ಪ್ರಾಚೀನ ಮಯನ್ನರೂ ಉಪ್ಪು ಉತ್ಪಾದಿಸುತ್ತಿದ್ದರು!
ಪ್ರಪಂಚೋದ್ಯ
ಮಯನ್ ನಾಗರಿಕತೆಯಲ್ಲಿ ಉಪ್ಪು ವೌಲ್ಯಯುತ ವಸ್ತು ಆಗಿರಬೇಕು. ಮಯನ್ ನಾಗರಿಕತೆಯಲ್ಲಿ 1000 ವರ್ಷಗಳ ಹಿಂದೆ ಉಪ್ಪಿನ ಉತ್ಪಾದನೆ ಹಾಗೂ ದಾಸ್ತಾನು ಮಾಡಲಾಗುತ್ತಿತ್ತು ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಬೆಲಿಝೆಯಲ್ಲಿರುವ ಪಾಯ್ನಸ್ ಕ್ರೀಕ್ ಸಾಲ್ಟ್ ವರ್ಕ್ಸ್ ನಿವೇಶನದಲ್ಲಿ ಉಪ್ಪು ತಯಾರು ಮಾಡುವ ಕಬ್ಬಿಣದ ಸಾಧನಗಳು ಕಂಡು ಬಂದಿವೆ. ಇದು ಮಯನ್ ನಾಗರಿಕತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಉಪ್ಪು ತಯಾರಿಸಲಾಗುತ್ತಿತ್ತು, ಮಾತ್ರವಲ್ಲದೆ ಮೀನು ಹಾಗೂ ಮಾಂಸವನ್ನು ಸಂರಕ್ಷಿಸಲು ಉಪ್ಪನ್ನು ಬಳಸಲಾಗುತ್ತಿತ್ತು, ಉಪ್ಪನ್ನು ದಾಸ್ತಾನು ಕೂಡಾ ಮಾಡಲಾಗುತ್ತಿತ್ತು ಹಾಗೂ ಉಪ್ಪಿನ ವ್ಯಾಪಾರ ಮಾಡಲಾಗುತ್ತಿತ್ತು ಎಂಬುದನ್ನು ಸಾಬೀತುಪಡಿಸಿದೆ. ಪ್ರಾಚೀನ ನಾಗರಿಕತೆ ಬೇಟೆಯಿಂದ ಕೃಷಿ ಸಮಾಜದತ್ತ ಹೊರಳಿಕೊಂಡಿತು. ಆದರೆ, ಜೈವಿಕ ಅಗತ್ಯ ಎಂದು ಜನರು ಉಪ್ಪನ್ನು ಹೇಗೆ ಕಂಡುಕೊಂಡರು ಎಂಬುದು ಸ್ಪಷ್ಟವಾಗಿಲ್ಲ. ಅಮೆರಿಕದ ಲೂಸಿಯಾನ ಸ್ಟೇಟ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು 4000 ಮರದ ಕಂಬಗಳ ಚೌಕಟ್ಟು ಹೊಂದಿರುವ ಸರಣಿ ಕಟ್ಟಡಗಳನ್ನು ಪತ್ತೆ ಹಚ್ಚಿದ್ದಾರೆ. ಈ ಕಟ್ಟಡದಲ್ಲಿ ಉಪ್ಪು ತಯಾರು ಮಾಡುವ ಒಲೆಗಳು ಕಂಡು ಬಂದಿವೆ. ಈ ಒಲೆಗಳಲ್ಲಿ ಮಡಕೆ ಇರಿಸಿ ಉಪ್ಪು ನೀರನ್ನು ಇಂಗಿಸಿ ಉಪ್ಪು ತಯಾರಿಸಲಾಗುತ್ತಿತ್ತು. ಪ್ರಾಚೀನ ಕಾಲದಲ್ಲೂ ಆಧುನಿಕ ಯುಗದಲ್ಲೂ ಉಪ್ಪು ತಯಾರಿಸಲು ಮಡಕೆಗಳನ್ನು ಉಪಯೋಗಿಸಲಾಗುತ್ತಿತ್ತು. ಮಡಕೆಯಲ್ಲಿ ಉಪ್ಪು ನೀರು ಗಟ್ಟಿಯಾಗಿಸಿ ಉಪ್ಪು ತಯಾರಿಸಲಾಗುತ್ತಿತ್ತು. ಇದನ್ನು ಮೀನು ಹಾಗೂ ಮಾಂಸ ಕೆಡದಂತೆ ರಕ್ಷಿಸಲು ಬಳಸಲಾಗುತ್ತಿತ್ತು. ಮಯನ್ ನಾಗರಿಕತೆ (ಕ್ರಿ.ಪೂ. 300-900) ಜನರು ಕರಾವಳಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು ಹಾಗೂ ನದಿ ದಂಡೆಯಲ್ಲಿರುವ ನಗರಗಳಲ್ಲಿ ವ್ಯಾಪಾರ ನಡೆಸುತ್ತಿದ್ದರು ಹಾಗೂ ಬಾರ್ಟರ್ ಪದ್ಧತಿ ಮೂಲಕ ವಸ್ತುಗಳನ್ನು ಬದಲಾಯಿಸಿಕೊಳ್ಳುತ್ತಿದ್ದರು. ಮಯನ್ ನಾಗರಿಕತೆಯ ಜೈವಿಕ ಅಗತ್ಯಗಳನ್ನು ಪೂರೈಸಲು ಉಪ್ಪನ್ನು ಪ್ರಾದೇಶಿಕವಾಗಿ ಉತ್ಪಾದಿಸಲಾಗುತ್ತಿತ್ತು ಹಾಗೂ ವಿತರಣೆ ಮಾಡಲಾಗುತ್ತಿತ್ತು ಎಂಬುದನ್ನು ಈ ಸಂಶೋಧನೆ ಪತ್ತೆ ಹಚ್ಚಿದೆ.