ಸಂಪೂರ್ಣ ನಿರ್ಮೂಲ ಆಗಲೇಬೇಕಿದೆ ಕ್ಷಯರೋಗ
ಕ್ಷಯರೋಗವನ್ನು 2030ರ ವೇಳೆಗೆ ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದರೆ ಈಗಲೇ ಕಾರ್ಯಪ್ರವೃತ್ತರಾಗಬೇಕು.
ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಅದರ ಪರಿಣಾಮಗಳನ್ನು ನಿರಂತರವಾಗಿ ಬೆಂಬತ್ತದಿದ್ದರೆ ಕ್ಷಯರೋಗವು ಮರುಕಳಿಸುವ ಮತ್ತು ಬಹುಬಗೆಯ ಔಷಧ ನಿರೋಧಕ ಹಾಗೂ ತೀವ್ರ ಔಷಧ ನಿರೋಧಕ ಕ್ಷಯರೋಗಗಳಾಗಿ ಮಾರ್ಪಾಡಾಗುವ ಸಾಧ್ಯತೆಗಳಿರುತ್ತವೆ. ಒಟ್ಟಾರೆಯಾಗಿ ನೋಡಿದಲ್ಲಿ ಶೇ.69ರಷ್ಟು ಪ್ರಕರಣಗಳಲ್ಲಿ ರೋಗಗಳು ಗುಣವಾಗಿದ್ದರೂ, ಬಹುಔಷಧ ನಿರೋಧಕ ಕ್ಷಯ ಪ್ರಕರಣಗಳಲ್ಲಿ ಈ ಪ್ರಮಾಣ ಶೇ.46ನ್ನು ದಾಟಿಲ್ಲ. ಹಾಗೆಯೇ ಕ್ಷಯ ಮತ್ತು ಏಡ್ಸ್/ಎಚ್‌ಐವಿ ಪೀಡಿತರ ಮನೆಗಳಲ್ಲಿರುವ ರೋಗಗಳಿಗೆ ಪಕ್ಕಾಗಬಲ್ಲಂಥ ಐದು ವರ್ಷದೊಳಗಿನ ಮಕ್ಕಳಂಥವರಿಗೆ ಕ್ಷಯ ರೋಗ ತಟ್ಟದಂತೆ ತಡೆಗಟ್ಟುವ ವ್ಯವಸ್ಥೆಯ ವಿಸ್ತರಣೆಯೂ ಸಹ ತುಂಬಾ ನಿಧಾನಗತಿಯಲ್ಲಿದೆ.
ವಿಶ್ವಾದ್ಯಂತ ಕ್ಷಯರೋಗದ ಪ್ರಮಾಣ ಇಳಿಕೆಯಾಗುತ್ತಿದೆ. ಆದರೂ 2017ರ ವೇಳೆಗೆ 1 ಕೋಟಿಯಷ್ಟು ಹೊಸ ಕ್ಷಯರೋಗಿಗಳು ಪತ್ತೆಯಾಗಿದ್ದರಲ್ಲದೆ 16 ಲಕ್ಷ ಜನ ಈ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ. ಇದು ಸಾಗಬೇಕಿರುವ ದಾರಿ ಇನ್ನೂ ದೂರವಿದೆ ಎಂಬುದನ್ನು ಸೂಚಿಸುತ್ತದೆ. ಶತಮಾನಗಳಷ್ಟು ಹಳೆಯದಾದ ಈ ರೋಗವು ಈಗಲೂ ಜಗತ್ತಿನ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ರೋಗವಾಗಿದೆ. ಅಲ್ಲದೆ ಈ ಕಾಯಿಲೆಯನ್ನು ಅನುಭವಿಸುತ್ತಿರುವ ರೋಗಿಗಳು ಮತ್ತು ಅವರ ಕುಟುಂಬದವರು ರೋಗದ ಕಳಂಕ ಹೊತ್ತುಕೊಂಡು ಅಪಾರವಾದ ಸಾಮಾಜಿಕ ಮತ್ತು ಆರ್ಥಿಕ ಬೆಲೆಯನ್ನು ತೆರುತ್ತಿದ್ದಾರೆ. ಈ ಭೀಕರ ರೋಗವನ್ನು ಕೊನೆಗಾಣಿಸುವ ಬಗ್ಗೆ ವಿಶ್ವಸಂಸ್ಥೆಯು ಪ್ರಪ್ರಥಮ ಬಾರಿಗೆ 2018ರ ಸೆಪ್ಟಂಬರ್ 26ರಂದು ಸಭೆ ಸೇರಿತ್ತು. ಮತ್ತು 2030ರ ವೇಳೆಗೆ ಈ ರೋಗವನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ತ್ವರಿತಗೊಳಿಸುವ ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸುವ ತೀರ್ಮಾನವನ್ನು ಮಾಡಿತು. ವಿಶ್ವದ ಕ್ಷಯರೋಗಿಗಳಲ್ಲಿ ಶೇ.27ರಷ್ಟು ಕ್ಷಯರೋಗಿಗಳು ಭಾರತದಲ್ಲಿದ್ದಾರೆ. ಹೀಗಾಗಿ ಭಾರತದಲ್ಲಿ ಕ್ಷಯರೋಗವನ್ನು ಕೊನೆಗಾಣಿಸುವ ಸಲುವಾಗಿ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಶೃಂಗಸಭೆಯಲ್ಲಿ 2025ರ ವೇಳೆಗೆ ಭಾರತವನ್ನು ಕ್ಷಯ ಮುಕ್ತಗೊಳಿಸುವುದಾಗಿ ಘೋಷಿಸಲಾಗಿದೆ.
ಕ್ಷಯ ರೋಗಕ್ಕೆ ತುತ್ತಾದವರೆಲ್ಲಾ ನೋಂದಾವಣೆ ಆಗದಿರುವುದರಿಂದ ಕ್ಷಯರೋಗಿಗಳ ಸಂಖ್ಯೆಯ ಬಗ್ಗೆ ಸರಿಯಾದ ಅಂದಾಜು ಮಾಡುವುದು, ನಿಯಂತ್ರಿಸುವುದು ಮತ್ತು ಶುಶ್ರೂಷೆ ಮಾಡುವುದು ಕಷ್ಟವಾಗುತ್ತಿದೆ. ವಿಶ್ವದಲ್ಲಿ ಅಂದಾಜು 1 ಕೋಟಿ ಕ್ಷಯರೋಗಿಗಳಿದ್ದಾರೆಂದು ಅಂದಾಜು ಮಾಡಲಾಗಿದ್ದರೂ ಅದರಲ್ಲಿ ದಾಖಲಾಗಿರುವುದು ಕೇವಲ 64 ಲಕ್ಷ ಪ್ರಕರಣಗಳು ಮಾತ್ರ. ದಾಖಲಾಗದ ಇನ್ನೂ 36 ಲಕ್ಷ ಪ್ರಕರಣಗಳಲ್ಲಿ ಶೇ.26ರಷ್ಟು ಪ್ರಕರಣಗಳು ಭಾರತದಲ್ಲಿವೆ. 2013ರ ನಂತರ ಭಾರತದಲ್ಲೂ ಕ್ಷಯ ರೋಗ ದಾಖಲಾತಿಯಲ್ಲಿ ಜಿಗಿತವನ್ನು ಸಾಧಿಸಲಾಗಿದೆ. ಆದರೆ ಅದರಲ್ಲಿ ಬಹುಪಾಲು ಆರೋಗ್ಯ ಕ್ಷೇತ್ರದ ಖಾಸಗಿ ವಲಯದಿಂದ ದಾಖಲಾದ ಪ್ರಕರಣಗಳಾಗಿವೆ. ಹೀಗೆ ಪತ್ತೆ ಹಚ್ಚಲಾದ ಪ್ರಕರಣಗಳ ದಾಖಲಾತಿ ಆಗದಿರುವುದು ಮತ್ತು ಪತ್ತೆ ಹಚ್ಚುವಲ್ಲಿನ ವೈಫಲ್ಯಗಳೂ ಸೇರಿಕೊಂಡು ಶುಶ್ರೂಷೆ ಮಾಡಬಹುದಾದ ಮತ್ತು ಗುಣಪಡಿಸಬಹುದಾದ ಕ್ಷಯ ರೋಗವನ್ನು ಅತ್ಯಂತ ವ್ಯಾಪಕವಾದ ಮತ್ತು ಅಪಾಯಕಾರಿ ರೋಗವನ್ನಾಗಿ ಮಾಡಿಬಿಟ್ಟಿದೆ.
ಕ್ಷಯ ರೋಗವನ್ನು ಒಂದು ದಾಖಲಿಸಲೇ ಬೇಕಾದ ರೋಗವೆಂದು 2012ರಲ್ಲಿ ಘೋಷಿಸಲಾಯಿತು. ಆ ನಂತರ ಕ್ಷಯ ರೋಗದ ದಾಖಲಾತಿಯನ್ನು ಹೆಚ್ಚಿಸುವ ಸಲುವಾಗಿ ವೈದ್ಯರು ಮತ್ತು ಆಸ್ಪತ್ರೆಗಳು, ಅದರಲ್ಲೂ ವಿಶೇಷವಾಗಿ ಖಾಸಗಿ ವಲಯದ ಸಂಸ್ಥೆಗಳು, ತಮ್ಮಲ್ಲಿಗೆ ಬರುವ ಕ್ಷಯ ರೋಗಿಗಳ ವರದಿಯನ್ನು ಆನ್‌ಲೈನ್‌ನಲ್ಲಿ ದಾಖಲೆ ಮಾಡುವ ಸಲುವಾಗಿ ‘ನಿಕ್ಷಯ್’ ಎಂಬ ವ್ಯವಸ್ಥೆಯನ್ನು ರೂಪಿಸಲಾಯಿತು. ಆದರೆ ‘ನಿಕ್ಷಯ್’ ಅನ್ನು ಪರಿಚಯಿಸಿದ ನಂತರದ ಮೊದಲ ವರ್ಷಗಳಲ್ಲಿ ಅದು ಹಲವಾರು ತೊಡಕುಗಳನ್ನು ಅನುಭವಿಸಿದೆ. ಈ ವ್ಯವಸ್ಥೆಯ ಬಗ್ಗೆ ಮಾಹಿತಿಯ ಕೊರತೆ, ಅದರ ಬಳಕೆಯ ಬಗೆಗಿನ ತಪ್ಪುತಿಳುವಳಿಕೆಯಿಂದಾಗಿ ವರದಿ ಮಾಡದಿರುವುದು, ವರದಿಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳದಿರುವುದು ಮತ್ತು ಇಂತಹ ಪ್ರಕರಣಗಳನ್ನು ವರದಿ ಮಾಡಲು ಬೇಕಾದ ಉತ್ತೇಜನಗಳು ಇಲ್ಲದಿರುವುದು ಅಂತಹ ತೊಡಕುಗಳಲ್ಲಿ ಕೆಲವು. ಈ ಹಿಂದೆ ಖಾಸಗಿ ಕ್ಷೇತ್ರದಲ್ಲಿರುವ ವೈದ್ಯರು ಮತ್ತು ಸಂಸ್ಥೆಗಳು ಕ್ಷಯ ರೋಗದ ಪ್ರಕರಣಗಳ ಬಗ್ಗೆ ವರದಿಯನ್ನೇ ನೀಡುತ್ತಿರಲಿಲ್ಲ. ಆದರೆ ಈಗ ಅದರಲ್ಲಿ ಸುಧಾರಣೆಯಾಗಿದೆ. ಆದರೂ ಇದೇ ಬಗೆಯ ಆನ್‌ಲೈನ್ ವ್ಯವಸ್ಥೆಯನ್ನು ಪರಿಚಯಿಸಿದ್ದ ಚೀನಾ ತನ್ನ ದೇಶದಲ್ಲಿ ಕ್ಷಯ ರೋಗ ಪತ್ತೆ, ದಾಖಲಾತಿ ಮತ್ತು ನಿಯಂತ್ರಣಗಳಲ್ಲಿ ಮಾಡಿರುವ ಸಾಧನೆಗೆ ಹೋಲಿಸಿದಲ್ಲಿ ಭಾರತದಲ್ಲಿ ‘ನಿಕ್ಷಯ್’ನ ಅಳವಡಿಕೆ ಮತ್ತು ಬಳಕೆಗಳು ತುಂಬಾ ನಿಧಾನವಾಗಿವೆ. ಈ ಬಗ್ಗೆ 2018ರ ಮಾರ್ಚ್‌ನಲ್ಲಿ ಒಂದು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿರುವ ಕೇಂದ್ರ ಸರಕಾರ ಕ್ಷಯ ರೋಗವನ್ನು ದಾಖಲಿಸದಿರುವುದನ್ನು ಒಂದು ದಂಡನಾರ್ಹ ಅಪರಾಧವನ್ನಾಗಿ ಮಾಡಿದೆಯಲ್ಲದೆ, ಔಷಧ ವ್ಯಾಪಾರಿಗಳು ಕ್ಷಯರೋಗದ ದಾಖಲಾತಿಯನ್ನು ಕಡ್ಡಾಯವಾಗಿಟ್ಟುಕೊಳ್ಳುವುದನ್ನೂ ಮತ್ತು ರೋಗಿಗಳಿಗೆ ವಿತರಿಸಲಾದ ಔಷಧಿಗಳ ದಾಖಲಾತಿಯನ್ನು ಕಾಪಿಟ್ಟುಕೊಳ್ಳುವುದನ್ನು ಕಡ್ಡಾಯಮಾಡಿದೆ. ಇದರ ಜೊತೆಗೆ ಕ್ಷಯರೋಗಿಗಳೇ ಖುದ್ದಾಗಿ ತಮ್ಮ ಬಗ್ಗೆ ಮಾಹಿತಿ ನೀಡುವುದಕ್ಕೂ ಮತ್ತು ಅದಕ್ಕೆ ಹಣಕಾಸಿನ ಬಹುಮಾನದ ಉತ್ತೇಜನ ನೀಡುವುದಕ್ಕೂ ಅವಕಾಶ ಕಲ್ಪಿಸಿದೆ.
ಈ ವ್ಯವಸ್ಥೆಯನ್ನು ಕ್ಷಯ ರೋಗದ ಚಿಕಿತ್ಸೆಯಂತೆ ನಿರಂತರವಾಗಿ ಮತ್ತು ಕಾಲಕಾಲಕ್ಕೆ ಸರಿಯಾಗಿ ಬಳಸುವಂತೆ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಪತ್ತೆಯಾದ ರೋಗಿಗಳ ದಾಖಲಾತಿ ಹೆಚ್ಚಿದರೂ ಅದಕ್ಕೆ ಅನುಗುಣವಾಗಿ ಚಿಕಿತ್ಸೆಯ ಪರಿಣಾಮಗಳ ಬಗೆಗಿನ ದಾಖಲೆಗಳು ಸಮರ್ಪಕವಾಗಿಲ್ಲ. 2016ರಲ್ಲಿ ಪತ್ತೆಯಾದ ಎಲ್ಲಾ ಕ್ಷಯರೋಗಿಗಳಲ್ಲಿ ಶೇ.22ರಷ್ಟು ರೋಗಿಗಳ ಬಗೆಗಿನ ಚಿಕಿತ್ಸಾ ಪರಿಣಾಮಗಳೇ ವರದಿಯಾಗಿರಲಿಲ್ಲ. ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಅದರ ಪರಿಣಾಮಗಳನ್ನು ನಿರಂತರವಾಗಿ ಬೆಂಬೆತ್ತದಿದ್ದರೆ ಕ್ಷಯರೋಗವು ಮರುಕಳಿಸುವ ಮತ್ತು ಬಹುಬಗೆಯ ಔಷಧ ನಿರೋಧಕ ಹಾಗೂ ತೀವ್ರ ಔಷಧ ನಿರೋಧಕ ಕ್ಷಯರೋಗಗಳಾಗಿ ಮಾರ್ಪಾಡಾಗುವ ಸಾಧ್ಯತೆಗಳಿರುತ್ತವೆ. ಒಟ್ಟಾರೆಯಾಗಿ ನೋಡಿದಲ್ಲಿ ಶೇ.69ರಷ್ಟು ಪ್ರಕರಣಗಳಲ್ಲಿ ರೋಗಗಳು ಗುಣವಾಗಿದ್ದರೂ, ಬಹುಔಷಧ ನಿರೋಧಕ ಕ್ಷಯ ಪ್ರಕರಣಗಳಲ್ಲಿ ಈ ಪ್ರಮಾಣ ಶೇ.46ನ್ನು ದಾಟಿಲ್ಲ. ಹಾಗೆಯೇ ಕ್ಷಯ ಮತ್ತು ಏಡ್ಸ್/ಎಚ್‌ಐವಿ ಪೀಡಿತರ ಮನೆಗಳಲ್ಲಿರುವ ರೋಗಗಳಿಗೆ ಪಕ್ಕಾಗಬಲ್ಲಂಥ ಐದು ವರ್ಷದೊಳಗಿನ ಮಕ್ಕಳಂಥವರಿಗೆ ಕ್ಷಯ ರೋಗ ತಟ್ಟದಂತೆ ತಡೆಗಟ್ಟುವ ವ್ಯವಸ್ಥೆಯ ವಿಸ್ತರಣೆುೂ ಸಹ ತುಂಬಾ ನಿಧಾನಗತಿಯಲ್ಲಿದೆ.
ಜಗತ್ತಿನ ಅಂದಾಜು 170 ಕೋಟಿಯಷ್ಟು ಜನ ಅಂದರೆ ಜಗತ್ತಿನ ಜನಸಂಖ್ಯೆಯ ಶೇ.23ರಷ್ಟು ಜನ ನಿದ್ರಾಗ್ರಸ್ತವಾದ ಕ್ಷಯರೋಗ ಸೋಂಕಿಗೆ ತುತ್ತಾಗಿರುವ ಸಂದರ್ಭದಲ್ಲಿ ಸೋಂಕಿಗೆ ಸುಲಭವಾಗಿ ಪಕ್ಕಾಗಬಲ್ಲ ದುರ್ಬಲ ಜನಸಮುದಾಯಗಳಿಗೆ ಕ್ಷಯ ರೋಗ ತಗಲದಂತೆ ನೋಡಿಕೊಳ್ಳುವ ಮತ್ತು ಹೊಸ ಕ್ಷಯರೋಗಿಗಳು ಹುಟ್ಟಿಕೊಳ್ಳದಂತೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಜರೂರಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು 2018ರಲ್ಲಿ ಪ್ರಕಟಿಸಿದ ಜಾಗತಿಕ ಕ್ಷಯ ರೋಗದ ವರದಿ-2018ರಲ್ಲಿ ಕ್ಷಯ ರೋಗವನ್ನುಂಟು ಮಾಡಬಲ್ಲ ಐದು ಅಪಾಯಗಳನ್ನು ಹೆಸರಿಸಲಾಗಿದೆ. ಅವುಗಳು- ಕುಡಿತ, ಧೂಮಪಾನ, ಸಕ್ಕರೆ ಕಾಯಿಲೆ, ಎಚ್‌ಐವಿ/ಏಡ್ಸ್ ಮತ್ತು ಅಪೌಷ್ಟಿಕತೆ. ಇತರ ಎಲ್ಲಾ ಬಡರಾಷ್ಟ್ರಗಳಂತೆ ಭಾರತದಲ್ಲೂ ಬಡವರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಿರುವುದರಿಂದ ಅದು ಭಾರತದಲ್ಲಿ ಕ್ಷಯರೋಗಕ್ಕೆ ಕಾರಣವಾಗಬಲ್ಲ ಅತ್ಯಂತ ಪ್ರಮುಖ ಅಪಾಯಕಾರಿ ಅಂಶವಾಗಿದೆ. ಹೀಗಾಗಿ ಕ್ಷಯರೋಗವನ್ನು ತಡೆಗಟ್ಟಲು ಮತ್ತು ಚಿಕಿತ್ಸೆಯನ್ನು ಪರಿಣಾಮಕಾರಿಯನ್ನಾಗಿಸಲು ಒಟ್ಟಾರೆಯಾಗಿ ಪೌಷ್ಟಿಕತೆ ಮತ್ತು ಇತರ ಆರೋಗ್ಯ ಸೂಚಕಗಳಲ್ಲಿ, ಬಡತನ ಮತ್ತು ಆರೋಗ್ಯ ಸೇವೆಗಳ ಲಭ್ಯತೆಯಲ್ಲಿ ಸುಧಾರಣೆಯಾಗಬೇಕಾದ ಅಗತ್ಯವಿದೆ. ಮೇಲಾಗಿ ಭಾರತದಲ್ಲಿ ಕೊನೆಯ ಬಾರಿ ಕ್ಷಯ ರೋಗಿಗಳ ಸರ್ವೇ ನಡೆದದ್ದು 1955ರಲ್ಲಿ. ಅಂದರೆ 60 ವರ್ಷಕ್ಕಿಂತ ಹಳೆಯದಾದ ಅಂಕಿಅಂಶಗಳನ್ನಿಟ್ಟುಕೊಂಡು ಭಾರತದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಗಳು ಸಿದ್ಧವಾಗುತ್ತಿವೆ. ಈ ವಿಷಯದ ಬಗ್ಗೆ ನಿಯಮಿತವಾಗಿ ನಡೆಯುವ ರಾಷ್ಟ್ರೀಯ ಮಟ್ಟದ ಸರ್ವೇಗಳು ಆಯಾ ದೇಶಗಳಿಗೆ ಪರಿಣಾಮಕಾರಿಯಾದ ರೋಗ ನಿಯಂತ್ರಣಾ ಮತ್ತು ನಿರ್ಮೂಲನ ಯೋಜನೆಯನ್ನು ಹಮ್ಮಿಕೊಳ್ಳಲು ಸಹಾಯ ಮಾಡುತ್ತವೆ. ಅಂತಹ ಒಂದು ಸರ್ವೇಯು ಭಾರತದಲ್ಲಿ 2019/20ರಲ್ಲಿ ಮತ್ತೆ ನಡೆಯಲಿದೆ. ಹೀಗಾಗಿ ಕೇವಲ ಅಂದಾಜುಗಳನ್ನು ಮಾತ್ರ ಆಧರಿಸದೆ ಇನ್ನೂ ಹೆಚ್ಚು ವಿಶ್ವಾಸಾರ್ಹವಾದ ಮಾಹಿತಿಯೊಂದಿಗೆ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಇನು್ನ ಹಲವು ವರ್ಷಗಳು ಕಾಯಬೇಕಿದೆ.
ಕ್ಷಯರೋಗದಂತಹ ಪ್ರಾಣಾಂತಿಕ ಮತ್ತು ಸಾಂಕ್ರಾಮಿಕ ಸ್ವರೂಪವುಳ್ಳ ರೋಗವನ್ನು ನಿಯಂತ್ರಿಸಲು ಬೇಕಾದ ಹೊಸ ರೋಗಪತ್ತೆ ವಿಧಾನ ಮತ್ತು ತಂತ್ರಜ್ಞಾನಗಳ, ಹೊಸ ವ್ಯಾಕ್ಸಿನ್‌ಗಳ ಮತ್ತು ಅಲ್ಪಕಾಲಾವಧಿ ಸೀಮಿತ ಔಷಧಿಗಳನ್ನು ಅನ್ವೇಷಣೆ ಮಾಡುವಂತಹ ಕ್ರಮಗಳು ಕೂಡಾ ಎಚ್‌ಐವಿ/ಏಡ್ಸ್‌ನಂತಹ ರೋಗಗಳಿಗೆ ಹೋಲಿಸಿದಲ್ಲಿ ತುಂಬ ನಿಧಾನಗತಿಯಲ್ಲಿವೆ. ಸುಮಾರು 40 ವರ್ಷಗಳ ತರುವಾಯವಷ್ಟೆ ಬೆಡಾಕ್ವಿಲೀನ್ ಮತ್ತು ಡೆಲಾಮನೀಡ್ ಎಂಬ ಬಹುಔಷಧ ನಿರೋಧಕ ಕ್ಷಯರೋಗವನ್ನು ಗುಣಪಡಿಸುವ ಎರಡು ಔಷಧಿಗಳನ್ನು ಲಭ್ಯಗೊಳಿಸಲಾಗಿದೆ. ಹಾಗೆಯೇ ಈ ರೋಗವು ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಹರಡದಂತೆ ತಡೆಗಟ್ಟಬಲ್ಲ ಔಷಧವೊಂದು ತೀರಾ ಅಗತ್ಯವಿದೆ. ಹೊಸ ಔಷಧದ ಬಗೆಗಿನ ಸಂಶೋಧನೆ, ಅಭಿವೃದ್ಧಿ, ಪ್ರಯೋಗ ಮತ್ತು ಅಂತಿಮವಾಗಿ ಆ ಹೊಸ ವಿಧಾನ ಮತ್ತು ಔಷಧಿಗಳು ವಾಸ್ತವದಲ್ಲಿ ಬಳಕೆಗೆ ಬರಲು ಹಲವಾರು ವರ್ಷಗಳಾಗುತ್ತವೆ ಮತ್ತು ಕೆಲವೊಮ್ಮೆ ದಶಕಗಳೇ ಬೇಕಾಗುತ್ತದೆ. ಭಾರತದಂತಹ ಕ್ಷಯರೋಗ ಪೀಡಿತ ದೇಶಗಳ ನೇತೃತ್ವದಲ್ಲಿ ಜಾಗತಿಕ ಸಮುದಾಯವು ಈ ಕೂಡಲೇ ಕಾರ್ಯಪ್ರವೃತ್ತವಾಗದಿದ್ದಲ್ಲಿ 2030ರೊಳಗೆ ಕ್ಷಯರೋಗವನ್ನು ನಿರ್ಮೂಲ ಮಾಡುವ ಗುರಿಯನ್ನು ಖಂಡಿತಾ ಮುಟ್ಟಲಾಗುವುದಿಲ್ಲ.