ವಿಕಾಸದಿಂದ ಹಾಸ್ಟೆಲ್ ಮ್ಯಾನೇಜ್ಮೆಂಟ್ ಡಿಪ್ಲೊಮಾ ಕೋರ್ಸ್: ಅನುಮತಿ ಒದಗಿಸಲು ಮಾಜಿ ಸಚಿವ ಪಾಲೆಮಾರ್ ಒತ್ತಾಯ
ಮಂಗಳೂರು, ಅ.1: ವಿಕಾಸ ಸಮೂಹ ಶಿಕ್ಷಣ ಸಂಸ್ಥೆಯು ಪ್ರಪಂಚದಲ್ಲೇ ಪ್ರಥಮವಾಗಿ ಒಂದು ವರ್ಷದ ಹಾಸ್ಟೆಲ್ ಮ್ಯಾನೇಜ್ಮೆಂಟ ಡಿಪ್ಲೊಮಾ ಕೋರ್ಸ್ ಆರಂಭಿಸಲು ಮುಂದಾಗಿದೆ. ಆದರೆ ಸರಕಾರಕ್ಕೆ ಅರ್ಜಿ ಸಲ್ಲಿಸಿ 7 ತಿಂಗಳಾಗಿದ್ದರೂ ಅನುಮತಿ ದೊರಕಿಲ್ಲ. ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಮಾಜಿ ಸಚಿವ ಹಾಗೂ ಸಂಸ್ಥೆಯ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯುವಜನತೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರವೃತ್ತಿ, ಅಂತರ್ಜಾಲದಲ್ಲಿ ಅಶ್ಲೀಲ ವೀಡಿಯೋಗಳ ವೀಕ್ಷಣೆಯ ಹಿನ್ನೆಲೆಯಲ್ಲಿ ಹಾಸ್ಟೆಲ್ಗಲಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡಲು ವಾರ್ಡನ್ಗಳಿಗೆ ಈ ಕೋರ್ಸ್ ಮೂಲಕ ತರಬೇತಿ ನೀಡುವ ಪ್ರಮುಖ ಉದ್ದೇಶ ಸಂಸ್ಥೆಯದ್ದಾಗಿದೆ ಎಂದರು.
2016ರ ಅಂಕಿ ಅಂಶಗಳ ಪ್ರಕಾರ ಪ್ರತಿ 15 ನಿಮಿಷಗಳಿಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡುತ್ತಿದ್ದಾರೆ. 2014ರಿಂದ 2017ರವರೆಗೆ 26476 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಎಳವೆಯಲ್ಲಿಯೇ ಪೋಷಕರ ಪಾಲನೆಯಿಂದ ವಂಚಿತರಾಗುತ್ತಿರುವುದು ಇದಕ್ಕೆ ಕಾರಣವೆಂಬುದನ್ನು ಮನಗಂಡು ವಿಕಾಸ್ ಸಮೂಹ ಸಂಸ್ಥೆ ಈ ಕೋರ್ಸ್ ಆರಂಭಿಸಲು ಮುಂದಾಗಿದೆ. ಹಾಸ್ಟೆಲ್ಗಳಲ್ಲಿದ್ದು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪೋಷಕರ ಸ್ಥಾನವನ್ನು ತುಂಬುವ ಜವಾಬ್ಧಾರಿ ವಸತಿ ನಿಲಯದ ಪಾಲಕರು ಮುಂದಿನ ದಿನಗಳಲ್ಲಿ ನಿರ್ವಹಿಸಲಿದ್ದಾರೆ. ಈ ಕೋರ್ಸ್ ಆರಂಭಿಸಲು ಅರ್ಜಿ ಸಲ್ಲಿಸಿ ಏಳು ತಿಂಗಳಾದರೂ ಅನುಮತಿಯನ್ನು ಸರಕಾರ ನೀಡಿಲ್ಲ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಟ್ರಸ್ಟಿ ಕೊರಗಪ್ಪ, ಸಲಹೆಗಾರ ಡಾ. ಅನಂತ ಪ್ರಭು, ಡೀನ್ ಡಾ. ಮಂಜುಳಾ ರಾವ್ ಉಪಸ್ಥಿತರಿದ್ದರು.