ಮಾಜಿ ಸಿಎಂ ಪುತ್ರರ ನಡುವೆ ಹೈವೋಲ್ಟೇಜ್ ಹಣಾಹಣಿ: ಶಿವಮೊಗ್ಗದತ್ತ ರಾಹುಲ್ ಗಾಂಧಿ ಚಿತ್ತ
'ಕೈ' ನಾಯಕರಿಗೆ ಫರ್ಮಾನು
ಶಿವಮೊಗ್ಗ, ಅ. 20: ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಎಸ್.ಬಂಗಾರಪ್ಪ ಕುಟುಂಬದ ನಡುವಿನ ಹೈವೋಲ್ಟೇಜ್ ಹಣಾಹಣಿಗೆ ಸಾಕ್ಷಿಯಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಸಮರಾಂಗಣ ಬಿಸಿಯೇರಲಾರಂಭಿಸಿದೆ. ಬಿಜೆಪಿ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಮತದಾರರ ಮನವೊಲಿಕೆಗೆ ಎರಡೂ ಕಡೆಯವರು ನಾನಾ ಕಸರತ್ತು ನಡೆಸಲಾರಂಭಿಸಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರಣದಿಂದ, ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಶತಾಯಗತಾಯ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವಿಗೆ ವ್ಯಾಪಕ ಕಾರ್ಯತಂತ್ರ ರೂಪಿಸುತ್ತಿದೆ. ಈ ಕಾರಣದಿಂದಲೇ ಎರಡು ಪಕ್ಷದ ಅತಿರಥ - ಮಹಾರಥ ನಾಯಕರು ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲು ಕ್ಷೇತ್ರಕ್ಕೆ ದೌಡಾಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಸಮ್ಮಿಶ್ರ ಸರ್ಕಾರದ ಆಡಳಿತವೇ ಶಿವಮೊಗ್ಗದಲ್ಲಿ ಬೀಡುಬಿಟ್ಟರೂ ಅಚ್ಚರಿಯಿಲ್ಲವಾಗಿದೆ.
ಈ ನಡುವೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಕೂಡ ಶಿವಮೊಗ್ಗ ಕ್ಷೇತ್ರದತ್ತ ಗಮನ ಹರಿಸಿದ್ದಾರೆ. ತಮ್ಮದೆ ಆದ ಮೂಲಗಳಿಂದ ಕ್ಷೇತ್ರದ ಸಮಗ್ರ ಮಾಹಿತಿ ಸಂಗ್ರಹಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವಂತೆ ಫರ್ಮಾನು ಹೊರಡಿಸಿದ್ದಾರೆ. 'ಏನಾದರೂ ಆರೋಪ ಕೇಳಿಬಂದರೆ, ನಾಯಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಈ ವಿಷಯದಲ್ಲಿ ತಾನು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ' ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎನ್ನಲಾಗಿರುವುದು ಸ್ಥಳೀಯ ಕೈ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.
ರಾಹುಲ್ ಗಾಂಧಿ ಕಟ್ಟಪ್ಪಣೆಯ ಕಾರಣದಿಂದಲೇ ಕಾಂಗ್ರೆಸ್ ಪಕ್ಷದ ವರಿಷ್ಠರು ಶಿವಮೊಗ್ಗದತ್ತ ಮುಖ ಮಾಡಿದ್ದಾರೆ. 'ರಾಹುಲ್ ಗಾಂಧಿಯವರೇ ಶಿವಮೊಗ್ಗ ಕ್ಷೇತ್ರದತ್ತ ಗಮನಹರಿಸಿರುವುದರಿಂದ, ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಕಾರ್ಯನಿರ್ವಹಿಸುವಂತೆ ಸ್ಥಳೀಯ ಕೈ ನಾಯಕರಿಗೆ ವರಿಷ್ಠರು ಸ್ಪಷ್ಟ ಸೂಚನೆ ನೀಡಿದ್ದಾರೆ' ಎಂದು ಕಾಂಗ್ರೆಸ್‍ನ ಉನ್ನತ ಮೂಲಗಳು ಮಾಹಿತಿ ನೀಡುತ್ತವೆ.
ಪ್ರಯೋಗ ಶಾಲೆ: 2019 ರ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ಎದುರು ಇತರೆ ಪಕ್ಷಗಳ ಬೆಂಬಲದೊಂದಿಗೆ 'ಮಹಾಘಟಬಂಧನ' ರಚಿಸಿಕೊಂಡು ದೇಶಾದ್ಯಂತ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ರಾಹುಲ್‍ಗಾಂಧಿ ನಿರ್ಧರಿಸಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಕೈ ಜೋಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಜೆಡಿಎಸ್ ವರಿಷ್ಠರು ಸಹಮತ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪೂರ್ವಭಾವಿ ಎಂಬಂತೆ ಪ್ರಸ್ತುತ ರಾಜ್ಯದಲ್ಲಿ ಎದುರಾಗಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಅಭ್ಯರ್ಥಿ ಕಣಕ್ಕಿಳಿಸಿವೆ. ಜೆಡಿಎಸ್ ಒತ್ತಾಸೆಯ ಮೇರೆಗೆ ಸ್ವತಃ ರಾಹುಲ್ ಗಾಂಧಿಯವರೇ ಶಿವಮೊಗ್ಗದಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸದೆ, ಆ ಪಕ್ಷಕ್ಕೆ ಬಿಟ್ಟು ಕೊಡುವ ನಿರ್ಧಾರ ಕೈಗೊಂಡಿದ್ದರು.
'ಶಿವಮೊಗ್ಗವು ಬಿಜೆಪಿ ಪಕ್ಷದ ಭದ್ರಕೋಟೆಯಾಗಿದೆ. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಆ ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಶಿವಮೊಗ್ಗದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಏನಾದರೂ ಜಯ ಸಾಧಿಸಿದರೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ. ಮೈತ್ರಿ ಪಕ್ಷ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಲಿದೆ. ಜೊತೆಗೆ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟು ಸಮ್ಮಿಶ್ರ ಸರ್ಕಾರದ ಪಾಲಿಗೆ ದುಃಸ್ವಪ್ನವಾಗಿರುವ ಯಡಿಯೂರಪ್ಪ ಸ್ಪೀಡ್‍ಗೂ ಕಡಿವಾಣ ಹಾಕಬಹುದಾಗಿದೆ' ಎಂಬ ವಿಷಯವನ್ನು ಸ್ವತಃ ಸಿಎಂ ಕುಮಾರಸ್ವಾಮಿಯವರು ರಾಹುಲ್ ಗಾಂಧಿಯವರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಈ ಅಭಿಪ್ರಾಯದ ಆಧಾರದ ಮೇಲೆಯೇ, ರಾಹುಲ್‍ರವರು ಶಿವಮೊಗ್ಗದಲ್ಲಿ ಜೆಡಿಎಸ್ ಬೆಂಬಲಿಸುವ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣವಾಗಿತ್ತು.
ಎಚ್ಚರ: ಜಿಲ್ಲೆಯ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಮೊದಲ ಬಾರಿ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಕಣಕ್ಕಿಳಿಸದಿರುವುದು ಹಾಗೂ ಜಿಲ್ಲೆಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಹರಸಾಹಸ ನಡೆಸುತ್ತಿರುವ ಜೆಡಿಎಸ್‍ಗೆ ಬೆಂಬಲಿಸುವ ನಿರ್ಧಾರ ಕೈಗೊಂಡಿರುವುದು ಹಲವು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿ ನಾಯಕರಲ್ಲಿಯೂ ಬೇಸರ ಉಂಟು ಮಾಡಿದೆ ಎನ್ನಲಾಗಿದೆ.
ಪಕ್ಷದ ನಾಯಕರ ಜೊತೆಗಿನ ವೈಮನಸ್ಸು ಮತ್ತಿತರ ಕಾರಣಗಳಿಂದ ಸ್ಥಳೀಯ ಕೆಲ 'ಕೈ' ನಾಯಕರು ಇಲ್ಲಿಯವರೆಗೂ ಪ್ರಚಾರದ ಮುಂಚೂಣಿಯಲ್ಲಿ ಕಾಣಿಸಿಕೊಂಡಿಲ್ಲ. ಈ ಕುರಿತಂತೆ ಮಾಹಿತಿ ಅರಿತ ರಾಹುಲ್ ಗಾಂಧಿಯವರು, ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರತಿಯೋರ್ವರು ಕೆಲಸ ಮಾಡಬೇಕು. ಶತಾಯಗತಾಯ ಬಿಜೆಪಿ ಸೋಲಬೇಕು. ಈ ವಿಷಯದಲ್ಲಿ ಏನಾದರೂ ಹೆಚ್ಚುಕಮ್ಮಿಯಾದರೆ ತಲೆದಂಡ ನಿಶ್ಚಿತ ಎಂಬ ಕಟು ಎಚ್ಚರಿಕೆ ಸಂದೇಶವನ್ನು ರಾಜ್ಯ ವರಿಷ್ಠರಿಗೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಶಿವಮೊಗ್ಗ ಕ್ಷೇತ್ರದತ್ತ ಕಾಂಗ್ರೆಸ್‍ನ ಯುವರಾಜ ರಾಹುಲ್ ಗಾಂಧಿಯವರು, ಹದ್ದಿನ ಕಣ್ಣು ನೆಟ್ಟಿರುವುದು 'ಕೈ' ನಾಯಕರ ನಿದ್ದೆಗೆಡಿಸಿರುವುದಂತೂ ಸತ್ಯವಾಗಿದೆ. ಈ ಕಾರಣದಿಂದಲೇ 'ಕೈ' ನಾಯಕರು ಮೈಚಳಿ ಬಿಟ್ಟವರ ರೀತಿಯಲ್ಲಿ ಇತ್ತೀಚೆಗೆ ಪಕ್ಷದ ಸಭೆ-ಸಮಾರಂಭ, ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಆಗಮಿಸುತ್ತಿದೆ ಮೈತ್ರಿ ನಾಯಕರ ದಂಡು
ಜೆಡಿಎಸ್-ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಧು ಬಂಗಾರಪ್ಪ ಪರವಾಗಿ ಪ್ರಚಾರ ನಡೆಸಲು 'ದೋಸ್ತಿ'ಗಳ ದೊಡ್ಡ ದಂಡೇ ಆಗಮಿಸುತ್ತಿದೆ. ಅ. 22 ರಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್, ಅ. 23 ರಂದು ಹೆಚ್.ಡಿ.ದೇವೇಗೌಡ, ಅ. 25 ಹಾಗೂ ಅ. 26 ರಂದು ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಕ್ಷೇತ್ರದಾದ್ಯಂತ ಪ್ರಚಾರ ನಡೆಸಲಿದ್ದಾರೆ. ಅ. 25 ರಿಂದ ಸುಮಾರು ನಾಲ್ಕೈದು ದಿನಗಳ ಕಾಲ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕ್ಷೇತ್ರದಲ್ಲಿ ಬೀಡುಬಿಟ್ಟು ಹಲವು ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಬಿರುಸಿನ ಪ್ರಚಾರ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಚಾರ ಕಣ ರಂಗೇರಿದೆ. ಕಾಂಗ್ರೆಸ್-ಜೆಡಿಎಸ್‍ಗೆ ಮೈತ್ರಿ ಪಕ್ಷಕ್ಕೆ ಹೋಲಿಸಿದರೆ, ಬಿಜೆಪಿ ಪಕ್ಷ ಅಬ್ಬರದ ಪ್ರಚಾರ ನಡೆಸಲಾರಂಭಿಸಿದೆ. ಆ ಪಕ್ಷದ ನಾಯಕರು ಕ್ಷೇತ್ರದಾದ್ಯಂತ ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಕ್ಷೇತ್ರದಾದ್ಯಂತ ಒಂದು ಸುತ್ತಿನ ಪ್ರಚಾರ ನಡೆಸಿರುವ ಬಿ.ಎಸ್.ಯಡಿಯೂರಪ್ಪರವರು, ಇದೀಗ ಕ್ಷೇತ್ರದಲ್ಲಿ ಮತ್ತೆ ಪುತ್ರ ಬಿ.ವೈ.ರಾಘವೇಂದ್ರ ಪರವಾಗಿ ಪ್ರಚಾರ ನಡೆಸಲಾರಂಭಿಸಿದ್ದಾರೆ. ಶನಿವಾರ ಕ್ಷೇತ್ರದ ವಿವಿಧೆಡೆ ಪಕ್ಷದ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.