ಗಂಗೆಗಾಗಿ ಪ್ರಾಣತೆತ್ತ ಅಗರ್ವಾಲ್
ಅಗರ್ವಾಲ್‌ರ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಸರಕಾರವು ನಿರ್ಲಕ್ಷಿಸಿತ್ತು. ಪ್ರಸಿದ್ಧ ಜಲ ಸಂರಕ್ಷಣಾ ಹೋರಾಟಗಾರ ಹಾಗೂ ರೇಮನ್ ಮ್ಯಾಗ್ಸೆಸೆ ಮತ್ತು ಸ್ಟಾಕ್‌ಹೋಮ್ ಜಲ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ಅವರು ಕಳೆದ ಜುಲೈನಲ್ಲಿ ಥರ್ಡ್‌ಪೋಲ್.ನೆಟ್ ಆನ್‌ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘‘ಅಗರ್ವಾಲ್ ಅವರ ಬದುಕು ಅಪಾಯದಲ್ಲಿದೆ. ಆದರೆ ಯಾರೂ ಕೂಡಾ ಆ ಬಗ್ಗೆ ಗಮನಹರಿಸಲಿಲ್ಲ. ನಮಗೆ ಈಗ ನಿಜಕ್ಕೂ ಆತಂಕವಾಗಿದೆ’’ ಎಂದು ಹೇಳಿದ್ದರು.
ಖ್ಯಾತ ಪರಿಸರವಾದಿ ಜಿ.ಡಿ. ಅಗರ್ವಾಲ್, ಗಂಗಾ ನದಿ ಸಂರಕ್ಷಣೆಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶದ ಜೀವನಾಡಿಯಾದ ಗಂಗಾನದಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಕೇಂದ್ರ ಸರಕಾರದ ನಿಷ್ಕ್ರಿಯತೆಯಿಂದ ಹತಾಶಗೊಂಡ 86 ವರ್ಷ ವಯಸ್ಸಿನ ಈ ಪರಿಸರವಾದಿ ಜೂನ್ 22ರಂದು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಗಂಗೆಯ ನೀರು ಅಬಾಧಿತವಾಗಿ ಹರಿಯುವಂತೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾದ ಯೋಜನೆಗಳನ್ನು ಜಾರಿಗೊಳಿಸುವ ತನಕ ತಾನು ಆಮರಣಾಂತ ಉಪವಾಸ ನಡೆಸುವುದಾಗಿ ಅವರು ಘೋಷಿಸಿದ್ದರು.
‘‘ಗಂಗೆಯನ್ನು ರಕ್ಷಿಸುವ ಹೋರಾಟದಲ್ಲಿ ಒಂದು ವೇಳೆ ನಾನು ಸತ್ತರೂ ನನಗೆ ಬೇಸರವಿಲ್ಲ. ನನ್ನ ಬದುಕಿನ ಅಂತ್ಯವು, ಗಂಗಾನದಿಯ ರಕ್ಷಣೆಗಾಗಿ ನಡೆಯುತ್ತಿರುವ ಪ್ರಯತ್ನಗಳ ಕೊನೆ ಎಂದು ಅರ್ಥವಲ್ಲ’’ ಎಂಬುದಾಗಿ ಅಗರ್ವಾಲ್ ಅವರು ಕಳೆದ ತಿಂಗಳು ‘ಡೌನ್ ಟು ಅರ್ಥ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.
ಅಕ್ಟೋಬರ್ 10ರಂದು ಅವರು ನೀರನ್ನು ಕೂಡಾ ಸೇವಿಸಲು ನಿರಾಕರಿಸಿದರು ಹಾಗೂ ತನ್ನ ನರಗಳಿಗೆ ಜೋಡಿಸಲಾಗಿದ್ದ ಇಂಟ್ರಾವಿನಸ್ ಡ್ರಿಪ್ಸ್ ನಳಿಕೆಗಳನ್ನು ತೆಗೆದುಹಾಕುವಂತೆ ವೈದ್ಯರಿಗೆ ಸೂಚಿಸಿದರು. ಅಗರ್ವಾಲ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಜನಾಕ್ರೋಶವುಂಟಾದೀತೆಂಬ ಭೀತಿಯಿಂದ ಹರಿದ್ವಾರ ಜಿಲ್ಲಾಡಳಿತವು ಸಮೀಪದ ಕಂಕಾಲ್ ಎಂಬಲ್ಲಿನ ಅಶ್ರಮದಿಂದ ಅವರನ್ನು ಋಷಿಕೇಶದ ಸರಕಾರಿ ಆಸ್ಪತ್ರೆಗೆ ವರ್ಗಾಯಿಸಿತು. ತನ್ನ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ 111 ದಿನಗಳ ಆನಂತರ ಅಗರ್ವಾಲ್ ಋಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ಕೊನೆಯುಸಿರೆಳೆದರು.
ಗಂಗಾ ಸತ್ಯಾಗ್ರಹಿ
ಮಹಾತ್ಮಾಗಾಂಧೀಜಿಯವರಿಂದ ಸ್ಫೂರ್ತಿ ಪಡೆದಿರುವ ಅಗರ್ವಾಲ್, ಗಂಗಾನದಿಯ ಪುನರುಜ್ಜೀವನಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿ ಹಲವಾರು ಸಲ ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡಿದ್ದರು. 2009ರಲ್ಲಿ ಅವರು ನಡೆಸಿದ ನಿರಶನವು, ಉತ್ತರಾಖಂಡ ಸರಕಾರವು ಭಾಗೀರಥಿ ನದಿಗೆ ಅಣೆಕಟ್ಟು ಕಟ್ಟುವುದನ್ನು ಸ್ಥಗಿತಗೊಳಿಸುವಂತೆ ಮಾಡಿತು. ಭಾಗೀರಥಿಯು ಗಂಗಾನದಿಯ ಪ್ರಮುಖ ಉಪನದಿಗಳಲ್ಲೊಂದಾಗಿದೆ.
1932ರಲ್ಲಿ ಉತ್ತರಪ್ರದೇಶದ ಮುಝಫ್ಫರ್‌ನಗರ್ ಜಿಲ್ಲೆಯಲ್ಲಿ ಜನಿಸಿದ ಅಗರ್ವಾಲ್ ಅವರು ರೂರ್ಕಿಯಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಟಿಐ)ಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು ಹಾಗೂ ಉತ್ತರಪ್ರದೇಶದ ನೀರಾವರಿ ಇಲಾಖೆಯಲ್ಲಿ ವಿನ್ಯಾಸ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಭಾರತದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕಾನ್ಪುರದ ಐಐಟಿಯಲ್ಲಿ ಅವರು ಸಿವಿಲ್ ಹಾಗೂ ಪಾರಿಸಾರಿಕ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
1974ರಲ್ಲಿ ಭಾರತವು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸ್ಥಾಪಿಸಿದಾಗ ಅದರ ಪ್ರಪ್ರಥಮ ಸದಸ್ಯ-ಕಾರ್ಯದರ್ಶಿ ಯಾಗಿ ಅಗರ್ವಾಲ್ ನೇಮಕಗೊಂಡರು.2012ರಲ್ಲಿ ರಾಷ್ಟ್ರೀಯ ಗಂಗಾನದಿ ತಪ್ಪಲು ಪ್ರಾಧಿಕಾರದ ನಿಗಮದಲ್ಲಿಯೂ ಅವರು ಸೇವೆ ಸಲ್ಲಿಸಿದ್ದರು. ಆದರೆ ಈ ಪ್ರಾಧಿಕಾರವು ಕೇವಲ ಕಾಟಾಚಾರಕ್ಕಷ್ಟೇ ಇದೆ ಎಂಬುದು ಅರಿವಾದ ಬಳಿಕ ಅವರು 2012ರಲ್ಲಿ ರಾಜೀನಾಮೆ ನೀಡಿದ್ದರು.
ಶಿಕ್ಷಣತಜ್ಞ ಹಾಗೂ ಸರಕಾರದ ಹಿರಿಯ ಅಧಿಕಾರಿಯಾಗಿ ವೃತ್ತಿಜೀವನವನ್ನು ಯಶಸ್ವಿಯಾಗಿ ನಿರ್ವಹಿಸಿದ ಬಳಿಕ, ಅಗರ್ವಾಲ್ ಕೆಲವು ವರ್ಷಗಳ ಹಿಂದೆ ಸನ್ಯಾಸದೀಕ್ಷೆ ಸ್ವೀಕರಿಸಿದ್ದರು. ಆನಂತರ ಅವರು ಸ್ವಾಮಿ ಜ್ಞಾನಿ ಸ್ವರೂಪ್ ಸನಂದ್ ಎಂದೇ ಪ್ರಸಿದ್ಧರಾಗಿದ್ದರು.
ಅವಿಶ್ರಾಂತ ಹೋರಾಟಗಾರ
ಗಂಗಾನದಿಯ ಶುದ್ಧೀಕರಣಕ್ಕಾಗಿ ಅಗರ್ವಾಲ್ ಅವರು ಅವಿಶ್ರಾಂತ ಹೋರಾಟ ನಡೆಸಿದ್ದರು. ಅವರ ಹೆಚ್ಚಿನ ಚಳವಳಿಯು ವೈಜ್ಞಾನಿಕ ಸಂಶೋಧನೆ ಆಧಾರಿತ ಪುರಾವೆಯನ್ನು ಅವಲಂಬಿಸಿತ್ತು. ಇದಕ್ಕೊಂದು ನಿದರ್ಶನವೆಂದರೆ, ಸಮಗ್ರ ಗಂಗಾ ನದಿ ತಪ್ಪಲಿನ ಸಮಗ್ರ ಆರೋಗ್ಯಕ್ಕೆ ಗಂಗಾನದಿಯ ಅಬಾಧಿತವಾದ ಹರಿವು ಮುಖ್ಯವಾದುದೆಂದು ಅವರು ಪ್ರತಿಪಾದಿಸಿದ್ದರು. ಹವಾಮಾನ ಬದಲಾವಣೆ ಹಾಗೂ ಅಣೆಕಟ್ಟುಗಳ ನಿರ್ಮಾಣದಿಂದಾಗಿ ಗಂಗಾನದಿಯಲ್ಲಿ ಮಣ್ಣು ಹಾಗೂ ಮರಳಿನ ಕಣಗಳು ಹೆಚ್ಚಾಗುವುದಕ್ಕೆ ಕಾರಣವಾಗಿದ್ದು, ಇದರಿಂದಾಗಿ ಪ್ರವಾಹದ ಅಪಾಯ ಅಧಿಕವಾಗಿದೆಯೆಂದು ಅವರು ಹೇಳಿದ್ದಾರೆ.
ಅವರು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಸರಕಾರವು ನಿರ್ಲಕ್ಷಿಸಿತ್ತು. ಪ್ರಸಿದ್ಧ ಜಲ ಸಂರಕ್ಷಣಾ ಹೋರಾಟಗಾರ ಹಾಗೂ ರೇಮನ್ ಮ್ಯಾಗ್ಸೆಸೆ ಮತ್ತು ಸ್ಟಾಕ್‌ಹೋಮ್ ಜಲ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ಅವರು ಕಳೆದ ಜುಲೈನಲ್ಲಿ ಥರ್ಡ್‌ಪೋಲ್.ನೆಟ್ ಆನ್‌ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘‘ಅಗರ್ವಾಲ್ ಅವರ ಬದುಕು ಅಪಾಯದಲ್ಲಿದೆ. ಆದರೆ ಯಾರೂ ಕೂಡಾ ಆ ಬಗ್ಗೆ ಗಮನಹರಿಸಲಿಲ್ಲ. ನಮಗೆ ಈಗ ನಿಜಕ್ಕೂ ಆತಂಕವಾಗಿದೆ’’ ಎಂದು ಹೇಳಿ್ದರು.
ಈ ವರದಿಗಾರ್ತಿಯು, 20 ವರ್ಷಗಳಿಗೂ ಹಿಂದೆ ಅಗರ್ವಾಲ್ ಅವರನ್ನು ಮೊದಲ ಬಾರಿಗೆ ಸಂದರ್ಶಿಸಿದ್ದರು. ಮರಗಳ ಕಡಿತದಿಂದ ಪರ್ವತದ ಇಳಿಜಾರು ಪ್ರದೇಶಗಳ ಸವೆತ ಹಾಗೂ ಭೂಕುಸಿತ ಉಂಟಾಗುವುದರಿಂದ ಅದರ ವಿರುದ್ಧ ದೊಡ್ಡ ಪ್ರತಿಭಟನೆಯನ್ನು ಅವರು ಆಗ ನಡೆಸುತ್ತಿದ್ದರು. ನಮ್ಮ ಪುರಾತನ ನಾಗರಿಕತೆಯು ಗಂಗಾನದಿಯ ವರದಾನವಾಗಿದೆ. ಭಾರತದ ಕೋಟ್ಯಂತರ ಜನತೆಗೆ ಆಕೆ ತಾಯಿಯಾಗಿದ್ದಾಳೆ. ನಮ್ಮ ತಾಯಂದಿರಿಗೆ ಗೌರವ ತೋರದಿರುವುದು ಅಥವಾ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ನಮ್ಮ ಪರಂಪರೆ ಹಾಗೂ ಸಂಸ್ಕೃತಿಯಲ್ಲ.
ದುರದೃಷ್ಟವಶಾತ್, ಗಂಗಾನದಿಯನ್ನು ಸ್ವಚ್ಛವಾಗಿ ಹರಿಯುವಂತೆ ಮಾಡಬೇಕೆಂಬ ಅವರ ಜೀವನಪರ್ಯಂತದ ಹಂಬಲವು ಈವರೆಗೆ ತೃಪ್ತಿಕರವಾದ ಫಲಿತಾಂಶಗಳನ್ನು ನೀಡಿಲ್ಲ. ಗಂಗೆಯು ಈಗಲೂ ಮಲಿನವಾಗಿಯೇ ಉಳಿದಿದೆ. ಗಂಗೆ ಹಾಗೂ ಅದರ ಉಪನದಿಗಳ ಮೇಲೆ ಅಣೆಕಟ್ಟುಗಳು ಹಾಗೂ ಒಡ್ಡುಗಳನ್ನು ನಿರ್ಮಿಸಲಾಗಿದ್ದು, ಅದರ ಸಹಜ ಹರಿವಿಗೆ ಅಡಚಣೆಯುಂಟು ಮಾಡಿದೆ ಹಾಗೂ ನದಿಯ ನಿಧಾನ ಸಾವಿಗೆ ಕಾರಣವಾಗುತ್ತಿವೆ.
ಗಂಗಾನದಿಯ ತಟದಲ್ಲಿರುವ ವಾರಣಾಸಿ ನಗರವನ್ನು ಹಿಂದೂಗಳು ಪವಿತ್ರ ಯಾತ್ರಾಸ್ಥಳವೆಂದು ಪರಿಗಣಿಸುತ್ತಾರೆ. ಈ ಕ್ಷೇತ್ರದಿಂದಲೇ ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಆಯ್ಕೆಯಾಗಿದ್ದರು. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ಅವರು ಗಂಗಾನದಿಯ ಶುದ್ಧೀಕರಣಕ್ಕಾಗಿ ನಮಾಮಿ ಗಂಗಾ ಯೋಜನೆಯನ್ನು ಘೋಷಿಸಿದ್ದರು. ಆದರೆ ಈ ಯೋಜನೆಯು ಯಾವುದೇ ಫಲಿತಾಂಶಗಳನ್ನು ನೀಡುವಲ್ಲಿ ವಿಫಲವಾಗಿದೆಯೆಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ಕೃಪೆ: scroll.in