varthabharthi


ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 14 Oct, 2018

► ಮೈದಾನ ಹಾಳುಗೆಡವುತ್ತಿರುವ ದಿಗ್ವಿಜಯ್

ಮಧ್ಯ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತೋರುತ್ತಿರುವ ವರ್ತನೆಯಿಂದ ಪಕ್ಷದ ಹಲವರು ಚಿಂತೆಗೀಡಾಗಿದ್ದಾರೆ. ಅವರು ಜಿಲ್ಲಾ ಮಟ್ಟದಲ್ಲಿ ಅನೇಕ ನಾಯಕರನ್ನು ಭೇಟಿಯಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ಒಟ್ಟಾಗುವಂತೆ ಕರೆ ನೀಡುತ್ತಿದ್ದರೂ ಅವರ ಮಾತಿಗೆ ಹೆಚ್ಚಿನ ಜನರು ಆಕರ್ಷಿತರಾಗುತ್ತಿಲ್ಲ.

ಮುಖ್ಯವಾಗಿ ಈ ಬೆಳವಣಿಗೆ ನಡೆದಿರುವುದು ಕಳೆದ ವರ್ಷ ಅವರು ನರ್ಮದಾಗೆ ಪಾದಯಾತ್ರೆ ನಡೆಸಿದ ನಂತರ. ಒಂದೊಮ್ಮೆ ರಾಹುಲ್ ಗಾಂಧಿಯ ಗುರುವಿನಂತೆ ವರ್ತಿಸುತ್ತಿದ್ದ ಸಿಂಗ್ ಇದೀಗ ಮಧ್ಯ ಪ್ರದೇಶದಲ್ಲಿ ಪಕ್ಷದ ಶಕ್ತಿಯ ಕೇಂದ್ರಬಿಂದುವಾಗಿ ರೂಪುಗೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ, ಈಗಾಗಲೇ ಹಲವು ಬಣಗಳಿರುವ ಮಧ್ಯ ಪ್ರದೇಶ ಕಾಂಗ್ರೆಸ್‌ನಲ್ಲಿ ಇನ್ನೊಂದು ಬಣ ಸೃಷ್ಟಿಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿಂಗ್, ಕಮಲ್ ನಾಥ್‌ರನ್ನು ಬೆಂಬಲಿಸುತ್ತಿದ್ದರೆ ಜ್ಯೋತಿರಾಧಿತ್ಯ ಸಿಂಗ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಒಂದೊಮ್ಮೆ ತನ್ನ ಬಣದಿಂದ ಹೆಚ್ಚು ಶಾಸಕರು ಗೆದ್ದು ಅವರ ಬೆಂಬಲ ಪಡೆಯಲು ಶಕ್ತವಾದರೆ ತಾನೂ ಮುಖ್ಯಮಂತ್ರಿಯಾಗಬಹುದು ಎಂಬ ಕನಸನ್ನು ಸಿಂಗ್ ಕಾಣುತ್ತಿದ್ದಾರೆ ಎಂದು ಪಕ್ಷದ ಹಲವರು ನಂಬಿದ್ದಾರೆ.

ಹಾಗಾಗಿ ಕಾಂಗ್ರೆಸ್‌ನ ಹೈಕಮಾಂಡ್ ಮೌನವಾಗಿ ಎಲ್ಲವನ್ನೂ ವೀಕ್ಷಿಸುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಪಕ್ಷವು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕು.

► ಪ್ರಧಾನಿಯ ಕ್ಷಿಪ್ರ ರಾಜಸ್ಥಾನ ಕಾರ್ಯಕ್ರಮ

ಅಜ್ಮೀರ್‌ನಲ್ಲಿ ರ್ಯಾಲಿಯಲ್ಲಿ ಭಾಗವಹಿಸಿ ಕಾಂಗ್ರೆಸ್ ವಿರುದ್ಧ ಟೀಕೆಗಳ ಮಳೆಗರೆಯುವ ಮೂಲಕ ಪ್ರಧಾನಿ ಮೋದಿ ಕಳೆದ ವಾರ ರಾಜಸ್ಥಾನದಲ್ಲಿ ಚುನಾವಣೆಯ ಕಹಳೆಯೂದಿದರು. ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿ ಮತಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು ಮತ್ತು ಇತರ ಅನೇಕ ವಿಷಯಗಳನ್ನು ಪ್ರಸ್ತಾಪಿಸಿ ಟೀಕಿಸಿದರು. ಪ್ರಧಾನಿಯ ರ್ಯಾಲಿಯ ಮೂಲಕ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೆ ಆರಂಭಿಸಿದ್ದ ಗೌರವ ಯಾತ್ರೆಗೆ ತೆರೆಯೆಳೆಯಲಾಯಿತು. ಭಾಷಣದ ಮಧ್ಯೆ ಜೋರಾಗಿ ಗಾಳಿ ಬೀಸಿದ ಪರಿಣಾಮ ಪ್ರಧಾನಿ ಕೆಲಹೊತ್ತು ತನ್ನ ಭಾಷಣವನ್ನು ನಿಲ್ಲಿಸಬೇಕಾಗಿಯೂ ಬಂತು. ಗಾಳಿ ನಿಂತ ನಂತರ ಮಾತನಾಡಿದ ಮೋದಿ, ಪ್ರಕೃತಿಯೂ ನಮ್ಮ ಜೊತೆಗಿದೆ. ನೋಡಿ, ಇದು ವಿಜಯದ ಬಿರುಗಾಳಿ ಎಂದು ತಿಳಿಸಿದರು. ಆದರೆ ರ್ಯಾಲಿಯಲ್ಲಿ ಹಾಜರಿದ್ದ ಕಡಿಮೆ ಜನಸಂದಣಿಯನ್ನು ಕಂಡು ಮೋದಿಗೆ ಚಿಂತೆಯಾಗಿರಬಹುದು. ರಾಜ್ಯ ಬಿಜೆಪಿ ಪ್ರಕಾರ ಈ ರ್ಯಾಲಿಯಲ್ಲಿ ಕನಿಷ್ಠ ಮೂರು ಲಕ್ಷ ಮಂದಿ ಭಾಗವಹಿಸಬೇಕಿತ್ತು. ಆದರೆ ಮೈದಾನದಲ್ಲಿ ಇದರ ಅರ್ಧ ಜನರೂ ಇರಲಿಲ್ಲ. ಬಹುಶಃ ಮೋದಿ ಹೇಳಿದ ಬಿರುಗಾಳಿ ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಬೀಸಿದೆಯೋ? ಹೇಳಲಾಗದು.

► ಮಾಯಾವತಿ ಮೋಸ ಹೋದರೇ?

ನವೆಂಬರ್‌ನಲ್ಲಿ ಮಧ್ಯ ಪ್ರದೇಶದಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಮಾಯಾವತಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವುದು ಹಲವು ಊಹಾಪೋಹಗಳಿಗೆ ಎಡೆಮಾಡಿದೆ. ಅಷ್ಟಕ್ಕೂ ಮಾಯಾವತಿ ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಸಖ್ಯವನ್ನು ತೊರೆಯಲು ಕಾರಣವಾದರೂ ಏನು? ಈ ಪ್ರಶ್ನೆಗೆ ಹಲವು ಉತ್ತರಗಳನ್ನು ನೀಡಲಾಗುತ್ತಿದೆ. ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಈ ಮೈತ್ರಿಯಲ್ಲಿ ಹುಳಿ ಹಿಂಡುವ ಕೆಲಸ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನ್ನು ಕೆಲವರ ಪ್ರಕಾರ ಮೈತ್ರಿಯಲ್ಲಿ ಹಲವು ಸಮಯದಿಂದ ತಾಳ ತಪ್ಪಿತ್ತು. ಆದರೆ ಮಾಯಾವತಿಯ ಕೋಪಕ್ಕೆ ನಿಜವಾದ ಕಾರಣ ಬೇರೆಯೇ ಇದೆ. ಮೂಲಗಳ ಪ್ರಕಾರ, ಬಿಎಸ್ಪಿಯ ಪ್ರಮುಖ ನಾಯಕರನ್ನು ಸೆಳೆಯುವ ಪ್ರಯತ್ನಗಳನ್ನು ಕಾಂಗ್ರೆಸ್ ಹಲವು ಬಾರಿ ಮಾಡಿದೆ. ಇದರಿಂದ ಮಾಯಾವತಿಗೆ ಅಸಮಾಧಾನವಾಗಿದೆ. ಅದರಲ್ಲೂ ಈ ಪ್ರಯತ್ನಗಳು ನಡೆದಿರುವುದು ಕಾಂಗ್ರೆಸ್-ಬಿಎಸ್ಪಿ ಮಧ್ಯೆ ಮೈತ್ರಿ ಮಾತುಕತೆ ನಡೆಯುತ್ತಿದ್ದ ಸಮಯದಲ್ಲಿ. ಉದಾಹರಣೆಗೆ, ಹಿಂದಿನ ದಿನ ಆಂಗ್ಲ ವಾಹಿನಿಯಲ್ಲಿ ಮಾಯಾವತಿಯನ್ನು ಹೊಗಳುತ್ತಿದ್ದ ಬಿಎಸ್ಪಿಯ ಯುವ ವಕ್ತಾರ ಮರುದಿನ ಕಾಂಗ್ರೆಸ್ ಸೇರಿದರು. ಅದೂ ಕೂಡಾ ಮಾಯಾವತಿಯಲ್ಲಿ ಒಂದು ಮಾತನ್ನೂ ಹೇಳದೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ, ಕಾಂಗ್ರೆಸ್ ಬಹುಜನ ಸಮಾಜದ ಕೆಲವು ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಮಾಯಾವತಿಗೆ ಲಭಿಸಿತ್ತು. ಈ ಎಲ್ಲ ಘಟನೆಗಳಿಂದ ಉದ್ವಿಗ್ನಗೊಂಡ ಮಾಯಾವತಿ ಕಾಂಗ್ರೆಸ್‌ಗೆ ಪಾಠ ಕಲಿಸಲು ಮುಂದಾಗಿದ್ದಾರೆ. ಹಾಗಾದರೆ ಮಹಾಮೈತ್ರಿ ಪಾಡೇನು? ಅದಕ್ಕೆ 2019ರ ವರೆಗೆ ಕಾಯಬೇಕು.

► ರಮಣ್ ಮ್ಯಾಜಿಕ್?

ರಾಜಸ್ಥಾನ ಮತ್ತು ಮಧ್ಯ ಪ್ರದೇಶದ ವಿಧಾನ ಸಭಾ ಚುನಾವಣೆ ಬಗ್ಗೆ ಚಿಂತಿತವಾಗಿರುವ ಬಿಜೆಪಿ ಛತ್ತೀಸ್‌ಗಡದ ವಿಷಯದಲ್ಲಿ ನಿರಾತಂಕವಾಗಿದೆ. ಇತರ ರಾಜ್ಯಗಳ ಉಸ್ತುವಾರಿಗಳಿಗೆ ಹೋಲಿಸಿದರೆ ಛತ್ತೀಸ್‌ಗಡದ ಉಸ್ತುವಾರಿಯನ್ನು ವಹಿಸಿಕೊಂಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉತ್ತಮ ಸ್ಥಿತಿಯಲ್ಲಿದ್ದಾರೆ. ಸಿಂಗ್ ಉತ್ತರ ಪ್ರದೇಶ ಮೂಲದವರಾಗಿದ್ದರೂ ಛತ್ತೀಸ್‌ಗಡದ ಬಗ್ಗೆ ಅವರಿಗೆ ವಿಶೇಷ ಕುತೂಹಲವಿದೆ, ಮುಖ್ಯವಾಗಿ ಅಲ್ಲಿನ ಬಂಡುಕೋರರ ಸಮಸ್ಯೆಗೆ ಅವರು ಸದಾ ಸ್ಪಂದಿಸಿದ್ದಾರೆ. ಗೃಹ ಸಚಿವರಾಗಿ ರಾಜ್ಯದ ಆಗುಹೋಗುಗಳ ಮೇಲೆ ನಿಗಾಯಿಟ್ಟಿರುವ ಸಿಂಗ್ ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಪ್ರಚಾರ ನಡೆಸಲು ಅತ್ಯುತ್ತಮ ವ್ಯಕ್ತಿಯಾಗಿದ್ದಾರೆ. ಇಲ್ಲಿ ಇನ್ನೊಂದು ಉಪಯೋಗವೂ ಇದೆ. ರಾಜನಾಥ ಸಿಂಗ್ ಮತ್ತು ರಮಣ್ ಸಿಂಗ್ ಇಬ್ಬರೂ ಕ್ಷತ್ರಿಯರಾಗಿದ್ದು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇಬ್ಬರೂ ಮಾವೋವಾದಿ ಬಂಡುಕೋರರ ವಿರೋಧಿಗಳಾಗಿದ್ದು ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪರಸ್ಪರ ಒಂದೇ ರೀತಿಯ ತಂತ್ರಗಳನ್ನು ಹೊಂದಿದ್ದಾರೆ. ಇದು ಬಿಜೆಪಿಗೆ ಉತ್ತಮ ಸೂಚನೆಯಾಗಿದೆ.

ಈ ಬಾಂಧವ್ಯವು ಹೀಗೆಯೇ ಇದ್ದು ರಮಣ್ ಸಿಂಗ್ ಗೆದ್ದರೆ, ಮುಖ್ಯಮಂತ್ರಿಯಾಗಿ ಅವರು ಮೂರು ಅವಧಿಗಳನ್ನು ಮುಗಿಸಲಿದ್ದಾರೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಗೆದ್ದಿದ್ದರು. ಇದೀಗ ರಮಣ್ ಸಿಂಗ್ ಈ ಸಾಧನೆ ಮಾಡಿದರೆ ಬಿಜೆಪಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ.

► ಸಿಬಿಐಯೊಳಗೆ ಜಗಳ

ಸದ್ಯ ಕೇಂದ್ರ ತನಿಖಾ ಮಂಡಳಿಯ ನಿರ್ದೇಶಕ ಅಲೋಕ್ ವರ್ಮಾ ಮತ್ತು ಅವರ ಸಹಾಯಕ ರಾಕೇಶ್ ಅಸ್ತಾನ ಮಧ್ಯೆ ನಡೆಯುತ್ತಿರುವ ಜಗಳ ಅಪಾಯದ ಹಂತಕ್ಕೆ ತಲುಪಿದೆ. ಇವರಿಬ್ಬರು ಪರಸ್ಪರ ಮಾತುಕತೆ ನಡೆಸುವುದನ್ನು ಬಿಟ್ಟಿರುವುದು ಮಾತ್ರವಲ್ಲ ಕಚೇರಿಯಲ್ಲ; ಒಬ್ಬರ ಮುಖವನ್ನು ಇನ್ನೊಬ್ಬರು ನೋಡುತ್ತಿಲ್ಲ.

ಈ ಸಂಘರ್ಷದಿಂದ ದೇಶದ ಪ್ರಮುಖ ತನಿಖಾ ಸಂಸ್ಥೆಯಲ್ಲಿ ಎರಡು ಶಕ್ತಿ ಕೇಂದ್ರಗಳು ರಚನೆಯಾಗಿವೆ. ಅದರಲ್ಲೂ ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಅಸ್ತಾನ ಪಿಎಂಒಗೆ ನಿಕಟವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅಸ್ತಾನರನ್ನು ಹಲವು ಪ್ರಕರಣಗಳಲ್ಲಿ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಸಿಬಿಐ ಇತ್ತೀಚೆಗೆ ಹೇಳಿಕೆ ನೀಡುವ ಮೂಲಕ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಜಗಳವಾಗಿ ಮಾರ್ಪಟ್ಟಿತ್ತು. ವರ್ಮಾರ ಸೂಚನೆಯಂತೆ ನೀಡಲಾಗಿದೆ ಎಂದು ಹೇಳಲಾಗಿರುವ ಕಟುಶಬ್ದಗಳಿಂದ ಕೂಡಿದ ಹೇಳಿಕೆಗೆ ಪ್ರಧಾನಿ ಕಚೇರಿಯೂ ಅಸಮಾಧಾನ ವ್ಯಕ್ತಪಡಿಸಿತ್ತು. ಸಂಸ್ಥೆಯ ವಿಷಯಗಳನ್ನು ಸಾರ್ವಜನಿಕಗೊಳಿಸಿರುವ ಕಾರಣಕ್ಕೆ ವಿವರಣೆ ನೀಡುವಂತೆ ಪ್ರಧಾನಿ ಕಚೇರಿ ವರ್ಮಾಗೆ ಸೂಚಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)