ಆಧಾರ್ ಆದೇಶ : ಬಹುಮತ ತಂದ ನಿರಾಸೆ, ಭಿನ್ನಮತದ ಭರವಸೆ
ಆಧಾರ್ ಕಾರ್ಡ್ ವ್ಯವಸ್ಥೆಯ ಸಾಂವಿಧಾನಿಕತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಕಳೆದ ಆರು ವರ್ಷಗಳಿಂದ ದೇಶದ ಉನ್ನತ ಕೋರ್ಟಿನಲ್ಲಿ ವಾದ-ವಿವಾದಗಳು ನಡೆಯುತ್ತಿದ್ದವು. ಅಂತಿಮ ವಾದ-ಪ್ರತಿವಾದ ಮಂಡನೆಗಳು ಭರ್ತಿ 38 ದಿನಗಳ ಕಾಲ ನಡೆದಿದ್ದವು. ಇದರ ಜೊತೆ ಈ ವಿವಾದದ ಕೆಲವು ಸಂಗತಿಗಳನ್ನು ಎರಡು ಸಾಂವಿಧಾನಿಕ ಪೀಠಕ್ಕೂ ವರ್ಗಾಯಿಸಲಾಗಿತ್ತು. ಇಷ್ಟೆಲ್ಲಾ ಆಗಿ ಆಧಾರ್ ಬಗ್ಗೆ ಅಂತಿಮವಾಗಿ 3.5 ಲಕ್ಷ ಪದಗಳುಳ್ಳ ಮೂರು ಆದೇಶಗಳು ಹೊರಬಿದ್ದಿದ್ದರೂ ಅದು ಹಲವು ಪ್ರಮುಖ ಸಂಗತಿಗಳನ್ನು ಬಗೆಹರಿಸಿಲ್ಲ ಎಂಬುದೇ ವಾಸ್ತವವಾಗಿದೆ. ವಿಷಯದ ಬಗ್ಗೆ ನ್ಯಾಯಪೀಠಕ್ಕೆ ಒಮ್ಮತದ ಅಭಿಪ್ರಾಯವಿರಲಿಲ್ಲ. ನ್ಯಾಯಮೂರ್ತಿ ಎ.ಕೆ. ಸಿಖ್ರಿಯವರು ತನ್ನ ಹಾಗೂ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಖನ್ವಿಲ್ಕರ್ ಅವರೆಲ್ಲರ ಪರವಾಗಿ ನೀಡಿರುವ ಬಹುಮತದ ನ್ಯಾಯಾದೇಶದಲ್ಲಿ ಅಪರಿಪೂರ್ಣತೆ ಢಾಳಾಗಿ ಎದ್ದುಕಾಣುತ್ತದೆ. ನ್ಯಾಯಾದೇಶದ ಮುಖ್ಯಭಾಗವು ಇರಬೇಕಾದ ಜಾಗದಲ್ಲಿ ಅಸ್ಪಷ್ಟ ಮತ್ತು ಅರ್ಥವಾಗದ ವಾಕ್ಯಗಳು ಜಾಗಪಡೆದಿರುವುದನ್ನು ನೋಡಿದರೆ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾರವರು ನಿವೃತ್ತಿಯಾಗು ವುದರೊಳಗೆ ಈ ಅದೇಶವನ್ನು ನೀಡಲೇಬೇಕಿದ್ದ ಅನಿವಾರ್ಯತೆಯು ಸೃಷ್ಟಿಸಿರಬಹುದಾದ ಒತ್ತಡವು ಎದ್ದುಕಾಣುತ್ತದೆ.
ಇದು ಮಾತ್ರವಲ್ಲ. ಅಂತಿಮ ತೀರ್ಮಾನಕ್ಕೆ ಬರುವುದಕ್ಕೆ ಒದಗಿಸಲಾಗಿರುವ ಕಾರಣ ಮತ್ತು ತರ್ಕಗಳು ಅಸಮರ್ಪಕವಾಗಿವೆ. ಒಟ್ಟಾರೆಯಾಗಿ ಅಂತಿಮ ತೀರ್ಮಾನಗಳು ಪೂರ್ವ ನಿಶ್ಚಿತವಾಗಿದ್ದು ಅದಕ್ಕೆ ಬೇಕಿದ್ದ ಕಾರಣಗಳನ್ನು ಆನಂತರ ಹೊಸೆಯಲಾಗಿದೆ ಎಂದು ಭಾಸವಾಗುತ್ತದೆ. ಇದಕ್ಕೆ ಒಂದು ಉದಾಹರಣೆಯೆಂದರೆ ಸರಕಾರದ ಮಧ್ಯಪ್ರವೇಶ ವನ್ನು ಸೀಮಿತವಾಗಿಟ್ಟುಕೊಳ್ಳಬೇಕೆಂಬ ಸಾಂವಿಧಾನಿಕ ಆಶಯಗಳಿಗೆ ಆಧಾರ್ ವ್ಯವಸ್ಥೆಯು ಭಂಗ ತರುತ್ತದೆಂಬ ವಾದವನ್ನು ಬಹುಮತದ ಆದೇಶ ನಿಭಾಯಿಸಿರುವ ರೀತಿ. ಬಹುಮತದ ಆದೇಶವು ಈ ಅಂಶವನ್ನು ಉತ್ತರಿಸುವ ಗೋಜಿಗೇ ಹೋಗಿಲ್ಲ. ಅಥವಾ ಆಧಾರ್ ವ್ಯವಸ್ಥೆಯು ಹೇಗೆ ಈ ಅಂಶದ ಮೇಲೆ ಪ್ರಭಾವ ಬೀರುತ್ತದೆ ಅಥವಾ ಹಾನಿ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲೂ ಪ್ರಯತ್ನಿಸಿಲ್ಲ. ಬದಲಿಗೆ ಬಿನಯ್ ವಿಶ್ವಂ ಮತ್ತು ಭಾರತ ಸರಕಾರದ ನಡುವಿನ ಪ್ರಕರಣದಲ್ಲಿ ಈ ಹಿಂದೆ ನೀಡಿದ್ದ ಆದೇಶವನ್ನು ಉಲ್ಲೇಖಿಸುತ್ತಾ ಈ ಇಡೀ ಅಂಶವನ್ನು ತಿರಸ್ಕರಿಸಲಾಗಿದೆ ಹಾಗೂ ಅಹವಾಲುದಾರರ ವಕೀಲರು ಈ ಅಂಶದ ಬಗ್ಗೆ ಎತ್ತಿದ್ದ ಹಲವಾರು ಅಂಶಗಳ ಬಗ್ಗೆ ಯಾವುದೇ ಉತ್ತರ ಕೊಡುವ ಪ್ರಯತ್ನವನ್ನೂ ಮಾಡಲಾಗಿಲ್ಲ. ಬಿನಯ್ ವಿಶ್ವಂ ಪ್ರಕರಣದಲ್ಲಿ ನ್ಯಾಯಾಲಯವು ಆದಾಯ ತೆರಿಗೆಯ ಸಂದರ್ಭದಲ್ಲಿ ಆಧಾರ್ ವ್ಯವಸ್ಥೆಯ ಪ್ರಸ್ತುತತೆಯೆಂಬ ಏಕಮಾತ್ರ ಮತ್ತು ಸೀಮಿತ ಪ್ರಕರಣದಲ್ಲಿ ತನ್ನ ಆದೇಶವನ್ನು ನೀಡಿತ್ತು. ಆದರೆ ಈಗ ನ್ಯಾಯಾಲಯದ ಮುಂದೆ ಇದ್ದದ್ದು ಹಣಕಾಸು ಮತ್ತು ಪಡಿತರದಂಥ ಸರಕಾರಿ ರಿಯಾಯಿತಿಗಳ, ಸೌಲಭ್ಯ ಮತ್ತು ಸೇವೆಗಳ ವಿತರಣೆಗಳನ್ನೂ ಒಳಗೊಂಡಂತೆ ಇತರ ಹಲವಾರು ಬಗೆಯ ಬಳಕೆಯಲ್ಲಿ ಆಧಾರ್ ಅನ್ನು ಕಡ್ಡಾಯ ಮಾಡುವ 2016ರ ಆಧಾರ್ ಕಾಯ್ದೆ ಹೇಗೆ ಸರಕಾರದ ಮಧ್ಯಪ್ರವೇಶವನ್ನು ಹಿಗ್ಗಿಸುತ್ತಾ ಸೀಮಿತ ಸರಕಾರಿ ಮಧ್ಯಪ್ರವೇಶವೆಂಬ ಪರಿಕಲ್ಪನೆಗೆ ಹಾನಿ ಮಾಡುತ್ತದೆ ಎಂಬುದಾಗಿತ್ತು. ಆದರೆ ಸುಪ್ರೀಂ ಕೋರ್ಟಿನ ಪೀಠದ ಬಹುಮತದ ಆದೇಶವು ಈ ಯಾವ ಅಂಶಗಳನ್ನು ನೆಪಮಾತ್ರಕ್ಕೂ ಪರಿಗಣಿಸದೆ ಹೇಗೆ ಇಂಥಾ ಒಂದೆರಡು ಅಂಶಗಳ ಬಗ್ಗೆ ಈಗಾಗಲೇ ಕೊಟ್ಟಿರುವ ಆದೇಶಗಳನ್ನು ಉಲ್ಲೇಖಿಸಿ ಪ್ರಮುಖವಾದ ಆಂಶಗಳನ್ನೆಲ್ಲಾ ಬದಿಗೆ ಸರಿಸಿಬಿಟ್ಟಿದೆ.
ಒಂದು ಐತಿಹಾಸಿಕ ತೀರ್ಪಾಗಬೇಕಿದ್ದ ಆದೇಶವನ್ನು ನೀಡುವ ಅಗತ್ಯವಿರುವ ಸಂದರ್ಭದಲ್ಲಿ ಎರಡೂ ಪಕ್ಷಗಳ ವಾದಗಳನ್ನು ಗಂಭೀರವಾಗಿ ಪರಗಣಿಸಬೇಕು. ಆದರೆ ಅಂಥಾ ಇಚ್ಛೆಯನ್ನೇ ತೋರದೆ ಬಹುಮತದ ಆದೇಶವನ್ನು ನೀಡಿದ ನ್ಯಾಯಾಧೀಶರು ಹತಾಶೆಯನ್ನುಂಟುಮಾಡಿದ್ದಾರೆ. ನ್ಯಾಯಾಲಯದ ಮುಂದೆ ಸಾರ್ವಜನಿಕ ವಾಗ್ವಾದದ ಬಹಳಷ್ಟು ಸಮಯವನ್ನು ಕಬಳಿಸಿದ್ದ, ಜನರ ಬದುಕಿನ ಮೇಲೆ ನೇರ ಪರಿಣಾಮವನ್ನು ಬೀರುವಂತಹ ಮತ್ತು ಭಾರತದ ಭವಿಷ್ಯದ ಆಡಳಿತದ ಮೇಲೂ ಗಂಭೀರ ಪರಿಣಾಮವನ್ನೂ ಬೀರಬಲ್ಲಂಥ ಪ್ರಕರಣವಿತ್ತು. ಆದರೂ ಬಹುಮತದ ಆದೇಶ ನೀಡಿದ ನ್ಯಾಯಾಧೀಶರುಗಳು ತಮ್ಮ ಮುಂದಿದ್ದ ಪ್ರಶ್ನೆಗಳಿಗೆ ಸುಸಂಗತವಾದ ಮತ್ತು ತರ್ಕಬದ್ಧ ಉತ್ತರಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಮತ್ತೊಂದು ಕಳವಳ ಹುಟ್ಟಿಸುವ ಅಂಶವೆಂದರೆ ಈ ಪ್ರಕರಣದಲ್ಲಿ ನೀಡಲಾಗಿರುವ ಮೂರು ತೀರ್ಪುಗಳೂ(ಬಹುಮತದ ತೀರ್ಪು, ಅದರೊಂದಿಗೆ ಸಹಮತ ವ್ಯಕ್ತಪಡಿಸುವ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ತೀರ್ಪು ಮತ್ತು ಅವುಗಳೊಂದಿಗೆ ಭಿನ್ನಮತ ಹೊಂದಿರುವ ನ್ಯಾಯಮೂರ್ತಿ ಚಂದ್ರಚೂಡ್ ಅವರ ಭಿನ್ನಮತ ತೀರ್ಪು) ಇನ್ನಿತರರ ತೀರ್ಪುಗಳಲ್ಲಿನ ವಾದಗಳನ್ನು ಪರಿಗಣನೆಗೇ ತೆಗೆದುಕೊಂಡಿಲ್ಲ.
ಮೂರೂ ಆದೇಶಗಳನ್ನು ಒಂದಕ್ಕೊಂದು ಸಂಬಂಧವಿಲ್ಲದಂತೆ ಹಾಗೂ ಬಹುಮತದ ಆದೇಶಗಳ ಮೇಲೆ ಭಿನ್ನಮತದ ಆದೇಶದಲ್ಲಿನ ಅಭಿಪ್ರಾಯಗಳ ಪರಿಣಾಮವೇ ಇಲ್ಲವೇನೋ ಎಂಬಂತೆ ಬರೆಯಲ್ಪಟ್ಟಿದೆ. ಇದು ಅತ್ಯಂತ ಖೇದಕರ ಸಂಗತಿ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಗರಿಕರ ಖಾಸಗಿತನದಲ್ಲಿ ಪ್ರಭುತ್ವ ಮತ್ತು ಖಾಸಗಿ ಸಂಸ್ಥೆಗಳ ಮಧ್ಯಪ್ರವೇಶವನ್ನು ನಿರಾಕರಿಸುತ್ತಾ ನಾಗರಿಕರ ಖಾಸಗಿತನದ ಹಕ್ಕನ್ನು ಎತ್ತಿಹಿಡಿದ ಒಂಬತ್ತು ನ್ಯಾಯಾಧೀಶರ ಪೀಠವು ಸಹಮತದೊಂದಿಗೆ ನೀಡಿದ ಆರು ತೀರ್ಪುಗಳಲ್ಲಿ ಅಡಕವಾಗಿದ್ದ ವಿಚಾರ ಸ್ಪಷ್ಟತೆ ಈ ಆದೇಶದಲ್ಲಿ ಮಾಯವಾಗಿದೆ. ಭಾರತ ದಂಡ ಸಂಹಿತೆಯ ಸೆಕ್ಷನ್ 377 ಮತ್ತು ಸೆಕ್ಷನ್ 497 ಅನ್ನು ರದ್ದುಗೊಳಿಸಿದ ತೀರ್ಪಿನಲ್ಲೂ ಮತ್ತು ಇತರ ಪ್ರಕರಣಗಳಲ್ಲೂ ಕೆ.ಎಸ್. ಪುಟ್ಟಸ್ವಾಮಿ ಮತ್ತು ಭಾರತ ಸರಕಾರದ ಪ್ರಕರಣದಲ್ಲಿ ಸ್ಪಷ್ಟಪಡಿಸಲಾಗಿರುವ ಈ ಖಾಸಗಿತನದ ಹಕ್ಕಿನ ಸ್ವರೂಪ ಮತ್ತು ವ್ಯಾಪ್ತಿಯನ್ನು ಸುಪ್ರೀಂ ಕೋರ್ಟೇ ಹಲವಾರು ಸಾರಿ ಉಲ್ಲೇಖಿಸಿದೆ. ಆದರೆ ವಿಪರ್ಯಾಸವೆಂದರೆ ಅದೇ ವಿವೇಚನೆ ಮತ್ತು ಸ್ಪಷ್ಟತೆಯನ್ನು ಮೂಲ ಆಧಾರ್ ಪ್ರಕರಣಕ್ಕೆ ಅನ್ವಯಿಸುವುದರಲ್ಲಿ ಮಾತ್ರ ವರಿಷ್ಠ ನ್ಯಾಯಾಲಯ ವಿಫಲವಾಗಿದೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ನೀಡಲಾದ ವಿಭಿನ್ನ ಆದೇಶಗಳಲ್ಲಿ ಪ್ರಭುತ್ವದ ನಿರ್ವಹಣೆಯ ದೃಷ್ಟಿಯಿಂದ ಅತ್ಯಗತ್ಯವಾದ ಎಂಬ ನ್ಯಾಯಬದ್ಧ ಪ್ರಭುತ್ವ ಆಸಕ್ತಿ ಎಂಬ ಹಾಗೂ ಸಾರ್ವಜನಿಕ ಹಿತಾಸಕ್ತಿ ಎಂಬ ವ್ಯಾಖ್ಯಾನ ಗಳಿರುವ ಅರ್ಥಗಳನ್ನು ಪ್ರಸ್ತಾಪಿಸಲಾಗಿದೆ.
ಅವನ್ನು ಬಹುಮತದ ಆದೇಶವು ಆಧಾರ್ ಕಾಯ್ದೆಯ ಸಿಂಧುತ್ವವನ್ನು ಎತ್ತಿಹಿಡಿಯುವ ತಮ್ಮ ಪೂರ್ವ ನಿರ್ಧಾರಿತ ಆದೇಶವನ್ನು ಸಮರ್ಥಿಸಿಕೊಳ್ಳಲು ಬೇಕಾದ ವ್ಯಾಖ್ಯಾನಗಳನ್ನಾಗಿ ಬಳಸಿಕೊಳ್ಳಲಾಗಿದೆ. ಇವೆಲ್ಲದರ ನಡುವೆ ನ್ಯಾಯಮೂರ್ತಿ ಚಂದ್ರಚೂಡ್ ಅವರು ನೀಡಿರುವ ಭಿನ್ನಮತದ ಆದೇಶ ಮಾತ್ರ ಭರವಸೆಯನ್ನು ಹುಟ್ಟಿಸುವಂತಿದೆ. ಆ ಆದೇಶವು ವಿವರವಾಗಿದೆ. ತರ್ಕಬದ್ಧವಾಗಿದೆ. ಮತ್ತು ಅವುಗಳ ಆಧಾರದ ಮೇಲೆ ಯಾವುದೇ ಹಿಂಜರಿಕೆಯಿಲ್ಲದೆ ಸ್ಪಷ್ಟ ತೀರ್ಮಾನಗಳಿಗೆ ಬಂದಿದೆ. ಅವರ ಆದೇಶವು ಆಧಾರ್ ವ್ಯವಸ್ಥೆಯಲ್ಲಿರುವ ನಾಗರಿಕರ ಖಾಸಗಿತನದ ಹಕ್ಕಿನ ಮೇಲೆ ದಾಳಿ, ಸರಕಾರದ ಸರ್ವವ್ಯಾಪೀ ನಿಯಂತ್ರಣ ಮತ್ತು ಹೊರದೂಡುವಿಕೆಗಳಂಥ ಸಮಸ್ಯೆಗಳ ಆಳಕ್ಕೆ ಹೋಗುತ್ತದೆ. ‘‘ಆಧಾರ್ ಕಾಯ್ದೆಯನ್ನು ರಾಜ್ಯಸಭೆಯ ಸಮ್ಮತಿಯ ಅಗತ್ಯವಿಲ್ಲದ ರೀತಿಯಲ್ಲಿ ಒಂದು ಹಣಕಾಸು ಮಸೂದೆಯಾಗಿ ಜಾರಿ ಮಾಡಿದ್ದು ಸಂವಿಧಾನಕ್ಕೆ ಬಗೆದ ದ್ರೋಹ’’ ಎಂಬ ಅಭಿಪ್ರಾಯವನ್ನು ಸಹ ನ್ಯಾಯಮೂರ್ತಿ ಚಂದ್ರಚೂಡ್ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಈ ಒಂದು ಆಧಾರದಲ್ಲೇ ಅವರು ಇಡೀ ಕಾಯ್ದೆಯನ್ನು ರದ್ದುಗೊಳಿಸಬಹುದಿತ್ತು. ಆದರೆ ಅವರು ಮುಂದೆ ಬರಬಹುದಾದ ಯಾವುದೇ ಕಾನೂನುಗಳು ಸಾಂವಿಧಾನಿಕವಾಗಿಯೇ ಇರುವುದನ್ನು ಖಾತರಿಗೊಳಿಸುವ ಸಲುವಾಗಿಯೇ ಈ ಕಾಯ್ದೆಯ ಆಳ-ಅಗಲಗಳನ್ನು ವಿವರವಾಗಿ ಪರಿಶೀಲಿಸಿದ್ದಾರೆ.
ಈ ಆಧಾರ್ ಕಾಯ್ದೆಯು ಖಾಸಗಿತನದ ಹಕ್ಕಿನ ಜೊತೆಗೆ ಇತರ ಹಲವಾರು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಕಾರಣದಿಂದಾಗಿಯೇ ಚಂದ್ರಚೂಡ್ ಅವರು ಈ ಕಾಯ್ದೆಯ ಇನ್ನೂ ಹಲವಾರು ಅಂಶಗಳನ್ನು ರದ್ದುಗೊಳಿಸಿದ್ದಾರೆ. ಭಾರತದ ಸುಪ್ರೀಂ ಕೋರ್ಟಿನ ಇತಿಹಾಸದಲ್ಲಿ ಪ್ರಮುಖ ಮೂಲಭೂತ ಹಕ್ಕುಗಳ ವಿಷಯದಲ್ಲಿ ಯಾವುದು ಈ ಹಿಂದೆ ಭಿನ್ನ ಹಾಗೂ ಅಲ್ಪಮತದ ಆದೇಶಗಳಾಗಿದ್ದವೋ ಅವು ಆ ನಂತರದಲ್ಲಿ ಸರಿಯಾದ ತೀರ್ಪುಗಳಾಗಿದ್ದವೆಂದು ಸಾಬೀತಾದ ಹಲವಾರು ಉದಾಹರಣೆಗಳಿವೆ. ಎ.ಕೆ. ಗೋಪಾಲನ್ ಮತ್ತು ಮದ್ರಾಸ್ ಸರಕಾರದ ಪ್ರಕರಣದಲ್ಲಿ ನ್ಯಾಯಮೂರ್ತಿ ಫಝಲ್ ಅಲಿ ಅವರ ತೀರ್ಪು, ಕರಕ್ ಸಿಂಗ್ ಮತ್ತು ಪಂಜಾಬ್ ಸರಕಾರದ ನಡುವಿನ ಪ್ರಕರಣದಲ್ಲಿ ನ್ಯಾಯಮೂರ್ತಿ ಸುಬ್ಬಾರಾವ್ ಅವರ ತೀರ್ಪು ಮತ್ತು ಎಡಿಎಮ್ ಜಬಲ್ಪುರ್ ಮತ್ತು ಶಿವಕಾಂತ್ ಶುಕ್ಲಾ ಅವರ ನಡುವಿನ ಪ್ರಕರಣದಲ್ಲಿ ನ್ಯಾಯಮೂರ್ತಿ ಎಚ್.ಆರ್ ಖನ್ನಾ ಅವರ ತೀರ್ಪುಗಳು ಈ ನಿಟ್ಟಿನಲ್ಲಿ ಬಹು ಮಹತ್ವವುಳ್ಳವು. (ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ಅವರು ಇವನ್ನು ಮೂರು ಮಹಾ ಭಿನ್ನಮತಗಳು ಎಂದು ಬಣ್ಣಿಸುತ್ತಾರೆ.). ಈ ಮಹಾನ್ ಪರಂಪರೆಯಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರ ಭಿನ್ನಮತಗಳೂ ಸೇರಿಕೊಳ್ಳಲಿವೆಯೇ? ಆಧಾರ್ ವಿಷಯದಲ್ಲಿ ಇನ್ನೂ ಹಲವು ವಿಷಯಗಳು ಅಂತಿಮಗೊಳ್ಳದಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಅಂಥದೊಂದು ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ.