ಬೆಂದರೆ ಬೇಂದ್ರೆ; ಸುಟ್ಟುಕೊಂಡರೆ ಸುರಕೋಡ
ಕಡು ಬಡತನದಲ್ಲಿ ಬದುಕು ಕಟ್ಟಿಕೊಂಡ ಹಸನ್ ನಯೀಂ ಸುರಕೋಡರಿಗೆ ಉರ್ದು ಬರುತ್ತಿರಲಿಲ್ಲ. ಉರ್ದು ಕಲಿಯಲು ಬಯಸಿದ ಅವರು ರಾಮದುರ್ಗದ ಉರ್ದು ಶಿಕ್ಷಕರೊಬ್ಬರನ್ನು ಗೊತ್ತು ಮಾಡಿಕೊಂಡು ಒಂದು ಕರಾರಿನ ಮೇಲೆ ಉರ್ದು ಕಲಿತರು. ತನಗೆ ಕನ್ನಡ ಕಲಿಸಿದರೆ, ಉರ್ದು ಕಲಿಸುವುದಾಗಿ ಆ ಶಿಕ್ಷಕರು ಇವರಿಗೆ ಹೇಳಿದರು. ಇವರು ಅವರಿಗೆ ಕನ್ನಡ ಕಲಿಸಿದರು. ಅವರು ಇವರಿಗೆ ಉರ್ದು ಕಲಿಸಿದರು. ಸುರಕೋಡರು ಉರ್ದುವನ್ನು ಯಾವ ಪರಿ ಕಲಿತರೆಂದರೆ, ಉರ್ದು ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ತರುವಷ್ಟು ಆ ಭಾಷೆಯಲ್ಲಿ ಪಾಂಡಿತ್ಯ ಪಡೆದರು.
ಸಮಾಜದಲ್ಲಿ ಹಲವರು ಇರುತ್ತಾರೆ. ಅವರು ಪಡೆಯುವ ಪ್ರಶಸ್ತಿಗಳಿಂದ ದೊಡ್ಡವರಾಗುತ್ತಾರೆ. ಆದರೆ ಇನ್ನೂ ಕೆಲವರು ಇರುತ್ತಾರೆ. ಅವರ ಮನೆಬಾಗಿಲಿಗೆ ತಾನಾಗೇ ಬರುವ ಪ್ರಶಸ್ತಿ ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಸನ್ಮಾನ ಮತ್ತು ಗೌರವಾರ್ಪಣೆ ಕೂಡ ಹಾಗೆ. ಇಂದಿನ ನಮ್ಮ ಸಮಾಜದಲ್ಲಿ ದುಡ್ಡು ಕೊಟ್ಟು ತಾವೇ ಸನ್ಮಾನಿಸಿಕೊಂಡು ಶಾಲು ಹೊದಿಸಿಕೊಳ್ಳುತ್ತಾರೆ. ಸಾಧಕರೆಂದು ತಮ್ಮನ್ನು ತಾವು ಕರೆಸಿಕೊಳ್ಳುತ್ತಾರೆ. ಪತ್ರಿಕೆಯೊಂದು ಇತ್ತೀಚೆಗೆ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಮತ್ತು ಲೋಕೋಪಯೋಗಿ ಗುತ್ತಿಗೆದಾರರನ್ನು ಸಾಧಕರೆಂದು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಿತು. ಇದೆಲ್ಲವೂ ತಾವೇ ಕೊಟ್ಟು ಪಡೆಯುವ ಪುರಸ್ಕಾರ.
ಇನ್ನೂ ಕೆಲವರು ಇರುತ್ತಾರೆ. ಅವರು ಸದ್ದಿಲ್ಲದೇ ಕೆಲಸ ಮಾಡುತ್ತಿರುತ್ತಾರೆ. ಅವರು ಸಾಧನೆಗೆ ಪ್ರಚಾರ ಬಯಸುವುದಿಲ್ಲ. ಯಾರಾದರೂ ಸನ್ಮಾನ ಮಾಡುತ್ತಾರೆಂದರೆ, ಸಂಕೋಚ ಮಾಡಿಕೊಳ್ಳುತ್ತಾರೆ. ಆದರೂ ನಮ್ಮ ಸಮಾಜ ಅಡಗಿ ಕೂತ ಇಂಥವರನ್ನು ಹೊರಗೆ ತಂದು ಸನ್ಮಾನಿಸುತ್ತದೆ. ಇಂಥವರಿಗೆ ಮಾಡುವ ಸನ್ಮಾನದಿಂದ ಸನ್ಮಾನಕ್ಕೆ ಗೌರವ ಪ್ರಾಪ್ತಿ ಆಗುತ್ತದೆ. ರಾಮದುರ್ಗದ ಹಸನ್ ನಯೀಂ ಸುರಕೋಡ ಅವರು ನಮ್ಮ ನಾಡಿನ ಇಂಥ ಹೆಮ್ಮೆ. ಧಾರವಾಡದ ಲಡಾಯಿ ಬಳಗದ ಗೆಳೆಯರು ‘ನಾಡ ಹೆಮ್ಮೆಗೆ ನಮ್ಮ ಗೌರವ’ ಇತ್ತೀಚೆಗೆ ಸುರಕೋಡರನ್ನು ಸನ್ಮಾನಿಸಿದರು. ಯಾವುದೇ ಸನ್ಮಾನ ಸಮಾರಂಭಕ್ಕೆ ಹೋಗದ ನಾನು ಸುರಕೋಡರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.
ಸುರಕೋಡರನ್ನು ಸನ್ಮಾನಿಸಲು ಕರ್ನಾಟಕವೇ ಧಾರವಾಡಕ್ಕೆ ಬಂದಿತ್ತು. ದೂರದ ದಿಲ್ಲಿಯಿಂದ ಖ್ಯಾತ ಹಿಂದಿ ಲೇಖಕ ಅಸ್ಗರ್ ವಜಾಹತ್ ಬಂದಿದ್ದರು. ನಮ್ಮವರೇ ಆದ ಕಾಳೇಗೌಡ ನಾಗವಾರ, ರಹಮತ್ ತರೀಕೆರೆ, ದಿನೇಶ್ ಅಮೀನ್‌ಮಟ್ಟು, ಸರಜೂ ಕಾಟ್ಕರ್, ಬೊಳುವಾರು, ಪೀರ್‌ಬಾಷಾ, ಡಾ. ಎಚ್.ಎಸ್.ಅನುಪಮಾ, ರಂಗನಾಥ ಕಂಟನಕುಂಟೆ, ರಂಜಾನ್ ದರ್ಗಾ ಮುಂತಾದವರು ತಾವಾಗಿಯೇ ಬಂದಿದ್ದರು. ಟಿಎಡಿಎ ಇಲ್ಲದೇ ನಾವೆಲ್ಲರೂ ಸೇರಿದ ಕಾರ್ಯಕ್ರಮವಿದು ಎಂದು ಬೊಳುವಾರು ಹೇಳಿದ ಮಾತು ಅರ್ಥಪೂರ್ಣವಾಗಿತ್ತು.
ರಾಮದುರ್ಗದಲ್ಲಿ ನೆಲೆಸಿರುವ ಹಸನ್ ನಹೀಂ ಸುರಕೋಡರು ಕನ್ನಡಕ್ಕೆ ಸೇವೆ ಸಲ್ಲಿಸುತ್ತ ಬಂದವರು. ರಾಮ ಮನೋಹರ ಲೋಹಿಯಾ ಸಾಹಿತ್ಯವನ್ನು, ಮಾಂಟೊ ಕತೆಗಳನ್ನು, ಪೈಝ್ ಅಹಮದ್ ಪೈಝ್ ಅವರ ಕಾವ್ಯಗಳನ್ನು, ಅಮೃತಾ ಪ್ರೀತಂ ಅವರ ಆತ್ಮಕತೆಯನ್ನು, ಸಾಹೀರ್ ಲೂಧಿಯಾನ್ವಿ ಅವರ ಹಾಡುಗಳನ್ನು, ಅಸ್ಗರ್ ಅಲಿ ಇಂಜಿನಿಯರ್ ಅವರ ವೈಚಾರಿಕ ಬರಹಗಳನ್ನು ಕನ್ನಡಕ್ಕೆ ತಂದವರು. ಕ್ರಾಂತಿಕಾರಿ ಕವಿ ಸಾಹೀರ್ ಲೂಧಿಯಾನ್ವಿ ಅವರ ಪ್ರೇಮಲೋಕದ ಮಾಯಾವಿ ಇವರ ವಿಶಿಷ್ಟ ಕೃತಿಯಾಗಿದೆ.
ಸದ್ದಿಲ್ಲದೇ ಮಾಡಿದ ಸಾಹಿತ್ಯಸೇವೆಗೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಇವರ ಮನೆ ಬಾಗಿಲಿಗೆ ಬಂದಿವೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ, ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ಅನುವಾದ ಅಕಾಡಮಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಬಂದಿದ್ದರೂ ಕೂಡ ಸುರಕೋಡರಿಗೆ ಕೋಡು ಬಂದಿಲ್ಲ. ಧಾರವಾಡದಲ್ಲಿ ಸನ್ಮಾನಿಸುವಾಗಲೂ ಅವರು ಅತ್ಯಂತ ಸಂಕೋಚದಿಂದಲೇ ಮೈಮುದುಡಿಕೊಂಡು ಕೂತಿದ್ದರು. ಹಸನ್ ನಹೀಂ ಸುರಕೋಡರನ್ನು ಭೇಟಿಯಾಗಬೇಕೆಂದು ಅಂದ್ಕೊಂಡರೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹುಬ್ಬಳ್ಳಿಯಿಂದ ನಮ್ಮೂರು ಜಮಖಂಡಿಗೆ ಹೋಗುವಾಗ, ದಾರಿಯಲ್ಲಿ ಇರುವ ರಾಮದುರ್ಗದಲ್ಲಿ ಸುರಕೋಡ ಇರುತ್ತಾರೆ. ಅಲ್ಲಿ ಇಳಿದು, ಅವರನ್ನು ಮತ್ತು ಸಿಪಿಎಂ ನಾಯಕ ವಿ.ಪಿ.ಕುಲಕರ್ಣಿ ಅವರನ್ನು ಭೇಟಿಯಾಗಬೇಕೆಂದು ಅನೇಕ ಬಾರಿ ಅಂದ್ಕೊಂಡರೂ ಸಾಧ್ಯವಾಗಲೇ ಇಲ್ಲ. ಮೊನ್ನೆ ಧಾರವಾಡದಲ್ಲಿ ಅವರನ್ನು ನೋಡಿ, ಮಾತನಾಡಿಸಿ ಇಂಥವರು ಇರುತ್ತಾರಾ ಎಂದು ಅನ್ನಿಸಿತು.
ರಾಮ ಮನೋಹರ ಲೋಹಿಯಾ ಅವರ ಚಿಂತನೆಯನ್ನು ಮೈಗೂಡಿಸಿಕೊಂಡ ಸುರಕೋಡರ ಭಾಷೆ, ಸರಳವಾಗಿ ಓದಿಸಿಕೊಂಡು ಹೋಗುವ ಜೀವಮಿಡಿತದ ಭಾಷೆ. ಮುಸ್ಲಿಂ ನೇಕಾರ ಕುಟುಂಬದಲ್ಲಿ ಜನಿಸಿ, ಬೀಡಿ ಕಾರ್ಮಿಕರ ಓಣಿಯಲ್ಲಿ ಬದುಕು ಕಟ್ಟಿಕೊಂಡ ಸುರಕೋಡರು, ವಡ್ಡರ್ಸೆ ರಘುರಾಮಶೆಟ್ಟಿಯವರ ಮುಂಗಾರು ಪತ್ರಿಕೆಯ ಆರಂಭದ ದಿನಗಳಲ್ಲಿ ದಿನೇಶ್ ಅಮೀನ್ ಮಟ್ಟು ಮತ್ತು ಇಂದೂಧರ ಹೊನ್ನಾಪುರ ಜೊತೆ ಕೆಲಸ ಮಾಡಿದವರು. ಬಿ.ಎಂ.ಹನೀಫ್ ಅವರ ಆತ್ಮೀಯರು. ಆದರೆ ಶೆಟ್ಟರ, ಅವರ ಸಹವಾಸ ಅವರಿಗೆ ಸರಿ ಹೋಗಲಿಲ್ಲ. ಕೆಲಸಕ್ಕೆ ರಾಜೀನಾಮೆ ಕೊಟ್ಟು ಸೀದಾ ರಾಮದುರ್ಗಕ್ಕೆ ಬಂದರು.
ಮಂಗಳೂರಿನಿಂದ ರಾಮದುರ್ಗಕ್ಕೆ ಬಂದ ಸುರಕೋಡ, ಮತ್ತೆ ಹೊರಳಿ ನೋಡಲಿಲ್ಲ. ನೌಕರಿ ಉಸಾಬರಿಗೆ ಹೋಗಲಿಲ್ಲ. ಮಗ್ಗದ ಮೇಲೆ ಕೂತು ಬಟ್ಟೆ ನೇಯುತ್ತ, ಲೋಹಿಯಾ ಪುಸ್ತಕಗಳನ್ನು ಒಂದೊಂದಾಗಿ ಅನುವಾದಿಸುತ್ತ ಬಂದರು. ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣ ಇವುಗಳನ್ನು ಪ್ರಕಟಿಸುತ್ತ ಬಂದರು. ಲೋಹಿಯಾ ಮಾತ್ರವಲ್ಲದೇ ಮಾರ್ಕ್ಸ್‌ವಾದಿ ಲೇಖಕರಾದ ಪೈಝ್ ಅಹಮದ್ ಪೈಝ್, ಸಾಹೀರ್ ಲೂಧಿಯಾನ್ವಿ ಮುಂತಾದವರ ಕೃತಿಗಳನ್ನು ಕನ್ನಡಕ್ಕೆ ತಂದರು. ಕಡು ಬಡತನದಲ್ಲಿ ಬದುಕು ಕಟ್ಟಿಕೊಂಡ ಹಸನ್ ನಯೀಂ ಸುರಕೋಡರಿಗೆ ಉರ್ದು ಬರುತ್ತಿರಲಿಲ್ಲ. ಉರ್ದು ಕಲಿಯಲು ಬಯಸಿದ ಅವರು ರಾಮದುರ್ಗದ ಉರ್ದು ಶಿಕ್ಷಕರೊಬ್ಬರನ್ನು ಗೊತ್ತು ಮಾಡಿಕೊಂಡು ಒಂದು ಕರಾರಿನ ಮೇಲೆ ಉರ್ದು ಕಲಿತರು. ತನಗೆ ಕನ್ನಡ ಕಲಿಸಿದರೆ, ಉರ್ದು ಕಲಿಸುವುದಾಗಿ ಆ ಶಿಕ್ಷಕರು ಇವರಿಗೆ ಹೇಳಿದರು. ಇವರು ಅವರಿಗೆ ಕನ್ನಡ ಕಲಿಸಿದರು. ಅವರು ಇವರಿಗೆ ಉರ್ದು ಕಲಿಸಿದರು. ಸುರಕೋಡರು ಉರ್ದುವನ್ನು ಯಾವ ಪರಿ ಕಲಿತರೆಂದರೆ, ಉರ್ದು ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ತರುವಷ್ಟು ಆ ಭಾಷೆಯಲ್ಲಿ ಪಾಂಡಿತ್ಯ ಪಡೆದರು. ಅನುವಾದ, ಸಂಪಾದನೆ, ಸ್ವಂತ ಬರಹ ಸೇರಿ ಒಟ್ಟು 23 ಕೃತಿಗಳನ್ನು ಕನ್ನಡಕ್ಕೆ ನೀಡಿರುವ ಸುರಕೋಡರು ಇನ್ನೂ ಬರೆಯುವ ಉತ್ಸಾಹದಲ್ಲಿ ಇದ್ದಾರೆ. 70ರ ಆಸುಪಾಸಿನಲ್ಲಿ ಇರುವ ಅವರಿಗೆ ಆರೋಗ್ಯ ಸಹಕರಿಸುತ್ತಿಲ್ಲ. ಇವರನ್ನು ಗುರುತಿಸಿದ ಲಡಾಯಿ ಪ್ರಕಾಶನ, ಮೇ ಸಾಹಿತ್ಯ ಬಳಗ, ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಬಳಗ ಇವರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸನ್ಮಾನ ಏರ್ಪಡಿಸಿದರೆ, ಸುರಕೋಡರು ತಮಗೂ ಅದಕ್ಕೂ ಸಂಬಂಧ ಇಲ್ಲ ಎಂಬಂತೆ ನಿರ್ಲಿಪ್ತರಾಗಿ, ಧ್ಯಾನಸ್ಥರಾಗಿ ಕೂತಿದ್ದರು.
ಹಸನ್ ನಯೀಂ ಸುರಕೋಡರದ್ದು ಬರಹ ಬಹಳ. ಮಾತು ಕಡಿಮೆ. ಸಂತೆಯೊಳಗಿರುವ ಸಂತೆಯಂತೆ, ತನ್ನ ಪಾಡಿಗೆ ತಾನು ಬರೆಯುತ್ತ ಬಂದಿದ್ದಾರೆ. ಅಂತಲೇ, ಕರ್ನಾಟಕದ ಸಾಹಿತ್ಯ ಲೋಕ ಇವರನ್ನು ‘ಕರ್ನಾಟಕದ ಮಾಂಟೊ’ ಎಂದು ಗುರುತಿಸುತ್ತದೆ. ಬಡತನವನ್ನು ಮೈಗೆ ಅಂಟಿಸಿಕೊಂಡೇ ಬೆಳೆದ ಸುರಕೋಡರು ಕೈ ಹಾಕದ ಯಾವ ಉದ್ಯೋಗವೂ ಇಲ್ಲ. ಮನೆ ಉದ್ಯೋಗವಾದ ನೇಕಾರಿಕೆ ಜೊತೆಗೆ ಹಲವು ವರ್ಷಗಳ ಕಾಲ ಮನೆಮನೆಗೆ ಪತ್ರಿಕೆಗಳನ್ನು ಹಾಕುತ್ತಿದ್ದರು. ಜೊತೆಗೆ ಪತ್ರಿಕೆಗಳಿಗೆ ಸುದ್ದಿಗಳನ್ನು ಕಳುಹಿಸುತ್ತಿದ್ದರು. ಬಡತನದೊಂದಿಗೆ ದುರಂತಗಳ ಸರಮಾಲೆಯು ಇವರನ್ನು ಸುತ್ತಿಕೊಂಡಿದೆ. ತಂದೆ, ತಾಯಿ, ಮಗ, ಸೋದರ ಹೀಗೆ ಸಾಲುಸಾಲಾಗಿ ಮನೆಗಳಲ್ಲಿ ಸಾವುಗಳು ಸಂಭವಿಸಿದವು. ಎಲ್ಲವನ್ನೂ ಇವರು ನುಂಗಿ, ಜೀರ್ಣಿಸಿಕೊಂಡರು. ರಾಮದುರ್ಗದಲ್ಲಿ ಕೋಮು ಗಲಭೆೆ ನಡೆದಾಗ, ಇವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದರು. ಆಗಲೂ ಸುರಕೋಡ ನಿರ್ಲಿಪ್ತರಾಗಿದ್ದರು. ಯಾರ ಮೇಲೂ ಪೊಲೀಸರಿಗೆ ದೂರು ನೀಡಲಿಲ್ಲ. ಸುರಕೋಡರ ತಾಳ್ಮೆ, ರಾಮದುರ್ಗದಲ್ಲಿ ಶಾಂತಿ ಮರುಕಳಿಸಲು ದಾರಿ ಮಾಡಿಕೊಟ್ಟಿತು.
ಹಸನ್ ನಯೀಂ ಸುರಕೋಡರ ಕೈಯಲ್ಲಿ ಸುದ್ದಿಪತ್ರಿಕೆಗಳನ್ನು ವಿತರಿಸಿ, ವ್ಯಾಸಂಗ ಮಾಡಿದ ಸಿ.ಎಂ.ಅಂಗಡಿ ಈಗ ಸುಪ್ರೀಂ ಕೋರ್ಟ್ ವಕೀಲರು. ಸುರಕೋಡರನ್ನು ಸನ್ಮಾನಿಸಲು ಅವರು ದಿಲ್ಲಿಯಿಂದ ಬಂದಿದ್ದರು. ಸುರಕೋಡರು ತಮ್ಮ ತಂದೆಯಿದ್ದಂತೆ ಎಂದು ಭಾವುಕರಾಗಿ ಹೇಳಿದರು. ಸುರಕೋಡರ ಇನ್ನೊಬ್ಬ ಆತ್ಮೀಯ ಗೆಳೆಯ ಪ್ರೊ. ಸಂಗಮೇಶ ಚಿಕ್ಕನರಗುಂದ ಅವರು ‘ಬೆಂದರೆ ಬೇಂದ್ರೆಯಾಗುತ್ತಾರೆ, ಸುಟ್ಟುಕೊಂಡರೆ ಸುರಕೋಡ ಆಗುತ್ತಾರೆ’ ಎಂದು ಮಾರ್ಮಿಕವಾಗಿ ಹೇಳಿದರು. ಸುರಕೋಡರನ್ನು ಸನ್ಮಾನಿಸಲು ದಿಲ್ಲಿಯಿಂದ ಬಂದಿದ್ದ ಅಸ್ಗರ್ ವಜಾಹತ್, ‘ಇಂದು ನಾನು ಧನ್ಯನಾದೆ’ ಎಂದರು. ಸುರಕೋಡರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಕಾಳೇಗೌಡ ನಾಗವಾರರು, ಕನ್ನಡ ಸಾಹಿತ್ಯಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರವಾದದ್ದು. ಕುವೆಂಪು ಒಬ್ಬರನ್ನು ಹೊರತುಪಡಿಸಿದರೆ, ಬಹುತೇಕ ಕನ್ನಡ ಸಾಹಿತಿಗಳು ಜನ್ಮತಾಳಿದ್ದು ಉತ್ತರ ಕರ್ನಾಟಕದಲ್ಲಿ. ಅಂತಲೇ ಬಿ.ಎಂ.ಶ್ರೀಕಂಠಯ್ಯ ಅವರು ಹರಿಹರದ ಸೇತುವೆ ಆಚೆ ನಿಜವಾದ ಕರ್ನಾಟಕವಿದೆ ಎಂದು ಹೇಳುತ್ತಿದ್ದರು. ಸುರಕೋಡ ಆ ಪರಂಪರೆಯ ಹೆಮ್ಮೆಯ ವಾರಸುದಾರ ಎಂದು ಹೇಳಿದರು. ಗೌರವಾರ್ಪಣೆ ಕಾರ್ಯಕ್ರಮದಲ್ಲಿ ದಿನೇಶ್ ಅಮೀನ್ ಮಟ್ಟು ಅವರು, ಹಸನ್ ನಯೀಂ ಸುರಕೋಡರನ್ನು ನೋಡಿದರೆ, ನಮ್ಮಲ್ಲಿ ಮನುಷ್ಯರು ಇನ್ನೂ ಇದ್ದಾರೆ ಎಂಬುದು ಖಾತ್ರಿಯಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಸುರಕೋಡರು ಅನುವಾದಿಸಿದ, ಲಡಾಯಿ ಪ್ರಕಾಶನ ಪ್ರಕಟಿಸಿದ ಅಮೃತಾ ಪ್ರೀತಂ ಅವರ ಆತ್ಮಕತೆ, ‘ರಶೀದಿ ತಿಕೀಟು’, ಸಾಹಿರ್ ಲೂಧಿಯಾನ್ವಿ ಅವರ ‘ಪ್ರೇಮಲೋಕದ ಮಾಯಾವಿ’, ಸಾದತ್ ಹಸನ್ ಮಾಂಟೊ ಅವರ ‘ಸದ್ಯಕ್ಕಿದು ಹುಚ್ಚರ ಸಂತಿ’ ಹಾಗೂ ‘ಹಿಂದೂ ಮಂದಿರಗಳು ಮತ್ತು ಔರಂಗಝೇಬ್ ಆದೇಶಗಳು’ ಪುಸ್ತಕಗಳು ಬಿಡುಗಡೆಯಾದವು. ನಾಡಿನ ಹೆಮ್ಮೆಗೆ ನಮ್ಮ ಗೌರವ ಎಂದು ಧಾರವಾಡದ ಸ್ನೇಹಿತರು ಸಂಗ್ರಹಿಸಿದ 2.60 ಲಕ್ಷ ರೂ.ಅನ್ನು ಸುರಕೋಡರಿಗೆ ಅರ್ಪಿಸಿ, ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸುರಕೋಡರು, ‘ನಾನು ಪಂಡಿತರ ಮನೆಯಲ್ಲಿ ಹುಟ್ಟಲಿಲ್ಲ. ಮನುಷ್ಯರ ಮನೆಯಲ್ಲಿ ಹುಟ್ಟಿದೆ. ನನ್ನನ್ನು ಗುರುತಿಸಿ, ಸನ್ಮಾನಿಸಿದ್ದಕ್ಕೆ ಧನ್ಯವಾದ’ ಎಂದು ಹೇಳಿದರು. ಕೆಲ ವರ್ಷಗಳ ಹಿಂದೆ ಹೇಳಿದ ಲೋಹಿಯಾ ಪ್ರಕಾಶನದ ಚನ್ನಬಸವಣ್ಣ ಅವರು ಕೂಡ ಸುರಕೋಡರನ್ನು ಸನ್ಮಾನಿಸಿ, 50 ಸಾವಿರ ರೂಪಾಯಿ ಹಮ್ಮಿಣಿ ಅರ್ಪಿಸಿದ್ದರು.
ಮಾರುಕಟ್ಟೆ ಜಗತ್ತಿನಲ್ಲಿ ಮನುಷ್ಯನೇ ಕಳೆದು ಹೋಗುತ್ತಿರುವಾಗ, ಸುರಕೋಡರಂತಹ ಲೇಖಕರಿಗೆ ಇಂತಹ ಸನ್ಮಾನ ಮಾಡುವುದರಿಂದ ಅವರ ಆಯುಷ್ಯ ಇನ್ನಷ್ಟು ಹೆಚ್ಚುತ್ತದೆ. ಇದಕ್ಕೆಲ್ಲಾ ಕಾರಣಕರ್ತರಾದ, ಆದರೆ ವೇದಿಕೆಯ ಕೆಳಗಿದ್ದುಕೊಂಡೇ ಎಲ್ಲವನ್ನೂ ನಿಯಂತ್ರಿಸಿದ ಬಸವರಾಜ ಸೂಳಿಬಾವಿ ಅವರನ್ನು ಮರೆಯಲು ಸಾಧ್ಯವಿಲ್ಲ.