'ಫಜೀರಿಯನ್ ಟ್ರೋಫಿ-2018' ಕೊಣಾಜೆ FC ತಂಡ ಚಾಂಪಿಯನ್
ಕೊಣಾಜೆ, ಸೆ.30: ಎಂಟು ತಂಡಗಳ ಫುಟ್ಬಾಲ್ ಲೀಗ್ ಪಂದ್ಯಾಟದಲ್ಲಿ ಕೊಣಾಜೆ FC ತಂಡ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಕೊಣಾಜೆ FC ಮತ್ತು ಫಜೀರು ತಂಡಗಳು ಆಕ್ರಮಣಕಾರಿ ಪ್ರದರ್ಶನ ನೀಡಿ ಪಂದ್ಯದ 55ನೇ ನಿಮಿಷದಲ್ಲಿ ಕೊಣಾಜೆ FC ತಂಡದ ಮುಂಚೂಣಿ ಆಟಗಾರ ಹಫೀಝ್ ಗೋಲ್ ಪೋಸ್ಟ್ ಗೆ ಬಾರಿಸಿದ ಚೆಂಡನ್ನು ಫಜೀರು ತಂಡದ ಗೋಲ್ ಕೀಪರ್ ಉಮ್ಮಿ ಅದ್ಭುತವಾಗಿ ತಡೆದರು. ನಂತರ ನಡೆದ ಚಾಣಾಕ್ಷ ಹಾಗೂ ಮೈಂಡ್ ಗೇಮ್ನಲ್ಲಿ ಉಭಯ ತಂಡಗಳು ನಿಗದಿತ 60 ನಿಮಿಷಗಳ ಅವಧಿಯಲ್ಲಿ ಯಾವುದೇ ಗೋಲ್ ಬಾರಿಸಲಿಲ್ಲ. ಕೊನೆಗೆ ಪೆನಾಲ್ಟಿ ಶೂಟೌಟ್ ವೇಳೆ ಕೊಣಾಜೆ FC ಕಪ್ತಾನ ಶಾಝಿರ್ ಹಾಗೂ ಆಟಗಾರರ ತಂತ್ರಗಾರಿಕೆ ಯಶಸ್ವಿಯಾಯಿತು.
ಕೊಣಾಜೆ FC ಕಪ್ತಾನ ಶಾಝಿರ್ ಅವರ ಆಕರ್ಷಕ ಗೋಲಿನಿಂದ ಪೆನಾಲ್ಟಿ ಶೂಟೌಟ್ ನ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಪೆನಾಲ್ಟಿ ಶೂಟೌಟ್ ವೇಳೆ ಕೊಣಾಜೆ FC ಗೋಲ್ಕೀಪರ್ ನಿಷಾದ್ ಫಜೀರ್ ತಂಡದ ಆಟಗಾರರು ಬಾರಿಸಿದ ಚೆಂಡುಗಳನ್ನು ಯಶಸ್ವಿಯಾಗಿ ತಡೆದು ತಂಡಕ್ಕೆ ಗೆಲುವನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕೊನೆಗೆ 3-2 ಮುನ್ನಡೆಯೊಂದಿಗೆ ಕೊಣಾಜೆ FC ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು.