ಅರೇಬಿಯಾದ ತಿನಿಸುಗಳು ಭಾರತದಲ್ಲಿ...
‘ಯೆಮೆನಿ ಮಂದಿ’ಗೆ ಭಾರೀ ಬೇಡಿಕೆ
ಅರೇಬಿಕ್ ತಿಂಡಿ ತಿನಿಸುಗಳು ಈಗ ಭಾರತದಲ್ಲಿ ಭಾರೀ ಜನಪ್ರಿಯವಾಗುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 70 ಲಕ್ಷ ಮಂದಿ ಭಾರತೀಯರಿದ್ದಾರೆ. ಆದ್ದರಿಂದ ಮಧ್ಯಪೂರ್ವ ದೇಶಗಳ ತಿಂಡಿ ತಿನಿಸುಗಳ ಬಗ್ಗೆ ಅವರಿಗಿರುವ ಆಸೆ, ಗೀಳು ಸಹಜವಾದದ್ದೆ. ಇದರಲ್ಲೇನೂ ಆಶ್ಚರ್ಯವಿಲ್ಲ. ಹಾಗಾಗಿ ಅರೇಬಿಯನ್ ಆಹಾರವನ್ನು ಪೂರೈಸುವ ಹೊಟೇಲ್ಗಳು, ರೆಸ್ಟೋರೆಂಟ್ಗಳು ಭಾರತದ ವಿವಿಧ ಪ್ರದೇಶಗಳಲ್ಲ್ಲಿ ತಲೆ ಎತ್ತಿವೆ. ವಿಶೇಷವಾಗಿ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕದಂತಹ ರಾಜ್ಯಗಳಲ್ಲಿ ಇವು ತುಂಬಾ ಜನಪ್ರಿಯವಾಗಿವೆ. ಕೆಲವು ಹೊಟೇಲ್ಗಳಲ್ಲಿ ಅರೇಬಿಯಾದ ಪರಿಸರವನ್ನು ಹೋಲುವ ವಾತಾವರಣವನ್ನು, ಅಲಂಕಾರವನ್ನು ಅಳವಡಿಸಲಾಗಿದೆ.
ಸೌದಿ ಖಾದ್ಯಗಳಾದ ಶೆವಾರ್ಮ, ರೊಟಿಸೆರಿ ಚಿಕನ್/ಮಟನ್ ವಾರ್ಪ್ ಈಗಾಗಲೇ ಭಾರತದಲ್ಲಿ ಭಾರೀ ಜನಪ್ರಿಯವಾಗಿವೆ. ನಗರಗಳಲ್ಲಿರುವ ಬೆರಳೆಣಿಕೆಯ ಸ್ಟಾರ್ ಹೊಟೇಲ್ಗಳಲ್ಲಿ ಸೌದಿ ಖಾದ್ಯಗಳು ಲಭಿಸುತ್ತಿವೆಯಾದರೂ, ಅವು ಜನ ಸಾಮಾನ್ಯರ ಕೈಗೆ ಎಟಕದಷ್ಟು ದುಬಾರಿಯಾಗಿದೆ. ಆದ್ದರಿಂದ ಮುಂಬೈ, ಚೆನ್ನೈ, ಹೈದರಾಬಾದ್, ಕಲ್ಲಿಕೋಟೆ, ಕೊಚ್ಚಿ, ಬೆಂಗಳೂರಿನಂತಹ ನಗರಗಳಲ್ಲಿ ಸಾಮಾನ್ಯ ದರ್ಜೆಯ ಹೊಟೇಲ್ಗಳು ಕೂಡ ಸೌದಿ ಖಾದ್ಯಗಳನ್ನು ನೀಡಲಾರಂಭಿಸಿವೆ.
ಮುಸ್ಲಿಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ನಗರದಲ್ಲಿ (ಯೆಮನ್ನಿಂದ ಬಂದಿರುವ) ಹದ್ರಾಮಿ ಅರಬರೂ ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಅವರ ಪಾಕಶಾಸ್ತ್ರದ ಪ್ರಭಾವ ಅಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹೈದರಾಬಾದಿನ ಹೊರವಲಯದಲ್ಲಿರುವ ಬರ್ಕಾಸ್ ಮತ್ತು ಎಕ್ರೆಗುಂಟೆ ಪ್ರದೇಶಗಳು ಒಂದು ಮಿನಿ ಅರಬ್ ಪೇಟೆಯಂತೆ ಕಾಣಿಸುತ್ತವೆ.
ಹೊಸಹೊಸ ತಿನಿಸುಗಳನ್ನು ಹುಡುಕಿಕೊಂಡು ಹೋಗುವ ಸಬ್ಯಸಾಚಿ ರಾಮ್ ಚೌಧರಿ ಹೇಳುವಂತೆ, ಯೆಮನಿ ಖಾದ್ಯಗಳಲ್ಲೊಂದಾದ ಹಾಗೂ ಹೈದಾರಾಬಾದ್ನಲ್ಲಿ ತುಂಬ ಜನಪ್ರಿಯವಾಗಿರುವ ಖಾದ್ಯವೆಂದರೆ ಅವರ ಸಾಂಪ್ರಾದಾಯಿಕ ‘ಮಂದಿ’. ಶ್ರೀ ಶೈಲಂ ಹೆದ್ದಾರಿಯ ಉದ್ದಕ್ಕೆ ಬರ್ಕಾಸನ್ನು ಶಹೀನ್ ನಗರದೊಂದಿಗೆ ಜೋಡಿಸುವ 6 ಕಿ.ಮೀ. ಮಾರ್ಗದ ಉದ್ದಕ್ಕೂ ಗಿರಾಕಿಗಳಿಗೆ ‘ಮಂದಿ’ಯನ್ನು ನೀಡುವ 30 ರೆಸ್ಟೋರೆಂಟ್ಗಳಿವೆ ಎನ್ನಲಾಗಿದೆ.
ಕೇರಳದ ಘಮ ಘಮ
ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಸಾವಿರಾರು ಅನಿವಾಸಿ ಭಾರತೀಯರ ತಾಯ್ನ್ಡು ಆಗಿರುವ ಕೇರಳದಲ್ಲಿ ಅರೇಬಿಯನ್ ಖಾದ್ಯಗಳ ಘಮ ಘಮ ಪರಿಮಳ ಬರುತ್ತದೆ. ಕೊಚ್ಚಿ, ಕಲ್ಲಿಕೋಟೆ, ಕಣ್ಣೂರು, ತಿರುವನಂತಪುರದಂತಹ ನಗರಗಳಲ್ಲಿ ಮತ್ತು ಇತರ ಚಿಕ್ಕ ಪುಟ್ಟ ಪಟ್ಟಣಗಳಲ್ಲಿ ಅರೆಬಿಕ್ ಖಾದ್ಯಗಳನ್ನು ಅಥವಾ ಅವುಗಳ ಭಾರತೀಯ ರೂಪಗಳನ್ನು ಪೂರೈಸುವ ಹಲವಾರು ಹೊಟೇಲುಗಳಿವೆ. ಮಂಡಿಯ ಹಾಗೇ ಇರುವ ಖುಜಿ ಮಂದಿ ಬಿರಿಯಾನಿ ಕೊಚ್ಚಿಯಲ್ಲಿ ತುಂಬ ಜನಪ್ರಿಯವಾಗಿದೆ.
ಶೆವಾರ್ಮ, ಫಲಾಫೆಲ್, ಗ್ರಿಲ್ ಮಾಡಿದ ಮಾಂಸ ಮತ್ತು ಮಜ್ಬೂಸ್ ಜತೆಗೆ ಕುಬ್ಬೂಸ್ ಮತ್ತು ಹುಮ್ಮ್ಮುಸ್ ದೊರಕುತ್ತದಲ್ಲದೆ, ಫತೌಶ್, ತಬೌಲೆಯಂತಹ ಅರಬಿಕ್ ಸಲಾಡ್ಗಳು ಕೂಡ ಅಲ್ಲಿ ಲಭಿಸುತ್ತವೆ.
ಸಮುದ್ರ ತೀರದ ನಗರವಾಗಿರುವ ಕಲ್ಲಿಕೋಟೆಯಲ್ಲಿರುವ ಹಲವಾರು ರೆಸ್ಟೋರೆಂಟ್ಗಳು ಗಿರಾಕಿಗಳಿಗೆ ಸಾಚಾ ಅರೆಬಿಕ್ ಆಹಾರವನ್ನು ಒದಗಿಸುತ್ತವೆ. ಅರೆಬಿಕ್ ಖಾದ್ಯಗಳನ್ನು ಒದಗಿಸುವ ಹೊಟೇಲ್ಗಳಲ್ಲಿ ಮೊತ್ತಮೊದಲಾಗಿ ಈ ಸೇವೆ ಯನ್ನು ಆರಂಭಿಸಿದ ಹೊಟೇಲ್, ನಗರದ ಮವೂರ್ ರಸ್ತೆಯಲ್ಲಿರುವ ಅಲ್-ಬೇಕ್ ಅರೆಬಿಕ್ ರೆಸ್ಟೋರೆಂಟ್ ಮಲಬಾರ್ ಪ್ರದೇಶದಲ್ಲಿ ಈಗ ಹಲವು ವಿವಾಹ ಸಮಾರಂಭಗಳಲ್ಲಿ ಮತ್ತು ಸಂತೋಷಕೂಟಗಳಲ್ಲಿ ಸಾಂಪ್ರದಾಯಿಕ ಮಲಬಾರ್ ಬಿರಿಯಾನಿಯ ಸ್ಥಾವನ್ನು ‘ಮಂದಿ’ ಆಕ್ರಮಿಸಿಕೊಂಡಿದೆ.
ದಮಾಮ್ನಲ್ಲಿ ಉದ್ಯೋಗದಲ್ಲಿರುವ ಸೈಯದ್ ಜಮಾಲ್ ಭಾರತಕ್ಕೆ ಬಂದಾಗಲೆಲ್ಲ ಇಂತಹ ಹೊಟೇಲ್ಗಳಿಗೆ ಹೋಗುತ್ತಿರುತ್ತಾರೆ. ಅವರ ಪ್ರಕಾರ, ಅರಬ್ ಖಾದ್ಯಗಳು ಹೊಟ್ಟೆಯನ್ನು ಹಾಳುಗೆಡಹುವುದಿಲ್ಲ; ಅವುಗಳನ್ನು ತಿಂದ ಬಳಿಕ ಹೊಟ್ಟೆ ಉಬ್ಬರಿಸಿದಂತೆ ಅನ್ನಿಸುವುದಿಲ್ಲ. ಅವರು ‘ಮಂದಿ’ಯ ಬಹಳ ದೊಡ್ಡ ಅಭಿಮಾನಿ.
ಇನ್ನೊಂದು ಸಾಂಪ್ರದಾಯಿಕ ಅರೆಬಿಕ್ ಖಾದ್ಯ ಕಬ್ಸಾ ಸೌದಿ ಅರೇಬಿಯಾದಲ್ಲಿ ಬಹಳ ಪ್ರಸಿದ್ಧ ತಿಂಡಿ. ಇದು ಭಾರತದಲ್ಲಿ ಕೂಡಾ ಹಲವರ ಫೇವರಿಟ್ ತಿಂಡಿಯಾಗಿದೆ. ತೀವ್ರವಾದ ಪರಿಮಳವಿರುವ ಸಂಬಾರ ಜಿನಸುಗಳ ಮಿಶ್ರಣದಿಂದಾಗಿ ಕಬ್ಸಾಕ್ಕೆ ಅದರ ರುಚಿ ಬರುತ್ತದೆ.
ಮಂದಿ ರೈಸ್ ಮತ್ತು ಕಬ್ಸಾ ಬೆಂಗಳೂರಿಗರ ಮನಸ್ಸನ್ನೂ ಗೆದ್ದಿವೆ. ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಹೊಟೇಲ್ಗಳು ಈ ಖಾದ್ಯವನ್ನು ಮತ್ತು ಇತರ ಅರೆಬಿಕ್ ಖಾದ್ಯಗಳನ್ನು ಮಾರಾಟ ಮಾಡುತ್ತದೆ. ಮಸೀದಿ ರಸ್ತೆ ಮತ್ತು ಅದರ ಅಕ್ಕಪಕ್ಕದ ಫ್ರೆಝರ್ ಟೌನ್ನಲ್ಲಿರುವ ಹಲವು ರೆಸ್ಟೋರೆಂಟ್ಗಳಲ್ಲಿ ಅರೆಬಿಕ್ ಖಾದ್ಯಗಳು ಲಭಿಸುತ್ತವೆ.
ಬೆಂಗಳೂರಿನ ಪ್ರಸಿದ್ಧ ಆಲಿಬಾಬಾ ಕೆಫೆ ಮತ್ತು ರೆಸ್ಟೋರೆಂಟ್ನ ಮಾಲಕ ಶಾದ್ ಹಸನ್ ದಾಮುದಿ ಹೇಳುತ್ತಾರೆ: ‘‘ನಾವು ಕಬ್ಸಾ, ಮಕ್ಲೂಬಾದಂತಹ ಜನಪ್ರಿಯ ರೈಸ್ ಖಾದ್ಯಗಳನ್ನು ಮತ್ತು ಈಜಿಪ್ಟ್ನ ಕೊಶಾರಿಯನ್ನು ಮಾರುತ್ತೇವೆ. ಅಲ್ಲದೆ ಅರೇಬಿಯನ್ ಗ್ರಿಲ್ಸ್, ಮೆಜೆಹ್ ಮತ್ತು ಶೆವಾರ್ಮವನ್ನೂ ಪೂರೈಸುತ್ತೇವೆ. ಭಾರತೀಯರು ಅರಬ್ ಖಾದ್ಯಗಳ ಬಗ್ಗೆ ಬಹಳ ರುಚಿ ಬೆಳೆಸಿಕೊಂಡಿದ್ದಾರೆ.’’
ಚೆನ್ನೈಯಂತಹ ಸಸ್ಯಾಹಾರಿ ಆಹಾರಪ್ರಿಯ ನಗರಕ್ಕೆ ಕೂಡ ಅರೆಬಿಯಾದ ಖಾದ್ಯಗಳು ಲಗ್ಗೆ ಇಟ್ಟಿವೆ. ಅಣ್ಣಾ ನಗರದ ಪೂರ್ವ ಭಾಗದಲ್ಲಿರುವ ‘ಮಶಾವಿ’ ಎಂಬ ಒಂದು ರೆಸ್ಟೋರೆಂಟ್ ಸಾಂಪ್ರದಾಯಿಕ ಅರಬ್ ಖಾದ್ಯವಾಗಿರುವ ‘ಔಝಿ’ಗೆ ಪ್ರಸಿದ್ಧವಾಗಿದೆ. ನಿಧಾನವಾಗಿ ಬೇಯಿಸಿದ ಮಾಂಸದ ಜೊತೆ ಮಸಾಲೆ ಬೆರೆಸಿದ ಅನ್ನ, ಬಾಯಿಲ್ಡ್ ಎಗ್ ಮತ್ತು ಬಟಾಟೆಯಿಂದ ಕೂಡಿದ ಈ ಖಾದ್ಯ ಚೆನ್ನೈಯಲ್ಲಿ ಜನಪ್ರಿಯವಾಗಿದೆ.
ಕೃಪೆ: english.alarabiya.net