ಮಂಗಳೂರಿಗೆ ಹಿಂಗಾರು ಮಳೆ ಪ್ರವೇಶ
ಮಂಗಳೂರು, ಅ. 3: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಹಿಂಗಾರು (ಈಶಾನ್ಯ ಮುಂಗಾರು) ಮಳೆ ಪ್ರಾರಂಭವಾಗಿದೆ.
ಮಧ್ಯಾಹ್ನದ ವೇಳೆ ಥಳಮಳಿಸುತ್ತಿದ್ದ ಬಿಸಿಲು ಒಮ್ಮೇಲೆ ಮೋಡ ಕವಿದ ವಾತಾವರಣ ಸೃಷಿಯಾಯಿತು. ಬಳಿಕ ನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆ ಸುರಿಯಿತು.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣ ಕಂಡುಬರುತ್ತಿದ್ದು, ಅ.6ರಿಂದ ಸುಮಾರು ನಾಲ್ಕೈದು ದಿನ ರಾಜ್ಯದ ಕರಾವಳಿ ಸೇರಿ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಈ ಮೂಲಕ ಹವಾಮಾನ ಇಲಾಖೆಯ ಭವಿಷ್ಯಕ್ಕಿಂತ ಮೂರು ದಿನ ಮೊದಲೇ ಮಳೆಯಾಗಿರುವುದು ರೈತರ ಮೊಗದಲ್ಲಿ ಸಂತಸವನ್ನುಂಟು ಮಾಡಿದೆ.
ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ವಿವಿಧೆಡೆ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಇದರಿಂದ ಕೆಲವು ಮನೆಗಳಲ್ಲಿ ಟಿವಿ, ಫ್ರಿಜ್ಗಳು ಸುಟ್ಟುಕರಕಲಾಗಿವೆ ಎಂದು ತಿಳಿದುಬಂದಿದೆ. ಆದರೆ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.
Next Story