'ವ್ಯಭಿಚಾರ ಅಪರಾಧವಲ್ಲ'ವೆಂಬ ತೀರ್ಪು ಮತ್ತು ಶೋಷಿತ ಮಹಿಳೆಯರ ಮೇಲೆ ಅದರ ಪರಿಣಾಮ
ಒಂದಂತು ನಿಜ, ಕಾನೂನಿನ ಮೂಲಕ ವ್ಯಭಿಚಾರ ಅಪರಾಧ ಎಂಬ ಕಾರಣಕ್ಕಾಗಿಯಾದರೂ ದೌರ್ಜನ್ಯಕೋರರು ಹೆದರುತ್ತಿದ್ದರು. ಆದರೆ ಈಗ ಕಾನೂನೇ ಅಂತಹ ವ್ಯಭಿಚಾರವನ್ನು ಅಪರಾಧವಲ್ಲ ಎಂದರೆ ಇಂತಹ ಉದಾರತೆಯ ಪರಿಸ್ಥಿತಿಯನ್ನು ಜಾತಿ ಹಸಿವಿನ ತೋಳಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳದಿರುತ್ತಾರೆಯೇ? ಮತ್ತು ಅಂತಹ ಸಂದರ್ಭದಲ್ಲಿ ಅಸಹಾಯಕ ಶೋಷಿತ ಸಮುದಾಯಗಳ ಮಹಿಳೆಯರ ಮಾನ-ಪ್ರಾಣದ ಕತೆ?.
ಸುಪ್ರೀಂ ಕೋರ್ಟ್ ಈಚೆಗೆ ವ್ಯಭಿಚಾರ ಅಪರಾಧವಲ್ಲ ಮತ್ತು ಪತ್ನಿ ಪತಿಯ ಸ್ವತ್ತಲ್ಲ ಎಂದು ಮಹಿಳೆಯರ ಲೈಂಗಿಕ ಸ್ವಾತಂತ್ರ್ಯದ ಕುರಿತು ಮಹತ್ವದ ತೀರ್ಪಿತ್ತಿದೆ. ಖಂಡಿತ, ಮಹಿಳೆಯ ಸಹಜ ಮಾನವ ಹಕ್ಕುಗಳ ದೃಷ್ಟಿಯಿಂದ ಈ ತೀರ್ಪು ಮಹತ್ವದ್ದು ಮತ್ತು ನ್ಯಾಯಯುತದ್ದು ಕೂಡ ಆಗಿದೆ. ಕೋರ್ಟ್ ಈ ಸಂಬಂಧದ ಹಳೆಯ ಕಾಲದ ಅಪರಾಧ ದಂಡ ಸಂಹಿತೆ ಸೆಕ್ಷನ್ 497 ಅನ್ನು ರದ್ದು ಮಾಡಿ ಮಹಿಳೆಯರ ಹಕ್ಕುಗಳನ್ನು ಎತ್ತಿಹಿಡಿದಿದೆ. ಇದು ಸ್ವಾಗತಾರ್ಹ. ಆದರೆ ಈ ತೀರ್ಪಿನ ಮತ್ತೊಂದು ಮುಖ?
ಜಾತಿ ವ್ಯವಸ್ಥೆ ಕಾರಣಕ್ಕಾಗಿ ಭಾರತದ ಸಾಮಾಜಿಕ ಪರಿಸ್ಥಿತಿ ವಿಚಿತ್ರವಾಗಿರುವಂತಹದ್ದು. ಓರ್ವ ಶೋಷಿತ ಸಮುದಾಯದ ಮಹಿಳೆ ಮತ್ತು ಓರ್ವ ಮೇಲ್ವರ್ಗದ ಮಹಿಳೆ ಇಬ್ಬರ ಸ್ಥಿತಿಗತಿಯೂ ಒಂದೇ ತಕ್ಕಡಿಯದ್ದಲ್ಲ. ಶೋಷಿತ ಸಮುದಾಯದ ಮಹಿಳೆ, ಆಕೆಯ ಮಾನ, ಪ್ರಾಣ ಅಳೆಯಲು ಒಂದು ಅಳತೆಗೋಲಿದ್ದರೆ ಮೇಲ್ಜಾತಿಯ ಮಹಿಳೆ, ಆಕೆಯ ಮಾನ, ಪ್ರಾಣ ಅಳೆಯಲು ಮತ್ತೊಂದು ಅಳತೆಗೋಲಿರುತ್ತದೆ. ಹೀಗಲ್ಲದಿದ್ದರೆ ದೇವದಾಸಿ ಪದ್ಧತಿಗೆ ಬಹುಸಂಖ್ಯೆಯಲ್ಲಿ ದಲಿತ ಸಮುದಾಯದ ಮಹಿಳೆಯರೇ ಯಾಕೆ ಬಲಿಯಾಗುತ್ತಿದ್ದರು? ಹಾಗೆಯೇ ಮುಂಬೈನ ಕಾಮಾಟಿಪುರದ ವೇಶ್ಯಾವಾಟಿಕೆ ಜಾಲದಲ್ಲಿ ಬಹುಸಂಖ್ಯೆಯಲ್ಲಿ ಶೋಷಿತ ಸಮುದಾಯಗಳ ಮಹಿಳೆಯರೇ ಯಾಕಿರುತ್ತಿದ್ದರು? ಸ್ವತಃ ಬಾಬಾಸಾಹೇಬ್ ಅಂಬೇಡ್ಕರರೇ ಕಾಮಾಟಿಪುರದ ಮಹಿಳೆಯರನ್ನು ಉದ್ದೇಶಿಸಿ ''ಕಾಮಾಟಿಪುರದ ಮಹಾರ್ ಮಹಿಳೆಯರು ಇಡೀ ಸಮುದಾಯಕ್ಕೆ ಅಪಮಾನಕಾರಿಯಾಗಿದ್ದಾರೆ. ಸಮುದಾಯದ ಇತರರ ಜೊತೆ ಬದುಕಬೇಕೆಂದರೆ ನೀವು ಇಂತಹ ಅಪಮಾನಕರ ಜೀವನ ಕೈಬಿಡಲೇಬೇಕು. ವೇಶ್ಯಾವಾಟಿಕೆಗೆ ದೂಡಲ್ಪಡುವ ಇಂತಹ ಸ್ಥಿತಿಯಲ್ಲಿ ಬದುಕುವುದನ್ನು ಮೊದಲು ನಿಲ್ಲಿಸಿ'' ಎಂದು ಕರೆಕೊಟ್ಟಿದ್ದಾರೆ. ಅರ್ಥಾತ್ ತನ್ನ ಸಮುದಾಯದ ಮಹಿಳೆಯರ ಇಂತಹ ಪರಿಸ್ಥಿತಿ ಬಗ್ಗೆ ಅಂಬೇಡ್ಕರರಿಗೂ ಆತಂಕವಿತ್ತು ಎಂಬುದು ಇದರಿಂದ ತಿಳಿಯುತ್ತದೆ.
ಈ ನಿಟ್ಟಿನಲ್ಲಿ ಹೇಳುವುದಾದರೆ ಶೋಷಿತ ಸಮುದಾಯಗಳ ಮಹಿಳೆಯರ ಲೈಂಗಿಕ ಹಕ್ಕುಗಳ ಸ್ಥಿತಿಗತಿ ಬರೀ ಅವರ ವ್ಯಕ್ತಿಗತ ಮಾನವ ಸಹಜ ಆಸೆ ಆಕಾಂಕ್ಷೆ, ದೌರ್ಬಲ್ಯಗಳ ಮೇಲಷ್ಟೆ ಅವಲಂಬಿತವಾಗಿಲ್ಲ. ಬದಲಿಗೆ ಈ ದೇಶದ ಜಾತಿ ವ್ಯವಸ್ಥೆ, ತನ್ಮೂಲಕ ಒದಗಿಬರುವ ಹೀನ ಆರ್ಥಿಕ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಅಂದರೆ ಶೋಷಿತ ಸಮುದಾಯದ ಮಹಿಳೆಯೋರ್ವಳು ಬಡವಳಾಗಿದ್ದರೆ, ಅವಳ ಬಡತನ ಮತ್ತು ತನ್ನ ಕೀಳು ಜಾತಿಯ ಕಾರಣಕ್ಕೆ ಆಕೆ ಮೇಲ್ವರ್ಗದ ಪುರುಷರಿಂದ ನಿರಂತರ ಲೈಂಗಿಕವಾಗಿ ದುರುಪಯೋಗವಾಗುವುದು ಈಗ ಮುಚ್ಚಿಡುವ ವಿಷಯವಾಗುಳಿದಿಲ್ಲ. ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋ (NCRB)ದ ಒಂದು ದಾಖಲೆ ಪ್ರಕಾರವೇ ಹೇಳುವುದಾದರೆ 2015-16ರ ಅವಧಿಯಲ್ಲಿ ದಲಿತ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ 2541, ಅವರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ 3172. ಇದರ ಬಗ್ಗೆ ಕಾರಣ ಹುಡುಕುವ ದಲಿತ್ ಸಾಲಿಡಾರಿಟಿ ನೆಟ್ವರ್ಕ್ ಸಂಸ್ಥೆ ಅಭಿಪ್ರಾಯಪಟ್ಟಿರುವುದು ಇಡೀ ದಲಿತ ಸಮುದಾಯವನ್ನು ಅಪಮಾನಕ್ಕೀಡು ಮಾಡಲು ಮೇಲ್ವರ್ಗಗಳು ಕಂಡುಕೊಂಡಿರುವ ತಂತ್ರ ಆ ವರ್ಗದ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು ಎಂಬುದು!
ಹಾಗೆಯೇ ಇದರ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ಶೋಭನಾ ಸ್ಮತಿ ಅವರು ಹೇಳುವುದು ಭೂಮಿ, ಹಣ ಮತ್ತು ಶಿಕ್ಷಣ ಇಲ್ಲದ ಕಾರಣ ಪ್ರತಿಯೊಂದಕ್ಕೂ ಪ್ರಬಲ ವರ್ಗಗಳನ್ನೇ ದಲಿತ ಮಹಿಳೆಯರು ಅವಲಂಬಿಸಿರುವಾಗ ಪಟ್ಟಭದ್ರ ಶಕ್ತಿಗಳು ಇಂತಹ ಸಂದರ್ಭವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು. ಶೋಭನಾ ಸ್ಮತಿಯವರ ಈ ಮಾತಿಗೆ ಪೂರಕವಾಗಿ ಹೇಳುವುದಾದರೆ, ಹಳ್ಳಿಗಳಲ್ಲಿ ಶೋಷಿತ ಸಮುದಾಯಗಳ ಮಹಿಳೆಯರು ಬಹುತೇಕರು ಭೂರಹಿತ ಕೃಷಿ ಕಾರ್ಮಿಕರು. ಇಂತಹ ಸಂದರ್ಭಗಳಲ್ಲಿ ಕೂಲಿಗೆಂದು ಮೇಲ್ವರ್ಗದವರ ಜಮೀನಿಗೆ ಹೋಗುವ ದಲಿತ ಮಹಿಳೆ ಅಸಹಾಯಕ ವಾತಾವರಣದಲ್ಲಿ ಸಹಜವಾಗಿ ವ್ಯಭಿಚಾರದ ಕೂಪಕ್ಕೆ ತಳ್ಳಲ್ಪಡುತ್ತಾಳೆ. ಹಾಗೆಯೇ ಸುಪ್ರೀಂ ಕೋರ್ಟ್ ಪತ್ನಿ ಪತಿಯ ಆಸ್ತಿಯಲ್ಲ ಎಂದು ಈಗ ಹೇಳಿರಬಹುದು. ಆದರೆ ದೌರ್ಜನ್ಯಕೋರ ಕೆಲವು ಹಳ್ಳಿಗಳಲ್ಲಿ ಶೋಷಿತ ಸಮುದಾಯಗಳ ಪತಿಯೋರ್ವ ತನ್ನ ಪತ್ನಿಯನ್ನು ತನ್ನ ಆಸ್ತಿ ಎಂದು ಪರಿಗಣಿಸದ ವಾತಾವರಣ ಅದೆಂದಿನಿಂದಲೋ ಜಾರಿಯಲ್ಲಿದೆ!
ಉಳಿದಂತೆ ಶೌಚಾಲಯ ಶುಚಿಗೊಳಿಸುವ, ಪೌರಕಾರ್ಮಿಕ ವೃತ್ತಿ ಮಾಡುವ ಶೋಷಿತ ಸಮುದಾಯಗಳ ಮಹಿಳೆಯರು? ಅವರು ಮಾಡುವ ಕೆಲಸದ ನಿರ್ಜನ ವಾತಾವರಣ? ಹಾಗೆಯೇ ಅವರ ಆರ್ಥಿಕ ಅಸಹಾಯಕತೆ? ಯಾಕೆಂದರೆ ಕೆಲ ದಿನಗಳ ಹಿಂದೆ ಪೌರಕಾರ್ಮಿಕ ಮಹಿಳೆಯೊಬ್ಬರು ಪಾಲಿಕೆ ಅಧಿಕಾರಿಗಳೇ ತಮ್ಮನ್ನು ತಮಗೆ ನೀಡಬೇಕಾದ ಬಾಕಿ ವೇತನದ ಕಾರಣಕ್ಕೆ ವ್ಯಭಿಚಾರಕ್ಕೆ ಬಳಸಿಕೊಳ್ಳುತ್ತಿರುವುದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು! ಮುಂದುವರಿದು ಪಟ್ಟಣ ಪ್ರದೇಶಗಳಲ್ಲಿ ಮನೆ ಕೆಲಸ ಮಾಡುವ, ಹೊಟೇಲ್, ಅಂಗಡಿ, ಗಾರ್ಮೆಂಟ್ಸ್, ಕಾರ್ಖಾನೆ... ಇತ್ಯಾದಿ ಕಡೆಗಳಲ್ಲಿ ಕೆಲಸ ಮಾಡುವ ಶೋಷಿತ ಸಮುದಾಯಗಳ ಮಹಿಳೆಯರ ಮಾನ? ಇಲ್ಲೆಲ್ಲ ಯಾರೇ ಕೆಲಸಕ್ಕೆ ಸೇರಲಿ ಅದು ಪುರುಷರಿರಲಿ ಮಹಿಳೆಯರಿರಲಿ ಮೊದಲು ಜಾತಿ ಪತ್ತೆ ಹಚ್ಚುತ್ತಾರೆ. ನಂತರ ದೌರ್ಜನ್ಯದ ರೋಗ ಆರಂಭವಾಗುತ್ತದೆ. ಅಂದಹಾಗೆ ಆ ವಾತಾವರಣದಲ್ಲಿ ಮಹಿಳೆಯರು ಕಂಡುಬಂದರೆ? ಸಹಜವಾಗಿ ಆ ರೋಗ ಲೈಂಗಿಕ ದುರುಪಯೋಗದ ರೋಗವೇ ಆಗುತ್ತದೆ! ಇಂತಹ ರೋಗದ ವಾತಾವರಣ ಅದೆಷ್ಟು ಬೀಭತ್ಸದ್ದೆಂದರೆ ಜಾತಿಯ ಕಾರಣಕ್ಕೆ ಎಷ್ಟೋ ಸಂದರ್ಭಗಳಲ್ಲಿ ಮೇಲ್ವರ್ಗದ ಮಹಿಳೆಯರೇ ಸ್ವತಃ ತಮ್ಮ ಪುರುಷರಿಗೆ ದಲಿತ ಸಮುದಾಯಗಳ ಮಹಿಳೆಯರನ್ನು ಹೀಗೆ ದುರುಪಯೋಗಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸಿದ್ದೂ ಉಂಟು! ಅಷ್ಟೊಂದು ಕ್ರೂರ ಜಾತಿ ಈ ವ್ಯವಸ್ಥೆ.
ಆದ್ದರಿಂದ ವ್ಯಭಿಚಾರ ಅಪರಾಧವಲ್ಲ, ಪತ್ನಿ ಪುರುಷನ ಸ್ವತ್ತಲ್ಲ ಎಂಬ ಸುಪ್ರೀಂ ಕೋರ್ಟ್ ನಿಂದ ಹೊರ ಬಿದ್ದ ಈಚಿನ ತೀರ್ಪು ಖಂಡಿತ ಶೋಷಿತ ಸಮುದಾಯಗಳ ಮಹಿಳೆಯರ ಮುಖದಲ್ಲಿ ಖಂಡಿತ ಸಂತಸ ತಾರದು. ಶೋಷಿತ ಸಮುದಾಯಗಳ ಪುರುಷರನ್ನೂ ಅದು ಆತಂಕಕ್ಕೀಡು ಮಾಡುತ್ತದೆ.
ಒಂದಂತು ನಿಜ, ಕಾನೂನಿನ ಮೂಲಕ ವ್ಯಭಿಚಾರ ಅಪರಾಧ ಎಂಬ ಕಾರಣಕ್ಕಾಗಿಯಾದರೂ ದೌರ್ಜನ್ಯಕೋರರು ಹೆದರುತ್ತಿದ್ದರು. ಆದರೆ ಈಗ ಕಾನೂನೇ ಅಂತಹ ವ್ಯಭಿಚಾರವನ್ನು ಅಪರಾಧವಲ್ಲ ಎಂದರೆ ಇಂತಹ ಉದಾರತೆಯ ಪರಿಸ್ಥಿತಿಯನ್ನು ಜಾತಿ ಹಸಿವಿನ ತೋಳಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳದಿರುತ್ತಾರೆಯೇ? ಮತ್ತು ಅಂತಹ ಸಂದರ್ಭದಲ್ಲಿ ಅಸಹಾಯಕ ಶೋಷಿತ ಸಮುದಾಯಗಳ ಮಹಿಳೆಯರ ಮಾನ-ಪ್ರಾಣದ ಕತೆ?.
ಆದ್ದರಿಂದ ವ್ಯಭಿಚಾರ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್‌ನ ಈಚಿನ ತೀರ್ಪು ದಲಿತ ಸಮುದಾಯವನ್ನು ಅಕ್ಷರಶಃ ಆತಂಕಕ್ಕೀಡು ಮಾಡಲಿದೆ. ಬರುವ ದಿನಗಳು ದಲಿತ ಮಹಿಳೆಯರಿಗೆ ಮತ್ತಷ್ಟು ಭಯದ, ಅಸಹಾಯಕತೆಯ ದಿನಗಳಾಗಲಿವೆ ಮತ್ತು ದೌರ್ಜನ್ಯಕೋರರಿಗೆ ಈ ತೀರ್ಪು ಪರೋಕ್ಷ ಲೈಸೆನ್ಸ್ ಕೊಟ್ಟ ಹಾಗೆಯೂ ಆಗುತ್ತದೆ ಎಂದರೆ ಅದು ವಾಸ್ತವವೆನಿಸದಿರದು.