ಬಂಟ್ವಾಳ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಬೈಕ್ ಸವಾರರಿಬ್ಬರು ಮೃತ್ಯು
ಬಂಟ್ವಾಳ, ಅ. 7: ಕೆಎಸ್ಸಾರ್ಟಿಸಿ ಬಸ್ಸೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಮಂಗಳೂರು-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಜಕ್ರಿಬೆಟ್ಟು ನಲ್ಲಿ ರವಿವಾರ ನಡೆದಿದೆ.
ಮಂಗಳೂರು ಕುಡುಪು ನಿವಾಸಿ ಚರಣ್ (18) ಮತ್ತು ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ದಂಡೆಗೋಳಿ ನಿವಾಸಿ ಮುಹಮ್ಮದ್ ನೌಶಾದ್ (18) ಮೃತರು ಎಂದು ಗುರುತಿಸಲಾಗಿದೆ.
ಬಿ.ಸಿ.ರೋಡಿನಿಂದ ಕಾರಿಂಜ ದೇವಸ್ಥಾನದ ಕಡೆ ತೆರಳುತ್ತಿದ್ದ ವೇಳೆ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಯಂತ್ರಣ ತಪ್ಪಿ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರರಿಬ್ಬರು ಬಸ್ ನ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯ ನಿವಾಸಿಗಳು ಹರಸಾಹಸ ಪಟ್ಟು ಬಸ್ ನಡಿಯಲ್ಲಿ ಸಿಲುಕಿ ಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಸವಾರರನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.