ನೀಲ ಕುರಿಂಜಿ ಎಂಬ ವಿಸ್ಮಯದ ಹೂವು
ಇದೀಗ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನ ಗಿರಿ ಬೆಟ್ಟ ಹಸಿರು ಹಾಸಿಗೆಯ ಮೇಲೆ ನೀಲಿ ಹೂ ಚೆಲ್ಲಿದ ಮಧುಮಂಚದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಅಪರೂಪದಲ್ಲೇ ಅಪರೂಪವೆನ್ನಬಹುದಾದ ನೀಲ ಕುರಿಂಜಿ ಹೂವುಗಳು. ಹನ್ನೆರಡು ವರ್ಷಗಳಿಗೊಮ್ಮೆ ಕಾಣಸಿಗುವ ಈ ಅಪರೂಪದ ಹೂವುಗಳು ಅರಳುವ ಜಗತ್ತಿನ ಮೂರೇ ಮೂರು ಪ್ರದೇಶಗಳಲ್ಲಿ ನಮ್ಮ ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ ಬೆಟ್ಟವೂ ಒಂದು. ಚಿಕ್ಕಮಗಳೂರು ಬಿಟ್ಟರೆ ನೀಲಕುರಿಂಜಿ ಅರಳುವ ಇನ್ನೆರಡು ಪ್ರದೇಶಗಳೂ ಇರುವುದು ನಮ್ಮ ದಕ್ಷಿಣ ಭಾರತದಲ್ಲೇ ಆಗಿದೆ. ಒಂದು ತಮಿಳುನಾಡಿನ ಕೊಡೈಕನಾಲ್ ಎರಡನೆಯದ್ದು ಕೇರಳದ ಮನ್ನಾರ್. ಈ ಮೂರೂ ಪ್ರದೇಶಗಳು ಪ್ರಕೃತಿಯ ಅತ್ಯಂತ ರಮಣೀಯ ತಾಣಗಳೂ ಹೌದು. ಸೂಫಿ ಸಂತ ಬಾಬಾ ಬುಡಾನ್ ಮತ್ತು ಅವಧೂತ ಪಂಥದ ದತ್ತಾತ್ರೇಯ ಸ್ವಾಮಿಗಳ ಸಂಗಮದಿಂದ ಭಾರತದ ಒಂದು ಅಪೂರ್ವ ಸೌಹಾರ್ದ ಶ್ರದ್ಧಾ ಕೇಂದ್ರವಾಗಿರುವ ಇದು ತನ್ನ ಅಂತರಂಗ ಮತ್ತು ಬಹಿರಂಗದ ಸೌಂದರ್ಯಕ್ಕೆ ಹೆಸರಾಗಿದ್ದರೂ ಮಾನವನ ಸ್ವಾರ್ಥ ರಾಜಕೀಯಕ್ಕೆ ಬಲಿಯಾಗಿರುವುದು ದುರದೃಷ್ಟಕರ.
ಒಂದೊಮ್ಮೆ ಇಡೀ ಬಾಬಾ ಬುಡಾನ್ ಗಿರಿಯನ್ನು ಹನ್ನೆರಡು ವರ್ಷಗಳಿಗೊಮ್ಮೆ ನೀಲಿಯಾಗಿಸುತ್ತಿದ್ದ ಈ ಹೂವು ಬೆಳೆಯುವ ಪ್ರದೇಶಗಳ ತುಂಬಾ ಕಾಫಿ ಮತ್ತು ಟೀ ಎಸ್ಟೇಟ್‌ಗಳು ತಲೆಯೆತ್ತಿರುವುದರಿಂದ ನೀಲ ಕುರಿಂಜಿ ಬೆಳೆಯುವ ಪ್ರದೇಶಗಳು ಕಡಿಮೆಯಾಗಿವೆ.
ಈ ಕುರಿಂಜಿ ಹೂಗಳು ಪಶ್ಚಿಮ ಘಟ್ಟದ ಶೋಲಾ ಕಾಡುಗಳ ಅನನ್ಯತೆಯಾಗಿದೆ. ನೆರೆಯ ಕೇರಳದಲ್ಲಿ ನೀಲ ಕುರಿಂಜಿ ಅರಳುವ ಪ್ರದೇಶಗಳನ್ನು ಸಂರಕ್ಷಿಸಬೇಕೆಂದು ಪರಿಸರವಾದಿಗಳು ಒಂದು ಆಂದೋಲನವನ್ನೇ ಕೈ ಗೊಂಡಿದ್ದರಂತೆ. ತಮಿಳುನಾಡು ಮತ್ತು ಕೇರಳದಲ್ಲಿ ಕುರಿಂಜಿ ಬೆಳೆಯುವ ಪ್ರದೇಶಗಳಲ್ಲಿ ವಿದ್ಯುತ್ ಯೋಜನೆಗಳು ಸ್ಥಾಪನೆಯಾಗಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಕುರಿಂಜಿ ಬೆಳೆಯುವ ಪ್ರದೇಶಗಳು ನಾಶವಾಗಿತ್ತು. ಪರಿಸರವಾದಿಗಳ ಆಂದೋಲನದಿಂದ ಅಲ್ಲಿನ ಸರಕಾರಗಳು ಅವನ್ನು ಸಂರಕ್ಷಿತ ಪ್ರದೇಶಗಳ ಪಟ್ಟಿಗೆ ಸೇರಿಸಿವೆ. ಒಂದೊಮ್ಮೆ ನಮ್ಮ ಬಾಬಾ ಬುಡಾನ್ ಗಿರಿಯಲ್ಲೂ ಕೊಡೈಕನಾಲ್ ಮತ್ತು ಮನ್ನಾರ್‌ನಷ್ಟೇ ವಿಸ್ತಾರವಾಗಿ ಕುರಿಂಜಿ ಅರಳುತ್ತಿತ್ತು. ಇದೀಗ ಮನ್ನಾರ್ ಮತ್ತು ಕೊಡೈಕನಾಲ್ ಗೆ ಹೋಲಿಸಿದರೆ ಬಾಬಾ ಬುಡಾನ್ ಗಿರಿಯಲ್ಲಿ ಕುರಿಂಜಿ ಅರಳುವ ಪ್ರದೇಶಗಳು ಕಡಿಮೆಯಾಗಿವೆ. 2006ರ ಅಕ್ಟೋಬರ್ ತಿಂಗಳ ಮೊದಲ ವಾರವನ್ನು ಕುರಿಂಜಿ ಹಬ್ಬವೆಂದು (ಕುರಿಂಜಿ ಉಲ್ಸವಂ) ಕೇರಳ ಸರಕಾರ ಆಚರಿಸಿತ್ತು.
ನೀಲಗಿರಿ ಬೆಟ್ಟಗಳೇನಿವೆಯೋ ಅವುಗಳ ತುಂಬಾ ನೀಲಗಿರಿ ಮರಗಳಿರುವುದರಿಂದ ಅವಕ್ಕೆ ನೀಲಗಿರಿ ಬೆಟ್ಟಗಳೆಂಬ ಹೆಸರು ಬಂದಿವೆಯೆಂದು ಒಂದು ನಂಬಿಕೆಯಾದರೂ ಕೇರಳ ಮತ್ತು ತಮಿಳುನಾಡಿನ ಕುರಿಂಜಿ ಅರಳುವ ಪ್ರದೇಶದ ಅನೇಕ ಬುಡಕಟ್ಟು ಜನರು ಈ ನೀಲ ಕುರಿಂಜಿಯಿಂದಾಗಿಯೇ ನೀಲಗಿರಿ ಎಂಬ ಹೆಸರು ಬಂದಿದೆಯೆಂದು ಹೇಳುತ್ತಾರೆ.
ಕೇರಳ ಮತ್ತು ತಮಿಳುನಾಡಿನ ಪರಿಸರವಾದಿಗಳ ಆಂದೋಲನದ ಫಲವಾಗಿ 2006ರ ಮೇ ತಿಂಗಳಲ್ಲಿ ಅಂದಿನ ಕೇಂದ್ರ ಸರಕಾರವು ನೀಲ ಕುರಿಂಜಿ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು.
ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ತಲೆತಲಾಂತರಗಳಿಂದ ನೀಲ ಕುರಿಂಜಿ ಅರಳುತ್ತಿದ್ದರೂ 1800ರ ಸುಮಾರಿನಲ್ಲಿ ಬ್ರಿಟಿಷ್ ಸಸ್ಯ ಶಾಸ್ತ್ರಜ್ಞರು ಇದನ್ನು ಗುರುತಿಸಿ ಜಗತ್ತಿನ ಹದಿನೆಂಟು ಅಪೂರ್ವ ಜೀವ ವೈವಿಧ್ಯತೆಯ ತಾಣಗಳ ಪಟ್ಟಿಗೆ ಕುರಿಂಜಿ ಅರಳುವ ಬಾಬಾ ಬುಡಾನ್ ಗಿರಿ, ಮನ್ನಾರ್ ಮತ್ತು ಕೊಡೈಕನಾಲನ್ನು ಸೇರಿಸುವಲ್ಲಿ ಯಶಸ್ಸು ಕಂಡಿದ್ದರು.
ಕೇರಳ ಮತ್ತು ತಮಿಳುನಾಡಿನ ಕುರಿಂಜಿ ಅರಳುವ ಸುತ್ತ ಮುತ್ತಲ ಪ್ರದೇಶದ ಕೆಲವು ಬುಡಕಟ್ಟುಗಳ ಜನರು ತಮ್ಮ ವಯಸ್ಸನ್ನು ಕುರಿಂಜಿ ಅರಳುವ ಹನ್ನೆರಡು ವರ್ಷಗಳ ಆಧಾರದಲ್ಲಿ ಲೆಕ್ಕ ಹಾಕುತ್ತಾರಂತೆ.
ತಮಿಳರಿಗೂ ನೀಲಕುರಿಂಜಿಗೂ ಒಂದು ವಿಶೇಷ ಭಾವನಾತ್ಮಕ ನಂಟಿದೆ. ಅದಕ್ಕೆ ಕಾರಣ ತಮಿಳು ಪುರಾಣ ಸಾಹಿತ್ಯದಲ್ಲಿ ಮುರುಗನ್ ದೇವನು ವಲ್ಲಿಯನ್ನು ವರಿಸಿದಾಗ ಆಕೆಗೆ ಕುರಿಂಜಿ ಹೂವಿನ ಹಾರವನ್ನು ಹಾಕಿದ್ದನಂತೆ. ಆದುದರಿಂದ ಕುರಿಂಜಿ ಹೂಗಳು ಬಾಡಿ ಅದರ ಬೀಜಗಳು ಎಲ್ಲೆಡೆ ಅರಳುವವರೆಗೆ ಅವುಗಳನ್ನು ಅವರು ಮುಟ್ಟುವುದಿಲ್ಲವಂತೆ.
ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯು ತಡವಾಗಿಯಾದರೂ ಈ ಬಾರಿ ಎಚ್ಚೆತ್ತುಕೊಂಡಿರುವುದು ಸಮಾಧಾನ ತಂದಿದೆ. ನಮ್ಮ ನಾಡಿನ ಅಪೂರ್ವ ಪ್ರಕೃತಿ ಸೌಂದರ್ಯ ಮತ್ತು ಸೌಹಾರ್ದ ಸೌಂದರ್ಯದ ತಾಣವಾದ ಬಾಬಾಬುಡಾನ್ ಗಿರಿಯನ್ನು ಎಲ್ಲಾ ರಾಜಕೀಯ ಹಿತಾಸಕ್ತಿಗಳಿಂದ ಮುಕ್ತಗೊಳಿಸುವ ಕೆಲಸ ತುರ್ತಾಗಿ ಆಗಲೇಬೇಕಿದೆ. ಕುರಿಂಜಿ ಹೂವು ಅರಳುವ ಪ್ರದೇಶಗಳನ್ನು ರಕ್ಷಿಸಲು ವಿಶೇಷ ಕಾರ್ಯ ಯೋಜನೆ ಹಾಕಿ ಕೊಳ್ಳಬೇಕಿದೆ.
(ಆಧಾರ: ‘ಕಂಡ ಹಾಗೆ’, ಗೌರಿ ಲಂಕೇಶ್)