ಸಮುದ್ರ ಪ್ರಕ್ಷುಬ್ಧ: ಮಂಗಳೂರಿನ 300 ಬೋಟ್ ಗಳು ದಡಕ್ಕೆ
ಸಾಂದರ್ಭಿಕ ಚಿತ್ರ
ಮಂಗಳೂರು, ಅ. 4: ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗುವ ಎಲ್ಲ ಲಕ್ಷಣಗಳಿದ್ದು, ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ದಡಕ್ಕೆ ವಾಪಸಾಗಲು ಸೂಚನೆ ನೀಡಿ ಎಚ್ಚರಿಸಲಾಗಿದೆ. ಸೂಚನೆ ಹಿನ್ನೆಲೆ ಮೀನುಗಾರಿಕೆಗೆ ತೆರಳಿದ್ದ ಕರಾವಳಿಯ 300ಕ್ಕೂ ಹೆಚ್ಚು ಬೋಟ್ ಗಳು ದಡಕ್ಕೆ ವಾಪಸಾಗಿವೆ ಎಂದು ಪರ್ಸಿನ್ ಫಿಶ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ ತಿಳಿಸಿದ್ದಾರೆ.
ಅ. 6ರಿಂದ 8ರವರೆಗೆ ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗುವ ಸಂಭವವಿರುವುದರಿಂದ ಎಲ್ಲ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಬಾರದು. ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರಿಕೆ ಬೋಟ್ ಗಳು ಅ.5ರೊಳಗೆ ದಡ ಸೇರುವಂತೆ ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದವು. ಈ ಸಂದೇಶವನ್ನು ಮೀನುಗಾರಿಕೆ ಸಂಘದ ಅಧ್ಯಕ್ಷರು ಎಲ್ಲ ಮೀನುಗಾರರಿಗೆ ರವಾನಿಸಿದ್ದಾರೆ.
ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ 700ಕ್ಕೂ ಹೆಚ್ಚು ಬೋಟ್ ಗಳು ಶುಕ್ರವಾರ ದಡಕ್ಕೆ ವಾಪಸಾಗಲಿವೆ. ಬಂದರ್ ಹಾಗೂ ಹಾರ್ಬರ್ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಪರ್ಸಿನ್ ಹಡಗುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಸಮುದ್ರದಲ್ಲಿ ದಡದಿಂದ ಒಂದು ಗಂಟೆಯ ಪ್ರಯಾಣದ ದೂರದಲ್ಲಿ ಮೀನುಗಾರಿಕೆಯನ್ನು ಮಾಡುತ್ತಾರೆ. ಅಂತಹವರು ಮೊಬೈಲ್ ಮೂಲಕ ಸಂಪರ್ಕಕ್ಕೆ ಸಿಗುತ್ತಾರೆ. ಈ ಬಗ್ಗೆ ನಿರಂತರವಾಗಿ ಸಂದೇಶ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.