ಗಾಂಧೀಜಿಯ ಪರಿಸರ ಸಂರಕ್ಷಣೆಯ ಪ್ರಸ್ತುತತೆ
ಪರಿಸರ ರಕ್ಷಣೆ ಎಂಬುದು ಇಂದು ಅತೀ ಜ್ವಲಂತ ಜನಜಾಗೃತಿ ವಿಷಯವಾಗಿದೆ. ಪರಿಸರ ಸಮತೋಲನ ಕಡೆಗಣಿಸಿ ಪ್ರಾಕೃತಿಕ ಪರಿಸರದಲ್ಲಿ ದೊಡ್ಡ ಪ್ರಮಾಣದಲ್ಲಿ ಮನುಷ್ಯರ ಹಸ್ತಕ್ಷೇಪ ಕಾರಣ ಹಾಗೂ ಕಬ್ಬಿಣ, ಉಕ್ಕು ಹಾಗೂ ರಾಸಾಯನಿಕ ಉದ್ಯಮಗಳ ಬೆಳವಣಿಗೆ ಹಾಗೂ ಯಾವುದೇ ಯೋಜನೆ ಇಲ್ಲದೇ ಯದ್ವಾ ತದ್ವಾ ಹುಟ್ಟಿದೆ. ನಗರೀಕರಣ ಮತ್ತು ಉಂಟಾದ ಪರಿಸರ ಮಾಲಿನ್ಯ ಈ ಎಲ್ಲದರ ಪರಿಣಾಮಗಳು ಅಸಾಧಾರಣ ಎನಿಸುವಷ್ಟು ತೀವ್ರವಾಗಿ ಜಾಗತಿಕ ತಾಪಮಾನ ಏರಿ ಅಪಾರ ಮಳೆ ಹಾನಿಯಿಂದ ಭೂ ಪ್ರದೇಶದ ಸ್ವರೂಪವೇ ಬದಲಾದದ್ದು ಈ ಔದ್ಯಮಿಕ ವ್ಯವಸ್ಥೆಯ ವಿನಾಶಕಾರಿ ಸ್ವರೂಪವು ಕಣ್ಣಿಗೆ ಕುಕ್ಕುವ ಹಾಗೆ ಎದ್ದು ಕಂಡಿದೆ.
ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಕಡೆಗಣಿಸಿ ಕೇವಲ ಮನುಷ್ಯ ಕೇಂದ್ರಿತ ಲಾಭಗಳಿಕೆಗೋಸ್ಕರ ಪ್ರಾಕೃತಿಕ ಹಾಗೂ ಪ್ರಾಣಿ ಪರಿಸರವನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುವ ಪ್ರವೃತಿ ಹೆಚ್ಚುತ್ತಾ ಹೋದಂತೆ ಪ್ರಕೃತಿ ಮೇಲೆ ಮನುಷ್ಯ ಸಾಧಿಸುವ ವಿಜಯ ಎಂದು ಪರಿಭಾವಿಸುವ ಹೆಗ್ಗಳಿಕೆ ಒಂದೆಡೆಯಾದರೆ ಇನ್ನೊಂದೆಡೆ ಕೈಗಾರಿಕೀಕರಣದಿಂದ ಉತ್ಪಾದನೆ ಹೆಚ್ಚಿ ಅದೇ ನಮ್ಮ ಬಡತನ ನಿವಾರಿಸುವ ಏಕೈಕ ದಾರಿ ಎಂಬ ಚಿಂತನೆ ಮೂಲತಃ ಬಂಡವಾಳಶಾಹಿ ನಿಲುವು ಆಗಿದೆ. ಆದರೆ ಇಂತಹ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು ಇನ್ನೊಂದು ರೀತಿಯಲ್ಲಿ ಗ್ರಾಮೀಣ ಸಮುದಾಯ ಗಳ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿ ಹೊಸ ಮಾದರಿಯ ಅಸ್ಪಶ್ಯತೆ, ಸಂಘರ್ಷ ತಂದೊಡ್ಡುತ್ತದೆ ಎನ್ನುವ ಗಾಂಧೀಜಿಯ ಚಿಂತನೆ ಇಂದು ಎಲ್ಲರನ್ನೂ ಪ್ರಕೃತಿ ಸಂರಕ್ಷಣೆ ವಿಷಯದ ಕಡೆ ತಿರುಗುವಂತೆ ಮಾಡಿದೆ.
1970ರಲ್ಲಿ ಭಾರತದಲ್ಲಿ ಮೊದಲನೇ ಬಾರಿಗೆ ‘ಭೂಮಿ ದಿನ’ ಆಚರಿಸಲಾಯಿತು. 1972ರಲ್ಲಿ ಸ್ಟಾಕ್‌ಹೋಮ್ ಸಮ್ಮೇಳನದಲ್ಲಿ ‘ಬೆಳವಣಿಗೆ ಮಿತಿ’ ಎಂಬ ಹೊತ್ತಿಗೆಯಲ್ಲಿ ‘ಕ್ಲಬ್ ಆಫರೋಮ್’ ಎಂಬ ಸಂಸ್ಥೆ ಈ ಕುರಿತು ವಿವರವಾಗಿ ಚರ್ಚಿಸಿತು. ಪರಿಸ್ಥಿತಿ ಹೀಗೇ ಮುಂದುವರಿದರೆ ಭವಿಷ್ಯ ಭಯಾನಕವಾಗಲಿದೆ ಎಂಬ ಎಚ್ಚರಿಕೆ ಮೂಡಿಸಿತು. ಆದರೆ 1909ರಲ್ಲಿ ಗಾಂಧೀಜಿ ತಮ್ಮ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಮಿತಿ ಇಲ್ಲದ ಕೈಗಾರಿಕೀಕರಣದ ಹಾವಳಿ ಬಗ್ಗೆ ಎಚ್ಚರಿಸಿದರು. ಸ್ವಸಹಾಯ, ಸ್ವ ಅವಲಂಬನೆ, ಅಧಿಕಾರದ ವಿಕೇಂದ್ರೀಕರಣ ಶ್ರಮ ವಿರುವ ಉದ್ಯೋಗಗಳ ಸೃಷ್ಟಿ ಇವುಗಳ ಬಗ್ಗೆ ಗಮನ ಸೆಳೆದು ಪ್ರಕೃತಿಯೊಂದಿಗೆ ತಾದಾತ್ಮ ಬದುಕುವುದೇ ಘನತೆಯದು ಎಂದು 100 ವರ್ಷಗಳ ಹಿಂದೆಯೇ ಎಚ್ಚರಿಸಿದ್ದರು.
ಗ್ರಾಮೀಣ ಸಮುದಾಯವನ್ನು ಅಸ್ಥಿರಗೊಳಿಸುವ ಬಾಹ್ಯ ಮಾರುಕಟ್ಟೆ ವ್ಯವಸ್ಥೆ ಪರಿಸರ ಕೆಡಿಸುವ ಅನಾರೋಗ್ಯಕರ ಸಾರಿಗೆ ಸಂಪರ್ಕಕ್ಕೆ ಎಡೆ ಮಾಡಿಕೊಡುತ್ತದೆಯಾದ ಕಾರಣ ಗ್ರಾಮೀಣ ಕೈಗಾರಿಕೆಗಳ ಪುನರುತ್ಥಾನವೇ ಇದಕ್ಕೆ ಪರಿಹಾರ ಎಂಬುದು ಗಾಂಧೀಜಿಯ ಪ್ರಬಲ ಚಿಂತನೆಯಾಗಿತ್ತು. ನೂಲುವಿಕೆ ಮತ್ತು ನೇಕಾರಿಕೆ ಕೃಷಿಗೆ ಪೂರಕವಾದ ಕೈಗಾರಿಕೆ ಎಂದಿಗೂ ನಿರುದ್ಯೋಗಿಗಳಿಗೆ ಘನತೆಯಿಂದ ಕೂಡಿದ ಉದ್ಯೋಗ ಕೊಡುತ್ತದೆ. ಮಾತ್ರವಲ್ಲ ಗ್ರಾಮೀಣ ಕೈಗಾರಿಕೆಗಳನ್ನು ನಾಶಪಡಿಸಲು ಬಯಸಿದ ಬ್ರಿಟಿಷರನ್ನು ಶಿಥಿಲಗೊಳಿಸುವ ಚಳವಳಿಯೂ ಅದಾಗಿತ್ತು.
ಇಂದು ನಾವು ನೋಡುತ್ತಿರುವ ಬಲಿಷ್ಠ ರಾಷ್ಟ್ರಗಳ ನಡುವೆ ತೀವ್ರವಾಗುತ್ತಿರುವ ಶಸ್ತ್ರಾಸ್ತ್ರ ಸಂಗ್ರಹದ ಸ್ಪರ್ಧೆ ಮತ್ತು ಬಡ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಮಾರಾಟಗಳು ಜಾಗತಿಕ ಯುದ್ಧದ ಅಪಾಯ ತಂದೊಡ್ಡುತ್ತಾ ಇವೆ. ಇವು ಔದ್ಯಮೀಕರಣದ ದುಷ್ಪರಿಣಾಮಗಳು. ಪರಿಸರದ ಮೇಲೆ ಹೆಚ್ಚಿನ ಹಾನಿ ಆಗಿರುವುದಲ್ಲದೇ ಗ್ರಾಮೀಣ ಆರ್ಥಿಕತೆಗೆ ವಂಚನೆಯಾಗಿದೆ.
ಗಾಂಧೀಜಿಯವರ ಸ್ವದೇಶಿ ತತ್ವವು ಸರ್ವೋದಯದ ಆಧಾರ ಸ್ತಂಭ. ಸರ್ವೋದಯವು ಗಾಂಧೀಜಿಯವರ ಪ್ರಕಾರ ‘‘ಬಡವರು, ಶ್ರೀಮಂತರು, ಹಿಂದೂಗಳು ಮತ್ತು ಮುಸ್ಲಿಮರು, ಬಿಳಿಯರು ಮತ್ತು ಕರಿಯರು, ಸ್ಪಶ್ಯರು ಮತ್ತು ಅಸ್ಪಶ್ಯರು ಎಲ್ಲರನ್ನೂ ಒಳಗೊಳ್ಳುತ್ತದೆ. ಬಂಡವಾಳವಾದ ಮತ್ತು ಸಮತಾವಾದ ಇವೆರಡರ ಅಪಾಯಗಳನ್ನು ನಿವಾರಿಸಲು ನ್ಯಾಸ ಪದ್ಧತಿಯನ್ನು ಅವರು ಪ್ರತಿಪಾದಿಸಿದರು. ನ್ಯಾಸ ಪದ್ಧತಿ ಪರಿಕಲ್ಪನೆ ಮೂಲಕ ಆರ್ಥಿಕ ಸಮಾನತೆಯನ್ನು ಮತ್ತು ಆರ್ಥಿಕ ಸಂಬಂಧಗಳನ್ನು ಸೌಹಾರ್ದವನ್ನು ತರಲು ಅವರು ಪ್ರಯತ್ನಿಸಿದರು. ಸೌಲಭ್ಯ ರಹಿತ ವರ್ಗಗಳ ಸಬಲೀಕರಣದ ಒಂದು ಮಾರ್ಗ ನ್ಯಾಸ ಪದ್ಧತಿ. ಇದರ ಅಡಿಯಲ್ಲಿ ಶ್ರೀಮಂತರ ಸಂಪತ್ತು ಕಾನೂನುಬದ್ಧವಾಗಿ ಅವರಿಗೆ ಸೇರಿದರೂ ನೈತಿಕವಾಗಿ ಅದು ಇಡೀ ಸಮಾಜಕ್ಕೆ ಸೇರಿರುತ್ತದೆ. ಅಂದರೆ ಶ್ರೀಮಂತರು ತಮ್ಮ ಅವಶ್ಯಕತೆಗಳಿಗೆ ಸಾಕಾಗುವಷ್ಟು ಬಳಸಿಕೊಂಡು ಉಳಿದ ಒಡೆತನ ರೈತರು ಮತ್ತು ಕಾರ್ಮಿಕರು ಅದರ ಜಂಟಿ ಒಡೆಯರಾಗಿರುತ್ತಾರೆ. ಇದು ಕೈಗಾರಿಕಾ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಮಾಲಕರು ತಮ್ಮ ಹೆಚ್ಚುವರಿ ಸಂಪತ್ತನ್ನು ಕಾರ್ಮಿಕರ ಒಳಿತಿಗಾಗಿ ಬಳಸಬೇಕು.
1930ರಲ್ಲಿ ಗಾಂಧೀಜಿ ದಂಡಿ ಯಾತ್ರೆ ಕೈಗೊಂಡರು. ಅವರ ಉದ್ದೇಶ ಕೇವಲ ಉಪ್ಪಿನ ಕಾಯ್ದೆ ಮುರಿಯಲು ಸತ್ಯಾಗ್ರಹ ಮಾತ್ರವಾಗಿರಲಿಲ್ಲ. ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸಮುದಾಯ ಗಳ ಹಕ್ಕು ಪ್ರತಿಪಾದನೆ ಮಾಡುವುದಾಗಿತ್ತು. ಅದುವರೆಗೆ ಉಪ್ಪಿನ ಮೇಲೆ ಬ್ರಿಟಿಷರ ಪ್ರತಿಬಂಧಕಾಜ್ಞೆ ಇತ್ತು. ಭಾರತದಲ್ಲಿ ಉಪ್ಪು ತಯಾ ರಿಸುವಂತಿರಲಿಲ್ಲ. ಉಪ್ಪು ತಯಾರಿ ಮಾರಾಟವೆಲ್ಲ ಬ್ರಿಟಿಷ್ ಆಡಳಿತ ಸ್ವಾಮ್ಯಕ್ಕೆ ಒಳಪಟ್ಟಿತ್ತು. ಉಪ್ಪಿನ ತೆರಿಗೆಯಿಂದ ಬಡ ರೈತರಿಗೆ ಉಪ್ಪು ಸಿಗುವುದು ಕಷ್ಟವಾಗಿತ್ತು. ಇದು ನಿಜವಾಗಿ ಅಮಾನವೀಯವಾಗಿತ್ತು. ಉಪ್ಪು ಬ್ರಿಟನ್‌ನಿಂದ ಆಮದಾಗುತ್ತಿತ್ತು. ಉಪ್ಪಿನ ಕಾಯ್ದೆ ಮುರಿಯುವ ಈ ಸತ್ಯಾಗ್ರಹಕ್ಕೆ ಇಡೀ ಭಾರತೀಯ ಜನತೆ ಎಲ್ಲಾ ಧುಮುಕಿದರು. ಬ್ರಿಟಿಷರಿಗೆ ಇದು ನುಂಗಲಾರದ ತುತ್ತಾಯಿತು. ಕಾಲ್ನಡಿಗೆಯಲ್ಲೇ ದೇಶವೆಲ್ಲಾ ಸುತ್ತಿ ಉಪ್ಪಿನ ಸತ್ಯಾಗ್ರಹದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರು ಭಾಗವಹಿಸುವಂತೆ ಮಾಡಿದರು. ಸತ್ಯಾಗ್ರಹದ ಶಿಕ್ಷಣವನ್ನು ಜನಸಾಮಾನ್ಯರಿಗೂ ತಲುಪಿಸುವುದೂ ಅತ್ಯಗತ್ಯ ಎಂದು ಸಾರಿದರು.
ಇದೆಲ್ಲ ಯೋಜನೆ ಮಾಡಿದಾಗ ಬ್ರಿಟಿಷ್ ದಾಸ್ಯದಿಂದ ಮುಕ್ತಿ ದೊರಕಿಸುವುದು ಮಾತ್ರ ಅವರ ಚಳವಳಿಯ ಉದ್ದೇಶವಾಗಿರಲಿಲ್ಲ. ಜನ ಸಾಮಾನ್ಯರನ್ನೂ ಇದರಲ್ಲಿ ಒಳಗೊಳ್ಳುವಂತೆ ಮಾಡುವ ಅವರ ಕಾಳಜಿ ಯಾರನ್ನೂ ವಿಸ್ಮಯ ಗೊಳಿಸುತ್ತದೆ. ಇದಕ್ಕೊಂದು ಉದಾಹರಣೆ ಎಂದರೆ. ಅವರು ಕುಂದಾಪುರದಲ್ಲಿ ಈ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಬಂದಾಗ ಅವರಿಂದ ಉಪ್ಪು ಖರೀದಿಸಲು ಜನರ ನೂಕು ನುಗ್ಗಾಟವಿತ್ತಂತೆ. ನಮ್ಮ ತಾಯಿ ಹೆಚ್ಚು ಓದಿದವರಲ್ಲ. ಅವರೂ ಗಾಂಧೀಜಿಯಿಂದ ಉಪ್ಪಿನ ಪೊಟ್ಟಣ ಖರೀದಿಸಿ ಅದನ್ನು ಪೂಜ್ಯ ಭಾವನೆಯಿಂದ ದೇವರ ಪಟದ ಅಡಿ ಇಟ್ಟಿದ್ದರು. ನಾವು ಸಣ್ಣವರು ಇರುವಾಗ ಗಾಂಧೀಜಿ ಬಗ್ಗೆ ಹುರುಪಿನಿಂದ ಅವರು ಹೇಳುವುದು ನಮಗೆ ತಮಾಷೆ ಎನಿಸುತ್ತಿತ್ತು. ಗಾಂಧೀಜಿ ಸತ್ತ ದಿನದಿಂದ ಅವರು ರಾತ್ರಿ ಊಟ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದರು.
ಒಟ್ಟಿನಲ್ಲಿ 100 ವರ್ಷದ ಹಿಂದೆಯೇ ಯಂತ್ರ ನಾಗರಿಕತೆಯ ವಿರುದ್ಧ ಒಂದು ಪರ್ಯಾಯ ಬದುಕಿನ ಶೋಷಣೆ ಇಲ್ಲದ ಮಾರ್ಗ ಅವರು ತೋರಿಸಿ ಕೊಟ್ಟಿದ್ದರು. ಪ್ರತಿಯೊಬ್ಬ ಪ್ರಜೆಯೂ ಸ್ವಾವಲಂಬಿ ಯಾಗುವ ಮೂಲಕ ಮಾತ್ರ ದೇಶವು ನಿಜವಾದ ಸ್ವರಾಜ್ಯವಾಗಲು ಸಾಧ್ಯ ಎಂಬಂತಹ ಸಿದ್ಧಾಂತಗಳು ಇವತ್ತಿಗೂ ತನ್ನ ಪ್ರಸ್ತುತತೆಯನ್ನು ಪ್ರತಿಪಾದಿಸುತ್ತದೆ.