ಕ್ಯಾನ್ಸರ್ ಪ್ರತಿರಕ್ಷಣೆ ಚಿಕಿತ್ಸೆಗೆ ನೊಬೆಲ್ ಪ್ರಶಸ್ತಿ
2018ರ ನೊಬೆಲ್ ಪ್ರಶಸ್ತಿಯು ಕ್ಯಾನ್ಸರ್‌ನ ಹೊಸ ಚಿಕಿತ್ಸೆಯಾದ ಕ್ಯಾನ್ಸರ್ ಇಮ್ಯೂನೋಥೆರಪಿ (ಕ್ಯಾನ್ಸರ್ ಪ್ರತಿರಕ್ಷಣೆ ಚಿಕಿತ್ಸೆ)ಯ ಸಂಶೋಧನೆಗೆ ಸಿಕ್ಕಿದೆ. ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಎಂ.ಡಿ. ಆ್ಯಂಡರ್‌ಸನ್ ಕ್ಯಾನ್ಸರ್ ಸೆಂಟರ್‌ನ ಜೇಮ್ಸ್ ಪಿ. ಆಲ್ಲಿಸನ್ ಮತ್ತು ಜಪಾನಿನ ಕ್ಯೋಟೋ ವಿಶ್ವವಿದ್ಯಾನಿಲಯದ ತಸುಕು ಹೊಂಜೋ ಅವರಿಗೆ ಜಂಟಿಯಾಗಿ ಇದೇ ಅಕ್ಟೋಬರ್ ಒಂದರಂದು ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ಕ್ಯಾನ್ಸರ್ ಪೀಡಿತರ ದೇಹದಲ್ಲಾಗುವ ರೋಗರಕ್ಷಕಗಳ ಏರುಪೇರಿನ ಕ್ರಿಯೆಗಳನ್ನು ಅಭ್ಯಸಿಸಿ ಅದಕ್ಕೆ ತಕ್ಕಂತೆ ನೀಡಲಾಗುವ ಚಿಕಿತ್ಸೆಯ ಕ್ರಮದ ಸಂಶೋಧನೆಗೆ ಈ ಪ್ರಶಸ್ತಿ ಸಿಕ್ಕಿದೆ.
ಅಸಂಖ್ಯಾತ ಜಗದ್ವಿಖ್ಯಾತ ವ್ಯಕ್ತಿಗಳು ಕ್ಯಾನ್ಸರಿನಿಂದ ಬಳಲಿ ಬೆಂಡಾಗಿ ಮರಣವನ್ನಪ್ಪಿದ್ದಾರೆ. ವಾಲ್ಟ್ ಡಿಸ್ನಿ, ಸ್ಟೀವ್ ಜಾಬ್ಸ್, ಕಾರ್ಲ್ ಸಾಗನ್ ಹೀಗೆ ಪಟ್ಟಿ ಬೆಳೆಯುತ್ತದೆ. ಬಾಲಿವುಡ್ ನಟ ನಟಿಯರೂ ಇದರಿಂದ ಹೊರತಾಗಿಲ್ಲ. ರಾಜೇಶ್ ಖನ್ನಾ, ವಿನೋದ್ ಖನ್ನಾ, ನರ್ಗೀಸ್ ದತ್ ಕ್ಯಾನ್ಸರಿನಿಂದ ಸಾವಿಗೀಡಾಗಿದ್ದಾರೆ. ಕ್ಯಾನ್ಸರ್ ಅನ್ನು ಗೆದ್ದ ಸುದ್ದಿಯನ್ನು ಕೂಡಾ ಓದಿದ್ದೇವೆ. ಸೋನಾಲಿ ಬೇಂದ್ರೆ, ಮನೀಷಾ ಕೊಯಿರಾಲ, ಕ್ರಿಕೆಟಿಗ ಯುವರಾಜ್ ಸಿಂಗ್ ಕ್ಯಾನ್ಸರ್‌ನಿಂದ ಹೊರಬಂದಿದ್ದಾರೆ.
2016ರಲ್ಲಿ ಭಾರತದಲ್ಲಿ 39 ಲಕ್ಷ ಕ್ಯಾನ್ಸರ್ ಪೀಡಿತರನ್ನು ಪತ್ತೆಹಚ್ಚಲಾಗಿದೆ. ಕ್ಯಾನ್ಸರ್ ಒಂದು ಭಯಾನಕ ಕಾಯಿಲೆ. ಕ್ಯಾನ್ಸರ್ ಅನ್ನು ಗುಣಪಡಿಸುವ ಪ್ರಯತ್ನಗಳು ಮುಂದುವರಿದಿವೆ. ಸದ್ಯಕ್ಕೆ ಕ್ಯಾನ್ಸರ್ ಚಿಕಿತ್ಸೆಯನ್ನು ಶಸ್ತ್ರಚಿಕಿತ್ಸೆ, ರೇಡಿಯೋಥೆರಪಿ ಮತ್ತು ಕ್ಯಾನ್ಸರ್ ವಿರೋಧಿ ಔಷಧಗಳ ಮೂಲಕ ಗುಣಪಡಿಸುವ ವಿಧಾನಗಳು ಬಳಕೆಯಲ್ಲಿವೆ. ಆದರೆ, ಇದೀಗ ಸುರಕ್ಷಿತ ಚಿಕಿತ್ಸಾ ವಿಧಾನ ಎನ್ನಬಹುದಾದ ಹೊಸ ವಿಾನವೊಂದರ ಸಂಶೋಧನೆಯಾಗಿದೆ.
2018ರ ನೊಬೆಲ್ ಪ್ರಶಸ್ತಿಯು ಕ್ಯಾನ್ಸರ್‌ನ ಹೊಸ ಚಿಕಿತ್ಸೆಯಾದ ಕ್ಯಾನ್ಸರ್ ಇಮ್ಯೂನೋಥೆರಪಿ (ಕ್ಯಾನ್ಸರ್ ಪ್ರತಿರಕ್ಷಣೆ ಚಿಕಿತ್ಸೆ)ಯ ಸಂಶೋಧನೆಗೆ ಸಿಕ್ಕಿದೆ. ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಎಂ.ಡಿ. ಆ್ಯಂಡರ್‌ಸನ್ ಕ್ಯಾನ್ಸರ್ ಸೆಂಟರ್‌ನ ಜೇಮ್ಸ್ ಪಿ. ಆಲ್ಲಿಸನ್ ಮತ್ತು ಜಪಾನಿನ ಕ್ಯೋಟೋ ವಿಶ್ವವಿದ್ಯಾನಿಲಯದ ತಸುಕು ಹೊಂಜೋ ಅವರಿಗೆ ಜಂಟಿಯಾಗಿ ಇದೇ ಅಕ್ಟೋಬರ್ ಒಂದರಂದು ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ಕ್ಯಾನ್ಸರ್ ಪೀಡಿತರ ದೇಹದಲ್ಲಾಗುವ ರೋಗರಕ್ಷಕ ಏರುಪೇರಿನ ಕ್ರಿಯೆಗಳನ್ನು ಅಭ್ಯಸಿಸಿ ಅದಕ್ಕೆ ತಕ್ಕಂತೆ ನೀಡಲಾಗುವ ಚಿಕಿತ್ಸೆಯ ಕ್ರಮದ ಸಂಶೋಧನೆಗೆ ಈ ಪ್ರಶಸ್ತಿ ಸಿಕ್ಕಿದೆ.
ಕ್ಯಾನ್ಸರ್‌ನಲ್ಲಿ ಎರಡು ವಿಧ. ಮೊದಲನೆಯದು ಉಪಯೋಗಿ ಕ್ಯಾನ್ಸರ್. ಅದೊಂದು ಗಡ್ಡೆಯಷ್ಟೆ, ಗಂಥಿಯಷ್ಟೆ. ಅದು ಕೇಡು ಮಾಡದು. ಇನ್ನೊಂದು ಕೇಡಿನ ಕ್ಯಾನ್ಸರ್. ಅಂಗಾಂಗದಿಂದ ಅಂಗಾಂಗಕ್ಕೆ ತನ್ನ ಕಬಂಧಬಾಹು ಗಳನ್ನು ಚಾಚುತ್ತಾ, ಹರಡುತ್ತಾ ಹೋಗಿ, ದೇಹವನ್ನೆಲ್ಲಾ ವ್ಯಾಪಿಸಿ, ಮಾರಣಾಂತಿಕವಾಗುತ್ತದೆ. ಅದನ್ನು ಮ್ಯಾಲಿಗ್ನೆಂಟ್ ಕ್ಯಾನ್ಸರ್ (ಮಾರಣಾಂತಿಕ ಗಂಥಿ) ಎನ್ನುತ್ತಾರೆ. ಕ್ಯಾನ್ಸರಿನ ಮತ್ತೊಂದು ಆಂಗ್ಲ ಪದ ಟ್ಯೂಮರ್. ಕ್ಯಾನ್ಸರಿನ ಕನ್ನಡ ಪದಗಳು ಗಂಥಿ, ಅರ್ಬುದ ಮತ್ತು ಏಡಿಹುಣ್ಣು.
ಕ್ಯಾನ್ಸರ್ ಬಂತೆಂದರೆ ಮನುಷ್ಯ ಕುಗ್ಗಿಹೋಗುತ್ತಾನೆ. ವೈದ್ಯರು ಚಿಕಿತ್ಸೆ ನೀಡುತ್ತಾರೆ. ರೋಗಿಗಳಲ್ಲಿ ಬದುಕುವ ವಿಶ್ವಾಸವನ್ನೂ ತುಂಬುತ್ತಾರೆ. ಕಾಲನ ಮಹಿಮೆಗೆ ಕ್ಯಾನ್ಸರ್ ಪೀಡಿತರು ಈಡಾಗುತ್ತಾರೆ. ಕೆಲವು ಕ್ಯಾನ್ಸರ್ ಅನ್ನ್ನೂ ಗೆಲ್ಲುತ್ತಾರೆ.
ನನಗಿಂತ ಕಿರಿಯ ಪ್ರಾಧ್ಯಾಪಕರು ಇತ್ತೀಚೆಗೆ ಮರಣವನ್ನಿಪ್ಪಿದರು. ಕ್ಯಾನ್ಸರ್ ಪೀಡಿತರೆಂದು ಗೊತ್ತಾದ ಮೇಲೆ ಒಂದೆರಡು ವರ್ಷ ಬದುಕಿದ್ದರು. ಮೂತ್ರಕೋಶದ ಕ್ಯಾನ್ಸರ್ ದೇಹಕ್ಕೆಲ್ಲಾ ವ್ಯಾಪಿಸಿತ್ತು. ಕ್ಯಾನ್ಸರ್ ಚಿಕಿತ್ಸೆಗೆ ಅವರು ತೆಗೆದುಕೊಂಡ ಮಾತ್ರೆಗಳು ಅವರನ್ನೇ ತಿನ್ನುತ್ತಾ ಸಾಗಿದವು. ದೇಹ ಕೃಶವಾಯಿತು. ಸಾವು ಬಂದೆರಗಿತು. ಆದರೆ, ಕ್ಯಾನ್ಸರ್ ಅನ್ನು ಜಯಸಿ ಬಹುಕಾಲ ಬದುಕಿದವರೂ ಇದ್ದಾರೆ. ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಿದರೆ ಗೆಲುವು ಸಾಧ್ಯ ಎನ್ನುವುದು ಮೆಡಿಕಲ್ ಭಾಷೆಯಾಗಿದೆ. ಗರ್ಭಕೋಶ ಕ್ಯಾನ್ಸರ್ ಪೀಡಿತ ನನ್ನ ಚಿಕ್ಕಮ್ಮನಿಗೆ ಇನ್ನಾರು ತಿಂಗಳು ಮಾತ್ರ ಬದುಕಿರಬಹುದೆಂದು ವೈದ್ಯರು ಹಣೆಬರಹ ಬರೆದರು. ‘‘ನನಗೆ ಯಾವ ಆಪರೇಷನ್ ಬೇಡ, ಇದ್ದಷ್ಟು ಕಾಲ ಬದುಕಿರುತ್ತೇನೆ’’ ಎಂದ ನನ್ನ ಚಿಕ್ಕಮ್ಮ ಆ ನಂತರ ಹತ್ತು ವರ್ಷಗಳ ಕಾಲ ಬದುಕಿದ್ದರು. ಕ್ಯಾನ್ಸರಿನಲ್ಲಿ ಕೆಲವೊಮ್ಮೆ ನಸೀಬೇ ಮೇಲುಗೈ ಪಡೆಯುತ್ತದೆ.
J, Q, X, Z ಆಂಗ್ಲ ಭಾಷೆಯ 26 ಅಕ್ಷರಗಳ ಪೈಕಿ ನಾಲ್ಕು ಅಕ್ಷರಗಳಾದ ಹೊರತುಪಡಿಸಿ ಬೇರೆಲ್ಲಾ ಅಕ್ಷರಗಳಿಂದ ಆರಂಭವಾಗುವ ನೂರಾರು ಬಗೆಯ ಕ್ಯಾನ್ಸರ್ ಖಾಯಿಲೆಗಳಿವೆ. ದೇಹಕೋಶ ಅಥವಾ ಕೋಶಾಂಗಗಳನ್ನು ಆಧರಿಸಿ ಕ್ಯಾನ್ಸರ್ ವಿಧಗಳನ್ನು ಹೆಸರಿಸಲಾಗಿದೆ. ಒಂದಕ್ಕೆ ಹೋಲಿಸಿದರೆ ಮತ್ತೊಂದು ಭಯಾನಕ ಕ್ಯಾನ್ಸರ್. ಬ್ರೈನ್ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್, ಬೋನ್ ಕ್ಯಾನ್ಸರ್, ಈಸೋಪೇಜಿಯಲ್ ಕ್ಯಾನ್ಸರ್, ಲ್ಯೂಕೇಮಿಯಾ, ಕಣ್ಣು ಕ್ಯಾನ್ಸರ್, ಜಠರದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಹೃದಯದ ಕ್ಯಾನ್ಸರ್, ಲಿವರ್ ಕ್ಯಾನ್ಸರ್, ಮೇದೋಜಿರಕ ಗ್ರಂಥಿ ಕ್ಯಾನ್ಸರ್, ಕಿಡ್ನಿ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ರೆಕ್ಟಲ್ ಕ್ಯಾನ್ಸರ್, ಲಿಂಫೋಮಾ, ವೃಷಣ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಹೀಗೆ ಅಸಂಖ್ಯ ಕ್ಯಾನ್ಸರ್ ಬಗೆಗಳಿವೆ. ಕ್ಯಾನ್ಸರ್‌ನಲ್ಲಿ ಕೋಶಗಳು ಬಹುಸಂಖ್ಯಾತಗೊಂಡು ಗಂಥಿಗಳಾಗುತ್ತವೆ ಮತ್ತು ದೇಹದ ಇರ ಭಾಗಗಳಿಗೂ ಹರಡಬಹುದಾಗಿವೆ.
ಕ್ಯಾನ್ಸರ್‌ನ ಪ್ರತಿರಕ್ಷಕ ಚಿಕಿತ್ಸೆಗೆ ಜೇಮ್ಸ್ ಆಲ್ಲಿಸನ್ ಕೊಡುಗೆ
ಬಿಳಿರಕ್ತ ಕಣಗಳಲ್ಲಿ ಟಿ- ಲಿಂಫೋಸೈಟುಗಳಿವೆ. ಇವುಗಳ ಸಾಮಾನ್ಯ ಗುಣವು ದೇಹವನ್ನು ವಿವಿಧ ಸೋಂಕುಗಳಿಂದ ಸೆಲ್ ಮೀಡಿಯೇಟೆಡ್ ಇಮ್ಯೂನಿಟಿ (ಸಿಎಂಐ)ಯ ಮೂಲಕ ರಕ್ಷಿಸುವುದು. ಅವುಗಳ ಕವಚದ ಮೇಲಿನ ಟಿ-ಸೆಲ್ ಆ್ಯಂಟಿಜೆನ್ ಅಂಗೀಕಾರ ಸಂಕೀರ್ಣ ಸಸಾರಜನಕ ಎಂಬ ವಸ್ತುವನ್ನು ಮೊತ್ತಮೊದಲಿಗೆ 1983ರಲ್ಲಿ ಕಂಡುಹಿಡಿದವರು ಇದೇ ಆಲ್ಲಿಸನ್. ಅಲ್ಲಿಂದಾಚೆಗೆ ಕ್ಯಾನ್ಸರ್‌ನಲ್ಲಿ ಆ ಸಸಾರಜನಕ ಆ್ಯಂಟಿಜೆನ್ ಹೇಗೆ ವರ್ತಿಸುತ್ತದೆ ಎಂದು ಚಿಂತಿಸಿದರು. ಅದೇ ಟಿ-ಕೋಶದ ಮೇಲೆ ಸಿಟಿಎಲ್‌ಎ-4 (ಸೈಟೋಟಾಕ್ಸಿಕ್ ಟಿ-ಲಿಂಫೋಸೈಟ್ ಅಸೋಸಿಯೇಟೆಡ್ ಆ್ಯಂಟಿಜೆನ್-4) ಎಂಬ ಮತ್ತೊಂದು ಅಣುವನ್ನು ಪತ್ತೆ ಹಚ್ಚಿದರು. ಅದು ಕ್ಯಾನ್ಸರ್ ಪ್ರಚೋದಕ ವಸ್ತುವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಂಡುಕೊಂಡರು. ಟಿ- ಲಿಂಫೋಸೈಟ್ ಕೋಶಗಳಲ್ಲಿನ ಕಣಗಳ ಕ್ರಿಯಾಪಥಗಳನ್ನು ಪತ್ತೆಹಚ್ಚಿದರು. ಅಂತಹ ಪಥವನ್ನು ತಡೆದರೆ ಕ್ಯಾನ್ಸರ್ ಕೋಶಗಳು ಒಂದಕ್ಕೆ ನೂರಾಗಿ, ನೂರಕ್ಕೆ ಸಾವಿರವಾಗಿ ಮಿಲಿಯನ್‌ಗಟ್ಟಲೆ ಅಧಿಕವಾಗುವುದನ್ನು ತಡೆಯಬಹುದೆಂದು ಯೋಚಿಸಿದರು. ಅದರ ಆಧಾರದ ಮೇಲೆ ಔಷಧಗಳ ಮಾದರಿಗಳನ್ನು ಸ್ಥೂಲವಾಗಿ ಚಿತ್ರಿಸಿಕೊಂಡರು. ಅದನ್ನು ಕ್ಯಾನ್ಸರಿನ ಪ್ರತಿರಕ್ಷಣೆ ತಡೆಬಿಂದು ಚಿಕಿತ್ಸೆ (ಇಮ್ಯೂನ್ ಚೆಕ್‌ಪಾಯಿಂಟ್ ಥೆರಪಿ) ಎಂದು ಕರೆದರು. ಇಪಿಲಿಮುಮಾಬ್ ಎಂಬ ಔಷಧವು ಚಿಕಿತ್ಸೆಗೆ ರೆಡಿಯಾಯಿತು. ಈ ಇಪಿಲಿಮುಮಾಬ್ ಸಿಟಿಎಲ್‌ಎ -4 ರ ಕಾರ್ಯದ ವಿರುದ್ಧವಾಗಿ ಕೆಲಸ ಮಾಡುತ್ತದೆ. ಆ ಮೂಲಕ ಕ್ಯಾನ್ಸರ್ ಬೆಳೆಯುವುದನ್ನು ತಡೆಯುತ್ತದೆ. ಇಪಿಲಿಮುಮಾಬ್ ಅನ್ನು ಮೊನೋಕ್ಲೋನಲ್ ಆ್ಯಂಟಿಬಾಡಿ ಗುಂಪಿಗೆ ಸೇರಿಸಲಾಗಿದೆ. - ಲಿಂಫೋಸೈಟ್‌ಗಳು ಕ್ಯಾನ್ಸರ್ ಕೋಶಗಳನ್ನು ಹೊಸಕಿ ಹಾಕುತ್ತವೆ. ಆದರೆ, ಕ್ಯಾನ್ಸರ್ ಕೋಶಗಳನ್ನು ಹೊಸಕಿ ಹಾಕುವ ಟಿ - ಲಿಂಫೋಸೈಟ್‌ಗಳ ಕ್ರಿಯೆಗೆ ಅಡ್ಡಿಬರುತ್ತಿದ್ದ ಸಿಟಿಎಲ್‌ಎ - 4 ಎಂಬ ಅಣುವನ್ನು ಅದುಮಿಡಲು ಇಪಿಲಿಮುಮಾಬ್ ಎಂಬ ಔಷಧವನ್ನು ರೂಪಿಸಲಾಗಿದೆ. ಇಪಿಲಿಮುಮಾಬ್ ಔಷಧವು ಟಿ - ಲಿಂಫೋಸೈಟ್‌ಗಳು ಕ್ಯಾನ್ಸರ್ ಕೋಶಗಳನ್ನು ಹೊಸಕಿ ಹಾಕುವ ಕಾರ್ಯವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಆಗ ಕ್ಯಾನ್ಸರನ್ನು ಹದ್ದುಬಸ್ತಿನಲ್ಲಿಡಬಹುದು. 2011ರಲ್ಲಿ ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೆೇಶನ್ ಇಲಾಖೆಯು ಇಪಿಲಿಮುಮಾಬ್ ಔಷಧವನ್ನು ಚರ್ಮ ಕ್ಯಾನ್ಸರಿನ ನಾಲ್ಕನೇ ಹಂತದಲ್ಲಿ ಬಳಸಲು ಅನುಮತಿ ನೀಡಿದೆ. ಚಿಕಿತ್ಸೆಯ ವೆಚ್ಚ 1,20,000 ಡಾಲರ್‌ಗಳು ಅಥವಾ ಸುಮಾರು 84 ಲಕ್ಷ ರೂಪಾಯಿಗಳು. ಇದೇ ಔಷಧವನ್ನು ಶ್ವಾಸಕೋಶದ ಕ್ಯಾನ್ಸರ್, ಮೂತ್ರಚೀಲದ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲು ಕ್ಲಿನಿಕಲ್ ಪರೀಕ್ಷೆಗಳು ನಡೆಯುತ್ತಿವೆ. ಮುಂದೊಂದು ದಿನ ಕ್ಯಾನ್ಸರ್ ಚಿಕಿತ್ಸೆ ಪರಿಣಾಮಕಾರಿಯೂ, ಕೈಗೆಟಕುವ ಖರ್ಚಿನ್ದೂ ಆಗಬಹುದೆಂಬ ಆಶಾಭಾವನೆಯಿದೆ.
ಆಲ್ಲಿಸನ್‌ರಿಂದ ಕ್ಯಾನ್ಸರ್ ಸಂಶೋಧನಾ ಕ್ಷೇತ್ರದ ಆಯ್ಕೆಗೆ ಕಾರಣಗಳು
ಅವರು ಹನ್ನೊಂದು ವರ್ಷದವರಿದ್ದಾಗ ಅವರ ತಾಯಿಯು ಲಿಂಫೋಮಾ ಎಂಬ ಕ್ಯಾನ್ಸರಿನಿಂದ ಮರಣವನ್ನಪ್ಪಿದರು. ಅವರ ಸಹೋದರ 2005ರಲ್ಲಿ ಪ್ರಾಸ್ಟೇಟ್ ಕ್ಯಾನ್ಸರಿನಿಂದ ತೀರಿಕೊಂಡರು. ಅವರ ಕುಟುಂಬದ ಸಾವುಗಳು ಅವರನ್ನು ಕ್ಯಾನ್ಸರ್ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿವೆ. ಅಂತಿಮವಾಗಿ ಅವರು 2018ರ ಫಿಸಿಯಾಲಜಿ ಅಥವಾ ಮೆಡಿಸಿನ್ ವಿಷಯದ ನೊಬೆಲ್ ಪಾರಿತೋಷಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಬಹುಮಾನ ವಿತರಣೆಯು ಡಿಸೆಂಬರ್ 10ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯಲಿದೆ. ಆಲ್ಲಿಸನ್ ಅವರ ಪತ್ನಿ ಪ್ರೊಫೆಸರ್ ಪದ್ಮನೀ ಶರ್ಮಾ ಕೂಡ ಇದೇ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಭಾರತೀಯ ಮೂಲದವರು. ಬ್ರಿಟಿಷರಿಂದ, 1838ರ ಸುಮಾರಿಗೆ ಪದ್ಮನೀ ಶರ್ಮಾ ಅವರ ಪೂರ್ವಿಕರು ಕೆರೇಬಿಯನ್‌ನ ಕಬ್ಬಿನ ಗದ್ದೆಗಳಲ್ಲಿ ಕೂಲಿಯಾಳುಗಳಾಗಿ ಕೆಲಸ ಮಾಡಲು ಭಾರತದಿಂದ ಅಪಹರಣಕ್ಕೊಳಗಾಗಿ ಒತ್ತಾಯದ ವಲಸೆಗೆ ಒಳಪಟ್ಟವರು. ಗುಲಾಮರಾಗಿ ಬದುಕಿದವರು. ಪದ್ಮನೀ ಶರ್ಮಾ ಕಡುಬಡತನದಲ್ಲಿ ಬೆಳೆದವರು. 10 ವರ್ಷದವರಾಗಿದ್ದಾಗ ಗಯಾನದಿಂದ ನ್ಯೂಯಾರ್ಕಿಗೆ 1980ರಲ್ಲಿ ಕುಟುಂಬಸಮೇತ ದೇಶಾಂತರವಾದವರು.
ಕ್ಯಾನ್ಸರ್ ವಿರುದ್ಧ ಜಪಾನಿನ ತಸುಕು ಹೊಂಜೋ ಸಂಶೋಧನೆ
ತಸುಕು ಹೋಂಜೋ ಅವರು ಪ್ರೋಗ್ರಾಮ್ಡ್ ಸೆಲ್ ಡೆತ್ ಪ್ರೊಟೀನ್ -1 (ಪಿಡಿ-1) ಅನ್ನು ಕಂಡುಹಿಡಿದರು. ಈ ಪ್ರೊಗ್ರಾಮ್ಡ್ ಸೆಲ್ ಡೆತ್ ಅನ್ನು ಅಪಾಪ್ಟೋಸಿಸ್/ಅಪಟೋಸಿಸ್ ಎಂದೂ ಕರೆಯಲಾಗಿದೆ. ಜತೆಗೆ ಆಲ್ಲಿಸನ್ ಅವರ ಸಂಶೋಧನೆಯಂತೆ, ಟಿ-ಕೋಶದ ಮೇಲಿನ ಸಿಟಿಎಲ್‌ಎ-4 ಎಂಬ ಅಣುವಿನ ಕ್ಯಾನ್ಸರ್ ಪ್ರಚೋದಕ ಕಾರ್ಯ ಮತ್ತು ಅದನ್ನು ನಿಗ್ರಹಿಸುವ ದಾರಿಗಳ ಕುರಿತು ಹೋಂಜೋ ಸಂಶೋಧಿಸಿದರು. ತಮ್ಮ ಸಹಪಾಠಿಯೊಬ್ಬ ಜಠರದ ಕ್ಯಾನ್ಸರಿನಿಂದ ಮೃತಪಟ್ಟಿದ್ದಕ್ಕೆ ಮರುಗಿ ಕ್ಯಾನ್ಸರ್ ಸಂಶೋಧನೆ ಕೈಗೊಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ
ಆಲ್ಲಿಸನ್ (70 ವರ್ಷ) ಮತ್ತು ಹೋಂಜೋ (76 ವರ್ಷ) ಅವರು ನೊಬೆಲ್ ಬಹುಮಾನದ ಮೊತ್ತವಾದ 1.01 ಮಿಲಿಯನ್ ಡಾಲರ್‌ಗಳನ್ನು ಹಂಚಿಕೊಳ್ಳಲಿದ್ದಾರೆ. ಪ್ರತಿಯೊಬ್ಬರೂ ಸುಮಾರು 3 ಕೋಟಿ 70 ಲಕ್ಷ ರೂಪಾಯಿಗಳನ್ನು ಪಡೆಯಲಿದ್ದಾರೆ. ಆಲ್ಲಿಸನ್ ಅವರು ತಮ್ಮ ಚಿಕಿತ್ಸಾ ಕ್ರಮದಿಂದ ಗುಣಮುಖರಾದವರನ್ನು ಭೇಟಿಮಾಡಿ ಸಂತೋಷವನ್ನು ಹಂಚಿಕೊಳ್ಳಲು ಬಯಸಿದ್ದಾರೆ. ಹೊಂಜೋ ಅವರು ಇದೇ ಸಂಶೋಧನೆಯಲ್ಲಿ ಇನ್ನಷ್ಟು ಸಾಧನೆ ಮಾಡಿ ಕ್ಯಾನ್ಸರ್ ರೋಗಿಗಳು ಗುಣಮುಖರಾಗಲು ಶ್ರಮಿಸುವುದಾಗಿ ಹೇಳಿದ್ದಾರೆ. ಅವರಿಬ್ಬರ ಸಂಶೋಧನೆಯ ಅರಿವು ವೈದ್ಯಕೀಯ, ದಂತವೈದ್ಯಕೀಯ, ಹೋಮಿಯೋಪತಿ, ಆಯುರ್ವೇದ, ಪಶುವೈದ್ಯಕೀಯ ಮತ್ತು ವಿಜ್ಞಾನ ವಿಷಯಗಳ ವಿದ್ಯಾರ್ಥಿಗಳಿಗೆ, ವೈದ್ಯರಿಗೆ, ಸಾರ್ವಜನಿಕರಿಗೆ ಇರಬೇಕು. ಅವರಿಗೆ ಎಲ್ಲಾ ಜೀವಸಂಕುಲಗಳ ಪ್ರಣಾಮಗಳು ಸಲ್ಲಲೇಬೇಕು.