ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರ ಪಟ್ಟಿ ಕಡ್ಡಾಯ ಪ್ರದರ್ಶನ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಅ.5: ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ನೀಡುವ ಚಿಕಿತ್ಸೆಯ ದರಗಳನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಿಗಧಿ ಪಡಿಸಿದ ದರಗಳನ್ನು ಸಾರ್ವಜನಿರಿಗೆ ಕಾಣುವಂತೆ ಪ್ರದರ್ಶಿಸುವಂತೆ ಆದೇಶಿಸಿದ್ದರೂ ಸಹ ಹಲವು ಕಡೆ, ಸಾರ್ವ ಜನಿರಿಗೆ ಕಾಣದಂತೆ ಆಸ್ಪತ್ರೆಯ ಮೂಲೆಯಲ್ಲಿ ಅಳವಡಿಸಲಾಗಿದೆ. ಅಲ್ಲದೆ ಹಲವು ಆಸ್ಪತ್ರೆಗಳಲ್ಲಿ ಈ ಹಿಂದೆ ನಮೂದಿಸಿದ್ದ ದರಗಳೇ ಇದ್ದು, ಪ್ರಸ್ತುತ ಇರುವ ದರಗಳನ್ನು ನಮೂದಿಸಿಲ್ಲ. ಆದುದರಿಂದ ಎಲ್ಲ ಆಸ್ಪತ್ರೆಗಳು ತಮ್ಮ ಇತ್ತೀಚಿನ ಚಿಕಿತ್ಸೆಯ ದರಗಳನ್ನು ಸ್ಪಷ್ಟವಾಗಿ ಕಾಣುವಂತೆ ನಮೂದಿಸಬೇಕು ಎಂದರು.
ಈ ಬಗ್ಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಮತ್ತು ಆಸ್ಪತ್ರೆಗಳು ತಮ್ಮ ವೈದ್ಯಕೀಯ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ದರ ಪ್ರದರ್ಶನದ ಕುರಿತು ಛಾಯಾಚಿತ್ರಗಳನ್ನು ಪಡೆದು ನವೀಕರಣ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ನವಜಾತ ಶಿಶು ಮರಣ ತಪ್ಪಿಸುವ ಉದ್ದೇಶದಿಂದ ಮಗು ಜನನದ ನಂತರ ತೆಗೆದುಕೊಳ್ಳಬಹುದಾದ ಅಗತ್ಯ ಕ್ರಮಗಳ ಕುರಿತು ಬಾಣಂತಿ ಯರಿಗೆ ವಾರ್ಡ್ಗಳಲ್ಲಿಯೇ ಕಡ್ಡಾಯವಾಗಿ ತರಬೇತಿ ನೀಡಬೇಕು ಎಂದು ಎಲ್ಲಾ ವೈದ್ಯರಿಗೆ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಎಂಡೋ ಸಂತ್ರಸ್ಥರಿಗೆ ಸೇನಾಪುರದಲ್ಲಿ ಈಗಾಗಲೇ ಜಮೀನು ಕಾಯ್ದಿರಿಸಿದ್ದು, ಈ ಜಮೀನನ್ನು ಆರೋಗ್ಯ ಇಲಾಖೆ ಬೇಲಿ ಹಾಕಿ ಗಡಿ ಗುರುತು ಮಾಡಿಸಿಕೊಳ್ಳಬೇಕು. ಎಂಡೋ ಸಂತ್ರಸ್ಥರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಬೇಕು ಎಂದು ಅವರು ಹೇಳಿದರು. ಸಭೆಯಲ್ಲಿ ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.