ನೇಣುಬಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು, ಸೆ.30: ನಗರದ ಹೊರವಲಯ ವಳಚ್ಚಿಲ್ನ ಇಂಜಿನಿಯರಿಂಗ್ ಕಾಲೇಜ್ವೊಂದರ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಬೆಂಗಳೂರಿನ ಕೊರಮಂಗಲದ ನಿಜಲಿಂಗಪ್ಪ ಎಂಬವರ ಪುತ್ರ, ಇಂಜಿನಿಯರಿಂಗ್ ವಿದ್ಯಾರ್ಥಿ ಶರತ್ಬಾಬು (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ನಗರದ ಹೊರವಲಯ ವಳಚ್ಚಿಲ್ನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್ ವಿಭಾಗದಲ್ಲಿ 3ನೇ ಸೆಮಿಸ್ಟರ್ನಲ್ಲಿ ಓದುತ್ತಿರುವ ಶರತ್ಬಾಬು ವಳಚ್ಚಿಲ್ ಮೇರ್ಲಪದವಿನ ಪಿಜಿಯೊಂದರ ಮೂರನೇ ಮಹಡಿಯ ಕೋಣೆಯಲ್ಲಿ ವಾಸವಿದ್ದನು. ಶನಿವಾರ ತಡರಾತ್ರಿ ತನ್ನ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತಪಡಿಸಲಾಗಿದೆ.
ಘಟನೆ ಬಗ್ಗೆ ಮೃತ ವಿದ್ಯಾರ್ಥಿಯ ಪೋಷಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ತಂದೆ ತಾಯಿ ಬಂದ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣವನ್ನು ತಿಳಿದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯ ಸಂಬಂಧ ಸ್ಥಳಕ್ಕೆ ದಕ್ಷಿಣ ಉಪ ವಿಭಾಗದ ಎಸಿಪಿ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಭೇಟಿ ನೀಡಿ, ಮುಂದಿನ ಕ್ರಮಕ್ಕಾಗಿ ಮೃತ ಶರೀರವನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.