ಉಳ್ಳಾಲ: ಒಂದೇ ದಿನ ತಂದೆ-ಮಗಳು ಮೃತ್ಯು
ಮಂಗಳೂರು, ಅ.8: ಉಳ್ಳಾಲದ ಹಳೆಕೋಟೆಯಲ್ಲಿ ತಂದೆ ಮತ್ತು ಮಗಳು ಒಂದೇ ದಿನ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಉಳ್ಳಾಲ ಹಳೆಕೋಟೆ ನಿವಾಸಿ ಯು.ಕೆ.ಮುಹಮ್ಮದ್ (80) ಮತ್ತವರ ಮಗಳು ಜಮೀಲಾ (38) ಮೃತಪಟ್ಟವರು.
ಜಮೀಲಾ ನಾಲ್ಕು ದಿನದ ಹಿಂದೆ ಜ್ವರದಿಂದ ಬಳಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಮುಂಜಾನೆ ಸುಮಾರು 3:45ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟರು.
ಯು.ಕೆ.ಮುಹಮ್ಮದ್ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ಬೆಳಗ್ಗೆ 8:30ಕ್ಕೆ ಅವರು ಸ್ವಗೃಹದಲ್ಲೇ ಮೃತಪಟ್ಟರು. ಮಗಳು ಮೃತಪಟ್ಟ ವಿಷಯವನ್ನು ಮುಹಮ್ಮದ್ ಅವರಿಗೆ ಮನೆಯವರು ತಿಳಿಸಿರಲಿಲ್ಲ. ಮಗಳ ಮೃತದೇಹವನ್ನು ಮನೆಗೆ ತಲುಪಿಸಿದ ಕೆಲವು ಸಮಯದ ಬಳಿಕ ತಂದೆಯೂ ಮೃತಪಟ್ಟರು ಎಂದು ಮನೆಮಂದಿ ತಿಳಿಸಿದ್ದಾರೆ.
ಮುಹಮ್ಮದ್ ಅವರು ಪತ್ನಿ, 5 ಮಂದಿ ಪುತ್ರಿಯರು ಮತ್ತು 6 ಮಂದಿ ಪುತ್ರರನ್ನು ಅಗಲಿದ್ದಾರೆ. ಐವರು ಪುತ್ರಿಯರ ಪೈಕಿ ಜಮೀಲಾ ನಿಧನರಾಗಿದ್ದಾರೆ. ಜಮೀಲಾ ಇಬ್ಬರು ಪುತ್ರರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.