ಶಿವಮೊಗ್ಗ ಲೋಕಸಭೆ ಉಪಚುನಾವಣೆ: ಅಭ್ಯರ್ಥಿ ಆಯ್ಕೆಗೆ ಜೆಡಿಎಸ್ ಪಟ್ಟು, ಕಾಂಗ್ರೆಸ್ ಬಿಗಿಪಟ್ಟು
ದೋಸ್ತಿಗಳ ನಡುವೆ ಏರ್ಪಡಲಿದೆಯಾ ಜಂಗೀಕುಸ್ತಿ ?
ಶಿವಮೊಗ್ಗ, ಅ. 11: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆಂಬ ಆ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿಕೆ, ಕಾಂಗ್ರೆಸ್ ಪಾಳಯ ತಬ್ಬಿಬ್ಬುಗೊಳ್ಳುವಂತೆ ಮಾಡಿದೆ. ಅಭ್ಯರ್ಥಿ ಕಣಕ್ಕಿಳಿಸುವ ಕುರಿತಂತೆ ದೋಸ್ತಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ನಡುವೆ 'ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯ ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಸ್ಥಳೀಯವಾಗಿ ಕಾಂಗ್ರೆಸ್ ಬಲಿಷ್ಟವಾಗಿದ್ದು, ನಮ್ಮ ಪಕ್ಷದ ಅಭ್ಯರ್ಥಿಯೇ ಸ್ಪರ್ಧಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ಇದರಿಂದ 'ಕಾಂಗ್ರೆಸ್-ಜೆಡಿಎಸ್' ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆಂಬ ಕುತೂಹಲ ಕೆರಳಿಸಿದೆ.
ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್‍ಗೆ ಹೋಲಿಸಿದರೆ, ಕಾಂಗ್ರೆಸ್ ಪಕ್ಷದ ಸಂಘಟನೆ ಬಲಿಷ್ಠವಾಗಿದೆ. ತನ್ನದೆ ಆದ ಓಟ್‍ಬ್ಯಾಂಕ್ ಹೊಂದಿದೆ. ಭವಿಷ್ಯದಲ್ಲಿನ ಪಕ್ಷದ ಅಸ್ತಿತ್ವ-ಸಂಘಟನೆ ಗಮನದಲ್ಲಿಟ್ಟುಕೊಂಡು ಶತಾಯಗತಾಯ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ವರಿಷ್ಠರು ಕಸರತ್ತು ನಡೆಸುತ್ತಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿ ಮಾತುಕತೆ ವೇಳೆಯೂ, ಶಿವಮೊಗ್ಗ ಕ್ಷೇತ್ರ ತನಗೆ ಬಿಟ್ಟು ಕೊಡುವಂತೆ ಕಾಂಗ್ರೆಸ್ ಸ್ಪಷ್ಟವಾಗಿ ಹೇಳಿಕೊಂಡು ಬರುತ್ತಿದೆ.
ಶಿವಮೊಗ್ಗದಲ್ಲಿ ಪಕ್ಷದ ಸಂಘಟನೆಯ ಕೊರತೆ ಹಾಗೂ ಬೇರೆ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯಗಳಿಸುವ ಉದ್ದೇಶದಿಂದ, ಜೆಡಿಎಸ್ ಕೂಡ ಕೈ ಹಿಡಿಯುವ ಮುನ್ಸೂಚನೆಯನ್ನು ಕಾಂಗ್ರೆಸ್‍ಗೆ ನೀಡಿತ್ತು. ಇದರ ಆಧಾರದ ಮೇಲೆಯೇ ಕಾಂಗ್ರೆಸ್ ವರಿಷ್ಠರು ಬಿಜೆಪಿ ಎದುರು ಸರ್ವಸಮ್ಮತ ಅಭ್ಯರ್ಥಿ ಕಣಕ್ಕಿಳಿಸುವ ಸಿದ್ದತೆ ಮಾಡಿಕೊಂಡಿತ್ತು. ಇದಕ್ಕಾಗಿ ಪ್ರಬಲ ಅಭ್ಯರ್ಥಿಯ ಶೋಧ ಕೂಡ ನಡೆಸುತ್ತಿದ್ದಾರೆ.
ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ, ಹೆಚ್.ಡಿ.ದೇವೇಗೌಡರು ದಿಢೀರ್ ಆಗಿ ಶಿವಮೊಗ್ಗ ಕ್ಷೇತ್ರ ಜೆಡಿಎಸ್‍ಗೆ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿರುವುದು ಕಾಂಗ್ರೆಸ್‍ಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ನಡುವೆ ಕುಟುಂಬ ಸದಸ್ಯರೊಂದಿಗೆ ಜರ್ಮನಿ ಪ್ರವಾಸದಲ್ಲಿರುವ ಮಧು ಬಂಗಾರಪ್ಪಗೆ, ಅರ್ಧಕ್ಕೆ ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ಹಿಂದಿರುಗುವಂತೆ ಜೆಡಿಎಸ್ ಪಕ್ಷ ಸೂಚಿಸಿದೆ.
ಕುತೂಹಲ: ಶಿವಮೊಗ್ಗ ಕ್ಷೇತ್ರದಲ್ಲಿ ಟಿಕೆಟ್‍ಗೆ ಡಿಮ್ಯಾಂಡ್ ಮಾಡುತ್ತಿರುವುದರ ಹಿಂದೆ ದೇವೇಗೌಡರ ರಾಜಕೀಯ ತಂತ್ರಗಾರಿಕೆ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವುದು ಖಚಿತವಾಗಿದೆ.
ಮತ್ತೊಂದೆಡೆ ಈ ಕ್ಷೇತ್ರದಲ್ಲಿ ಜೆಡಿಎಸ್‍ಗೆ ಬೆಂಬಲಿಸುವ ಕುರಿತಂತೆ ಕಾಂಗ್ರೆಸ್‍ನಲ್ಲಿ ಭಿನ್ನ ಧ್ವನಿಗಳು ಕೇಳಿಬರುತ್ತಿವೆ. ಕಾಂಗ್ರೆಸ್‍ನಲ್ಲಿ ಬಂಡಾಯದ ಕಹಳೆ ಮೊಳಗಲಾರಂಭಿಸಿದೆ. ಮತ್ತೊಂದೆಡೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆಯೂ ಕಾಂಗ್ರೆಸ್ ನಡೆ ನಿಗೂಢವಾಗಿದೆ. ಇದು ಹೆಚ್.ಡಿ.ದೇವೇಗೌಡರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರಣದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‍ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರೇಸ್‍ನಲ್ಲಿಯೇ ಇರಲಿಲ್ಲ: ಕಳೆದ ಲೋಕಸಭೆ ಚುನಾವಣೆಯಲ್ಲಿ ಎಸ್.ಬಂಗಾರಪ್ಪರ ಪುತ್ರಿ ಗೀತಾ ಶಿವರಾಜ್‍ಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದ್ದರು. ಪ್ರಸ್ತುತ ಗೀತಾ ಶಿವರಾಜ್‍ಕುಮಾರ್ ರವರು ಚುನಾವಣಾ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಯಾವೊಂದು ಕ್ಷೇತ್ರದಲ್ಲಿಯೂ ಜೆಡಿಎಸ್ ಅಭ್ಯರ್ಥಿ ಜಯ ಸಾಧಿಸಿರಲಿಲ್ಲ. ಈ ಕಾರಣದಿಂದ ಜೆಡಿಎಸ್ ವರಿಷ್ಠರು ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದರು. ಲೋಕಸಭೆ ಉಪ ಚುನಾವಣೆ ಬಗ್ಗೆ ಮಧು ಬಂಗಾರಪ್ಪಗೂ ಆಸಕ್ತಿಯಿರಲಿಲ್ಲ. ಆದರೆ ದಿಢೀರ್ ಆಗಿ ಹೆಚ್.ಡಿ.ದೇವೇಗೌಡರು ಶಿವಮೊಗ್ಗದಿಂದ ಮಧು ಬಂಗಾರಪ್ಪ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳುತ್ತಿರುವುದು ಹಾಗೂ ವಿದೇಶಿ ಪ್ರವಾಸದಲ್ಲಿರುವ ಮಧುರವರನ್ನು ವಾಪಾಸ್ ಕರೆಯಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಗೊಂದಲ-ಗೋಜಲು ಸೃಷ್ಟಿಸಿದೆ.
ಸಿದ್ದು ಸೂಚನೆ: ಜೆಡಿಎಸ್ ಜೊತೆ ಮೈತ್ರಿ ಏರ್ಪಟ್ಟರೆ, ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆಂಬ ನಿಲುವು ಮಾಜಿ ಸಿಎಂ ಸಿದ್ದರಾಮಯ್ಯರವರದ್ದಾಗಿದೆ. ಅಭ್ಯರ್ಥಿ ಆಯ್ಕೆಯ ವಿಷಯದ ಚರ್ಚೆಯ ವೇಳೆಯೂ ಸಿದ್ದರಾಮಯ್ಯ ಈ ಕುರಿತಂತೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜೆಡಿಎಸ್‍ಗೆ ಸ್ಪಷ್ಟ ಸಂದೇಶ ರವಾನಿಸುವಂತೆ ಪಕ್ಷದ ಇತರೆ ಮುಖಂಡರಿಗೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡುತ್ತವೆ.
ಮತ್ತೆ ಮುಖಾಮುಖಿಯಾಗಲಿದೆಯಾ ಬಂಗಾರಪ್ಪ-ಬಿ.ಎಸ್.ವೈ ಕುಟುಂಬ?!
'ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಪ್ರಸ್ತುತ ನಡೆಯುತ್ತಿರುವ ಉಪ ಚುನಾವಣೆಯಲ್ಲಿ, ಮತ್ತೆ ಮುಖಾಮುಖಿಯಾಗಲಿದೆಯಾ ಎಸ್.ಬಂಗಾರಪ್ಪ-ಬಿ.ಎಸ್.ಯಡಿಯೂರಪ್ಪ ಕುಟುಂಬ ? ಮಾಜಿ ಸಿಎಂಗಳ ಪುತ್ರರು ಎದುರಾಳಿಗಳಾಗಲಿದ್ದಾರಾ..?!' ಇದು, ಕಳೆದೆರೆಡು ದಿನಗಳಿಂದ ಸ್ಥಳೀಯ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೀಡಾಗುತ್ತಿರುವ ಸೆನ್ಸೆಷನಲ್ ವಿಷಯವಾಗಿದೆ. ಈಗಾಗಲೇ ಬಿಜೆಪಿಯಿಂದ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅಖಾಡಕ್ಕಿಳಿಯುವುದು ಖಚಿತವಾಗಿದೆ. ಈ ನಡುವೆ ಜೆಡಿಎಸ್‍ನಿಂದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಅಭ್ಯರ್ಥಿಯಾಗುವ ಲಕ್ಷಣಗಳು ಗೋಚರವಾಗುತ್ತಿವೆ.
ಸ್ವತಃ ಆ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರವರು ಮಧು ಬಂಗಾರಪ್ಪ ಅಭ್ಯರ್ಥಿಯಾಗುತ್ತಿರುವ ವಿಷಯ ಹೇಳಿದ್ದಾರೆ. ಮಧು ಕಣಕ್ಕಿಳಿಯಲು ಒಪ್ಪಿದರೆ ಅವರಿಗೆ ಟಿಕೆಟ್ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿಯಾಗುವುದು ಖಚಿತವಾದರೆ, ಮತ್ತೊಮ್ಮೆ ಶಿವಮೊಗ್ಗ ಕ್ಷೇತ್ರ ಎಸ್.ಬಂಗಾರಪ್ಪ - ಬಿ.ಎಸ್.ಯಡಿಯೂರಪ್ಪ ಕುಟುಂಬದ ಹಣಾಹಣಿಗೆ ವೇದಿಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.
ಇತಿಹಾಸ: 2009 ರಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ಎಸ್.ಬಂಗಾರಪ್ಪ ಎದುರು ಬಿ.ವೈ.ರಾಘವೇಂದ್ರ ಅಖಾಡಕ್ಕಿಳಿದು ಜಯ ಸಾಧಿಸಿದ್ದರು. 2014 ರ ಲೋಕಸಭೆ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಎದುರು ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‍ಕುಮಾರ್ ಕಣಕ್ಕಿಳಿದು ಪರಾಭವಗೊಂಡಿದ್ದರು.
ವಿಧಾನಸಭೆ ಚುನಾವಣೆ ಇತಿಹಾಸದಲ್ಲಿ 2008 ರಲ್ಲಿ ನಡೆದ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಎಸ್.ಬಂಗಾರಪ್ಪ ಎದುರಾಳಿಗಳಾಗಿದ್ದರು. ಈ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಜಯ ಸಾಧಿಸಿದ್ದರು. ಇವರಿಬ್ಬರ ಸ್ಪರ್ಧೆಯು ರಾಜ್ಯ ಮಾತ್ರವಲ್ಲದೆ ಇಡೀ ರಾಷ್ಟ್ರ ಮಟ್ಟದ ಗಮನ ಸೆಳೆದಿತ್ತು.
ಮುಂದುವರಿದ 'ಕೈ' ಶೋಧ!
ಒಂದೆಡೆ ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಆ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಜೊತೆಗೆ ಸಮರ್ಥ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ವರಿಷ್ಠರು ಕಸರತ್ತು ಮುಂದುವರಿಸಿದ್ದಾರೆ. ಬಿಜೆಪಿ ಎದುರು ಪ್ರಬಲ, ಸರ್ವಸಮ್ಮತ ಅಭ್ಯರ್ಥಿ ಕಣಕ್ಕಿಳಿಸುವ ಇರಾದೆ ಕಾಂಗ್ರೆಸ್ ವರಿಷ್ಠರದ್ದಾಗಿದೆ. ಆದರೆ ತಾವು ಅಂದುಕೊಂಡ ರೀತಿಯ ಅಭ್ಯರ್ಥಿಗಳು ಲಭ್ಯವಾಗದಿರುವುದು ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪರು ಚುನಾವಣಾ ಕಣಕ್ಕಿಳಿಯದಿರುವ ದೃಢ ನಿರ್ಧಾರ ಕೈಗೊಂಡಿರುವುದು, ಆ ಪಕ್ಷದ ಮುಖಂಡರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.