ನಿರ್ಗಲಿಕೆಯ ಸಾಮಾನ್ಯ ಲಕ್ಷಣಗಳು
ಬೆಳೆಯುವ ಪೈರು: ಅಧ್ಯಯನ ಮತ್ತು ಅರಿವು
ಕಲಿಕಾ ನ್ಯೂನತೆಗಳು: ಭಾಗ 2
ಡಿಸ್ಲೆಕ್ಸಿಯಾವನ್ನು ಗುರುತಿಸಿ
ಡಿಸ್ಲೆಕ್ಸಿಯಾದ ಸಾಮಾನ್ಯ ಗುಣಲಕ್ಷಣಗಳನ್ನು ತೀರಾ ಹೊರನೋಟಕ್ಕೂ ಗುರುತಿಸಬಹುದು. ಆದರೆ ಇದು ಎಲ್ಲಾ ಮಕ್ಕಳಲ್ಲಿ ಒಂದೇ ತೆರನಾದಂತಹ ಲಕ್ಷಣಗಳನ್ನು ಹೊಂದಿರುವುದಿಲ್ಲ. ಕೆಲವರಲ್ಲಿ ಕೆಲವೂ ಇಲ್ಲದಿರಬಹುದು. ಕೆಲವರಲ್ಲಿ ಎಲ್ಲರೂ ಇರಬಹುದು. ಆದರೂ ಒಂದು ಮಟ್ಟಕ್ಕೆ ಲಕ್ಷಣಗಳ ಪಟ್ಟಿಯ ಅವಶ್ಯಕತೆ ಇದೆ. ಈ ಪಟ್ಟಿಯಲ್ಲಿ ಒಂದೆರಡು ಲಕ್ಷಣಗಳು ನಿಮ್ಮ ಮಕ್ಕಳಲ್ಲಿ ಇವೆ ಎಂದ ಮಾತ್ರಕ್ಕೆ ಅವರನ್ನು ನಿರ್ಗಲಿಕೆಯ ಮಕ್ಕಳ ಸಾಲಿಗೆ ತಳ್ಳಬೇಡಿ. ಆದರೆ, ಪ್ರಧಾನವಾಗಿ ಬಹಳ ಲಕ್ಷಣಗಳು ಕಾಣಿಸುತ್ತಿವೆ ಎಂದರೆ ನಿಧಾನವಾಗಿ ಗಮನಿಸಿ ನಿರ್ಧಾರಕ್ಕೆ ಬನ್ನಿ. ಇನ್ನೂ ಕೆಲವೊಮ್ಮೆ ಡಿಸ್ಲೆಕ್ಸಿಯಾದ ಮಟ್ಟಗಳಲ್ಲಿ ಹೆಚ್ಚೂ ಕಡಿಮೆಯ ವ್ಯತ್ಯಾಸಗಳಿವೆ ಎಂದಾದರೂ ಅಂದುಕೊಂಡು ಅದಕ್ಕೆ ಪೂರಕವಾದಂತಹ ಕಲಿಕೆಯ ಪದ್ಧತಿಯನ್ನು ಅಳವಡಿಸಿಕೊಂಡರೆ ತಪ್ಪೇನಿಲ್ಲ. ನಿರ್ಗಲಿಕೆಯ ಸಾಮಾನ್ಯ ಲಕ್ಷಣಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಇಷ್ಟು ತಿಳಿದುಕೊಳ್ಳೋಣ. ಪಟ್ಟಿಯಲ್ಲಿರುವ ಎಲ್ಲಾ ಲಕ್ಷಣಗಳೂ ನಿರ್ಗಲಿಕೆಯ ಮಕ್ಕಳಿಗೆ ಇರಲೇಬೇಕೆಂದಿಲ್ಲ. ಹಾಗೆಯೇ ಪಟ್ಟಿಯಲ್ಲಿರುವ ಕೆಲವು ಲಕ್ಷಣಗಳು ಇವೆ ಎಂದ ಮಾತ್ರಕ್ಕೆ ಡಿಸ್ಲೆಕ್ಸಿಯಾ ಇದೆ ಎಂತಲೂ ಅಲ್ಲ. ಯಾವಾಗಲೋ ಒಮ್ಮೆ ಮನಸ್ಸು ಸ್ಥಿಮಿತದಲ್ಲಿ ಇಲ್ಲದಿರುವಾಗ ಈ ಪಟ್ಟಿಯಲ್ಲಿರುವ ಕೆಲವು ಅಂಶಗಳು ಕಾಣಬಹುದು. ಅಂತಹ ತಪ್ಪುಗಳನ್ನೆಲ್ಲಾ ನಿರ್ಗಲಿಕೆ ಎಂದುಕೊಳ್ಳುವ ಅಗತ್ಯವಿಲ್ಲ. ಆದರೆ ಡಿಸ್ಲೆಕ್ಸಿಯಾ ಎಂಬುದೊಂದು ಅಸ್ತಿತ್ವದಲ್ಲಿದೆ, ಅದು ಯಾವ ಮಕ್ಕಳಲ್ಲಿ ಬೇಕಾದರೂ ಕಾಣಬಹುದು. ನಮ್ಮ ಮಕ್ಕಳಲ್ಲೇ ಇರಬಹುದು. ಅದರ ಲಕ್ಷಣಗಳು ಕೆಳಕಂಡಂತಿವೆ. ಒಂದು ವೇಳೆ ನಾವು ನೋಡಿಕೊಳ್ಳುತ್ತಿರುವ ಮಕ್ಕಳಲ್ಲಿ ಇಂತಹ ಹಲವಾರು ಲಕ್ಷಣಗಳು ಇವೆ ಎಂದರೆ, ಆ ಮಕ್ಕಳನ್ನು ಹೇಗೆ ನಿಭಾಯಿಸುವುದು ಎಂಬ ಜ್ಞಾನ ಮತ್ತು ತಂತ್ರಕ್ಕಾಗಿ ಇವುಗಳನ್ನು ತಿಳಿದುಕೊಳ್ಳೋಣ.
ವೌಖಿಕ ಭಾಷೆಯಲ್ಲಿ
1.ನಿಧಾನವಾಗಿ ಮಾತಾಡುವುದನ್ನು ಕಲಿಯುವುದು.
2.ಪದಗಳನ್ನು ಉಚ್ಚರಿಸಲು ಕಷ್ಟಪಡುವುದು.
3.ಮಗುವಿನ ವಯಸ್ಸಿನ ಮಟ್ಟಕ್ಕೆ ಅನುಗುಣವಾಗಿ ಪದ ಸಂಪತ್ತು ಇಲ್ಲದಿರುವುದು. ಸರಿಯಾದ ವ್ಯಾಕರಣವನ್ನು ಅಥವಾ ವಾಕ್ಯರಚನೆಯನ್ನು ಮಾಡದಿರುವುದು.
4.ವೌಖಿಕ ನಿರ್ದೇಶನಗಳನ್ನು ನೀಡಿದಾಗ ಗೊಂದಲಕ್ಕೀಡಾಗುವುದು. ಆ ನಿರ್ದೇಶನಗಳು ಅರ್ಥವಾಗದೇ ಇರುವುದು. ಕೆಲವೊಮ್ಮೆ ಉಲ್ಟಾ ಮಾಡುವುದು.
5.ಹಿಂದೆ, ಮುಂದೆ, ನಾಳೆ, ನಿನ್ನೆ, ಎಡ, ಬಲ, ಮೇಲೆ, ಕೆಳಗೆ; ಈ ಬಗೆಯ ಪದಗಳನ್ನು ಉಪಯೋಗಿಸುವಾಗ ಗೊಂದಲಕ್ಕೀಡಾಗುವುದು ಅಥವಾ ತಪ್ಪು ಪದಗಳನ್ನು ಉಪಯೋಗಿಸುವುದು. ಉದಾಹರಣೆಗೆ: ನಿನ್ನೆ ಎನ್ನುವುದಕ್ಕೆ ನಾಳೆ ಎನ್ನುವುದು ಅಥವಾ ಎಡದ ಬದಲು ಬಲ ಹೇಳುವುದು, ಇತ್ಯಾದಿ.
6.ಅಕ್ಷರಗಳನ್ನು ಕಲಿಯುವುದರಲ್ಲಿ ಸಮಸ್ಯೆ ಅಥವಾ ತೀವ್ರವಾದ ನಿಧಾನಗತಿ. ಶಿಶುಪ್ರಾಸಗಳನ್ನು ಅಥವಾ ಶಿಶುಗೀತೆಗಳನ್ನು ಕಲಿಯಲಾಗದಿರುವುದು.
7.ಗಾದೆಗಳನ್ನು, ನುಡಿಗಟ್ಟುಗಳನ್ನು, ಪರಿಕಲ್ಪನೆಯ ಪದಗಳನ್ನು ಅರ್ಥ ಮಾಡಿಕೊಳ್ಳದಿರುವುದು. ಉದಾಹರಣೆಗೆ, ತೂಕಡಿಸುವವನಿಗೆ ಹಾಸಿಗೆ ಹಾಸುಕೊಟ್ಟಂತೆ ಎಂದು ಹೇಳಿದಾಗ ಶಾಲೆಗೆ ಹೋಗುತ್ತಿರುವ ಮಗುವು ವಾಚ್ಯಾರ್ಥವನ್ನೇ ಗ್ರಹಿಸುವುದು.
8.ಪದಗಳ ಅಥವಾ ವಾಕ್ಯಗಳ ಸಂಬಂಧಗಳನ್ನು ಗ್ರಹಿಸದಿರುವುದು.
9.ತಾನು ಹೇಳಬೇಕಾದ ವಿಷಯಕ್ಕೆ ಸೂಕ್ತವಾದ ಪದಗಳ ಆಯ್ಕೆ ಮಾಡದಿರುವುದು.
10.ಹೆಸರಿಸುವುದರಲ್ಲಿ ಗೊಂದಲಕ್ಕೀಡಾಗುವುದು ಅಥವಾ ಹೆಸರಿಸಲು ಪದಗಳು ತಿಳಿಯದಿರುವುದು. ಉದಾಹರಣೆಗೆ, ತನಗೇನೋ ಆಲೋಚನೆ ಬಂದಿದೆ ಎಂದರೆ ಅಥವಾ ತನಗೇನೋ ಭಾವನೆ ಇದೆ ಎಂದರೆ ಅದು ಏನೆಂದು ಹೆಸರಿಸಲು ಪದಗಳು ತಿಳಿಯದೇ ತಡಕಾಡುವುದು.
ಓದುವುದರಲ್ಲಿ
1.ಓದುವುದನ್ನು ಕಲಿಯುವುದೇ ಸಮಸ್ಯೆ.
2.ಪ್ರಾಸಬದ್ಧವಾಗಿರುವ ಶಬ್ದಗಳನ್ನು ಗುರುತಿಸುವುದರಲ್ಲಿ ಅಥವಾ ಹೇಳುವುದರಲ್ಲಿ ಸಮಸ್ಯೆ. ಪದಗಳಲ್ಲಿರುವ ಕೆಲವು ಉಚ್ಚಾರಣೆಯ ಧ್ವನಿಗಳನ್ನು ಹೇಳಲಾಗದೇ ಇರುವುದು. ಉದಾಹರಣೆಗೆ, ಆರತಕ್ಷತೆ ಎಂಬ ಪದವನ್ನು ಆರತಾಶತೆ ಎನ್ನುವುದು. ಇದೇ ರೀತಿಯಲ್ಲಿ ಪದಗಳಲ್ಲಿರುವ ಸಿಲಬಲ್ಗಳನ್ನು ತಪ್ಪಿಸುವುದು ಅಥವಾ ಅದಲುಬದಲು ಮಾಡುವುದು.
3.ಓದುವುದನ್ನು ಸರಿಯಾಗಿ ಕೇಳಿಸಿಕೊಂಡು ಅದರಂತೆಯೇ ಓದಲಾಗದಿರುವುದು.
4.ಸ್ವರ ಮತ್ತುವ್ಯಂಜನಗಳನ್ನು ಸರಿಯಾಗಿ ಕಲಿಯಲಾಗದಿರುವುದು. ಕೆಲವು ಸ್ವರಗಳನ್ನಷ್ಟೇ ಹೇಳುವುದು.
5.ಪದಗಳನ್ನು ಮತ್ತು ಅಕ್ಷರಗಳ ಬಗೆಗಳನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳದಿರುವುದು. ವೇಗವಾಗಿ ಮತ್ತು ತೇಲಿಸಿಕೊಂಡು ಏನೇನೋ ಓದಿಬಿಡುವುದು.
6.ಪದಗಳಲ್ಲಿರುವ ಅಕ್ಷರಗಳನ್ನು ಅದಲು ಬದಲಾಯಿಸಿಕೊಂಡು ಉಚ್ಚರಿಸುವುದು.
7.ಪದಗಳಲ್ಲಿರುವ ಅಕ್ಷರಗಳಲ್ಲಿ ಕೆಲವನ್ನು ಓದುವಾಗ ಬಿಟ್ಟುಬಿಡುವುದು ಅಥವಾ ತಪ್ಪಾಗಿ ಓದುವುದು.
8.ದೊಡ್ಡ ಪದಗಳನ್ನು ಓದಲು ತೊದಲುವುದು.
9.ತಮ್ಮಲ್ಲೇ ವೌನವಾಗಿ ಓದಿಕೊಂಡಾಗ ಅಥವಾ ಜೋರಾಗಿ ಓದಿದ ನಂತರ ಏನನ್ನು ಗ್ರಹಿಸಿಕೊಂಡಿದ್ದೇವೆ, ಅಥವಾ ಅರ್ಥ ಮಾಡಿಕೊಂಡಿದ್ದೇವೆ ಎಂಬುದನ್ನು ಹೇಳಲಾಗುವುದಿಲ್ಲ. ಏಕೆಂದರೆ ಅವರಿಗೆ ಸರಿಯಾಗಿ ಓದಲೇ ಆಗಿರುವುದಿಲ್ಲ.
10.ಓದುವುದಕ್ಕೆ ತುಂಬಾ ನಿಧಾನ ಮಾಡುವುದು ಮತ್ತು ತೀರಾ ಕಷ್ಟಪಡುವುದು.
ಬರೆಯುವುದರಲ್ಲಿ
1.ಅಂದುಕೊಂಡಿದ್ದನ್ನು ಕಾಗದದ ಮೇಲೆ ಇಳಿಸುವುದೇ ಸಮಸ್ಯೆ.
2.ಹೇರಳವಾದ ಕಾಗುಣಿತ ತಪ್ಪುಗಳು.
3.ದಿನವೂ ಬರೆಯುವುದರಲ್ಲಿ ತಪ್ಪಾಗಿ ಬರೆಯುವುದು. ಯಾವಾಗಲೋ ಒಮ್ಮ್ಮಾಮ್ಮೆ ಸರಿಯಾಗಿ ಬರೆಯುವುದು.
4.ಬರೆದಿರುವುದನ್ನು ಪರಿಶೀಲನೆ ಮಾಡಿ ಸರಿ ತಪ್ಪುಗಳನ್ನು ಗುರುತಿಸಲಾಗದಿರುವುದು.
5.ಬರೆಯುತ್ತಾ ಬರೆಯುತ್ತಾ ಹಿಂದಿನ ಸಾಲುಗಳಲ್ಲಿ ಏನನ್ನು ಬರೆದಿದ್ದೇನೆಂದು ಮರೆತುಹೋಗುವುದು.
6.ಏನನ್ನೋ ಬರೆಯಲು ಹೋಗಿ ಮತ್ತೇನನ್ನೋ ಬರೆಯುವುದು.
ಬರವಣಿಗೆಯ ಕ್ರಮದಲ್ಲಿ
ಸಾಮಾನ್ಯ ನಿರ್ಗಲಿಕೆಯ ಲಕ್ಷಣಗಳನ್ನು ಹೊಂದಿದ್ದು ಇನ್ನೂ ಕೆಲವು ಲಕ್ಷಣಗಳನ್ನು ವಿಶೇಷವಾಗಿ ತೋರಬಹುದು. ಆದರೆ, ಇದು ಡಿಸ್ಲೆಕ್ಸಿಯಾ ಅಥವಾ ನಿರ್ಗಲಿಕೆಯ ಮಕ್ಕಳಿಗೆ ಮಾತ್ರವಲ್ಲ ಇತರರಲ್ಲೂ ಕಾಣುತ್ತದೆ. ಆದರೆ, ನಿರ್ಗಲಿಕೆಯ ಮಕ್ಕಳಲ್ಲಿ ಇತರ ಲಕ್ಷಣಗಳೊಂದಿಗೆ ಈ ಕೆಳಕಂಡ ಲಕ್ಷಣಗಳನ್ನು ಕಂಡರೆ ಆಶ್ಚರ್ಯಪಡಬೇಕಾಗಿಲ್ಲ. ಬದಲಾಗಿ ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬೇಕು.
1.ಹೇಗೆ ಪ್ರಾರಂಭಿಸಬೇಕು ಅಥವಾ ಹೇಗೆ ಬರೆಯಬೇಕೆಂದು ಪ್ರಾರಂಭದಲ್ಲೇ ಹೊಳೆಯದೇ ಹೋಗುವುದು.
2.ಮಂದಗತಿಯ ಮತ್ತು ವಕ್ರವಕ್ರವಾದ ಬರವಣಿಗೆ.
3.ಕಾಗದಗಳನ್ನು ಇಟ್ಟುಕೊಳ್ಳುವುದರಲ್ಲಿ ಅಸ್ತವ್ಯಸ್ತ ಮತ್ತು ಕ್ರಮವಿಲ್ಲದೇ ಗುಡ್ಡೆ ಹಾಕಿಕೊಳ್ಳುವುದು.
4.ಪ್ರತಿಗಳನ್ನು ಮಾಡುವುದರಲ್ಲಿ, ನೋಡಿಕೊಂಡು ಯಥಾವತ್ತಾಗಿ ಬರೆಯುವುದರಲ್ಲಿ ಸಮಸ್ಯೆ.
5.ಪೆನ್ನು ಅಥವಾ ಪೆನ್ಸಿಲ್ನ್ನು ಸರಿಯಾಗಿ ಹಿಡಿದುಕೊಳ್ಳುವುದರಲ್ಲಿಯೇ ಸಮಸ್ಯೆ.
6.ಬರೆಯುವುದರಲ್ಲಿ ಶೀರ್ಷಿಕೆಗೆ, ವಿಷಯದ ಬೆಳವಣಿಗೆಗೆ, ವಿಷಯದ ಉಪಶೀರ್ಷಿಕೆಗಳನ್ನು ಸರಿಯಾಗಿ ನಮೂದಿಸದಿರುವುದು.
ಗಣಿತ ಅಥವಾ ಎಣಿಕೆಯಲ್ಲಿ
1.ಸರಿಯಾಗಿ ಮತ್ತು ಕ್ರಮದಲ್ಲಿ ಎಣಿಸುವುದರಲ್ಲಿ ಸಮಸ್ಯೆ.
2.ಸಂಖ್ಯೆಗಳನ್ನು ತಪ್ಪಾಗಿ ಹೇಳುವುದು.
3.ಗಣಿತದ ಸುಲಭ ಮತ್ತು ಮೂಲ ಸೂತ್ರಗಳಾದ ಕ್ರಮವಾಗಿ ಎಣಿಸುವಿಕೆ, ಕೂಡುವಿಕೆ, ಕಳೆಯುವಿಕೆ, ಗುಣಿಸುವಿಕೆ ಮತ್ತು ಭಾಗಿಸುವಿಕೆಗಳಲ್ಲಿ ಗೊಂದಲಗಳು ಮತ್ತು ಸಮಸ್ಯೆಗಳು.
4.ಹಲಗೆಯ ಮೇಲೆ ಅಥವಾ ಪಠ್ಯಪುಸ್ತಕದಲ್ಲಿರುವ ಗಣಿತದ ಸಮಸ್ಯೆಗಳನ್ನು ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುವ ಸಮಸ್ಯೆ.
5.ಗುಣಿಸುವುದರಲ್ಲಿ ತಪ್ಪುಗಳು.
6.ಗಣಿತದಲ್ಲಿ ನಿರ್ದಿಷ್ಟವಾಗಿ ಉಪಯೋಗಿಸುವ ಪದಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರಲ್ಲಿ ಸಮಸ್ಯೆ.
7.ಗಮನ ಕೊಟ್ಟು ಎಣಿಸದೇ ಇರುವುದು. ಗಮನ ಪಲ್ಲಟ ವಾಗುತ್ತಿರುವುದರಿಂದ ಮತ್ತೆ ಮತ್ತೆ ಎಣಿಸುವುದು.
8.ಗಣಿತಕ್ಕೆ ಸಂಯಮ ಮತ್ತು ಗಮನ ನೀಡಲು ವೌನದ ಸ್ಥಿತಿ ಬೇಕಾಗುವುದು. ಆದರೆ ಅವಿಲ್ಲದೇ ಎಣಿಸಲಾಗದೇ ಇರುವಷ್ಟು ತೀವ್ರವಾದ ಚಟುವಟಿಕೆಗಳಲ್ಲಿರುವುದು. (ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್)
ಇನ್ನಿತರ ನಿರ್ಗಲಿಕೆಯ ಲಕ್ಷಣಗಳು
1.ಬಣ್ಣ, ವಸ್ತು ಮತ್ತು ಅಕ್ಷರಗಳನ್ನು ಸರಿಯಾಗಿ ಹೆಸರಿಸದಿರುವುದು. ಅದರಲ್ಲೂ ಕ್ರಮಾನುಸಾರವಾಗಿ ಮತ್ತು ವೇಗವಾಗಿ ತಂತಾನೇ ಗುರುತಿಸದಿರುವುದು.
2.ಪಟ್ಟಿಯಲ್ಲಿರುವ ಪದಗಳನ್ನು, ದಿಕ್ಕುಗಳನ್ನು, ಸಂಗತಿಗಳನ್ನು ಮರೆತುಹೋಗುವುದು. ಅಥವಾ ಕ್ಷೀಣವಾದ ಸ್ಮರಣೆ.
3.ನೆನಪಿನಲ್ಲಿಟ್ಟುಕೊಳ್ಳುವ ಸಲುವಾಗಿ ಪದೇ ಪದೇ ವಸ್ತುಗಳನ್ನು, ಸಂಖ್ಯೆಗಳನ್ನು, ಪದಗಳನ್ನು ನೋಡುವುದು ಅಥವಾ ಕೇಳುವುದು.
4. ಬೇರೇನೋ ಕೇಳಿತೆಂದರೆ, ಕಂಡಿತೆಂದರೆ ತಾವು ಮಾಡುತ್ತಿರುವ ಕೆಲಸದಿಂದ ಬೇಗನೇ ವಿಮುಖವಾಗಿಬಿಡುವುದು. ಏಕಾಗ್ರತೆಯನ್ನು ಕಳೆದುಕೊಂಡುಬಿಡುವುದು. ತಾವೇನು ಮಾಡುತ್ತಿದ್ದೇವೆಂದು ಮರೆತುಹೋಗುವುದು.
5. ಶಾಲೆಯಲ್ಲಿ ನೀಡುವ ಕ್ರಮಾಂಕದಲ್ಲಿ ತಿಂಗಳಿಂದ ತಿಂಗಳಿಗೆ ಕೆಳಮುಖವಾಗಿಯೇ ಚಲಿಸುತ್ತಿರುವುದು.
6. ಏಕಪ್ರಕಾರವಾಗಿ ಶಾಲೆಯ ಅಥವಾ ಇತರ ಕಲಿಕೆಯ ವಿಷಯಗಳಲ್ಲಿ ಪ್ರಗತಿಯನ್ನು ಕಾಯ್ದುಕೊಳ್ಳದಿರುವುದು.
7. ಸೋಮಾರಿ ಅಥವಾ ಮಾಡುತ್ತಿರುವ ಕೆಲಸ ಸಾಲದು ಅಥವಾ ಏಕಾಗ್ರತೆ ಇಲ್ಲ ಅಥವಾ ಏನು ಹೇಳಿದರೂ ತಲೆಗೆ ಹತ್ತುವುದಿಲ್ಲ ಎಂಬ ಮಾತುಗಳನ್ನು ಸಾಮಾನ್ಯವಾಗಿ ಇತರರಿಂದ ಕೇಳುತ್ತಿದ್ದಾರೆಂದರೆ ನಿರ್ಗಲಿಕೆ ಇರುವ ಸಾಧ್ಯತೆಗಳು ದಟ್ಟವಾಗಿದೆ ಎಂದೇ ಅರ್ಥ.
8.ರಕ್ತ ಸಂಬಂಧಿಗಳಲ್ಲಿ ಈ ಸಮಸ್ಯೆ ಇದ್ದರೂ ಇದು ಕಾಣಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಕಾಣಿಸಿಕೊಳ್ಳಲೇ ಬೇಕೆಂದಿಲ್ಲ.
ಉಪಲಕ್ಷಣಗಳು
1.ಕಲಿಕೆಯ ಪ್ರಕ್ರಿಯೆಗೆ ಬೇಕಾಗಿರುವಂತಹ ಸಮತೋಲನವನ್ನು ಕೈಗಳಲ್ಲಿ ಅಥವಾ ದೇಹದ ಇತರ ಭಾಗಗಳಲ್ಲಿ ಹೊಂದಿಲ್ಲದೇ ಇರುವುದು. ಸರಿಯಾಗಿ ಕುಳಿತುಕೊಳ್ಳಲೂ ಸಮಸ್ಯೆಯಾಗಿ ತೋರುವುದು.
2.ವ್ಯವಸ್ಥಿತವಾಗಿ ದೇಹದ ಅಂಗಾಂಗಗಳನ್ನು ಚಲಿಸುವುದು.
3.ಮುಖಭಾವಗಳನ್ನು ಸರಿಯಾಗಿ ಪ್ರದರ್ಶಿಸಲು ಬಾರದೇ ಇರುವುದು. ಕೆಲವೊಮ್ಮೆ ಅಕ್ಷರಗಳನ್ನು ಉಚ್ಚರಿಸಲು ಅಥವಾ ಪದಗಳನ್ನು ಅಥವಾ ವಾಕ್ಯಗಳನ್ನು ಹೇಳಲು ಸಮತೋಲಿತ ಮುಖಭಾವಗಳನ್ನು ತೋರುವುದು.
4.ಕಾಗದಗಳನ್ನು, ಪುಸ್ತಕಗಳನ್ನು, ಪೆನ್ ಅಥವಾ ಪೆನ್ಸಿಲ್ ಇತ್ಯಾದಿಗಳನ್ನು ಪದೇ ಪದೇ ಕಳೆದುಕೊಳ್ಳುವುದು.
5.ಸಮಯದ ಶಿಸ್ತನ್ನು ಸರಿಯಾಗಿ ಪಾಲಿಸಲು ಸಾಧ್ಯವಾಗದೇ ಇರುವುದು.
6.ಮಾಡಬೇಕಾದ ಕೆಲಸವನ್ನು ಪದೇ ಪದೇ ಮರೆಯುವುದು. ಶಾಲೆಯಲ್ಲಿ ಕೊಟ್ಟಿರುವ ಮನೆಗೆಲಸವನ್ನು ಮಾಡಲು ಮರೆಯುತ್ತಿರುವುದು.
7.ತಮ್ಮ ಓದಿನ ಮತ್ತು ಬರವಣಿಗೆಯ ಮೇಜನ್ನು, ಪಾಟೀ ಚೀಲವನ್ನು ಅಸ್ತವ್ಯಸ್ತವಾಗಿಟ್ಟುಕೊಂಡಿರುವುದು. ಕೆಲವು ಬೇಕಾಗಿರುವ ವಸ್ತುಗಳನ್ನು ಎತ್ತೆತ್ತಲೋ ಇಟ್ಟು ಪದೇ ಪದೇ ಹುಡುಕುವುದು. ಪ್ರತೀ ಸಲವೂ ಹುಡುಕುವುದು.
8.ಅತೀ ನಿಧಾನಗತಿಯ ಕೆಲಸ. ಮಾಡುವ ಮತ್ತು ಮಾಡಲೇ ಬೇಕಾಗಿರುವ ಕೆಲಸವನ್ನು ಪದೇ ಪದೇ ಹೇಳಿಸಿಕೊಳ್ಳುವುದು. ಈ ಮೇಲ್ಕಂಡ ಪಟ್ಟಿಗಳಲ್ಲಿ ಕಾಣುವ ಹಲವಾರು ಲಕ್ಷಣಗಳು ನಿಮ್ಮ ಮನೆಯ ಅಥವಾ ಶಾಲೆಯ ಮಕ್ಕಳಲ್ಲಿ ಕಂಡಿದ್ದೇ ಆದರೆ, ಅವರ ಬಗ್ಗೆ ಗಮನ ನೀಡಿ. ಅನುಕಂಪವಿರಲಿ. ಅವರಿಗೆ ಕಲಿಸುವ ಬಗೆಯನ್ನು ಬದಲಿಸಿಕೊಳ್ಳಿ. ಮೊತ್ತಮೊದಲನೆಯದಾಗಿ ಅವರನ್ನು ಹಂಗಿಸುವುದನ್ನು, ನಿಂದಿಸುವುದನ್ನು, ಅವಹೇಳನ ಮಾಡುವುದನ್ನು ನಿಲ್ಲಿಸಲೇಬೇಕು. ಏಕೆಂದರೆ, ನಿರ್ಗಲಿಕೆ ಪಾಪವೂ ಅಲ್ಲ, ಅಪರಾಧವೂ ಅಲ್ಲ, ಕರ್ಮವೂ ಅಲ್ಲ. ಸ್ವಭಾವತಃ ಆ ರೀತಿಯಲ್ಲಿರುವ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳ ದಿರುವುದರಿಂದ ಪಾಪ ಸುತ್ತಿಕೊಳ್ಳುತ್ತದೆ. ಅವರನ್ನು ಅನಗತ್ಯವಾಗಿ ದಂಡಿಸುವುದು ಮತ್ತು ಹಂಗಿಸುವುದು ಅಪರಾಧವಾಗುತ್ತದೆ. ಇಂತಹ ಅಪರಾಧವನ್ನು ಮಾಡಿದ ಮೇಲೆ ಅದನ್ನು ಮುಂದೆ ಅನುಭವಿಸುವ ಕರ್ಮವು ಅದೇ ಮಕ್ಕಳಿಂದ ಧಾರಾಳವಾಗಿ ನಾನಾ ರೀತಿಗಳಲ್ಲಿ ನಿಮಗೆ ಲಭ್ಯವಾಗುವುದು. ಇರಲಿ, ಇನ್ನು ಮುಂದೆ ಅನೇಕ ಉಪಶಮನಕಾರಿ ಮಾರ್ಗೋಪಾಯಗಳನ್ನು ಮುಂದಿನ ಸಂಚಿಕೆಗಳಲ್ಲಿ ಹಂಚಿಕೊಳ್ಳಲಾಗುವುದು.