ಕೇರಳ ನೆರೆಸಂತ್ರಸ್ತರಿಗೆ ಪೀಪಲ್ಸ್ ಫೌಂಡೇಶನ್ ನೆರವು: 500 ಮನೆಗಳನ್ನು ನಿರ್ಮಿಸಲು ಯೋಜನೆ
ಬೆಂಗಳೂರು, ಅ.6 : ‘ಕೇರಳ ಮತ್ತು ಕೊಡಗು ಪುನರ್ನಿರ್ಮಿಸೋಣ’ ಎಂಬ ಯೋಜನೆಯಡಿ ಕೇರಳದಲ್ಲಿ ನೆರೆಸಂತ್ರಸ್ತ ಹಾಗೂ ವಸತಿರಹಿತ ಜನರ ನೆರವಿಗೆ ಮುಂದಾಗಿರುವ ಕೇರಳದ ಪೀಪಲ್ಸ್ ಫೌಂಡೇಶನ್ ಬೆಂಗಳೂರಿನ ಹೀರಾ ವೆಲ್‌ಫೇರ್ ಅಸೋಸಿಯೇಷನ್‌ನ ಸಹಯೋಗದಲ್ಲಿ 500 ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದೆ.
ಕೇರಳದಲ್ಲಿ ಅಪಾರ ಪ್ರಮಾಣದಲ್ಲಿ ಸಾವು ನೋವಿಗೆ ಕಾರಣವಾದ ಭಾರೀ ಮಳೆ ಹಾಗೂ ನೆರೆಯಿಂದ ಸಂತ್ರಸ್ತರಿಗೆ ನೆರವಾಗುವ ಈ ಯೋಜನೆಯಲ್ಲಿ ಬೆಂಗಳೂರಿನ ಇತರ ಹಲವು ಎನ್‌ಜಿಒ ಸಂಘಟನೆಗಳೂ ಕೈಜೋಡಿಸಿವೆ. ಅಲ್ಲದೆ ಪೀಪಲ್ಸ್ ಫೌಂಡೇಶನ್ (ಪ್ರತಿಷ್ಠಾನ) ಸಮಗ್ರ ‘ಕೇರಳ ಮತ್ತು ಕೊಡಗು ಪುನರ್ನಿರ್ಮಾಣ ಕಾರ್ಯಕ್ರಮ’ ದಡಿ 1,000 ಮನೆಗಳನ್ನು ದುರಸ್ತಿಗೊಳಿಸುವ , 5,000 ಮಂದಿಗೆ ಉದ್ಯೋಗ ಸೃಷ್ಟಿಸುವ ಮತ್ತು 4,000 ಜನರಿಗೆ ವಿಮಾ ಆರೋಗ್ಯ ಕಾರ್ಡ್‌ಗಳನ್ನು ಒದಗಿಸುವ ಜವಾಬ್ದಾರಿಯನ್ನು ಸ್ವಯಂ ನಿರ್ವಹಿಸಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಬೆಂಗಳೂರಿನ ‘ವೈಟ್ ಮನೋರ್ ಟೆರೇಸ್ ಗಾರ್ಡನ್’ನಲ್ಲಿ ನಡೆದ ಸಭೆಯಲ್ಲಿ ಹಲವಾರು ಎನ್‌ಜಿಒ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪ್ರತಿಷ್ಠಾನದ ಸದಸ್ಯರಾದ ಲುಕ್ಮಾನ್ ಮೊಯ್ದಿನ್ ಮತ್ತು ಸಲೀಂ ಮುಹಮ್ಮದ್ ಕೇರಳ ರಾಜ್ಯಕ್ಕೆ ರೂಪಿಸಲಾಗಿರುವ ಪರಿಹಾರ ಮತ್ತು ಪುನರ್ವಸತಿ ಯೋಜನೆಯ ವಿವರ ನೀಡಿದರು.
ಈ ಸಂದರ್ಭ ಮಾತನಾಡಿದ ಐಡಿಯಲ್ ರಿಲೀಫ್ ವಿಂಗ್(ಐಆರ್‌ಡಬ್ಲೂ)ನ ಪ್ರಧಾನ ಕಾರ್ಯದರ್ಶಿ ಬಶೀರ್ ಶೆರ್ಖಿ, ತಮ್ಮ ಸಂಘಟನೆಯು ಕೇರಳದ ಜಲಪ್ರಳಯ ದ ಸಂದರ್ಭ ರಕ್ಷಣಾ ಕಾರ್ಯಾಚರಣೆಗೆ ಸುಮಾರು 40,000 ಸ್ವಯಂಸೇವಕರನ್ನು ಒಟ್ಟುಗೂಡಿಸಿ 7,912 ಮನೆಗಳನ್ನು ಹಾಗೂ 1,905 ಬಾವಿಗಳನ್ನು ಸ್ವಚ್ಛಗೊಳಿಸಿದೆ. ಸ್ವಯಂಸೇವಕರು ಸುಮಾರು 1 ಲಕ್ಷ ಜನರಿಗೆ ಆಹಾರ, ಬಟ್ಟೆಬರೆ ಹಾಗೂ ಕುಡಿಯುವ ನೀರನ್ನು ಪೂರೈಸಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರೊಜೆಕ್ಟ್ ಸ್ಮೈಲ್, ಫಸ್ಟ್ ಹ್ಯಾಂಡ್, ಯುನೈಟೆಡ್ ಫೌಂಡೇಶನ್, ಲೀಡ್ ಟ್ರಸ್ಟ್, ಡಯಟ್, ಪಾಮ್ ಚಾರಿಟೇಬಲ್ ಟ್ರಸ್ಟ್, ಲೈಫ್ ಲೈನ್, ಮಿಲ್ಲತ್ ಟ್ರಸ್ಟ್, ಹೀಲಿಂಗ್ ಟಚ್, ಎಂಎಂಎ, ಕೆಎಂಸಿಸಿ, ಎಂಎಸ್‌ಎಸ್, ಎಸ್‌ಐಎಸ್, ಇಖ್ರಾ ವೆಲ್‌ಫೇರ್ ಟ್ರಸ್ಟ್ ಮುಂತಾದ 40 ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಹೀರಾ ವೆಲ್‌ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ಹಸನ್ ಕೋಯ, ವಾಸ್ತುಶಿಲ್ಪಿ ಶಮೀರ್, ಡಾ ತಹಾ ಮತೀನ್ ಮಾಹಿತಿ ನೀಡಿದರು.