ಅರಬ್ ಯಾತ್ರಿಕನೊಬ್ಬ ತಂದ ಆ ಏಳು ಮಾಂತ್ರಿಕ ಬೀಜಗಳು
ಕಾಫಿ ಬೆಳೆಯುವ ವಿಶ್ವದ ಆರನೆಯ ಅತ್ಯಂತ ದೊಡ್ಡ ದೇಶವಾಗಿರುವ ಭಾರತ ವಾರ್ಷಿಕ 3.2 ಟನ್ ಕಾಫಿಯನ್ನು ಉತ್ಪಾದಿಸುತ್ತದೆ. ಇದರ ಶೇ.75 ಭಾಗ ಇಟಲಿ, ಜರ್ಮನಿ, ರಶ್ಯಾ, ಬೆಲ್ಜಿಯಂ ಮತ್ತು ಟರ್ಕಿಯಂತಹ ದೇಶಗಳಿಗೆ ರಫ್ತಾಗುತ್ತದೆ. ಇವತ್ತು ಭಾರತದಲ್ಲಿ 16 ವಿಶಿಷ್ಟ ರೀತಿಯ ಕಾಫಿಯನ್ನು ಬೆಳೆಯಲಾಗುತ್ತದೆ.
ಭಾರತದಲ್ಲಿನ ಕಾಫಿಯ ಪಯಣಕ್ಕೆ ಅರಬ್‌ನ ಒಂದು ಸಂಪರ್ಕ ಇದೆ. ಚಿಕ್ಕಮಗಳೂರಿನ ಓರ್ವ ಧಾರ್ಮಿಕ ಶ್ರದ್ಧಾಳು, ಜನರು ಕರೆಯುವಂತೆ ಬಾಬಾ ಬುಡಾನ್, ಹಝರತ್ ಶಾ ಜನಾಬ್ ಮಗತಬಿ ಎಂಬವರು, ಕ್ರಿ.ಶ. ಸುಮಾರು 1600ರಲ್ಲಿ ತನ್ನ ಅರಬ್ ಪ್ರವಾಸದಿಂದ ಭಾರತಕ್ಕೆ ಮರಳಿ ಬರುವಾಗ ತನ್ನ ಉಡುಪಿನ ಕೆಳಗೆ ಎದೆಗೆ ಕಟ್ಟಿಕೊಂಡು ಏಳು ಕಾಫಿ ಅರಬಿಕಾ ಬೀಜಗಳನ್ನು ತಂದರು.
ದಂತ ಕತೆಯೊಂದರ ಪ್ರಕಾರ ಅರಬರು ತಮ್ಮ ಕಾಫಿ ಉದ್ಯಮದ ಬಗ್ಗೆ, ಅದರ ರಕ್ಷಣೆಯ ಬಗ್ಗೆ ಅತಿಜಾಗರೂಕರಾಗಿದ್ದರು. ಅವರ ದೇಶದಿಂದ ಕಾಫಿ ಬೀಜಗಳನ್ನು ಹೊರಗೆ ಕೊಂಡೊಯ್ಯುವುದಕ್ಕೆ ಅನುಮತಿ ಇರಲಿಲ್ಲ.
ಮೊಚಾದಲ್ಲಿ ಕಹ್ವಾವನ್ನು, ಅಂದರೆ ಅರೆಬಿಕ್ ಭಾಷೆಯಲ್ಲಿ ಕಾಫಿಯನ್ನು ಸವಿದಿದ್ದ ಸಂತ ಬಾಬಾ ಬುಡಾನ್‌ಗೆ ಅವುಗಳು ಮನಸ್ಸನ್ನು ಉತ್ತೇಜಿಸುವ ಪಾನೀಯವನ್ನು ತಯಾರಿಸಬಹುದಾದ ಮಾಂತ್ರಿಕ ಬೀಜಗಳು ಎಂದು ಗೊತ್ತಿತ್ತು. ಮೊಚಾ ಎಂಬುದು ಯೆಮನ್ ದೇಶದ ಒಂದು ಬಂದರು ನಗರ.
ಮೊಚಾ ಬಂದರು ಕೇವಲ ಕಾಫಿ ಮಾರಾಟದ ಕೇಂದ್ರವಷ್ಟೇ ಅಲ್ಲದೆ, ಜನಪ್ರಿಯ ಮೊಚಾ ಕಾಫಿ ಬೀನ್ಸ್‌ಗಳ ಮೂಲವೂ ಆಗಿತ್ತು. ಚಿಕ್ಕಮಗಳೂರಿಗೆ ಮರಳಿದ ಬಳಿಕ ಬಾಬಾ ಬುಡಾನ್ ತಾನು ತಂದ ಕಾಫಿ ಬೀಜಗಳನ್ನು ಚಂದ್ರಗಿರಿಯ ಸಮೀಪವಿದ್ದ ತನ್ನ ಉದ್ಯಾನದಲ್ಲಿ ನೆಟ್ಟರು. ಮುಂದೆ ನಡೆದದ್ದು ಇತಿಹಾಸ.
ಕಾಫಿ ಗಿಡಗಳು, ಕ್ರಮೇಣ, ಅವನ ಹಿತ್ತ್ತಲ ಗಿಡಗಳಾಗಿ, ಬಳಿಕ ಬೆಟ್ಟಗಳಿಗೆ ಹರಡಿದವು. ಅವರ ಸ್ಮರಣಾರ್ಥವಾಗಿ ಈಗ ಆ ಬೆಟ್ಟಗಳು ಬಾಬಾ ಬುಡಾನ್ ಬೆಟ್ಟಗಳೆಂದು ಕರೆಯಲ್ಪಟ್ಟು, ಜಗತ್‌ಪ್ರಸಿದ್ಧವಾಗಿವೆ. ಭಾರತದಲ್ಲಿ ಕಾಫಿಯ ಜನ್ಮಸ್ಥಳವಾಗಿರುವ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಾಫಿ ತೋಟಗಳಿಂದ, ಪ್ಲಾಂಟೇಶನ್‌ಗಳಿಂದ ಕಂಗೊಳಿಸುತ್ತಿದೆ.
ಚಿಕ್ಕಮಗಳೂರಷ್ಟೇ ಅಲ್ಲದೆ, ಕೊಡಗು ಕೂಡ ಕಾಫಿ ಬೆಳೆಯುವ ಪ್ರಮುಖ ಪ್ರದೇಶವಾಗಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಕಾಫಿ ಬೇಸಾಯ ಬೆಳೆದು ಉತ್ತುಂಗ ಸ್ಥಿತಿಗೆ ಬಂತು.
ಮಲಬಾರ್ ಪ್ರದೇಶದಲ್ಲಿ ಕಾಫಿ ಬೆಳೆಯಲು ಡಚ್ಚರು ಆರಂಭಿಸಿದರಾದರೂ, ಬ್ರಿಟಿಷರು ದಕ್ಷಿಣ ಭಾರತದ ಬೆಟ್ಟ ಪ್ರದೇಶಗಳಲ್ಲಿ ಕಾಫಿ ಪ್ಲಾಂಟೇಶನ್‌ಗಳನ್ನು ಸ್ಥಾಪಿಸಲು ಆರಂಭಿಸಿದ ಪರಿಣಾಮವಾಗಿ ಡಚ್ಚರಿಗೆ ತಮ್ಮ ಪ್ರಯತ್ನದಲ್ಲಿ ಗಣನೀಯ ಯಶಸ್ಸು ಸಿಗಲಿಲ್ಲ. ಮಲಬಾರ್‌ನ ಹವಾಮಾನ ಪರಿಸ್ಥಿತಿಗಿಂತ ಚಿಕ್ಕಮಗಳೂರಿನ, ದಕ್ಷಿಣ ಭಾರತದ ಹವಾಮಾನ ಕಾಫಿ ಬೆಳೆಗೆ ಹೆಚ್ಚು ಅನುಕೂಲಕರವಾಗಿತ್ತು.
ಪಶ್ಚಿಮ ಮತ್ತು ಪೂರ್ವಘಟ್ಟಗಳ ಪರಿಸರ ಸೂಕ್ಷ್ಮ ಸಂವೇದಿ ಭೂ ಪ್ರದೇಶಗಳಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಬೆಳೆಸಲಾದ ಭಾರತದ ಕಾಫಿ ಪೂರ್ವ ಕರಾವಳಿಯಲ್ಲಿ ಅಸಾಂಪ್ರದಾಯಿಕ ಪ್ರದೇಶಗಳಾದ ಆಂಧ್ರ ಪ್ರದೇಶ, ಒಡಿಶಾಕ್ಕೆ ಹರಡಿತು. ಹಲವು ರಾಜ್ಯಗಳು ಈಗ ಕಾಫಿ ಬೆಳೆಯುತ್ತವಾದರೂ ಕರ್ನಾಟಕ ಮತ್ತು ಕೇರಳದಲ್ಲೇ ಭಾರತದ ಒಟ್ಟು ಕಾಫಿ ಉತ್ಪನ್ನದ ಶೇ. 90ರಷ್ಟು ಉತ್ಪಾದನೆಯಾಗುತ್ತದೆ.
ಭಾರತದಲ್ಲಿ ಕಾಫಿ ಉತ್ಪಾದಿಸುವ, ಬೆಳೆಯುವ ಪ್ರದೇಶವನ್ನಾಧರಿಸಿ 13 ಪ್ರಾದೇಶಿಕ ಕಾಫಿಯನ್ನು ವರ್ಗೀಕರಿಸಲಾಗಿದೆ. ಅಣ್ಣಾಮಲೈಸ್, ಬಾಬಾಬುಡಾನ್‌ಗಿರಿ, ಅರಸು ಕಣಿವೆ, ಬ್ರಹ್ಮಪುತ್ರಾ, ಶಿವರೈಸ್, ಪುಲ್ನೀಸ್(ಅರಬಿಕಾ ಕಾಫಿ), ವಯನಾಡ್, ತಿರುವಾಂಕೂರು (ರೊಬಸ್ಟಾ ಕಾಫಿ) ಇತ್ಯಾದಿ ಇತ್ಯಾದಿ. ಕೊಡಗು, ಚಿಕ್ಕಮಗಳೂರು, ನೀಲಗಿರಿ ಮತ್ತು ಮಂಜರ್‌ಬಾದ್, ಅರಬಿಕಾ ಮತ್ತು ರೊಬಸ್ಟಾ ಎರಡೂ ರೀತಿಯ ಕಾಫಿ ಬ್ರಾಂಡ್‌ಗೆ ಪ್ರಸಿದ್ಧವಾಗಿವೆ.
ಈ 13 ಅಲ್ಲದೆ, ಅಂತರ್‌ರಾಷ್ಟ್ರೀಯ ಜನಪ್ರಿಯತೆಯ ಆಧಾರದಲ್ಲಿ ವರ್ಗೀಕರಿಸಲಾಗಿರುವ ಮೂರು ರೀತಿಯ ‘ಸ್ಪೆಶಾಲಿಟಿ ಕಾಫಿ’ಗಳೂ ಇವೆ. ಅವುಗಳು ಮಾನ್ಸೂನ್ ಮಲಬಾರ್, ಮೈಸೂರು ನಗೆಟ್ಸ್ ಮತ್ತು ರೊಬಸ್ಟಾ ಕಾಫಿ ರೋಯಲ್.
ಬಾಬಾ ಬುಡಾನ್ ಬೆಟ್ಟಕ್ಕೆ ಇತ್ತೀಚೆಗೆ ಭೇಟಿ ನೀಡಿದ ವೇಳೆ ಅಲ್ಲಿರುವ ಎಲ್ಲಾ ಸ್ಟಾಲ್ ಮಾಲಕರ ಹಾಗೂ ಕೆಲವು ಪ್ರವಾಸಿಗರ ಜತೆ ಮಾತಾಡಿದಾಗ ಅವರು ಅಲ್ಲಿ ಸಿಗುವ ಅದ್ಭುತ ಕಾಫಿಗಾಗಿ ತಾವು ಇನ್ನೂ ಅರೇಬಿಯಾಗೆ ಕೃತಜ್ಞರು ಎಂದರು.
ಓರ್ವ ಸ್ಟಾಲ್ ಮಾಲಕ ಹೇಳಿದ,‘‘ಬಾಬಾ ಬುಡಾನ್‌ರಿಂದಾಗಿ ಭಾರತಕ್ಕೆ ಅಷ್ಟೊಂದು ಬೇಗನೆ ಕಾಫಿ ಬರುವಂತಾಯಿತು ಮತ್ತು ಕಾಫಿಯನ್ನು ಸಂಶೋಧಿಸಿದ ಕೀರ್ತಿ ಅರಬರಿಗೆ ಸಲ್ಲುತ್ತದೆ. ಕಾಫಿಯೂ ಸೇರಿದಂತೆ ಹಲವಾರು ಆಹಾರ ಸಾಮಗ್ರಿಗಳನ್ನು ಕಂಡು ಹಿಡಿದವರು ಅರಬರು.’’
ಒಂದು ಚಿಕ್ಕ ಕಪ್ ಕಾಫಿಯ ಹಿಂದೆ ಅಷ್ಟೊಂದು ಇತಿಹಾಸವಿರುವುದರಲ್ಲಿ ಆಶ್ಚರ್ಯವಿಲ್ಲ.
ಕೃಪೆ: english.alarabiya.net