜಾತಿಗಳು ಹಾಗೂ ಇತರ ಹಿಂದುಳಿದ ವರ್ಗ(ಓಬಿಸಿ)ಗಳನ್ನು ಒಂದೇ ಗುಂಪಾಗಿ ಪರಿಗಣಿಸಲಾಗಿದ್ದು, ಅವರ ಪರಿಸ್ಥಿತಿಯು 1950ರ ದಶಕದಲ್ಲಿ ಇದ್ದಂತಹ ಸ್ಥಿತಿಗೆ ಹೆಚ್ಚುಕಮ್ಮಿ ಸರಿಸಮಾನವಾಗಿತ್ತು. ಆದಾಗ್ಯೂ, ಅವರು ಇತರ ಗುಂಪುಗಳಿಗಿಂತ ಗಣನೀಯವಾಗಿ ಮುಂದಿದ್ದಾರೆ. ಭೌಗೋಳಿಕವಾಗಿ ವಿಭಜಿಸಿದಲ್ಲಿ, ದಕ್ಷಿಣ ಭಾರತವು ಹಿಂದಿ ಭಾಷಿಕ ರಾಜ್ಯಗಳಿಗಿಂತ ಮೇಲ್ಮುಖವಾದ ಚಲನಶೀಲತೆಯನ್ನು ಹೊಂದಲು ಉತ್ತಮ ಅವಕಾಶವನ್ನು ಪಡೆದಿದೆ.
ಆದಾಗ್ಯೂ ಮೇಲ್ಮುಖ ಚಲನಶೀಲತೆಯು ಕಡಿಮೆಮಟ್ಟದಲ್ಲಿದ್ದರೆ, ಭಾರತವು ಅಭಿವೃದ್ಧಿಯಲ್ಲಿ ವೈಫಲ್ಯವನ್ನು ಕಂಡಿತೆಂದು ಅರ್ಥವಲ್ಲವೆಂದು ಅಧ್ಯಯನ ತಂಡ ಸ್ಪಷ್ಟಪಡಿಸಿದೆ.
ಮುಸ್ಲಿಮರಲ್ಲಿ ಮೇಲ್ಮುಖ ಚಲನಶೀಲತೆಯು ಗಣನೀಯವಾಗಿ ಕುಸಿದಿದೆ. ಒಂದು ವೇಳೆ ತಂದೆಯಂದಿರು ಶೈಕ್ಷಣಿಕವಾಗಿ ಜನಸಂಖ್ಯೆಯ ಬುಡಮಟ್ಟದ ಅರ್ಧದಷ್ಟಿದ್ದರೆ ಅವರ ಮಕ್ಕಳು ಯಾವ ಶ್ರೇಣಿಯಲ್ಲಿರಬಹುದೆಂಬುದನ್ನು ವರದಿಯಲ್ಲಿ ಪ್ರಕಟಿಸಲಾದ ದತ್ತಾಂಶಪಟ್ಟಿಯು ತೋರಿಸಿಕೊಟ್ಟಿದೆ. 1950ರ ದಶಕದಲ್ಲಿ ಜನಸಂಖ್ಯೆಯ ಬುಡಮಟ್ಟದ ಅರ್ಧದಷ್ಟು ದಲಿತರಿಗೆ ಜನಿಸಿದ ಮಕ್ಕಳ ಸಂಖ್ಯೆಯು ಶೇ. 30-34ರಷ್ಟಾಗಿದೆ. ಅದೇ ರೀತಿ 1980ರ ದಶಕದಲ್ಲಿ ಜನಿಸಿದ ದಲಿತರ ಪ್ರಮಾಣ ಶೇ. 38. ಇದರಿಂದಾಗಿ ಒಂದೆಡೆ ದಲಿತರು ಹಾಗೂ ಇನ್ನೊಂದೆಡೆ ಮೇಲ್ಜಾತಿಯವರು ಮತ್ತು ಇತರ ಹಿಂದುಳಿದ ವರ್ಗಗಳ ಮೇಲ್ಮುಖ ಚಲನಶೀಲತೆಯ ಅಂತರವು ಕಡಿಮೆಯಾಗಿದೆ.
ಆದಿವಾಸಿ ಸಮುದಾಯಗಳಲ್ಲೂ ಮೇಲ್ಮುಖ ಚಲನಶೀಲತೆಯಲ್ಲಿ ಏರಿಕೆಯಾಗಿದ್ದರೂ, ಅದು ದಲಿತರಲ್ಲಿ ಕಂಡುಬಂದಷ್ಟು ಗಣನೀಯವಾಗಿಲ್ಲ.
1950 ಹಾಗೂ 1960ರ ದಶಕದಲ್ಲಿ ಜನಿಸಿದ ಮುಸ್ಲಿಮರಲ್ಲಿ ಸಾಮಾಜಿಕ ಆರ್ಥಿಕ ಪ್ರಗತಿ ಆನಂತರದ ದಶಕಗಳಲ್ಲಿ ಜನಿಸಿದವರಿಗಿಂತ ಅಧಿಕವಾಗಿತ್ತು. ಆದಾಗ್ಯೂ, ಅದು ಆನಂತರ ಗಣನೀಯವಾಗಿ ಕುಸಿದಿದೆ. ಇದರ ಪರಿಣಾಮವಾಗಿ, ಈಗಿನ ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲ್ಮುಖವಾದ ಚಲನಶೀಲತೆಯು ಇತರ ಸಮುದಾಯಗಳಿಗಿಂತ ಕಡಿಮೆ ಇದೆ. ಆದರೆ ಇದು ಮುಸ್ಲಿಮರು ಅಲ್ಪಸಂಖ್ಯಾತ ರಾಗಿರುವ ಕಡೆಗಳಲ್ಲಿ ಮಾತ್ರ ಕಂಡುಬರುತ್ತದೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಏಕೈಕ ರಾಜ್ಯವಾದ ಜಮ್ಮುಕಾಶ್ಮೀರವು, ಮೇಲ್ಮುಖ ಚಲನಶೀಲತೆಯಿರುವ ರಾಜ್ಯಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ.
ಉತ್ತರದ ರಾಜ್ಯಗಳ ಕಳಪೆ ಸಾಧನೆ
ತಮಿಳುನಾಡು, ಕೇರಳ, ಮಹಾರಾಷ್ಟ್ರ, ಜಮ್ಮುಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲಪ್ರದೇಶಗಳಲ್ಲಿ ಮೇಲ್ಮುಖ ಚಲನಶೀಲತೆ ಅಧಿಕವಾಗಿದೆ. ಹಿಂದಿ ಭಾಷಿಕ ರಾಜ್ಯಗಳು ಹಾಗೂ ಈಶಾನ್ಯ ಭಾರತದಲ್ಲಿ ಮೇಲ್ಮುಖ ಚಲನಶೀಲ ಕಡಿಮೆಯಿದ್ದು, ವಿಶೇಷವಾಗಿ ಬಿಹಾರದಲ್ಲಂತೂ ಅತ್ಯಂತ ಕಳಪೆಯಾಗಿದೆ. ಗುಜರಾತ್ ಅತ್ಯಧಿಕ ಆರ್ಥಿಕ ಬೆಳವಣಿಯನ್ನು ಹೊಂದಿರುವ ರಾಜ್ಯ. ಆದರೆ ಅಲ್ಲಿ ಮೇಲ್ಮುಖ ಚಲನಶೀಲತೆಯು ತುಲನಾತ್ಮಕವಾಗಿ ಕಡಿಮೆಯಾಗಿದೆಯೆಂದು ವರದಿ ಹೇಳಿದೆ. ಆರ್ಥಿಕವಾಗಿ ಗುಜರಾತ್ ರಾಜ್ಯದ ಕಾರ್ಯನಿರ್ವಹಣೆಯು ಉತ್ತಮವಾಗಿದ್ದರೂ, ಅದರಿಂದಾಗಿ ಗುಜರಾತಿ ಜನತೆಗೆ ಹೆಚ್ಚೇನೂ ಪ್ರಯೋಜನವಾಗಿಲ್ಲವೆಂದು ಅದು ಅಭಿಪ್ರಾಯಿಸಿದೆ.
ಪ್ರಭಾವ ಬೀರದ ಉದಾರೀಕರಣ
1990ರ ದಶಕದಲ್ಲಿ ಆರ್ಥಿಕತೆಯ ಉದಾರೀ ಕರಣವು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ. ಆದರೆ ಭಾರತೀಯರ ಮೇಲ್ಮುಖ ಚಲನಶೀಲತೆಗೆ ಅದರ ಕೊಡುಗೆ ತೀರಾ ಕಡಿಮೆ. 1980ರ ದಶಕದಲ್ಲಿ ಜನಿಸಿದ ವ್ಯಕ್ತಿಗಳು ಪ್ರಾಥಮಿಕ ಶಾಲೆಯಲ್ಲಿದ್ದಾಗ ಉದಾರೀಕರಣ ಆರಂಭಗೊಂಡಿತ್ತು. ಉದಾರೀಕರಣದ ಫಲವಾಗಿ ದೊರೆಯುವ ಅವಕಾಶಗಳ ಸದುಪಯೋಗಪಡೆಯಲು ಜನತೆ ಉತ್ಸುಕರಾಗಿದ್ದರು. ಆದರೆ ಆ ತಲೆಮಾರಿನ ಜನತೆ, ಮೇಲ್ಮುಖ ಚಲನಶೀಲತೆಯಲ್ಲಿ ಸಣ್ಣಮಟ್ಟದ ಬದಲಾವಣೆಯನ್ನಷ್ಟೇ ಕಂಡಿತ್ತು.
ಮೇಲ್ಮುಖ ಚಲನಶೀಲತೆಯಲ್ಲಿ ಅಲ್ಪಮಟ್ಟದ ಸುಧಾರಣೆ ಕಂಡುಬಂದಿರುವ ಹೊರತಾಗಿಯೂ, ಪ್ರತಿಯೊಂದು ಸಮುದಾಯವು ಶೈಕ್ಷಣಿಕ ನಿರ್ವಹಣೆಯನ್ನು ಗಣನೀಯವಾಗಿ ಸುಧಾರಿಸಿರುವುದಾಗಿ ವರದಿಯು ಹೇಳಿದೆ.
ಮುಸ್ಲಿಮರು ಅತ್ಯಂತ ಕಡಿಮೆ ಮಟ್ಟದ ಮೇಲ್ಮುಖ ಚಲನಶೀಲತೆಯನ್ನು ಹೊಂದಿರುವ ಸಮುದಾಯವಾಗಿದ್ದರೂ, ಅವರ ಜೀವನಮಟ್ಟ ಅತ್ಯಂತ ಕಳಪೆಯಾಗಿಲ್ಲ. ದಿನಗೂಲಿ, ಖರೀದಿ ಹಾಗೂ ಆದಾಯ ಇತ್ಯಾದಿ ಮಾನ ದಂಡಗಳಲ್ಲಿ ದಲಿತರು ಹಾಗೂ ಆದಿವಾಸಿಗಳಿಗಿಂತ ಮುಸ್ಲಿಮರು ಮುಂದಿದ್ದಾರೆ. ಇದಕ್ಕಿಂತಲೂ ಹೆಚ್ಚಾಗಿ, ಮೇಲ್ಮುಖ ಚಲನಶೀಲತೆ ಸಮೀಕ್ಷೆಯು 2011-12ರ ಸಾಲಿನ ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆಯನ್ನು ಆಧರಿಸಿದ್ದು, ಇದು ನರೇಂದ್ರ ಮೋದಿ ಸರಕಾರದ ಸಾಧನೆಯನ್ನು ಪ್ರತಿ ಬಿಂಬಿಸುವುದಿಲ್ಲ.
ಕೃಪೆ: scroll.in