ಬಂಟ್ವಾಳ: ಸಿಡಿಲಿಗೆ ಬ್ಯಾಟರಿ ಸ್ಫೋಟ
ಬಂಟ್ವಾಳ, ಅ. 4: ಬಿ.ಸಿ.ರೋಡ್ ಸೇರಿದಂತೆ ಬಂಟ್ವಾಳ ಪರಿಸರದಲ್ಲಿ ಗುಡುಗು, ಸಿಡಿಲಿನೊಂದಿಗೆ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
ಭಾರಿ ಸಿಡಿಲಿಗೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿರುವ ಕೊಠಡಿ ಸಂಖ್ಯೆ 5ರಲ್ಲಿರುವ ಬ್ಯಾಟರಿ ಸ್ಫೋಟಗೊಂಡಿದ್ದು, ಈ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು, ಸಿಬ್ಬಂದಿ ಗಾಬರಿಯಾದರು. ಆದರೆ, ಅದೃಷ್ಟವಶಾತ್ ಯಾರಿಗೂ ಗಾಯ ಸಂಭವಿಸಿಲ್ಲ.
ಬುಧವಾರ ಮಧ್ಯಾಹ್ನದ ಬಳಿಕವೂ ಇದೇ ರೀತಿ ಮಳೆ ಸುರಿದಿದ್ದು, ಗುರುವಾರ ಈ ಪರಿಸ್ಥಿತಿ ಮುಂದುವರಿದಿದೆ. ಇದೇ ವೇಳೆ ತಾಲೂಕಿನ ಹಲವೆಡೆ ಸಿಡಿಲು, ಗುಡುಗಿನಿಂದಾಗಿ ಕೆಲವೆಡೆ ಹಾನಿ ಉಂಟಾಗಿದೆ. ಮಳೆ, ಗಾಳಿಗೆ ಸುಮಾರು 1.2 ಲಕ್ಷ ರೂ ಸೊತ್ತುಗಳು ನಷ್ಟವಾಗಿವೆ. ಪೆರಾಜೆ ಗ್ರಾಮದ ಮನೆಯೊಂದಕ್ಕೆ ಗೆಲ್ಲು ಬಿದ್ದು ಛಾವಣಿ ಜಖಂ ಆಗಿದ್ದು, ಕುಳ ಗ್ರಾಮದ ಮನೆ, ಕೊಟ್ಟಿಗೆ ಕುಸಿದು ಹಾನಿಯಾಗಿದೆ. ತುಂಬೆ ಸರಕಾರಿ ಹಿ.ಪ್ರ.ಶಾಲೆಯ ಶೀಟ್ ಹಾರಿ ಹೋಗಿದೆ.
ಗುರುವಾರದ ಸಿಡಿಲಿಗೂ ಹಲವೆಡೆ ವಿದ್ಯುತ್ ವಯರಿಂಗ್‍ಗಳು ಸುಟ್ಟು ಹೋಗಿರುವ ಬಗ್ಗೆ ಮಾಹಿತಿಗಳು ಲಭಿಸಿವೆ. ಆದರೆ, ರಾತ್ರಿಯವರೆಗೆ ಯಾವುದೇ ಜೀವಹಾನಿ ಸಂಭವಿಸಿದ ಬಗ್ಗೆ ತಕ್ಷಣದ ವರದಿಗಳು ತಾಲೂಕು ಕಚೇರಿಗೆ ಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.