ರಫೇಲ್ ಬಾಯಿ ಬಿಡಲೊಲ್ಲದ ಡೀಲ್ ಮಾಸ್ಟರ್ಸ್
ಈ ದೇಶವಾಸಿಗಳಿಗೆ ರಫೇಲ್ ಡೀಲ್ ಕುರಿತು ಸಾಕಷ್ಟು ಸಂಶಯಗಳಿವೆ, ಪ್ರಶ್ನೆಗಳಿವೆ. ಅವುಗಳಿಗೆ ಉತ್ತರಿಸಬೇಕಾದದ್ದು ಸರಕಾರದ ಕರ್ತವ್ಯ. ಅದು ಬಿಟ್ಟು ತರ್ಕರಹಿತ ಸಮರ್ಥನೆಗಳನ್ನು ಮುಂದಿಡುವುದು, ಪಾಕ್-ಚೀನಾಗಳನ್ನು ಎಳೆದು ತಂದು ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುವುದರಿಂದ ಅಪರಾಧ, ಲೂಟಿ ಯನ್ನು ಒಪ್ಪಿಕೊಂಡಂತಾಗುತ್ತದಷ್ಟೇ.
126ರ ಬದಲು 36ಕ್ಕೆ ವಿಮಾನಗಳ ಸಂಖ್ಯೆ ಇಳಿಸಿದ್ದು, ಮೂರು ಪಟ್ಟು ಜಾಸ್ತಿ ಬೆಲೆಗೆ ಒಪ್ಪಿದ್ದು. ಮೇಕ್-ಇನ್ಇಂಡಿಯಾ ಎನ್ನುತ್ತಲೇ ಸಾರ್ವಜನಿಕ ಸ್ವಾಮ್ಯದ ಅನುಭವಿ ಎಚ್ಎಎಲ್ ಸಂಸ್ಥೆಯನ್ನು ಚಿಮ್ಮಿ, ಅನನುಭವಿ ಖಾಸಗಿ ಕಂಪೆನಿ ರಿಲಯನ್ಸ್ ಡಿಫೆನ್ಸ್ ಅನ್ನು ಕತ್ತಲಲ್ಲಿ ಅಪ್ಪಿಕೊಂಡಿದ್ದು, ಸಂಸತ್ತು, ಕ್ಯಾಬಿನೆಟ್, ರಕ್ಷಣಾ ಇಲಾಖೆ, ವಾಯುಸೇನೆಗಳನ್ನು ಕಾಲಕಸ ಮಾಡಿದ್ದು- ಇವೆಲ್ಲ ಪ್ರಶ್ನೆಗಳಿಗೆ ಉತ್ತರಿಸಲಾಗದ ಬಿಜೆಪಿಯ ವಕ್ತಾರರು ತರ್ಕರಹಿತ ಸಮರ್ಥನೆಗಳ ಬೆನ್ನುಹತ್ತ್ತಿದ್ದಾರೆ.
ವಾರದಿಂದ ರಫೇಲ್ ಡೀಲ್ ಸುತ್ತ ದಿನವೂ ಹೊರಬರುತ್ತಿರುವ ಸ್ಫೋಟಕ ಮಾಹಿತಿಗಳು ಎನ್ಡಿಎ ಸರಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸತೊಡಗಿವೆ. ವಿರೋಧ ಪಕ್ಷಗಳು ಮೊದಲಿನಿಂದಲೂ ಎತ್ತುತ್ತ ಬಂದಿದ್ದ ಪ್ರಶ್ನೆಗಳಿಗೆ ಉತ್ತರಿಸದೇ ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತ ಬಂದಿದ್ದ ಬಿಜೆಪಿ, ಕಳೆದ ವಾರದಿಂದ ಇಕ್ಕಟ್ಟಿಗೆ ಸಿಲುಕಿದೆ.
ಈಗ ಜನಸಾಮಾನ್ಯರು ಕೂಡ ಈ ಡೀಲ್ ಬಗ್ಗೆ ಸಂಶಯ ವ್ಯಕ್ತಪಡಿಸತೊಡಗಿದ ಮೇಲೆ ಬಿಜೆಪಿ ಡಿಫೆನ್ಸ್ ಗೆ ಇಳಿಯುವ ನಿರ್ಧಾರಕ್ಕೆ ಬಂದಿದೆ. ಆದರೆ, ಈ ಡೀಲ್ ಸಂದರ್ಭದಲ್ಲಿ ಭಾಗೀದಾರರಾಗಿದ್ದ ಫ್ರಾನ್ಸ್ನ ನಿಕಟಪೂರ್ವ ಅಧ್ಯಕ್ಷರು ರಿಲಯನ್ಸ್ ಡಿಫೆೆನ್ಸ್ ಕಂಪೆನಿಯ ಆಯ್ಕೆ ಭಾರತ ಸರಕಾರದ್ದು ಎಂದು ಹೇಳಿದ ಮೇಲಾದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ರಿಲಯನ್ಸ್ ಡಿಫೆನ್ಸ್ನ ಮುಖ್ಯಸ್ಥ ಅನಿಲ್ ಅಂಬಾನಿ ಇಲ್ಲಿವರೆಗೂ ಬಾಯಿ ಬಿಟ್ಟಿಲ್ಲ. ಸಂಸತ್ತು, ಕ್ಯಾಬಿನೆಟ್, ರಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರ ಇಲಾಖೆ, ಹಣಕಾಸು ಇಲಾಖೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ವಾಯುಸೇನೆಯನ್ನು ಕತ್ತಲಲ್ಲಿಟ್ಟು ಅತ್ಯಂತ ಗೌಪ್ಯ ಚಟುವಟಿಕೆಗಳನ್ನು ನಡೆಸಿ, ಈ ವಿವಾದಾತ್ಮಕ ಡೀಲ್ ಅನ್ನು ದೇಶದ ಮೇಲೆ ಹೇರಿದ ಮಾಸ್ಟರ್ ಡೀಲರ್ಸ್ ನರೇಂದ್ರ ಮೋದಿ ಮತ್ತು ಅನಿಲ್ ಅಂಬಾನಿಗಳ ಪರವಾಗಿ ಸರಕಾರದ ಪ್ರಮುಖ ಸಚಿವರೆಲ್ಲ ಡಿಫೆನ್ಸ್ ಲಾಯರ್ಗಳಂತೆ ವಾದ ಮಂಡನೆ ಶುರು ಮಾಡಿದ್ದಾರೆ.
ಸಂಬೀತ್ ಪಾತ್ರಾ: ಕಾಂಗ್ರೆಸ್ ಪಕ್ಷವು ಚೀನಾ ಮತ್ತು ಪಾಕಿಸ್ತಾನಗಳ ಜೊತೆ ಸೇರಿ ನರೇಂದ್ರ ಮೋದಿಯವರನ್ನು ಕೆಳಗಿಳಿಸಲು ಅಂತರ್ರಾಷ್ಟ್ರೀಯ ಷಡ್ಯಂತ್ರ ಹೂಡಿದ್ದು ಅದರ ಭಾಗವಾಗಿ ಈ ರಫೇಲ್ ರಗಳೆ ಎಬ್ಬಿಸಲಾಗಿದೆ ಎಂದು ಸಂಶೋಧನೆ ಮಾಡಿದ ಕೀರ್ತಿ ಇವರದು. ವೃತ್ತಿಯಲ್ಲಿ ವೈದ್ಯರಾಗಿರುವ ಈ ಬಿಜೆಪಿ ರಾಷ್ಟ್ರೀಯ ವಕ್ತಾರರು ಸರಕಾರ ಸಂಕಷ್ಟದಲ್ಲಿರುವಾಗ ಪಾಕಿಸ್ತಾನದ ಕೈವಾಡ ಎನ್ನುತ್ತಾರೆ, ಜೊತೆಗೆ ಎದುರಾಳಿಗಳಿಗೆ ದೇಶದ್ರೋಹಿ ಪಟ್ಟ ಕಟ್ಟಬಲ್ಲ ಮನುಷ್ಯ ಕೂಡ. ಫ್ರಾನ್ಸ್ನ ಮಾಜಿ ಅಧ್ಯಕ್ಷರ ಹೇಳಿಕೆ ಬರುವ ಹಿಂದಿನ ದಿನ ದಿಲ್ಲಿಯಲ್ಲಿ ಪ್ರೆಸ್ಮೀಟ್ ಮಾಡಿದ್ದ ಪಾತ್ರಾ, ‘ಡಿ.ಕೆ ಶಿವಕುಮಾರ್ ಮೇಲೆ ಜಾರಿ ನಿರ್ದೇಶನಾಲಯ ಮೊಕದ್ದಮೆ ಹೂಡಿದೆ. ಸೋನಿಯಾ, ರಾಹುಲ್ ಗಾಂಧಿಗಳಿಗೆ ಕೆ.ಜಿ.ಗಳ ಲೆಕ್ಕದಲ್ಲಿ ಡಿಕೆಶಿ ಹಣ ಕೊಟ್ಟಿದ್ದಾರೆ. ರಾಹುಲ್ ರಫೇಲ್ ಬಗ್ಗೆ ಮಾತಾಡುವುದನ್ನು ಬಿಟ್ಟು ಡಿಕೆಶಿ ಬಗ್ಗೆ ಮಾತಾಡಲಿ’ ಎಂದು ಸಲಹೆ ನೀಡಿದ್ದರು!
ನಿರ್ಮಲಾ ಸೀತಾರಾಮನ್: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಸೋಮವಾರ ಮತ್ತೆ ಪ್ರತ್ಯಕ್ಷರಾಗಿದ್ದು, ಇವರೂ ಕೂಡ ರಫೇಲ್ ದಾಳಿಯಿಂದ ಮೋದಿ-ಅಂಬಾನಿ ಜೋಡಿಯನ್ನು ರಕ್ಷಿಸಲು ಚೀನಾ, ಪಾಕ್ಗಳ ಮೊರೆ ಹೋಗಿದ್ದಾರೆ! ರಫೇಲ್ ಡೀಲ್ನ ವಿವರಗಳನ್ನು ನೀಡಿದರೆ, ವೈರಿ ರಾಷ್ಟಗಳಾದ ಚೀನಾ, ಪಾಕ್ಗಳಿಗೆ ಭಾರತೀಯ ಸೇನೆಯ ಗುಟ್ಟು ಗೊತ್ತಾಗಿ ಬಿಡುತ್ತೆ ಎಂಬ ಬಟ್ಟೆ ಹಾವನ್ನು ಮಡಿಲಲ್ಲಿ ಕಟ್ಟಿಕೊಂಡೇ ತಿರುಗಿದ ಮಾತಿನ ಮಲ್ಲಿ ಇವರು.
ಕಳೆದ ವಾರ, ಒಲಾಂಡ್ ಹೇಳಿಕೆಗೂ ಮೊದಲು, ಪ್ರತ್ಯಕ್ಷರಾಗಿದ್ದ ನಿರ್ಮಲಾ ಅವರು, ಡಿಫೆನ್ಸ್ ಕ್ಷೇತ್ರದಲ್ಲಿ ಎಚ್ಎಎಲ್ನ ಅಸಾಮರ್ಥ್ಯದ ಕಾರಣ ದಿಂದಾಗಿಯೇ ಡಸ್ಟಾಲ್ಟ್ ಮತ್ತು ಎಚ್ಎಎಲ್ ನಡುವಿನ ಒಪ್ಪಂದ ಯುಪಿಎ ಕಾಲದಲ್ಲೇ ರದ್ದಾಗಿತ್ತು ಎಂಬ ಅಪ್ಪಟ ಸುಳ್ಳನ್ನು ಸತ್ತ ತಲೆ ಮೇಲೆ ಹೊಡೆದಂತೆ ಹೇಳಲು ಹೋಗಿ ಹಾಸ್ಯಾಸ್ಪದರಾಗಿದ್ದರು. ಮರುದಿನವೇ, ಇತ್ತೀಚೆಗಷ್ಟೇ ನಿವೃತ್ತರಾಗಿರುವ ಎಚ್ಎಎಲ್ನ ಎಂ.ಡಿ ಸುವರ್ಣನಾಥರು ಸತ್ಯ ಹೇಳಿದ ಕೂಡಲೇ ನಿರ್ಮಲಾ ವಾರಗಳ ಕಾಲ ಕಾಣೆ ಆಗಿದ್ದರು. ಪ್ರಧಾನಿ ಫ್ರಾನ್ಸ್ ನಲ್ಲಿ 2015 ಎಪ್ರಿಲ್ 10ರಂದು ಹೊಸ ರಫೇಲ್ ಘೋಷಣೆ ಮಾಡಿದಾಗ ರಕ್ಷಣಾ ಇಲಾಖೆ, ವಿದೇಶಾಂಗ ಇಲಾಖೆಗಳೇ ಬೆಚ್ಚಿಬಿದ್ದಿದ್ದವು. ಏಕೆಂದರೆ ಅಲ್ಲಿವರೆಗೂ ಎಚ್ಎಎಲ್ ಸಂಸ್ಥೆಯೇ ದೇಶಿ ಸಹಭಾಗಿತ್ವದ ಕಂಪೆನಿ ಎಂದೇ ದಾಖಲೆಯಲ್ಲಿತ್ತು!
ರವಿಶಂಕರ್ ಪ್ರಸಾದ್: ನೋಟು ಅಮಾನ್ಯೀಕರಣದ ಅನಾಹುತ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಮಲ್ಯ ಪರಾರಿ, ರೂಪಾಯಿ ವೌಲ್ಯ ಕುಸಿತ-ಇದ್ಯಾವುದರ ಕುರಿತು ಯಾರೂ ಪ್ರಶ್ನೆ ಎತ್ತಲೇಬಾರದು ಎಂಬ ನಿಲುವು ಹೊಂದಿದ ಈ ಕಾನೂನು ಸಚಿವ ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಒಮ್ಮೆಯೂ ವಾತೇ ಆಡಿಲ್ಲ!
‘‘2012ರಲ್ಲೇ, ಯುಪಿಎ ಅವಧಿಯಲ್ಲೇ ರಿಲಯನ್ಸ್ ಮತ್ತು ಡಸ್ಸಾಲ್ಟ್ ನಡುವೆ ಒಪ್ಪಂದವಾಗಿತ್ತು, ಈಗೇಕೆ ಅದನ್ನು ವಿವಾದ ಮಾಡುತ್ತೀರಿ’’ ಎಂದು ಪ್ರಶ್ನಿಸಿ, ಕಾಗೆ ಹಾರಿಸಲು ಹೋಗಿ ವಿಫಲರಾದ ಕಾನೂನು ಪಂಡಿತರಿವರು! ಮುಕೇಶ್ ಅಂಬಾನಿಯ ರಿಲಯನ್ಸ್ ವಿಚಾರವನ್ನು ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆೆನ್ಸ್ ಕಂಪೆನಿಯೊಂದಿಗೆ ತಳಕು ಹಾಕಲು ನೋಡಿ ಮುಜುಗರಕ್ಕೀಡಾದರು ರವಿಶಂಕರ ಪ್ರಸಾದ್. ದಿಲ್ಲಿ ಬಿಜೆಪಿ ಘಟಕದ ತೇಜಿಂದರ್ಪಾಲ್ ಬಗ್ಗಾ ಎಂಬ ಬೇಜವಾಬ್ದಾರಿ ಮನುಷ್ಯ ಮಾಡಿದ ಟ್ವೀಟ್ ಅನ್ನು ಆಧಾರವಾಗಿ ಇಟ್ಟುಕೊಂಡು ಮಾತಾಡುವ ಮಟ್ಟಕ್ಕೆ ಕಾನೂನು ಸಚಿವರು ಇಳಿಯಬಾರದಿತ್ತು. ತೇಜಿಂದರ್ ಪಾಲ್ ಫೇಕ್ನ್ಯೂಸ್, ಟ್ರೋಲ್ಗಳಿಗೆ ಕುಖ್ಯಾತಿ ಪಡೆದ ಮಹಾಶಯ! ಈತನನ್ನು ಫಾಲೋ ಮಾಡಿದ ರಾಜ್ಯಸಭಾ ಸದಸ್ಯ, ಸುವರ್ಣ-ರಿಪಬ್ಲಿಕ್ ಒಡೆಯ ರಾಜೀವ್ ಚಂದ್ರಶೇಖರ್ ಕೂಡ ಇದೇ ಪೆದ್ದುತನ ಪ್ರದರ್ಶಿಸಿದ್ದರು.
ಅರುಣ್ ಜೇಟ್ಲಿ: ಮೋದಿ, ಶಾಗಳ ಪರ ಬ್ಲಾಗ್ನಲ್ಲಿ ಬರೆಯುವ ಕೆಲಸಕ್ಕೆ ಸೀಮೀತರಾಗಿರುವ ಈ ಹಣಕಾಸು ಸಚಿವರಿಗೆ ನೋಟು ಅಮಾನ್ಯೀಕರಣ ಮಾಡುವ ವಿಷಯವನ್ನೂ ಹೇಳಿರಲಿಲ್ಲ ಮೋದಿಯವರು. ನೋಟು ಅಮಾನ್ಯೀಕರಣದ ಉದ್ದೇಶ ಕಪ್ಪುಹಣ ಪತ್ತೆ ಮಾಡುವುದಾಗಿರಲಿಲ್ಲ, ತೆರಿಗೆ ವ್ಯಾಪ್ತಿಯನ್ನು ಹಿಗ್ಗಿಸುವುದಷ್ಟೇ ಆಗಿತ್ತು ಎಂದು ಇತ್ತೀಚೆಗೆ ಹೇಳಿದ್ದರು. ಕಳೆದ ವಾರದ ರಾಹುಲ್ ಗಾಂಧಿಯ ಟ್ವೀಟ್ಗೂ, ಒಲಾಂಡ್ ಹೇಳಿಕೆಗೂ ಸಂಬಂಧವಿದೆ ಎಂಬ ತರ್ಕವನ್ನು ತೇಲಿಬಿಡಲು ಹೋಗಿ ಈಗ ುನಃ ನಗೆಪಾಟಲಿಗೀಡಾಗಿದ್ದಾರೆ ಜೇಟ್ಲಿ.
ಉತ್ತರ ಕೊಡಬೇಕಾದುದು
ರಾಹುಲ್ಗಲ್ಲ, ದೇಶಕ್ಕೆ...
ಬಿಜೆಪಿಯ ಎಲ್ಲ ವಕ್ತಾರರು, ಸೋಷಿಯಲ್ ಮೀಡಿಯಾಗಳಲ್ಲಿನ ಬಿಜೆಪಿ ಭಕ್ತರು ರಫೇಲ್ ವ್ಯವಹಾರದ ಕುರಿತಂತೆ ಬಾಯಿ ತೆರೆದಾಗಲೆಲ್ಲ ರಾಹುಲ್ ಗಾಂಧಿಗೆ ಉತ್ತರ ಕೊಡುತ್ತಿದ್ದೇವೆ ಎಂಬಂತೆ ಪೊಳ್ಳುವಾದಗಳನ್ನು ಮಂಡಿಸುತ್ತಿದ್ದಾರೆೆ. ಈ ದೇಶವಾಸಿಗಳಿಗೂ ರಫೇಲ್ ಡೀಲ್ ಕುರಿತು ಸಾಕಷ್ಟು ಸಂಶಯಗಳಿವೆ, ಪ್ರಶ್ನೆಗಳಿವೆ. ಅವುಗಳಿಗೆ ಉತ್ತರಿಸಬೇಕಾದದ್ದು ಸರಕಾರದ ಕರ್ತವ್ಯ. ಅದು ಬಿಟ್ಟು ತರ್ಕರಹಿತ ಸಮರ್ಥನೆಗಳನ್ನು ಮುಂದಿಡುವುದು, ಪಾಕ್-ಚೀನಾಗಳನ್ನು ಎಳೆದು ತಂದು ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುವುದರಿಂದ ಅಪರಾಧ, ಲೂಟಿಯನ್ನು ಒಪ್ಪಿಕೊಂಡಂತಾಗುತ್ತದಷ್ಟೇ.
ತಮ್ಮ ನಾಯಕ ಮೋದಿಯ ಪರ ಬ್ಯಾಟಿಂಗ್ ಮಾಡುವುದೇನೋ ಸರಿ, ಆದರೆ ಅನಿಲ್ ಅಂಬಾನಿಯ ವಕ್ತಾರರಂತೆ ವರ್ತಿಸುವುದು ಎಷ್ಟು ಸರಿ. ಅಂಬಾನಿ ಈ ದೇಶದ ಪ್ರಧಾನಿಯೂ ಅಲ್ಲ, ಬಿಜೆಪಿಯ ನಾಯಕನೂ ಅಲ್ಲ. ಹೀಗಿದ್ದೂ ದೇಶಕ್ಕಿಂತ ಅಂಬಾನಿ ದೊಡ್ಡವರಾಗುವುದು ಹೇಗೆ.