ನಾನು ಕಥೆಗಳನ್ನೇಕೆ ಬರೆಯುತ್ತೇನೆ...
ಸಾದತ್ ಹಸನ್ ಮಂಟೋ
ನಾನು ಮೆದುಳಿನ ಮೇಲೆ ತುಂಬಾ ಒತ್ತಡ ಹಾಕುವೆ. ಯಾವುದೋ ಒಂದು ಕಥೆ ಹೊರಗೆ ಬಾರದೇ ಹೋಗ್ತದಾ ಅಂತ ಕಥಾ ಲೇಖನವನ್ನು ಕಾಯುವುದಕ್ಕೆ ತುಂಬಾ ಪ್ರಯತ್ನಿಸುತ್ತೇನೆ. ಸಿಗರೆಟ್ ಮೇಲೆ ಸಿಗರೆಟ್ ಸುಡುತ್ತೇನೆ. ಆದರೆ ತಲೆಯೊಳಗಿಂದ ಮಾತ್ರ ಕಥೆ ಹೊರಗೆ ಬಾರದು. ಕೊನೆಗೆ ರೋಸಿ ಹೋಗಿ, ಸೋಲೊಪ್ಪಿಕೊಂಡು ಬಂಜೆಯಂತೆ ಮಲಗಿ ಬಿಡುತ್ತೇನೆ.
ಸಾದತ್ ಹಸನ್ ಮಂಟೋ (1912-55) ಪ್ರಸಿದ್ಧ ಉರ್ದು ಲೇಖಕ. ಸಂಚಲನಾತ್ಮಕ ಕಥೆಗಳ ಲೇಖಕನೆಂದು ದೊಡ್ಡ ಹೆಸರು. ಕೇವಲ ಹೆಸರಿಗೋಸ್ಕರವೇ ಬರೆದಿದ್ದಾನೆ ಎಂದು ಸಹ ಆರೋಪ. ಆಗಿನ ಮುಂಬೈ ಕುರಿತು, ಮುಖ್ಯವಾಗಿ ವೇಶ್ಯಾವೃತ್ತಿಯಲ್ಲಿ ಇರುವವರ ಕುರಿತು ವಿಸ್ತಾರವಾಗಿ ಬರೆದಿದ್ದಾನೆ. ಭಾರತ ದೇಶ ವಿಭಜನೆ ಸಮಯದಲ್ಲಿ ಜರುಗಿದ ಹಿಂಸೆಯನ್ನು ಯಾವುದೇ ಧರ್ಮದ ಬಣ್ಣ ಬಳಿಯದೇ, ಲೇಖನಿಯಿಂದ ಯಶಸ್ವಿಯಾಗಿ ಹಿಡಿದಿಟ್ಟ ಲೇಖಕ. ಸಮಾಜದಲ್ಲಿನ ಕೊಳಕಿಗೆ ಆತನ ರಚನೆಗಳು ಕನ್ನಡಿ ಹಿಡಿದಿವೆ. ಆಡಂಬರ ಇಲ್ಲದ ಭಾಷೆ, ಅಲಂಕಾರಗಳಿಗೆ ದೂರವಾಗಿರುವ ಶೈಲಿಯಿಂದ ಕಥೆಗಳಲ್ಲಿ, ಬರಹಗಳಲ್ಲಿ ಹೇಳುತ್ತಿರುವ ಅಂಶಗಳು ನೇರವಾಗಿ, ಬಲವಾಗಿ ಮುಟ್ಟುತ್ತವೆ. ಇಂದಿಗೂ ಕೆಲವರಿಗೆ ಗಟ್ಟಿಯಾಗಿ ತಗಲಿಯೂ ಇವೆ. ಪರಿಣಾಮವಾಗಿ, ಕೇವಲ ಕಥೆಗಳನ್ನು ಬರೆದ ಕಾರಣಕ್ಕೆ ಕೋರ್ಟ್ ಸುತ್ತಲೂ ತಿರುಗಿದನು. ಆದರೆ ತನ್ನದೇ ಆದ ಶೈಲಿಯಲ್ಲಿ ಬರೆಯುತ್ತಲೇ ಹೋದನು. ಹೋಗುವವರೆಗೂ ಹಾಗೆ ಬರೆಯುತ್ತಲೇ ಇರುವುದಕ್ಕೆ ತನಗಿರುವ ಕಾರಣಗಳ ಬಗ್ಗೆ ಈ ಮಾತುಗಳಲ್ಲಿ ಹಂಚಿಕೊಂಡಿದ್ದಾನೆ.
‘ಎಲ್ಲರಿಗೆ ನನ್ನ ಸಲಾಂ!’
ನಾನು ಕಥೆಗಳನ್ನೇಕೆ ಬರೆಯುತ್ತೇನೋ ನಿಮ್ಮಂದಿಗೆ ಹಂಚಿಕೊಳ್ಳುವಂತೆ ನನ್ನ ಕೇಳಿದಿರಿ. ಈ ‘ಏಕೆ’ ಎನ್ನುವುದು ನನಗೆ ಅರ್ಥವಾಗಲಿಲ್ಲ. ನನ್ನ ಪದಕೋಶದಲ್ಲಿ ‘ಏಕೆ’ಗೆ ಸಿಕ್ಕ ಅರ್ಥಗಳು-ಹೇಗೆ, ಯಾವ ವಿಧವಾಗಿ.
ಈಗ ನಾನು ನಿಮಗೇನು ಹೇಳಲಿ! ನಾನು ಕಥೆಗಳನ್ನೇಕೆ ಬರೆಯುತ್ತೇನೋ? ಇದು ಸ್ವಲ್ಪ ಜಟಿಲವಾದ ಅಂಶ. ನಾನು ‘ಯಾವ ವಿಧವಾಗಿ’ ಎನ್ನುವುದನ್ನು ದೃಷ್ಟಿಯಲ್ಲಿ ಇಟ್ಟುಕೊಂಡಲ್ಲಿ ನನ್ನ ಉತ್ತರ ಹೀಗಿರುತ್ತದೆ, ‘‘ನಾನು ನನ್ನ ಕೊಠಡಿಯಲ್ಲಿ ಸೋಫಾದಲ್ಲಿ ಕುಳಿತಿರುತ್ತೇನೆ. ಕಾಗದ, ಲೇಖನಿ ತೆಗೆದುಕೊಳ್ಳುತ್ತೇನೆ. ಬಿಸ್ಮಿಲ್ಲಾ ಅಂದುಕೊಂಡು ಕಥೆ ಬರೆಯಲು ಮೊದಲಿಡುತ್ತೇನೆ. ನನ್ನ ಮೂವರು ಪುತ್ರಿಯರೂ ಗಲಾಟೆ ಮಾಡುತ್ತಾ ಇರುತ್ತಾರೆ. ನಾನು ಅವರೊಂದಿಗೆ ಮಾತಾಡುತ್ತಾ ಇರುತ್ತೇನೆ. ಅವರ ತುಂಟ ತಗಾದೆಗಳನ್ನು ತೀರಿಸುತ್ತಾ ಇರುತ್ತೇನೆ. ನನಗೋಸ್ಕರ ಸಲಾಡ್ ಸಹ ಮಾಡಿಕೊಳ್ತೀನಿ. ಯಾರಾದರೂ ಕಾಣುವುದಕ್ಕೆ ಬಂದರೆ ಸತ್ಕಾರ ಮಾಡುತ್ತೇನೆ. ಆದರೂ ಕಥೆ ಬರೆದುಕೊಳ್ಳುತ್ತಲೇ ಇರ್ತೀನಿ’’.
ಈಗ ‘ಹೇಗೆ’ ಎಂಬ ಪ್ರಶ್ನೆ ಹಾಕಿದರೆ ಅದಕ್ಕೆ ನಾನು ಹೀಗೆ ಹೇಳುತ್ತೇನೆ, ‘‘ನಾನು ಕಥೆಗಳನ್ನು ಹೇಗೆ ಬರೆಯುತ್ತೇನೆ ಎಂದರೆ ಅನ್ನ ತಿಂದಂತೆ, ಮಲ ವಿಸರ್ಜನೆ ಮಾಡಿದಂತೆ, ಸಿಗರೆಟ್ ಸೇದಿದಂತೆ, ಕಾಲಯಾಪನೆ ಮಾಡಿದಂತೆ’’.
ನಾನು ಕಥೆ ಏಕೆ ಬರೆಯುತ್ತೇನೆ ಎಂದು ಕೇಳಿದರೆ ಅದಕ್ಕೆ ಕೂಡಾ ನನ್ನ ಬಳಿ ಉತ್ತರ ಸಿದ್ಧವಾಗಿದೆ. ‘‘ನಾನು ಕಥೆಗಳನ್ನು ಬರೆಯುವುದಕ್ಕೆ ಮೊದಲ ಕಾರಣ, ಕುಡಿತದ ಹಾಗೆ ಕಥೆ ಬರೆಯುವುದೂ ನನಗೆ ಚಟದಂತೆ ಅಂಟಿಕೊಂಡಿದೆ. ಕಥೆಗಳನ್ನು ಬರೆಯದೇ ಹೋದರೆ ನನಗೆ ಬಟ್ಟೆಗಳನ್ನು ಹಾಕಿಕೊಳ್ಳದೇ ಇರುವಂತೆಯೂ, ಮಲ ವಿಸರ್ಜನೆ ಮಾಡದಂತೆಯೂ ಅನಿಸುತ್ತದೆ.
ನಾನು ಕಥೆಗಳನ್ನು ಬರೆಯಲ್ಲ. ನಿಜಕ್ಕೂ ಕಥೆಗಳೇ ನನ್ನನ್ನು ಬರೆಯುತ್ತವೆ.
ನಾನು ತುಂಬಾ ಕಡಿಮೆ ಓದಿಕೊಂಡವನು. ಹೇಳುವುದಕ್ಕೆ ನಾನು ಇಪ್ಪತ್ತಕ್ಕೂ ಹೆಚ್ಚಿನ ಪುಸ್ತಕಗಳ ಬರೆದೆನು. ಆದರೆ ನನಗೇ ಆಶ್ಚರ್ಯ ಆಗುತ್ತಿರುತ್ತದೆ. ಅಷ್ಟು ಒಳ್ಳೆ ಕಥೆಗಳು, ಸದಾ ಯಾವುದೋ ಒಂದು ಕೋರ್ಟ್ ಕೇಸ್ ನಡೆಸುವಷ್ಟು ಚೆನ್ನಾಗಿ ಬರೆದಿದ್ದು ಯಾರಪ್ಪಾ ಅಂತ!
ನನ್ನ ಕೈಯಲ್ಲಿ ಲೇಖನಿ ಇರದೇ ಹೋದರೆ ನಾನು ಖಾಲಿ ಸಾದತ್ ಹಸನ್ ಮಾತ್ರವೇ. ಅವನಿಗೆ ಉರ್ದು ಬಾರದು, ಪಾರ್ಸಿ ಬಾರದು, ಇಂಗ್ಲಿಷ್ ಬಾರದು, ಫ್ರೆಂಚ್ ಬಾರದು.
ಕಥೆ ನನ್ನ ತಲೆಯಲ್ಲಿಲ್ಲ, ನನ್ನ ಜೇಬಲ್ಲಿ ಇರುತ್ತದೆ. ಅದು ಇದೆ ಅಂತ ನನಗೆ ತಿಳಿದಿರುವುದೂ ಇಲ್ಲ.
ನಾನು ಮೆದುಳಿನ ಮೇಲೆ ತುಂಬಾ ಒತ್ತಡ ಹಾಕುವೆ. ಯಾವುದೋ ಒಂದು ಕಥೆ ಹೊರಗೆ ಬಾರದೇ ಹೋಗ್ತದಾ ಅಂತ ಕಥಾ ಲೇಖನವನ್ನು ಕಾಯುವುದಕ್ಕೆ ತುಂಬಾ ಪ್ರಯತ್ನಿಸುತ್ತೇನೆ. ಸಿಗರೆಟ್ ಮೇಲೆ ಸಿಗರೆಟ್ ಸುಡುತ್ತೇನೆ. ಆದರೆ ತಲೆಯೊಳಗಿಂದ ಮಾತ್ರ ಕಥೆ ಹೊರಗೆ ಬಾರದು. ಕೊನೆಗೆ ರೋಸಿ ಹೋಗಿ, ಸೋಲೊಪ್ಪಿಕೊಂಡು ಬಂಜೆಯಂತೆ ಮಲಗಿ ಬಿಡುತ್ತೇನೆ.
ಬರೆಯದ ಕಥೆಗೆ ಮೊದಲೇ ಹಣ ತೆಗೆದುಕೊಂಡಿರ್ತೀನಿ. ಹಾಗಾಗಿ ಇನ್ನು ಢವಢವ ಮಾಡಲಾಗುತ್ತದೆ. ಅತ್ತ ಇತ್ತ ಹೊರಳುತ್ತೇನೆ. ಎದ್ದು ಹಕ್ಕಿಗಳಿಗೆ ಕಾಳು ಹಾಕುತ್ತೇನೆ. ಪುತ್ರಿಯರಿಗೆ ಉಯ್ಯಿಲೆ ಆಡಿಸುತ್ತೇನೆ. ಮನೆಯಲ್ಲಿನ ಕಸ ಕಡ್ಡಿ ಸ್ವಚ್ಛ ಮಾಡ್ತೀನಿ. ಚಿಕ್ಕ ಪುಟ್ಟ ಚಪ್ಪಲಿಗಳು ಮನೆಯಲ್ಲೆಲ್ಲಾ ಎಲ್ಲಿ ಅಂದರೆ ಅಲ್ಲಿ ಇರುತ್ತದೆ. ಅದನ್ನು ಒಂದು ಕಡೆ ಜೋಡಿಸುತ್ತೇನೆ. ಆದರೆ ಹಾಳಾದ ಕಥೆ ಮಾತ್ರ ನನ್ನ ಜೇಬಿನಲ್ಲಿಯೇ ಇರುತ್ತದೆ. ಆದರೂ ನನ್ನ ಮೆದುಳಿಗೆ ಹೋಗದು. ನಾನಂತೂ ವಿಲವಿಲ ಒದ್ದಾಡುತ್ತೇನೆ.
ಆತಂಕ ಮತ್ತೂ ಹೆಚ್ಚಾದಾಗ ಬಾತ್‌ರೂಮ್‌ಗೆ ಹೋಗುತ್ತೇನೆ. ಆದರೆ ಅಲ್ಲೂ ಏನೂ ಸಿಗುವುದಿಲ್ಲ. ಪ್ರತಿ ದೊಡ್ಡ ಮನುಷ್ಯ ಶೌಚಾಲಯದಲ್ಲಿ ಆಲೋಚಿಸುತ್ತಾನೆ ಅಂತ ಕೇಳಿದ್ದೀನಿ. ನನ್ನ ಅನುಭವದ ಪ್ರಕಾರ ನನಗೆ ಅರ್ಥವಾಗಿದ್ದೇನೆಂದರೆ ನಾನು ದೊಡ್ಡ ಮನುಷ್ಯ ಅಲ್ಲ. ಏಕೆಂದರೆ ನಾನು ಶೌಚಾಲಯದಲ್ಲಿ ಸಹಾ ಏನನ್ನೂ ಆಲೋಚಿಸಲಾರೆ.
ವಿಚಿತ್ರವಲ್ಲದೆ ಮತ್ತೇನು. ನಾನು ಪಾಕಿಸ್ತಾನ್, ಹಿಂದೂಸ್ಥಾನ್‌ಗಳಲ್ಲಿ ತುಂಬಾ ಹೆಸರಿರುವ ಲೇಖಕ. ಹಾಗಾದರೆ ಇದೆಲ್ಲಾ ನನ್ನ ವಿಮರ್ಶಕರ ಪುಣ್ಯವಾದರೂ ಆಗಿರಬೇಕು. ಇಲ್ಲವೇ ನಾನು ಅವರ ಕಣ್ಣಗಳ ಧೂಳನ್ನಾದರೂ ಹೊಡೆಯುತ್ತಿರಬೇಕು. ಇಲ್ಲವೇ ಅವರನ್ನು ಮಾಯೆಯಾದರೂ ಮಾಡುತ್ತಾ ಇರಬೇಕು.
ಹೇಳಬೇಕೆಂದಿದ್ದು ಏನೆಂದರೆ, ನಾನು ಖುದಾನ ಮನಸ್ಸಿನಲ್ಲಿಟ್ಟುಕೊಂಡು ಹೇಳ್ತಿದ್ದೀನಿ, ನಾನು ಕಥೆಗಳನ್ನೇಕೆ ಬರೆಯುತ್ತೇನೋ, ಹೇಗೆ ಬರೆಯುತ್ತೇನೋ ನನಗೆ ತಿಳಿಯದು. ಬಹಳ ಸಲ ಪರಿಸ್ಥಿತಿ ಹೇಗಿರುತ್ತದೆ ಎಂದರೆ, ನಾನು ಸಂಕಟಪಡುತ್ತಿರುವಾಗ ನಮ್ಮಾಕೆ ಬಂದು ಅನ್ನುತ್ತಾಳೆ, ‘‘ನೀವು ಆಲೋಚಿಸಬೇಡಿ. ಲೇಖನಿ ತಗೊಂಡು ಬರೆಯಲು ಮೊದಲು ಮಾಡಿ’’.
ನಾನು ಆಕೆಯ ಮಾತಿನ ಪ್ರಕಾರ ಪೆನ್ನೋ, ಪೆನ್ಸಿಲೋ ತೆಗೆದು ಕೊಳ್ಳುತ್ತೇನೆ, ಕಥೆ ಬರೆಯಲು ಆರಂಭಿಸುತ್ತೇನೆ. ತಲೆ ಪೂರಾ ಖಾಲಿಯಾಗಿ ಇರ್ತದೆ. ಆದರೆ ಜೇಬಿನಲ್ಲಿ ಭರ್ತಿಯಾಗಿ ಸಾಮಗ್ರಿ ಇರುತ್ತದೆ. ಯಾವುದೋ ಒಂದು ಕಥೆ ಅದೇ ಜಿಗಿಯುತ್ತಾ ಹೊರಗೆ ಬಂದು ಬಿಡುತ್ತದೆ.
ಈ ಲೆಕ್ಕದ ಪ್ರಕಾರ ನನ್ನನ್ನು ನಾನು ಕಥಾಲೇಖಕ ಅಂತ ಅಲ್ಲ. ಜೇಬು ಕತ್ತರಿಸುವವ ಅಂತ ಅಂದುಕೊಳ್ತೀನಿ. ನಾನು ನನ್ನ ಜೇಬನ್ನೇ ಕತ್ತರಿಸಿಕೊಂಡು ನಿಮಗೆ ಒಪ್ಪಿಸುತ್ತೇನೆ.
ನನ್ನಂತಹ ಮೂರ್ಖ ಈ ಜಗತ್ತಿನಲ್ಲಿ ಇನ್ನೊಬ್ಬ ಇರುತ್ತಾನಾ!