ಶಿವಮೊಗ್ಗದಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ರಾಹುಲ್ ಗಾಂಧಿ ಸೂಚನೆ: ಮುಂದುವರೆದ ದೇವೇಗೌಡರ ಕಾರ್ಯತಂತ್ರ
ಯಾರಾಗಲಿದ್ದಾರೆ ಕಾಂಗ್ರೆಸ್‍ನ 'ಡಾರ್ಕ್ ಹಾರ್ಸ್' ಅಭ್ಯರ್ಥಿ?
ಶಿವಮೊಗ್ಗ, ಅ.13: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆಯು ಅಕ್ಷರಶಃ ಕಗ್ಗಂಟಾಗಿ ಪರಿಣಮಿಸಿದೆ. ದಿನಕ್ಕೊಂದು ತಿರುವು ಪಡೆದುಕೊಳ್ಳಲಾರಂಭಿಸಿದೆ. ಈ ನಡುವೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು, ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸುವಂತೆ ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಸ್ಪಷ್ಟ ಸೂಚನೆ ರವಾನಿಸಿದ್ದಾರೆ. ಮತ್ತೊಂದೆಡೆ ಹೆಚ್.ಡಿ.ದೇವೇಗೌಡರು ಅಭ್ಯರ್ಥಿ ಕಣಕ್ಕಿಳಿಸುವ ಕಾರ್ಯತಂತ್ರ ಮುಂದುವರಿಸಿದ್ದಾರೆ. ಇದು ಸಾಕಷ್ಟು ಕುತೂಹಲ ಕೆರಳಿಸಿದೆ.
ಪ್ರಮುಖ ನಾಯಕರು ಕಣಕ್ಕಿಳಿಯಲು ಹಿಂದೇಟು ಹಾಕುತ್ತಿರುವುದು ಹಾಗೂ ಸಮರ್ಥ ಅಭ್ಯರ್ಥಿ ದೊರಕದ ಕಾರಣದಿಂದ, ಕಾಂಗ್ರೆಸ್ ಪಕ್ಷವು ಜೆಡಿಎಸ್ ಕಣಕ್ಕಿಳಿಸುವ ಅಭ್ಯರ್ಥಿಗೆ ಬೆಂಬಲಿಸಲು ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ವರದಿಗಳನ್ನು ಕಾಂಗ್ರೆಸ್ ಉನ್ನತ ಮೂಲಗಳು ಸ್ಪಷ್ಟವಾಗಿ ನಿರಾಕರಿಸಿವೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳುತ್ತಿವೆ.
ಮತ್ತೊಂದೆಡೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಘಟಕ ಕೂಡ, ಜೆಡಿಎಸ್ ಅಭ್ಯರ್ಥಿ ಬೆಂಬಲಿಸುವ ಯಾವುದೇ ನಿರ್ಧಾರ ಕೈಗೊಳ್ಳದಂತೆ ವರಿಷ್ಠರಿಗೆ ಮನವಿ ಮಾಡಿದೆ. 'ಕ್ಷೇತ್ರದಲ್ಲಿ ಜೆಡಿಎಸ್‍ಗೆ ಹೋಲಿಸಿದರೆ ಕಾಂಗ್ರೆಸ್ ಪ್ರಬಲವಾಗಿದೆ. ತನ್ನದೆ ಆದ ಓಟ್‍ಬ್ಯಾಂಕ್ ಹೊಂದಿದೆ. ಪಕ್ಷದ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಜೆಡಿಎಸ್ ಬೆಂಬಲ ಪಡೆಯಬೇಕು. ಒಂದು ವೇಳೆ ಜೆಡಿಎಸ್‍ಗೆ ಬೆಂಬಲಿಸಿದರೆ ಪಕ್ಷದ ಅಸ್ತಿತ್ವ, ಸಂಘಟನೆಗೆ ಭಾರೀ ಪೆಟ್ಟು ಬೀಳಲಿದೆ. ಪಕ್ಷದ ಸಾಂಪ್ರದಾಯಿಕ ಮತಗಳು ಛಿದ್ರವಾಗಲಿದೆ' ಎಂದು ಡಿಸಿಸಿ ಘಟಕ ವರಿಷ್ಠರಿಗೆ ತಿಳಿಸಿದೆ ಎನ್ನಲಾಗಿದೆ.
'ಶತಾಯಗತಾಯ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿ ಕಣಕ್ಕಿಳಿಸಲಿದೆ. ಇದಕ್ಕೆ ಜೆಡಿಎಸ್ ಕೂಡ ಬೆಂಬಲ ಕೂಡ ವ್ಯಕ್ತಪಡಿಸಲಿದೆ. ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುವುದು ಇನ್ನು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ. ಬಿಜೆಪಿ ಎದುರು ಪ್ರಬಲ ಹುರಿಯಾಳುವೇ ಅಖಾಡಕ್ಕಿಳಿಸಲಾಗುವುದು' ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಹಿರಿಯ ಕಾಂಗ್ರೆಸ್ ನಾಯಕರೋರ್ವರು ಅಭಿಪ್ರಾಯಪಡುತ್ತಾರೆ.
ಕಾರ್ಯತಂತ್ರ: ಇನ್ನೊದೆಡೆ ಜೆಡಿಎಸ್ ಪಕ್ಷವು ಮಾಜಿ ಶಾಸಕ ಮಧು ಬಂಗಾರಪ್ಪರನ್ನು ಅಖಾಡಕ್ಕಿಳಿಸುವ ತೆರೆಮರೆಯ ಕಸರತ್ತು ಮುಂದುವರಿಸಿದೆ. ಒಂದು ವೇಳೆ ಮಧು ಸ್ಪರ್ಧೆಗೆ ಒಪ್ಪದಿದ್ದರೆ, ಬೇರೊಬ್ಬ ನಾಯಕರನ್ನು ಅಖಾಡಕ್ಕಿಳಿಸುವ ತಂತ್ರಗಾರಿಕೆಯೂ ನಡೆಸುತ್ತಿದೆ. ಆದರೆ ಈ ಪಕ್ಷಕ್ಕೂ ಸಮರ್ಥ ಅಭ್ಯರ್ಥಿ ದೊರಕುತ್ತಿಲ್ಲ. ಇದರಿಂದ ಕಾಂಗ್ರೆಸ್ ಬಳಿ ಚೌಕಾಸಿ ನಡೆಸಲು ಸಾಧ್ಯವಾಗದಂತಹ ಸ್ಥಿತಿ ಆ ಪಕ್ಷದ್ದಾಗಿದೆ ಎಂದು ಹೇಳಲಾಗಿದೆ.
ಈ ಕಾರಣದಿಂದ ಮಧು ಬಂಗಾರಪ್ಪರ ಮನವೊಲಿಸುವ ಪ್ರಯತ್ನಗಳನ್ನು ಆ ಪಕ್ಷ ಮುಂದುವರಿಸಿದೆ. ಸ್ವತಃ ಹೆಚ್.ಡಿ.ದೇವೇಗೌಡರೇ ಮಧು ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಿದೇಶಿ ಪ್ರವಾಸದಲ್ಲಿರುವ ಅವರು ರಾಜ್ಯಕ್ಕೆ ಹಿಂದಿರುಗುತ್ತಿದ್ದಂತೆ, ಅಂತಿಮ ದಾಳ ಉರುಳಿಸಲು ನಿರ್ಧರಿಸಿದ್ದಾರೆ. ಇದರಿಂದ ಮಧು ಬಂಗಾರಪ್ಪ ಕೈಗೊಳ್ಳುವ ನಿರ್ಧಾರದತ್ತ ಕಾಂಗ್ರೆಸ್, ಜೆಡಿಎಸ್ ನಾಯಕರ ಚಿತ್ತ ನೆಟ್ಟಿದೆ.
ಡಾರ್ಕ್ ಹಾರ್ಸ್!: ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಕಣಕ್ಕಿಳಿಯುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಎಂಟು ವಿಧಾನಸಭಾ ಕ್ಷೇತ್ರದಲ್ಲಿ 7 ಕಡೆ ಬಿಜೆಪಿ ಶಾಸಕರಿದ್ದಾರೆ. ಈ ಕಾರಣದಿಂದ ಬಿಜೆಪಿ ಮಣಿಸುವುದು ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಅಷ್ಟು ಸುಲಭವಲ್ಲ. ಈ ಕಾರಣದಿಂದಲೇ ಕಾಂಗ್ರೆಸ್ ಪಕ್ಷವು ಪ್ರಬಲ ಅಭ್ಯರ್ಥಿಯ ಹುಡುಕಾಟ ನಡೆಸುತ್ತಿದೆ. ತನ್ನ ಸಾಂಪ್ರದಾಯಿಕ ಓಟ್‍ಬ್ಯಾಂಕ್ ಜೊತೆಗೆ ಪ್ರಬಲ ವರ್ಗಗಳ ಮತಗಳಿಸಲು ಲಿಂಗಾಯತ, ಈಡಿಗ ಅಥವಾ ಒಕ್ಕಲಿಗ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕರೋರ್ವರನ್ನು ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಸುವ ಚಿಂತನೆ ಕಾಂಗ್ರೆಸ್ ವರಿಷ್ಠರದ್ದಾಗಿದೆ.
ಈಗಾಗಲೇ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿಯವರು ಕಣಕ್ಕಿಳಿಯಲು ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಪ್ರಸ್ತುತ ಟಿಕೆಟ್ ರೇಸ್‍ನಲ್ಲಿರುವವರ ಬಗ್ಗೆ ಕಾಂಗ್ರೆಸ್ ವರಿಷ್ಠರಿಗೆ ಒಲವಿಲ್ಲ. ಈ ಕಾರಣದಿಂದ ಬೇರೊಬ್ಬ ಸಮರ್ಥ ಅಭ್ಯರ್ಥಿಯ ಶೋಧವನ್ನು ಕಾಂಗ್ರೆಸ್ ನಡೆಸುತ್ತಿದೆ. ಇದರಿಂದ ಆ ಪಕ್ಷದ 'ಡಾರ್ಕ್ ಹಾರ್ಸ್' ಕ್ಯಾಂಡಿಡೇಟ್ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.
ಒಟ್ಟಾರೆ ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪಟ್ಟ ಕಾಂಗ್ರೆಸ್‍ನದ್ದಾ? ಜೆಡಿಎಸ್‍ನದ್ದಾ? ಎಂಬ ಚರ್ಚೆ ಬಿರುಸಿನಿಂದ ನಡೆಯಲಾರಂಭಿಸಿದೆ. ಎರಡು ಪಕ್ಷಗಳ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟ ಬಹುತೇಕ ಭಾನುವಾರ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಗಳು ನಿಚ್ಚಳವಾಗಿದೆ.
ಜೆಡಿಎಸ್ ವರಿಷ್ಠರ ಮೇಲೆ ಮುನಿಸು: ಕಣಕ್ಕಿಳಿಯಲು ಮಧು ಬಂಗಾರಪ್ಪ ನಿರಾಸಕ್ತಿ?
ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ - ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಆಯ್ಕೆಯು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಮಧು ಬಂಗಾರಪ್ಪ ಸುತ್ತ ಗಿರಕಿ ಹೊಡೆಯಲಾರಂಭಿಸಿದೆ. ಅವರು ಕಣಕ್ಕಿಳಿಯುತ್ತಾರಾ? ಇಲ್ಲವೇ? ಎಂಬ ಕುತೂಹಲ ಮನೆ ಮಾಡಿದೆ. ಒಂದು ವೇಳೆ ಮಧು ಬಂಗಾರಪ್ಪ ಕಣಕ್ಕಿಳಿಯಲು ಸಮ್ಮತಿ ವ್ಯಕ್ತಪಡಿಸಿದರೆ, ಜೆಡಿಎಸ್ ಪಕ್ಷವು ಶಿವಮೊಗ್ಗ ಕ್ಷೇತ್ರವನ್ನು ತನಗೆ ಬಿಟ್ಟು ಕೊಡುವಂತೆ ಕಾಂಗ್ರೆಸ್‍ಗೆ ಪಟ್ಟು ಹಿಡಿಯುವುದು ಖಚಿತ. ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿರುವ ಕಾಂಗ್ರೆಸ್‍ಗೆ ಇದು ಮತ್ತೊಂದು ತಲೆನೋವಾಗಿ ಪರಿಣಮಿಸುವುದು ಖಚಿತವಾಗಿದೆ.
ಮತ್ತೊಂದೆಡೆ ಮಧು ಬಂಗಾರಪ್ಪ ಆಪ್ತ ಮೂಲಗಳು ಹೇಳುವ ಮಾಹಿತಿಯ ಪ್ರಕಾರ, ಮಧು ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ಕೇವಲ ಐದಾರು ತಿಂಗಳ ಅಧಿಕಾರವಧಿಯಿರುವುದು ಸೇರಿದಂತೆ ಹಲವು ರಾಜಕೀಯ ಕಾರಣಗಳಿಂದ ಮಧು ಅಖಾಡಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.