3 ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ: ಬಿಜೆಪಿ-ಕಾಂಗ್ರೆಸ್-ಜೆಡಿಎಸ್‍ಗೆ ಪ್ರತಿಷ್ಠೆಯ ಪ್ರಶ್ನೆ
ರಾಜಕೀಯ ವಲಯದಲ್ಲಿ ಭಾರೀ ಸಂಚಲನ
ಶಿವಮೊಗ್ಗ, ಅ. 6: ದೇಶಾದ್ಯಂತ 2019 ರ ಏಪ್ರಿಲ್-ಮೇ ತಿಂಗಯಲ್ಲಿ ನಡೆಯಲಿರುವ 17 ನೇ ಲೋಕಸಭೆ ಸಾರ್ವತ್ರಿಕ ಚುನಾವಣೆಯ ಪೂರ್ವಭಾವಿ ಸಿದ್ದತೆ ನಡೆಯುತ್ತಿದೆ. ಮತ್ತೊಂದೆಡೆ ಈ ಚುನಾವಣೆಗೂ ಮುನ್ನ ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರು ಉಪ ಚುನಾವಣೆಗೆ ಮತ ಹಾಕಲು ಸಿದ್ದರಾಗಬೇಕಾಗಿದೆ.
ಹೌದು. ಈ ಮೂರು ಕ್ಷೇತ್ರಗಳಿಗೆ, ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದೆ. ತತ್‍ಕ್ಷಣದಿಂದಲೇ ನೀತಿ-ಸಂಹಿತೆ ಜಾರಿಗೊಳಿಸಿ ಆದೇಶಿಸಿದೆ. ಇದು ಸ್ಥಳೀಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಅ. 9 ರಿಂದ ಅಧಿಸೂಚನೆ ಪ್ರಕಟವಾಗಲಿದ್ದು, ಅ. 16 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಅ. 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅ. 20 ರಂದು ನಾಮಪತ್ರ ವಾಪಾಸ್ ಪಡೆಯಲು ಅಂತಿಮ ದಿನವಾಗಿದೆ. ನವೆಂಬರ್ 3 ರಂದು ಮತದಾನ ನಡೆಯಲಿದೆ. ನ. 6 ರಂದು ಮತ ಎಣಿಕೆಯಾಗಲಿದೆ. ನ. 8 ಕ್ಕೆ ನೀತಿ-ಸಂಹಿತೆ ಅಂತ್ಯಗೊಳ್ಳಲಿದೆ.
ರಾಜೀನಾಮೆ: ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲೋಕಸಭಾ ಸದಸ್ಯರುಗಳಾಗಿದ್ದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಬಿ.ಶ್ರೀರಾಮುಲು ಹಾಗೂ ಜೆಡಿಎಸ್‍ನ ಸಿ.ಎಸ್.ಪುಟ್ಟರಾಜುರವರು ಕ್ರಮವಾಗಿ ಶಿಕಾರಿಪುರ, ಮೊಳಕಾಲ್ಮೂರು ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.
ವಿಧಾನಸಭೆ ಹಾಗೂ ಲೋಕಸಭೆ ಸದಸ್ಯತ್ವದಲ್ಲಿ ಒಂದನ್ನು ಮಾತ್ರ ಉಳಿಸಿಕೊಳ್ಳಬೇಕಾಗಿದ್ದ ಕಾರಣದಿಂದ, ಈ ಮೂವರು ನಾಯಕರು ಸಂಸತ್ ಸದಸ್ಯತ್ವಕ್ಕೆ ಕಳೆದ ಮೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ಈ ಕಾರಣದಿಂದ ಬಿ.ಎಸ್.ಯಡಿಯೂರಪ್ಪರವರು ಆಯ್ಕೆಯಾಗಿದ್ದ ಶಿವಮೊಗ್ಗ, ಶ್ರೀರಾಮುಲು ಆಯ್ಕೆಯಾಗಿದ್ದ ಬಳ್ಳಾರಿ ಹಾಗೂ ಸಿ.ಎಸ್.ಪುಟ್ಟರಾಜು ಆಯ್ಕೆಯಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವುದು ಅನಿವಾರ್ಯವಾಗಿತ್ತು.
ಭಾರೀ ಪೈಪೋಟಿ: 17 ನೇ ಸಾರ್ವತ್ರಿಕ ಚುನಾವಣೆಗೆ ಕೇವಲ ಐದಾರು ತಿಂಗಳು ಬಾಕಿಯಿರುವ ಕಾರಣದಿಂದ, ಉಪ ಚುನಾವಣೆ ಅನುಮಾನ ಎಂಬ ಮಾತುಗಳು ರಾಜಕೀಯ ವಲಯದಿಂದ ಕೇಳಿಬಂದಿದ್ದವು. ಆದರೆ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದೆ. ಇದು ಪ್ರಮುಖ ರಾಜಕೀಯ ಪಕ್ಷಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
2019 ರ ಸಾರ್ವತ್ರಿಕ ಚುನಾವಣೆ ಸಮೀಪದಲ್ಲಿ ಈ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯೂ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಮೂರು ಕ್ಷೇತ್ರಗಳ ಫಲಿತಾಂಶ ಮುಂಬರುವ ಸಾರ್ವತ್ರಿಕ ಚುನಾವಣೆ ಮೇಲೆಯೂ ಪರಿಣಾಮ ಬೀರುವುದು ಬಹುತೇಕ ನಿಶ್ಚಿತವಾಗಿರುವುದರಿಂದ, ಭಾರೀ ಪೈಪೋಟಿ ಏರ್ಪಡುವ ಲಕ್ಷಣಗಳು ಗೋಚರವಾಗುತ್ತಿವೆ.
ಹುಸಿಯಾದ ನಿರೀಕ್ಷೆ: ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಕೇವಲ ಆರೇಳು ತಿಂಗಳು ಮಾತ್ರವಿರುವ ಕಾರಣದಿಂದ, ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವ ಸಾಧ್ಯತೆಗಳು ಕಡಿಮೆ ಎನ್ನಲಾಗಿತ್ತು. ಈ ಕಾರಣದಿಂದಲೇ ರಾಜಕೀಯ ಪಕ್ಷಗಳು ಕೂಡ ಉಪ ಚುನಾವಣಾ ಪೂರ್ವಭಾವಿ ಸಿದ್ದತೆಯತ್ತ ಗಮನಹರಿಸುವ ಗೋಜಿಗೆ ಹೋಗಿರಲಿಲ್ಲ. 2019 ರ ಸಾರ್ವತ್ರಿಕ ಚುನಾವಣೆಯತ್ತಲೇ ಚಿತ್ತ ಹರಿಸಿದ್ದವು. ಪ್ರಜಾಪ್ರತಿನಿಧಿ ಕಾಯ್ದೆಯ ಕಲಂವೊಂದರ ಅನುಸಾರ, ನೂತನವಾಗಿ ಚುನಾಯಿತಗೊಳ್ಳುವ ಸದಸ್ಯರ ಕಾರ್ಯನಿರ್ವಹಣೆಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿದ್ದರೆ, ಅಂತಹ ಕ್ಷೇತ್ರಗಳಿಗೆ ಚುನಾವಣೆಯ ಅಗತ್ಯವಿಲ್ಲ ಎಂಬ ನಿಯಮವಿದೆ. ಈ ಕಾರಣದಿಂದ ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವುದಿಲ್ಲವೆಂಬ ಮಾತುಗಳು ಕೂಡ ಕೇಳಿಬಂದಿದ್ದವು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಾಧ್ಯತೆ?
ಪ್ರಸ್ತುತ ಉಪ ಚುನಾವಣೆಯಲ್ಲಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಕಾಂಗ್ರೆಸ್‍ನಿಂದ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಜೆಡಿಎಸ್‍ನಿಂದ ಮಾಜಿ ಶಾಸಕ ಮಧು ಬಂಗಾರಪ್ಪ ಹೆಸರು ಮುಂಚೂಣಿಯಲ್ಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಧಾರ ಕೈಗೊಂಡರೆ, ಈ ಮೂವರಲ್ಲಿ ಓರ್ವರು ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಮುಂದೇನಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ ಪುತ್ರನಿಗೆ ಟಿಕೆಟ್?
ಬಿಜೆಪಿಯಲ್ಲಿಯೂ ಟಿಕೆಟ್‍ಗೆ ಪೈಪೋಟಿಯಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಮಾಜಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಬಹುತೇಕ ಅವರಿಗೆ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಆ ಪಕ್ಷದಲ್ಲಿಯೂ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಈ ವಿಷಯವನ್ನು ಸ್ವತಃ ಶಾಸಕ ಕೆ.ಎಸ್.ಈಶ್ವರಪ್ಪ ಕೂಡ ಇತ್ತೀಚೆಗೆ ಖಚಿತಪಡಿಸಿದ್ದಾರೆ. 'ಬಿ.ವೈ.ರಾಘವೇಂದ್ರ ಜೊತೆಗೆ ಇನ್ನೂ ಕೆಲ ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ವರಿಷ್ಠರು ಅಭ್ಯರ್ಥಿ ಆಯ್ಕೆ ನಡೆಸಲಿದ್ದಾರೆ' ಎಂದು ಕೆ.ಎಸ್.ಈಶ್ವರಪ್ಪ ಹೇಳಿರುವುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.