ಭೀಮಾ ಕೋರೆಗಾಂವ್: ಸ್ಮಾರಕವೊಂದರ ಕುರಿತಾದ ವಿವಾದದ ಹಿಂದೆ...
ವಧುವಿನ ನಿವಾಸಿ ಪ್ರಹ್ಲಾದ್ ಗಾಯಕ್ವಾಡ್ ಆಯೋಗದ ಎದುರು ಹಾಜರಾಗಿದ್ದ. ಈತ ಸಂಭಾಜಿ ಮಹಾರಾಜರ ಅಂತ್ಯಕ್ರಿಯೆಯನ್ನು ನಡೆಸಿದವರೆನ್ನಲಾದ ಗೋವಿಂದ ಗಾಯಕ್ವಾಡ್ನ 10ನೇ ತಲೆಮಾರಿನವ. ವಧುವಿನಲ್ಲಿ ಗೋವಿಂದ್ ಗಾಯಕ್ವಾಡ್ನ ಒಂದು ಸ್ಮಾರಕವಿದೆ. ಭೀಮಾ ಕೋರೆಗಾಂವ್ಗೆ ಬರುವ ಹಲವರು ಈ ಸ್ಮಾರಕಕ್ಕೂ ಭೇಟಿ ನೀಡುತ್ತಾರೆ. ಭೀಮಾ ಕೋರೆಗಾಂವ್ನಲ್ಲಿ ಹಿಂಸೆ ಭುಗಿಲೇಳುವ ಕೆಲವು ದಿನಗಳ ಮೊದಲು ಡಿಸೆಂಬರ್ 29ರಂದು ಈ ಸ್ಮಾರಕವನ್ನು ಹಾಳುಗೆಡವಲಾಯಿತು. ಈ ಸ್ಮಾರಕದ ಕುರಿತಾದ ಒಂದು ವಿವಾದ ಮತ್ತು ಗೋವಿಂದ ಗಾಯಕ್ವಾಡ್ನ ಬಗ್ಗೆ ಹಾಕಲಾದ ಒಂದು ಭಿತ್ತಿಪತ್ರ ಜನವರಿ 1ರಂದು ನಡೆದ ಹಿಂಸೆಗೆ ಕಾರಣವಾಯಿತು.
ಜನವರಿ 1ರಂದು ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಹಳ್ಳಿಯಲ್ಲಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದ ಜಾತಿ ಹಿಂಸೆಗೆ ಕಾರಣವಾದ ಘಟನೆಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾಯಾಂಗ ಆಯೋಗದ ಮೂರನೇ ಸುತ್ತಿನ ವಿಚಾರಣೆಗಳು ಈಚೆಗೆ ಪೂನಾದಲ್ಲಿ ಮುಕ್ತಾಯಗೊಂಡವು. ಮಹಾರಾಷ್ಟ್ರ ಸರಕಾರ ಫೆಬ್ರವರಿ ತಿಂಗಳಲ್ಲಿ ಆಯೋಗವನ್ನು ರಚಿಸಿತ್ತು.
ಪೂನಾದಿಂದ 30 ಕಿ.ಮೀ. ದೂರದಲ್ಲಿರುವ ಭೀಮಾ ಕೋರೆಗಾಂವ್ ಹಳ್ಳಿಯಲ್ಲಿ ಒಂದು ಕದನದ 200ನೇ ವಾರ್ಷಿಕ ದಿನಾಚರಣೆಯಂದು ಜಾತಿ ಹಿಂಸೆ ಸ್ಫೋಟಗೊಂಡಿತ್ತು. ಅಂದು ನಡೆದ ಆ ಕದನದಲ್ಲಿ, ಬ್ರಿಟಿಷರ ಸೇನೆಯಲ್ಲಿದ್ದ ಮಹಾರ್ ಸೈನಿಕರ ಒಂದು ಚಿಕ್ಕ ಗುಂಪು ಸಂಖ್ಯಾ ದೃಷ್ಟಿಯಿಂದ ಹೆಚ್ಚು ಇದ್ದ ಬ್ರಾಹ್ಮಣ ಪೇಶ್ವೆಗಳನ್ನು ಸೋಲಿಸಿತ್ತು. ಆ ಪೇಶ್ವೆಗಳು ಸಮಾಜದಲ್ಲಿ ಅಸ್ಪಶ್ಯತೆಯನ್ನು ಹೇರುವುದಕ್ಕೆ ಕುಖ್ಯಾತರಾಗಿದ್ದರು. ಜಾತಿ ಆಧಾರಿತ ದಮನದ ವಿರುದ್ಧ ಇಂದಿಗೂ ಮುಂದುವರಿದಿರುವ ತನ್ನ ಹೋರಾಟದಲ್ಲಿ ಆ ಕದನ ಒಂದು ಪ್ರಮುಖ ಹೆಜ್ಜೆ ಎಂದು ಮಹಾರರು ಮತ್ತು ಇತರ ದಲಿತರು ಪರಿಗಣಿಸುತ್ತಾರೆ. ಪ್ರತಿ ಹೊಸ ವರ್ಷಾಚರಣೆಯಂದು ಈ ವಿಜಯವನ್ನು ಆಚರಿಸಲು ಅಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ನೆರೆಯುತ್ತಾರೆ.
ಒಂದು ಸ್ಮಾರಕದ ಸಂಗತಿ
ನಿವೃತ್ತ ನ್ಯಾಯಮೂರ್ತಿ ಜೆ. ಎನ್. ಪಟೇಲ್ ಅಧ್ಯಕ್ಷರಾಗಿರುವ ಮತ್ತು ಸಮಿತ್ ಮಲ್ಲಿಕ್ ಸದಸ್ಯರಾಗಿರುವ ವಿಚಾರಣಾ ಆಯೋಗವು ಸೆಪ್ಟಂಬರ್ 5ರಂದು ಮುಂಬೈಯಲ್ಲಿ ತನ್ನ ಮೊದಲ ಸುತ್ತಿನ ಬೈಠಕ್ ಆರಂಭಿಸಿದಂದಿನಿಂದ ನಾಲ್ಕು ಮಂದಿ ಸಾಕ್ಷಿಗಳ ವಿಚಾರಣೆಯನ್ನು ಇದೀಗ ಮುಗಿಸಿದೆ. ಓರ್ವ ಸಾಕ್ಷಿಯ ವಿಚಾರಣೆ ಮುಗಿದು, ಇನ್ನು ಮೂವರ ವಿಚಾರಣೆ ಆರಂಭವಾಗಿರುವ ಪೂನಾದಲ್ಲಿ ಇತಿಹಾಸದ ತದ್ವಿರುದ್ಧ ಆವೃತ್ತಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಾಗಿದೆ.
ಆಯೋಗವು ಎರಡು ದಿನಗಳ ಕಾಲ, ಹವ್ಯಾಸಿ ಪತ್ರಕರ್ತ ಹಾಗೂ ಇತಿಹಾಸ ಉತ್ಸಾಹಿ ಚಂದ್ರಕಾಂತ್ ಪಾಟೀಲ್ರವರ ಹೇಳಿಕೆಗಳನ್ನು ಆಲಿಸಿದ ಬಳಿಕ, ತನ್ನ ಗಮನವನ್ನು ಭೀಮಾ ಕೋರೆಗಾಂವ್ನಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ವರ್ಧಯ ಎಂಬ ಹಳ್ಳಿಯಲ್ಲಿ ನಡೆದ ಘಟನೆಗಳ ಕಡೆಗೆ ಹೊರಳಿಸಿತು. ಜನವರಿ 1ರಂದು ನಡೆದ ಬೃಹತ್ ಪ್ರಮಾಣದ ಹಿಂಸೆಗೆ ಈ ಹಳ್ಳಿಯಲ್ಲಿ ಹಾರಿದ ಕಿಡಿ ಕಾರಣವಾಗಿತ್ತು.
ಶಿವಾಜಿ ಮಹಾರಾಜನ ಉತ್ತರಾಧಿಕಾರಿಯಾಗಿ ಮರಾಠಾ ಸಾಮ್ರಾಜ್ಯವನ್ನು ಆಳಿದ ಸಂಭಾಜಿ ಮಹಾರಾಜನ ಸಮಾಧಿ ವಧುವಿನಲ್ಲಿದೆ. ಮರಾಠರು ಮತ್ತು ಮಹಾರರು ಎರಡೂ ಸಮುದಾಯಗಳ ಜನರು ತಾವೇ ಆತನ ಅಂತ್ಯಸಂಸ್ಕಾರ ನೆರವೇರಿಸಿದರು ಎನ್ನುತ್ತಾರೆ. 1689ರಲ್ಲಿ ಔರಂಗಜೇಬನ ಆಜ್ಞಾನುಸಾರ ಆತನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು ಎಂಬ ಆರೋಪವಿದೆ.
ವಧುವಿನ ನಿವಾಸಿ ಪ್ರಹ್ಲಾದ್ ಗಾಯಕ್ವಾಡ್ ಆಯೋಗದ ಎದುರು ಹಾಜರಾಗಿದ್ದ. ಈತ ಸಂಭಾಜಿ ಮಹಾರಾಜರ ಅಂತ್ಯಕ್ರಿಯೆಯನ್ನು ನಡೆಸಿದವರೆನ್ನಲಾದ ಗೋವಿಂದ ಗಾಯಕ್ವಾಡ್ನ 10ನೇ ತಲೆಮಾರಿನವ. ವಧುವಿನಲ್ಲಿ ಗೋವಿಂದ್ ಗಾಯಕ್ವಾಡ್ನ ಒಂದು ಸ್ಮಾರಕವಿದೆ. ಭೀಮಾ ಕೋರೆಗಾಂವ್ಗೆ ಬರುವ ಹಲವರು ಈ ಸ್ಮಾರಕಕ್ಕೂ ಭೇಟಿ ನೀಡುತ್ತಾರೆ. ಭೀಮಾ ಕೋರೆಗಾಂವ್ನಲ್ಲಿ ಹಿಂಸೆ ಭುಗಿಲೇಳುವ ಕೆಲವು ದಿನಗಳ ಮೊದಲು ಡಿಸೆಂಬರ್ 29ರಂದು ಈ ಸ್ಮಾರಕವನ್ನು ಹಾಳುಗೆಡವಲಾಯಿತು. ಈ ಸ್ಮಾರಕದ ಕುರಿತಾದ ಒಂದು ವಿವಾದ ಮತ್ತು ಗೋವಿಂದ ಗಾಯಕ್ವಾಡ್ನ ಬಗ್ಗೆ ಹಾಕಲಾದ ಒಂದು ಭಿತ್ತಿಪತ್ರ ಜನವರಿ 1ರಂದು ನಡೆದ ಹಿಂಸೆಗೆ ಕಾರಣವಾಯಿತು.
ಇತಿಹಾಸದ ಪ್ರತಿಸ್ಪರ್ಧೆ
ಆಯೋಗದ ಮುಂದೆ ಹಾಜರಾದ ಪ್ರಹ್ಲಾದ್ ಗಾಯಕ್ವಾಡ್ನ ಹೇಳಿಕೆಯ ಪ್ರಕಾರ, ವಧು ಗ್ರಾಮದ ಸರಪಂಚ ರೇಖಾ ಶಿವಾಲೆ ತಾನು ಮೇ ತಿಂಗಳಲ್ಲಿ ನೀಡಿದ ಒಂದು ಅಫಿದಾವಿತ್ನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ತನ್ನ ಜಮೀನಿನಲ್ಲಿ ಗೋವಿಂದ ಗಾಯಕ್ವಾಡ್ನ ಸ್ಮರಣಾರ್ಥ ನಿರ್ಮಿಸಿದ ಸ್ಮಾರಕ ಇಲ್ಲವೆಂದು ವಾದಿಸಲು ಆತ ತನ್ನ ಅಫಿದಾವಿತ್ನ್ನು ಬಳಸಿಕೊಂಡಿದ್ದಾನೆ.
ಪ್ರಹ್ಲಾದ್ ಗಾಯಕ್ವಾಡ್ ಪ್ರಕಾರ, ಹಳ್ಳಿಯ ಜಮೀನುಗಳ ದಾಖಲೆಗಳಲ್ಲಿ ತನ್ನ ಹೆಸರನ್ನು ಸೇರಿಸುವಂತೆ ಆತ ಮೇ ತಿಂಗಳಲ್ಲಿ ಗ್ರಾಮ ಪಂಚಾಯತ್ಗೆ ಒಂದು ಅರ್ಜಿ ಸಲ್ಲಿಸಿದ್ದ. 1997ರಲ್ಲಿ ಬಂದ ಒಂದು ನೆರೆಯಿಂದಾಗಿ ತನ್ನ ಪೂರ್ವಿಕರ ಮನೆಗೆ ಹಾನಿಯಾಗಿದೆ ಎಂದು ಘೋಷಿಸಿ ಒಂದು ಅಫಿದಾವಿತ್ ಸಲ್ಲಿಸುವಂತೆ ಹಳ್ಳಿಯ ಮಾಜಿ ಉಪಸರಪಂಚ ತನ್ನೊಡನೆ ಹೇಳಿದ್ದ. ಆದರೆ ತನ್ನ ಜಮೀನಿನಲ್ಲಿ ಯಾವುದೇ ಅತಿಕ್ರಮಣಗಳು ಆಗಿಲ್ಲವೆಂದು ಹೇಳಿಕೆ ನೀಡಿರುವ ಹಾಗೆ ತನ್ನ ಅಫಿದಾವಿತ್ನ್ನು ಬದಲಾಯಿಸಲಾಯಿತು. ಅಂದರೆ ಅಲ್ಲಿ (ತನ್ನ ಜಮೀನಿನಲ್ಲಿ) ಗೋವಿಂದ ಗಾಯಕ್ವಾಡ್ನ ಸ್ಮಾರಕವೂ ಇಲ್ಲವೆಂದು ಅರ್ಥ ಬರುವಂತೆ ಅಫಿದಾವಿತ್ನ್ನು ತಿದ್ದಲಾಗಿದೆ. ಬಳಿಕ, ತನ್ನ ಒಪ್ಪಿಗೆ ಪಡೆಯದೆ ಅದನ್ನು ವಿಚಾರಣಾ ಆಯೋಗಕ್ಕೆ ಸಲ್ಲಿಸಲಾಯಿತು. ಆ ಮೂಲಕ, ತನ್ನ ಜಮೀನಿನಲ್ಲಿ ಯಾವುದೇ ಸ್ಮಾರಕ ಇರಲಿಲ್ಲವೆಂದು ವಾದಿಸುವ ರೇಖಾ ಶಿವಾಲೆಯ ವಾದಕ್ಕೆ ಸಮರ್ಥನೆ ಸಿಗುವಂತೆ ಮಾಡಲಾಯಿತು.
ಆದರೆ ಗ್ರಾಮ ಪಂಚಾಯತ್ನ ಸದಸ್ಯರು ಮತ್ತು ಶಿವಾಲೆ, ರಾಜಕೀಯ ಒತ್ತಡಕ್ಕೊಳಗಾಗಿ ಪ್ರಹ್ಲಾದ್ ಗಾಯಕ್ವಾಡ್ ತನ್ನ ಹೇಳಿಕೆಯನ್ನು ಬದಲಿಸಿದ್ದಾರೆ ಎಂದು ಹೇಳಿದ್ದಾರೆ.
ಇತರ ಪ್ರತಿವಾದಗಳು
ಆಯೋಗದ ವಿಚಾರಣೆಯಲ್ಲಿ, ಗೋವಿಂದ ಗಾಯಕ್ವಾಡ್ ಇತಿಹಾಸದ ಕುರಿತಾಗಿ ಹಳ್ಳಿಯಲ್ಲಿ ಹಾಕಲಾಗಿದ್ದ ಒಂದು ಭಿತ್ತಿಪತ್ರ ಕೂಡಾ ಒಂದು ಪ್ರಮುಖ ವಿಷಯವಾಯಿತು. ಬ್ಯಾನರನ್ನು ಹರಿದು ಹಾಕಿದ್ದಾರೆಂದು ಆಪಾದಿಸಲಾಗಿ ಡಿಸೆಂಬರ್ 27ರಂದು ಬಂಧಿಸಲ್ಪಟ್ಟವರಲ್ಲೊಬ್ಬನಾದ ವಧುವಿನ ನಿವಾಸಿ ಶರದ್ ದಭಾಡೆ ಆಯೋಗದ ಮುಂದೆ ಹಾಜರಾಗಿ ಹೇಳಿಕೆ ನೀಡಿದ. ದಲಿತ ದೌರ್ಜನ್ಯ ತಡೆ ಕಾಯ್ದೆಯ ಪ್ರಕಾರ ಆತನ ಮೇಲೆ ಮೊಕದ್ದಮೆ ಹೂಡಲಾಗಿದೆ ಮತ್ತು ಈಗ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಸ್ಮಾರಕಕ್ಕೆ ತಾಗಿಕೊಂಡಿರುವ ಶಾಲೆಯೊಂದರ ಹಿಂಭಾಗದಲ್ಲಿ ವಾಸಿಸುತ್ತಿರುವ ದಭಾಡೆ ತನ್ನ ಹೇಳಿಕೆಯಲ್ಲಿ ಹೀಗೆ ಹೇಳಿದ್ದಾನೆ, ‘‘ಡಿಸೆಂಬರ್ 28ರಂದು ಭಿತ್ತಿಪತ್ರವಿರುವ ಫಲಕ ಹಾಕುವುದನ್ನು ನಾನು ನೋಡಿದೆ. ಆದರೆ ಅದೇನೆಂದು ಗಮನಿಸಲು ನಾನು ಅಲ್ಲಿ ನಿಲ್ಲಲಿಲ್ಲ. ಡಿಸೆಂಬರ್ 29ರಂದು, ಆ ನಿವೇಶನದಲ್ಲಿ ಸುಮಾರು 1,200 ಮಂದಿ ನೆರೆದಿರುವುದನ್ನು ತಾನು ನೋಡಿದೆ. ನಾನು ಅಲ್ಲಿಗೆ ಹೋಗಿ ನೋಡಿದಾಗ ಭಿತ್ತಿಪತ್ರವನ್ನು ಹರಿದು ಹಾಕಲಾಗಿತ್ತು. ಆ ಗುಂಪಿನಲ್ಲಿದ್ದ, ಸುಮಾರು 20 ಮಂದಿ, ಗಾಯಕ್ವಾಡ್ ಕುಟುಂಬಕ್ಕೆ ಸೇರಿದವರಾಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ನನ್ನ ಕಾರ್ಯನಿಮಿತ್ತ ಓರ್ವ ಉಪನೋಂದಣಿ ಅಧಿಕಾರಿಯಾಗಿ ನಾನು ಪಕ್ಕದ ಹಳ್ಳಿಯೊಂದಕ್ಕೆ ಹೋದೆ.’’
ದಭಾಡೆ ಹೇಳುವ ಪ್ರಕಾರ ಫಲಕವನ್ನು ಹರಿದು ಹಾಕಿದ ಬಳಿಕವಷ್ಟೇ ಆತ ಅದನ್ನು ಓದಿದ. ಓದಿದಾಗ ಅದರಲ್ಲಿರುವ ಮಾಹಿತಿ ಸುಳ್ಳು ಎಂದು ಅವನಿಗೆ ಗೊತ್ತಾಯಿತು. ಅವನ ಬಾಲ್ಯದಿಂದ ಅವನು ಕೇಳಿಸಿಕೊಳ್ಳುತ್ತ ಬಂದ ಕತೆಯ ಪ್ರಕಾರ ಇಬ್ಬರು ಮರಾಠಾ ವ್ಯಕ್ತಿಗಳು, ಬಾಪು ಬುವಾ ಮತ್ತು ಅವನ ಮಡದಿ ಪದ್ಮಾವತಿ, ಪದಚ್ಯುತಗೊಳಿಸಲ್ಪಟ್ಟ ದೊರೆಯ ಅಂತಿಮ ಸಂಸ್ಕಾರ ನೆರವೇರಿಸಿದ್ದರು. ದೊರೆಯ ಸ್ಮಾರಕದ ಮೇಲೆ ಅವರ ಎದೆಯ ಮಟ್ಟದ ಮೂರ್ತಿಗಳಿವೆ. ದಭಾಡೆ ಹೇಳುವಂತೆ ಗೋವಿಂದ ಗಾಯಕ್ವಾಡ್ ಸ್ಮಾರಕವನ್ನು ಕೇವಲ ಸುಮಾರು ಮೂರು ವರ್ಷಗಳ ಹಿಂದಷ್ಟೇ ನಿರ್ಮಿಸಲಾಯಿತು. ದಭಾಡೆಗೆ ಈ ವಿವಾದದ ಕುರಿತು ತಿಳಿದದ್ದು ಕೂಡಾ ಆವಾಗಲೇ.
ಜನವರಿ 1ರಂದು ನಡೆದ ಹಿಂಸೆಯ ಪ್ರತ್ಯಕ್ಷದರ್ಶಿಗಳು ಮತ್ತು ಸಂತ್ರಸ್ತರ ಪರವಾಗಿ ವಾದಿಸುತ್ತಿರುವ ವಕೀಲರು ಪಾಟೀ ಸವಾಲು ನಡೆಸಿದಾಗ ಹಳ್ಳಿಯಲ್ಲಿ ನಡೆಯುವ, ನಡೆದ ಎಲ್ಲ ಘಟನೆಗಳ ಬಗ್ಗೆ ತನಗೆ ಸಂಪೂರ್ಣವಾಗಿ ತಿಳಿದಿಲ್ಲ. ತನಗೆ ತಿಳಿದಿರುವುದು ಅಲ್ಪಸ್ವಲ್ಪ ಮಾತ್ರ ಎಂದು ದಭಾಡೆ ಒಪ್ಪಿಕೊಂಡ. ಆತನ ಕುಟುಂಬ ಆ ಹಳ್ಳಿಯಲ್ಲಿ ಸುಮಾರು ತಲೆಮಾರುಗಳಿಂದ ವಾಸಿಸುತ್ತಿದೆಯಾದರೂ, ವಧಿಸಲ್ಪಟ್ಟ ದೊರೆಯ ಗೌರವಾರ್ಥವಾಗಿ ಅಲ್ಲಿಯ ದಲಿತ ನಿವಾಸಿಗಳು ಪ್ರತಿವರ್ಷ ಭಿತ್ತಿಪತ್ರಗಳನ್ನು, ಬ್ಯಾನರ್ಗಳನ್ನು ಕಟ್ಟುತ್ತಾರೆ ಎಂಬುದು ತನಗೆ ಗೊತ್ತಿಲ್ಲ ಎಂದು ಆತ ಹೇಳಿದ. ಇಷ್ಟೇ ಅಲ್ಲದೆ, ತನ್ನ ಹಳ್ಳಿಯಲ್ಲಿ ಯಾವುದೇ ಅಂಬೇಡ್ಕರ್ ಜಯಂತಿ ಸಮಾರಂಭಗಳನ್ನು ನಡೆಸಲಾಗುತ್ತದೆ ಎಂಬುದು ಕೂಡ ತನಗೆ ಗೊತ್ತಿಲ್ಲ ಎಂದು ಆತ ಹೇಳಿದ.
ಇತರ ಪ್ರತ್ಯಕ್ಷದರ್ಶಿಗಳ ವಿಚಾರಣೆ
ವಿಚಾರಣಾ ಆಯೋಗವು ವಧುವಿನಿಂದ ಆಗಮಿಸಿದ ಇತರ ಇಬ್ಬರು ಪ್ರತ್ಯಕ್ಷದರ್ಶಿಗಳ ಪ್ರಮುಖ ಸಾಕ್ಷಿಯನ್ನು ಕೂಡ ದಾಖಲಿಸಿಕೊಂಡಿತು. ಆದರೆ ಈ ಪ್ರತ್ಯಕ್ಷದರ್ಶಿಗಳ ಪಾಟೀ ಸವಾಲು ಪೂನಾದಲ್ಲಿ ನಡೆಯುವ ವಿಚಾರಣಾ ಆಯೋಗದ ಮುಂದಿನ ಬೈಠಕ್ನಲ್ಲಿ ನಡೆಯಲಿದೆ.
ವಿಚಾರಣಾ ಆಯೋಗದ ಪರವಾಗಿ ವಾದಿಸುತ್ತಿರುವ ನ್ಯಾಯವಾದಿ ಆಶೀಶ್ ಸತ್ಪುತೆ ಹೇಳುತ್ತಾರೆ, ‘‘ಪೂನಾದಲ್ಲಿ, ನಾವು ತಳಮಟ್ಟದಲ್ಲಿ ನಡೆದ ಘಟನೆಗಳನ್ನು ಅವುಗಳು ನಡೆದ ಸರದಿಯ ಪ್ರಕಾರವೇ ದಾಖಲಿಸಿಕೊಳ್ಳಲಿದ್ದೇವೆ. ಮೊದಲು ನಾವು ಹಳ್ಳಿಯ ಇತಿಹಾಸ ಮತ್ತು ಹಳ್ಳಿಯ ವಾಸ್ತವಿಕ ಸ್ಥಿತಿ ಏನೆಂಬುದನ್ನು ದೃಢಪಡಿಸಿಕೊಳ್ಳುತ್ತೇವೆ. ಆ ಬಳಿಕ ಮುಂದಿನ ಯಾದಿಯಲ್ಲಿ ಕೋರೆಗಾಂವ್ ಭೀಮಾದ ಜನರನ್ನು, ಪ್ರತ್ಯಕ್ಷದರ್ಶಿಗಳನ್ನು ಕರೆಸುತ್ತೇವೆ’’. ‘ಕೋರೆಗಾಂವ್ ಭೀಮಾ’ ಎಂಬುದು ಜನಗಣತಿಯಲ್ಲಿ ಹಳ್ಳಿಯನ್ನು ಉಲ್ಲೇಖಿಸಲಾಗಿರುವ ಹೆಸರು. ಜನರ ಬಾಯಿಯಲ್ಲಿ ಅದು ‘ಭೀಮಾ ಕೋರೆಗಾಂವ್’ ಎಂದೇ ಕರೆಯಲ್ಪಡುತ್ತಿದೆ.
ಪೂನಾಕ್ಕೆ ಕರೆಯಲ್ಪಟ್ಟ 17 ಮಂದಿ ಸಾಕ್ಷಿಗಳಲ್ಲಿ ಓರ್ವ ಸಾಗರ್ ಗೌಹಾನೆ. ಕೋರೆಗಾಂವ್ ಭೀಮಾದಲ್ಲಿ ಈತ ಒಬ್ಬ ಗುಮಾಸ್ತ. ಈತ ವಿಚಾರಣಾ ಆಯೋಗಕ್ಕೆ ಸಲ್ಲಿಸಿದ ಅಫಿದಾವಿತ್ ಮಾಧ್ಯಮ ಸಂಸ್ಥೆಯೊಂದಕ್ಕೆ ದೊರಕಿದೆ. ಸಾಕ್ಷಿ ನುಡಿಯಲು ಈತನನ್ನು ಕರೆಸುವ ಮೊದಲೇ ವಿಚಾರಣಾ ಆಯೋಗದ ನಿಗದಿತ ಸಮಯ ಮೀರಿತ್ತು. ಅದೇನಿದ್ದರೂ ಗೌಹಾನೆಯ ಅಫಿಡವಿಟ್ ಹೇಳುವಂತೆ, ಜನವರಿ 1ರಂದು ಭೀಮಾ ಕೋರೆಗಾಂವ್ನಲ್ಲಿ ಬಂದ್ಗೆ ಕರೆ ನೀಡುವಂತೆ ಒಂದು ಸುಳ್ಳು ಕರೆಯನ್ನು ಟೈಪ್ ಮಾಡುವಂತೆ ಆತನಿಗೆ ಹೇಳಲಾಯಿತು.
ಹೀಗೆ ಆತನಿಗೆ ಹೇಳಿದ ವ್ಯಕ್ತಿ ಭೀಮಾ ಕೋರೆಗಾಂವ್ ಹಳ್ಳಿಯ ಮಾಜಿ ಉಪಸರಪಂಚ ಗಣೇಶ್ ಫಡ್ತರೆ. ಅಂದು ಗ್ರಾಮ ಪಂಚಾಯತ್ನ ಸಭೆ ಕರೆದೇ ಇರಲಿಲ್ಲ. ಆದರೂ ಸಭೆಯಲ್ಲಿ ನಿರ್ಣಯಿಸಲಾದಂತೆ ಎಂಬ ಅರ್ಥದಲ್ಲಿ ಆ ಸುಳ್ಳು ಕರೆಯನ್ನು ಆತನಿಂದ ಟೈಪ್ ಮಾಡಿಸಲಾಗಿತ್ತು. ಹೀಗೆ ಸುಳ್ಳು ಕರೆ ನೀಡಿದ ನೋಟಿಸನ್ನು ಡಿಸೆಂಬರ್ 31ರಂದು ಪೊಲೀಸರಿಗೆ ಸಲ್ಲಿಸಲಾಯಿತು.
ವಧು ಮತ್ತು ಭೀಮಾ ಕೋರೆಗಾಂವ್ನಲ್ಲಿ ಹಿಂಸೆಗೆ ಕುಮ್ಮಕ್ಕು ನೀಡುವಲ್ಲಿ ಪಾತ್ರವಹಿಸಿದ್ದನೆಂಬ ಆಪಾದನೆಯ ಮೇರೆಗೆ ಫಡ್ತರೆಯನ್ನು ಜನವರಿಯಲ್ಲಿ ಗೋವಾದಲ್ಲಿ ಬಂಧಿಸಲಾಯಿತು.
ಆಕ್ಟೋಬರ್ 22ರಿಂದ ವಿಚಾರಣಾ ಆಯೋಗದ ಬೈಠಕ್ಗಳು ಮುಂಬೈಯಲ್ಲಿ ಮುಂದುವರಿಯಲಿವೆ.
ಕೃಪೆ: scroll.in