ಕಸ್ತೂರಿ ರಂಗನ್ ವರದಿ
ಜನಸಾಮಾನ್ಯರ ಬದುಕುಗಳ ಮೇಲಿನ ಎರಡಲಗಿನ ತೂಗುಗತ್ತಿ
ಈಗ ಕಸ್ತೂರಿರಂಗನ್ ವರದಿಯನ್ನು ಹೇಗಾದರೂ ಜಾರಿ ಮಾಡಬೇಕೆನ್ನುವ ದನಿಗಳನ್ನು ಸ್ವಲ್ಪಬಲವಾಗಿಯೇ ಎಬ್ಬಿಸಲಾಗುತ್ತಿದೆ. ಅದಕ್ಕೆ ಈ ಬಾರಿ ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲುಗಳಲ್ಲಿ ಸಂಭವಿಸಿದ ಜಲಪ್ರವಾಹ, ಭೂಕುಸಿತ, ಆಸ್ತಿಪಾಸ್ತಿ ನಷ್ಟ ಹಾಗೂ ಪ್ರಾಣಹಾನಿಗಳನ್ನು ನೆಪ ಮಾಡಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವ ನೆಪ ಕೂಡ ಅಲ್ಲಿದೆ.
ಪಶ್ಚಿಮ ಘಟ್ಟಗಳ ಮೇಲೆ ಮತ್ತೆ ದಾಳಿಗಳ ಸೂಚನೆಗಳು ಕಾಣುತ್ತಿವೆ. ಮೊದಲಿಗೆ ಮೀಸಲು ಅರಣ್ಯ, ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ, ಇತ್ಯಾದಿಗಳು ಪಶ್ಚಿಮ ಘಟ್ಟಗಳನ್ನು ಉಳಿಸಿ ಸಂರಕ್ಷಿಸುವ ಹೆಸರಿನಲ್ಲಿ ಜಾರಿಗೆ ತರಲಾಯಿತು. ಆಗಲೂ ಅದು ಬಲಾಢ್ಯರ ಭೂಮಿ ವಸತಿಗಳನ್ನು ಒಳಗೊಂಡಿರಲಿಲ್ಲ. ಕೇವಲ ಆದಿವಾಸಿಗಳು, ಇನ್ನಿತರ ಬಡಜನರು, ಕೆಲವು ಮಧ್ಯಮ ಮಟ್ಟದಲ್ಲಿರುವ ಜನಸಾಮಾನ್ಯರು ತಲೆ ತಲಾಂತರಗಳಿಂದ ವಾಸಿಸುತ್ತಿದ್ದ ಭೂಮಿಗಳನ್ನು ಇಂತಹ ಯೋಜನೆಗಳ ಅಡಿಯಲ್ಲಿ ತರಲಾಗಿತ್ತು. ಈ ರೀತಿ ದೇಶಾದ್ಯಂತ ಲಕ್ಷಾಂತರ ಜನಸಾಮಾನ್ಯರನ್ನು ಒಕ್ಕಲೆಬ್ಬಿಸಿ ಅವರ ಬದುಕುಗಳನ್ನು ನಿರ್ನಾಮ ಮಾಡುತ್ತಾ ಬರಲಾಗುತ್ತಿದೆ.
ಈಗ ಕಸ್ತೂರಿರಂಗನ್ ವರದಿಯನ್ನು ಹೇಗಾದರೂ ಜಾರಿ ಮಾಡಬೇಕೆನ್ನುವ ದನಿಗಳನ್ನು ಸ್ವಲ್ಪಬಲವಾಗಿಯೇ ಎಬ್ಬಿಸಲಾಗುತ್ತಿದೆ. ಅದಕ್ಕೆ ಈ ಬಾರಿ ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲುಗಳಲ್ಲಿ ಸಂಭವಿಸಿದ ಜಲಪ್ರವಾಹ, ಭೂಕುಸಿತ, ಆಸ್ತಿಪಾಸ್ತಿ ನಷ್ಟ ಹಾಗೂ ಪ್ರಾಣಹಾನಿಗಳನ್ನು ನೆಪ ಮಾಡಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವ ನೆಪ ಕೂಡ ಅಲ್ಲಿದೆ.
ಈ ಹಿಂದೆ ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯವು ಪಾರಿಸಾರಿಕವಾಗಿ ಅತಿ ಸೂಕ್ಷ್ಮ ಪಶ್ಚಿಮ ಘಟ್ಟ ಪ್ರದೇಶಗಳ ರಕ್ಷಣೆಯ ಬಗ್ಗೆ ಅಧ್ಯಯನ ವರದಿ ನೀಡಲು ಫ್ರೊ. ಮಾಧವ ಗಾಡ್ಗೀಳ್ ಸಮಿತಿಯನ್ನು ರಚಿಸಿತ್ತು. ಅದು ನೀಡಿದ ವರದಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಮಾನವ ಚಟುವಟಿಕೆಗಳನ್ನೂ ನಿಲ್ಲಿಸಬೇಕೆನ್ನುವಂತೆ ಶಿಫಾರಸು ಮಾಡಿತ್ತು. 6 ರಾಜ್ಯಗಳ 44 ಜಿಲ್ಲೆಗಳು 143 ತಾಲೂಕುಗಳನ್ನು ಒಳಗೊಂಡ 1,490 ಕಿಲೋಮೀಟರುಗಳಷ್ಟು ಉದ್ದದ 1,29,037 ಚದರ ಕಿಮೀಗಳಷ್ಟು ಪ್ರದೇಶವನ್ನು ಇದಕ್ಕಾಗಿ ಗುರುತಿಸಿತ್ತು. ಮತ್ತೆ ಇದನ್ನು ಹಲವು ಪಾರಿಸಾರಿಕ ಸೂಕ್ಷ್ಮವಲಯಗಳಾಗಿ ವಿಂಗಡಿಸಿತ್ತು. ಅವನ್ನು ಇಎಸ್‌ಝೆಡ್ (ಎಕಾಲಜಿಕಲಿ ಸೆನ್ಸಿಟೀವ್ ರೆನ್) 1,2,3 ಹೀಗೆಲ್ಲಾ ವಿಂಗಡಿಸಿ ಕ್ರಮವಾಗಿ ಅಲ್ಲೆಲ್ಲಾ ಬಹುತೇಕ ಮಾನವ ಚಟುವಟಿಕೆಗಳನ್ನು ತಡೆಯಬೇಕೆಂಬ ಶಿಫಾರಸುಗಳನ್ನು ಮಾಡಿತ್ತು. ಅವುಗಳಲ್ಲಿ ರಸ್ತೆ, ವಸತಿ, ಕೃಷಿ, ಕೈಗಾರಿಕೆ, ಗಣಿಚಟುವಟಿಕೆಗಳು, ಮರಳುಗಾರಿಕೆ ಇತ್ಯಾದಿಗಳಿದ್ದವು. ಅಲ್ಲದೇ ಏಕರೀತಿಯ ತೋಟಗಾರಿಕೆ, ನೀಲಗಿರಿಯಂತಹ ನೆಡುತೋಪುಗಳ ಬಗ್ಗೆಯೂ ಹೆಸರಿಸಿ ನಿಲ್ಲಿಸಲು ಸೂಚಿಸಿತ್ತು. ಜೊತೆಗೆ ಈ ಪ್ರದೇಶದಲ್ಲಿರುವ ಎಲ್ಲಾ ಜಲಾಶಯಗಳು, ವಿದ್ಯುತ್ ಸ್ಥಾವರಗಳು, ರೆಸಾರ್ಟ್‌ಗಳು ಹೀಗೆ ಎಲ್ಲವನ್ನೂ ಸ್ಥಗಿತಗೊಳಿಸಲು ಹೇಳಿತ್ತು. 25ರಿಂದ 50 ವರ್ಷ ಹಳೆಯದಾದ ಜಲಾಶಯಗಳನ್ನು ಒಡೆದು ನದಿ ತೊರೆಗಳ ನೀರು ಸಹಜವಾಗಿ ಹರಿಯುವಂತೆ ಮಾಡಬೇಕೆಂದು ಹೇಳಿತ್ತು. ಪ್ರವಾಸೋದ್ಯಮದ ಮೇಲೆ ಬಿಗಿ ನಿರ್ಬಂಧಗಳನ್ನು ಹೇರಲು ಶಿಫಾರಸು ಮಾಡಿತ್ತು. ಜೊತೆಗೆ ಇವುಗಳ ಮೇಲೆ ನಿಗಾ ವಹಿಸಲು ಕೇಂದ್ರ ಮಟ್ಟದಲ್ಲಿ ಹಾಗೂ ರಾಜ್ಯ, ಜಿಲ್ಲಾ , ತಾಲೂಕು ಮಟ್ಟದಲ್ಲಿ ವೆಸ್ಟರ್ನ್ ಘಾಟ್ ಎಕಾಲಜಿ ಅಥಾರಿಟಿ ಎಂಬ ಆಡಳಿತಾಂಗವನ್ನು ಸ್ಥಾಪಿಸಲು ಶಿಫಾರಸು ಮಾಡಿತ್ತು.
(WGEEP) ಫ್ರೊ. ಮಾಧವ ಗಾಡ್ಗೀಳ್ ಮುಖ್ಯಸ್ಥರಾಗಿದ್ದ ವೆಸ್ಟರ್ನ್ ಘಾಟ್ ಎಕಾಲಜಿ ಎಕ್ಸ್ ಪರ್ಟ್ ಪಾನೆಲ್ ತನ್ನ ವರದಿಯನ್ನು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸಲ್ಲಿಸಿದ್ದು ಆಗಸ್ಟ್ 31,2011ರಂದು. ಸುಮಾರು ಒಂದು ವರ್ಷಗಳ ಸಮಯವನ್ನು ಇದಕ್ಕಾಗಿ ತೆಗೆದುಕೊಂಡಿತ್ತು.
ಗಾಡ್ಗೀಳ್ ವರದಿ ಮಾಡಿದ ಶಿಫಾರಸುಗಳ ಮೇಲೆ ತೀಕ್ಷ್ಣ ಪ್ರತಿಕ್ರಿಯೆಗಳು ಹಲವು ವಲಯಗಳಿಂದ ಬಂದದ್ದರಿಂದ ಈ ವರದಿಯನ್ನು ಸಮತೋಲನ ರೀತಿಯಲ್ಲಿ ಜಾರಿಗೊಳಿಸುವ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ವಿಜ್ಞಾನಿ ಕಸ್ತೂರಿರಂಗನ್‌ರ ನೇತೃತ್ವದ ಸಮಿತಿಯನ್ನು ಸರಕಾರ ನೇಮಿಸಿತು.
ಹೈ ಲೆವೆಲ್ ವರ್ಕಿಂಗ್ ಗ್ರೂಪ್ ಎಂದು ಕರೆದುಕೊಂಡ ಕಸ್ತೂರಿ ರಂಗನ್ ಸಮಿತಿಯ ವರದಿ ಮಾಧವ್ ಗಾಡ್ಗೀಳ್ ವರದಿಯಲ್ಲಿ ಗುರುತಿಸಿದ್ದ 1,64,280 ಚದರ ಕಿಮೀ ಪ್ರದೇಶದ ಶೇ.40 ಭಾಗವನ್ನು ಮಾತ್ರ ಪಾರಿಸಾರಿಕ ಸೂಕ್ಷ್ಮ ಪ್ರದೇಶವನ್ನಾಗಿ ಗುರುತಿಸುತ್ತದೆ. ಮುಂದುವರಿದು ಈ ಪ್ರದೇಶವು ಕಡಿಮೆ ಜನವಸತಿಯಿಂದ ಕೂಡಿದ್ದು ಸಮೃದ್ಧ ಕಾಡಿನ ಪ್ರದೇಶವಾಗಿದೆ ಎಂದು ಹೇಳುತ್ತದೆ. ಅಲ್ಲದೆ ಸುಮಾರು ಒಟ್ಟು ಪಶ್ಚಿಮ ಘಟ್ಟದ ಶೇ. 37ರಷ್ಟು ಸಿಗಬಹುದಾದ, ಅಂದರೆ 60,000 ಚದರ ಕಿಮೀ ಪ್ರದೇಶವನ್ನು ಇದಕ್ಕಾಗಿ ಗುರುತಿಸುತ್ತದೆ. ಈ ಪ್ರದೇಶದಲ್ಲಿ ಕೃಷಿ, ಗಣಿಗಾರಿಕೆ, ರಸ್ತೆ ಇತ್ಯಾದಿ ಅಭಿವೃದ್ಧಿ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಶಿಫಾರಸು ಮಾಡುತ್ತದೆ. ಅಂದರೆ ಅಲ್ಲಿ ಈಗಾಗಲೇ ಘೋಷಿತವಾಗಿರುವ ಮೀಸಲು ಅರಣ್ಯ, ಅಭಯಾರಣ್ಯ, ರಕ್ಷಿತಾರಣ್ಯ, ಹುಲಿ ಯೋಜನೆ, ರಾಷ್ಟ್ರೀಯ ಉದ್ಯಾನವನ ಮೊದಲಾದವುಗಳನ್ನು ಬಿಗಿಯಾಗಿ ಜಾರಿಗೊಳಿಸಲು ಹೇಳುತ್ತದೆ. ಈ ಪ್ರದೇಶದಲ್ಲಿ ನೀರಾವರಿಯಾಗಲೀ, ಯಾವುದೇ ವಿದ್ಯುತ್ ಯೋಜನೆಗಳಾಗಲೀ ಮಾಡಬಾರದೆಂದು ಶಿಫಾರಸು ಮಾಡುತ್ತದೆ. ಅದೇ ವೇಳೆಯಲ್ಲೇ ಕರ್ನಾಟಕದ ಗುಂಡ್ಯ ಮತ್ತು ಕೇರಳದ ಆತಿರಾಪಳ್ಳಿ ವಿದ್ಯುತ್ ಯೋಜನೆಗಳು ಇದೇ ಪಾರಿಸಾರಿಕ ಸೂಕ್ಷ್ಮ ಪ್ರದೇಶದಲ್ಲೇ ಬರುತ್ತವಾದರೂ ಅವುಗಳನ್ನು ಅತ್ಯಂತ ಜಾಗರೂಕತೆಯಿಂದ ಜಾರಿಮಾಡಬೇಕೆಂದು ಹೇಳುತ್ತದೆ. ಇದರಲ್ಲಿ ಕರ್ನಾಟಕದ ಗುಂಡ್ಯ ಕಿರು ಜಲವಿದ್ಯುತ್ ಯೋಜನೆ ಖಾಸಗಿ ಕಾರ್ಪೊರಟ್ ಕಂಪೆನಿ ನಿರ್ಮಿಸುತ್ತಿದೆ ಎಂಬುದನ್ನು ಇಲ್ಲಿ ಒತ್ತುಕೊಟ್ಟು ಗಮನಿಸಬೇಕು. ಹಾಗೇನೇ ಮಾಧವ ಗಾಡ್ಗೀಳ್ ವರದಿ ಸ್ಥಗಿತಗೊಳಿಸಲು ಶಿಫಾರಸು ಮಾಡಿದ್ದ ಏಕರೀತಿಯ ಪ್ಲಾಂಟೇಷನ್ ಬೆಳೆಗಳಾದ ಕಾಫಿ, ಚಹಾ, ಏಲಕ್ಕಿ, ಕಾಳುಮೆಣಸು, ಮೊದಲಾದವುಗಳನ್ನು ಪರಿಸರ ಸ್ನೇಹಿ ಎಂದು ಗುರುತಿಸುವ ಮೂಲಕ ಸಾವಿರಾರು ಎಕರೆಗಳನ್ನು ಕಬಳಿಸಿರುವ ಭಾರೀ ಪ್ಲಾಂಟರುಗಳನ್ನು ಬಚಾವು ಮಾಡುತ್ತದೆ. ವಾಸ್ತವದಲ್ಲಿ ಕರ್ನಾಟಕದ ಚಿಕ್ಕಮಗಳೂರು, ಕೊಡಗು, ಹಾಸನದ ಸಕಲೇಶಪುರ, ಕೇರಳದ ಇಡುಕ್ಕಿ, ವಯನಾಡ್ ಮೊದಲಾದ ಭಾಗದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಿರಂತರ ಕಳೆನಾಶಕ, ಕೀಟನಾಶಕ, ಇನ್ನಿತರ ರಾಸಾಯನಿಕಗಳನ್ನು ಈ ಭಾರಿ ಪ್ಲಾಂಟರುಗಳು ಭಾರೀ ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ. ಜೊತೆಗೆ ಕಾಫಿ ಬೀಜವನ್ನು ಕವಚದಿಂದ ಬೇರ್ಪಡಿಸುವ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ನೈಸರ್ಗಿಕ ನೀರಿನ ಮೂಲಗಳು ಮಲಿನವಾಗುತ್ತಿವೆ. ಈ ಅಂಶಗಳನ್ನು ಕಸ್ತೂರಿರಂಗನ್ ವರದಿ ಜಾಣತನದಿಂದ ಮರೆಮಾಚುತ್ತದೆ. ಜೊತೆಗೆ ಮಾಧವ್ ಗಾಡ್ಗೀಳ್ ವರದಿ ಶಿಫಾರಸು ಮಾಡಿದ್ದ ಪಾರಿಸಾರಿಕ ಸೂಕ್ಷ್ಮ ವಲಯದ ಮೇಲೆ ನಿಗಾ ಇಟ್ಟು ಸಂರಕ್ಷಿಸಲು ಕೇಂದ್ರ, ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಆಡಳಿತಾಂಗಗಳನ್ನು ರಚಿಸಬೇಕೆಂಬುದರ ಬದಲಿಗೆ ಕಸ್ತೂರಿ ರಂಗನ್ ವರದಿ ಕೇಂದ್ರೀಯವಾಗಿ ವೆಸ್ಟರ್ನ್ ಘಾಟ್ ಎಕಾಲಜಿ ಅಥಾರಿಟಿ ಎಂಬ ಒಂದೇ ಆಡಳಿತಾಂಗ ರಚಿಸಿ ಅದರ ವ್ಯಾಪ್ತಿಗೆ ಇಡೀ ಪಶ್ಚಿಮ ಘಟ್ಟದ ಪಾರಿಸಾರಿಕ ಸೂಕ್ಷ್ಮ ಪ್ರದೇಶವನ್ನು ತರಬೇಕೆಂದು ಶಿಫಾರಸು ಮಾಡುತ್ತದೆ. ಇದು ನೇರವಾಗಿ ರಾಜ್ಯಗಳ ಅಧಿಕಾರ ಹಾಗೂ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಬಲಿಕೊಡುವ ಶಿಫಾರಸು ಎಂಬುದು ಗಮನಾರ್ಹ ವಿಚಾರ. ಈ ವಿಚಾರವನ್ನು ಕೇರಳದಂತಹ ಕೆಲವು ರಾಜ್ಯಗಳು ಪ್ರಶ್ನಿಸಿವೆ ಕೂಡ.
ಕಸ್ತೂರಿರಂಗನ್ ವರದಿ ಪ್ರಕಾರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ 1, ಖಾನಾಪುರದ 62 ಹಳ್ಳಿಗಳು; ಚಾಮರಾಜನಗರ ಗುಂಡ್ಲುಪೇಟೆಯ 21 ಹಳ್ಳಿಗಳು; ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ 27, ಕೊಪ್ಪ 32, ಮೂಡಿಗೆರೆಯ 27, ನರಸಿಂಹರಾಜಪುರದ 35, ಶೃಂಗೇರಿಯ 26 ಹಳ್ಳಿಗಳು; ಕೊಡಗು ಜಿಲ್ಲೆಯ ಮಡಿಕೇರಿಯ 23, ಸೋಮವಾರ ಪೇಟೆಯ 11, ವೀರಾಜಪೇಟೆಯ 21ಹಳ್ಳಿಗಳು; ಹಾಸನ ಜಿಲ್ಲೆಯ ಆಲೂರು 1, ಸಕಲೇಶಪುರದ 34 ಹಳ್ಳಿಗಳು; ಉತ್ತರಕನ್ನಡ ಜಿಲ್ಲೆಯ ಅಂಕೋಲದ 43, ಭಟ್ಕಳದ 28, ಹೊನ್ನಾವರದ 44, ಜೋಯಿಡಾದ 110, ಕಾರವಾರದ 39, ಕುಮಟಾದ 43, ಸಿದ್ದಾಪುರದ 107, ಸಿರ್ಸಿಯ 125, ಯಲ್ಲಾಪುರದ 87 ಹಳ್ಳಿಗಳು; ದಕ್ಷಿಣಕನ್ನಡದ ಬೆಳ್ತಂಗಡಿಯ 17, ಪುತ್ತೂರಿನ 11, ಸುಳ್ಯದ 18 ಹಳ್ಳಿಗಳು; ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯ 62 ಹಳ್ಳಿಗಳು; ಶಿವಮೊಗ್ಗ ಜಿಲ್ಲೆಯ ಹೊಸನಗರ 126, ಸಾಗರದ134, ಶಿಕಾರಿಪುರದ 12, ಶಿವಮೊಗ್ಗದ 66, ತೀರ್ಥಹಳ್ಳಿಯ 146 ಹಳ್ಳಿಗಳು; ಉಡುಪಿ ಜಿಲ್ಲೆಯ ಕಾರ್ಕಳ 13, ಕುಂದಾಪುರ 24 ಹಳ್ಳಿಗಳು ಹೀಗೆ ಕರ್ನಾಟಕದ ಒಟ್ಟು 1,576 ಹಳ್ಳಿಗಳನ್ನು ಪಶ್ಚಿಮ ಘಟ್ಟ ಪಾರಿಸಾರಿಕ ಸೂಕ್ಷ್ಮ ಪ್ರದೇಶದೊಳಗೆ ತರಲಾಗಿದೆ.
ಅಂದರೆ ಒಂದಂತೂ ಸ್ಪಷ್ಟ. ಕಸ್ತೂರಿ ರಂಗನ್ ನೇತೃತ್ವದ ತಂಡ ಮಾಡಿರುವ ಮುಖ್ಯ ಕೆಲಸವೇನೆಂದರೆ ಮಾಧವ್ ಗಾಡ್ಗೀಳ್ ವರದಿ ಗುರುತಿಸಿದ್ದ ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶವನ್ನು ಆಳುವ ಶಕ್ತಿಗಳ ಅನುಕೂಲಕ್ಕೆ ತಕ್ಕಂತೆ ಕಡಿತಗೊಳಿಸಿ ಭಾರೀ ಬಲಾಢ್ಯರ ಹಿತಾಸಕ್ತಿಗಳನ್ನು ರಕ್ಷಿಸಿ ಕೇವಲ ಆದಿವಾಸಿ ಬುಡಕಟ್ಟು ಜನರು, ದಲಿತ ದಮನಿತರು, ಬಡರೈತರು, ನೆಲೆಸಿರುವ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಿದ್ದು. ಸರಕಾರಗಳು ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟ ಉಳಿಸುವ ಹೆಸರಿನಲ್ಲಿ ಜನಸಾಮಾನ್ಯರನ್ನು ಆ ಪ್ರದೇಶಗಳಿಂದ ಒಕ್ಕಲೆಬ್ಬಿಸಿ ನಿರಾಶ್ರಿತರನ್ನಾಗಿ ಮಾಡಿ ನಂತರ ಆ ಪ್ರದೇಶಗಳನ್ನು ಗುಂಡ್ಯದ ರೀತಿಯಲ್ಲಿ ಖಾಸಗಿ ಕಾರ್ಪೊರೆಟ್ ಗಳಿಗೆ ಧಾರೆಯೆರೆಯುವುದಿಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಈ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿದ್ದ ಪ್ರದೇಶದಿಂದಲೇ ಸಾವಿರಾರು ಹೆಕ್ಟೇರುಗಳನ್ನು ಡಿನೋಟಿಫೈ ಮಾಡಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವ ಹುನ್ನಾರ ನಡೆಸಿದ್ದ ಉದಾಹರಣೆಯೇ ಇದೆ. ಈಗ ಕಸ್ತೂರಿ ರಂಗನ್ ವರದಿ ಜಾರಿ ಮಾಡುವ ಹುನ್ನಾರದ ಹಿಂದೆ ಪಶ್ಚಿಮ ಘಟ್ಟವನ್ನು ಉಳಿಸುವ ಉದ್ಧೇಶವಿದೆ ಎನ್ನಲು ಸಾಧ್ಯವೇ ಆಗದ ರೀತಿಯಲ್ಲಿ ಸರಕಾರಗಳ ನಡೆಗಳು ಕಾಣಿಸುತ್ತಿವೆ. ಸರಕಾರಗಳ ಉದ್ದೇಶ ನಿಜವಾಗಿಯೂ ಪಶ್ಚಿಮ ಘಟ್ಟವನ್ನು ಉಳಿಸುವುದೇ ಆಗಿದ್ದಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಕ್ರಮವಾಗಿ ಹಿಡಿದಿಟ್ಟುಕೊಂಡಿರುವ ಅರಣ್ಯದಿಂದಾವೃತವಾದ ಭೂಮಿಗಳನ್ನು ಭಾರೀ ಪ್ಲಾಂಟರುಗಳು ಹಾಗೂ ಭಾರೀ ಕೈಗಾರಿಕೋದ್ಯಮಿಗಳಿಂದ ಬಿಡಿಸುವ ಕೆಲಸ ಮಾಡುತ್ತಿತ್ತು. ಬದಲಿಗೆ ಪರಿಸರ ಸ್ನೇಹಿಯಾದ ಮತ್ತು ಪರಿಸರ ಉಳಿಸುವ ಆದಿವಾಸಿ ಬುಡಕಟ್ಟು ಜನರು ಇನ್ನಿತರ ಬಡಜನರು ವಾಸಿಸುತ್ತಾ ಬದುಕು ಕಟ್ಟಿಕೊಂಡಿರುವ ತುಂಡು ಜಮೀನುಗಳ ಮೇಲೆ ಕೈ ಹಾಕಿ ಆ ಜನರನ್ನು ಆ ಪ್ರದೇಶದಿಂದ ಓಡಿಸುವ ಕೆಲಸಕ್ಕೆ ಮುಂದಾಗುತ್ತಿರಲಿಲ್ಲ. ಬಹುತೇಕವಾಗಿ ಈ ಜನರಿಗೆ ಅವರು ವಾಸ ಮಾಡುತ್ತಿರುವ ತುಂಡು ಭೂಮಿಗೆ ಹಕ್ಕು ಪತ್ರಗಳನ್ನು ಅರಣ್ಯ ಹಕ್ಕು ಕಾನೂನು ಬಂದಾದ ಮೇಲೂ ನೀಡಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಪಶ್ಚಿಮಘಟ್ಟ ಪ್ರದೇಶವನ್ಜು ಟಾಟಾ, ಅಂಬಾನಿಯಿಂದ ಹಿಡಿದು ಹಿಂದಿನ ಯುಪಿಎ ಸರಕಾರದಲ್ಲಿ ಮಂತ್ರಿಯಾಗಿದ್ದ ಕಾಂಗ್ರೆಸ್‌ನ ಪಿ. ಚಿದಂಬರಂ ಆದಿಯಾಗಿ ಹಲವಾರು ಭಾರೀ ಕೈಗಾರಿಕೋದ್ಯಮಿಗಳು ಹಿಡಿದಿಟ್ಟುಕೊಂಡಿದ್ದಾರೆ. ಇವರುಗಳು ಮಾಡುತ್ತಿರುವ ಪರಿಸರ ನಾಶವನ್ನು ಪರಿಸರ ಸ್ನೇಹಿ ಎಂದು ಶಿಫಾರಸು ಮಾಡುವ ಕಸ್ತೂರಿರಂಗನ್ ಸಮಿತಿ ರಚಿಸಿದ ವರದಿಯ ಉದ್ದೇಶವೇ ಪ್ರಶ್ನಾರ್ಹವಾಗುತ್ತದೆ. ಪರಿಸರ ಉಳಿಸುವ ಹೆಸರಿನಲ್ಲಿ ಈ ಪ್ರದೇಶದ ಜನರನ್ನೆಲ್ಲಾ ಖಾಲಿ ಮಾಡಿಸಿದ ನಂತರ ಅದನ್ನು ಯಾವುದಾದರೂ ನೆಪದಲ್ಲಿ ಕಾರ್ಪೊರೇಟ್‌ಗಳಿಗೆ ಪರಭಾರೆ ಮಾಡುವ ಕೆಲಸಗಳನ್ನೇ ಸರಕಾರಗಳು ಮಾಡುತ್ತ ಬರುತ್ತಿರುವುದು. ಈ ಹಿಂದಿನ ಕುದುರೆ ಮುಖ ಗಣಿಗಾರಿಕೆಗಾಗಿ ಇದ್ದ ಕಟ್ಟಡಗಳು ಮತ್ತು ಪ್ರದೇಶವನ್ನು ಶಿಕ್ಷಣ ಕಾರ್ಪೊರೇಟ್ ಮೋಹನ್ ಆಳ್ವರಿಗೆ ನೀಡಿರುವ ಉದಾಹರಣೆಯೂ ನಮ್ಮ ಮುಂದಿದೆ. ಇದು ಕೇವಲ ಆದಿವಾಸಿ ಬುಡಕಟ್ಟು ಇನ್ನಿತರ ಬಡಜನರಿಗಷ್ಟೇ ಬಾಧಿಸುವ ವಿಚಾರವೆಂದು ಭಾವಿಸುವಂತಿಲ್ಲ. ಇದು ಒಟ್ಟಾರೆ ಪಶ್ಚಿಮ ಘಟ್ಟ ಪ್ರದೇಶದ ಎಲ್ಲಾ ಜನಸಾಮಾನ್ಯರನ್ನು ಹಾಗೂ ಇಡೀ ದಕ್ಷಿಣ ಭಾರತವನ್ನೇ ಬಾಧಿಸುವ ವಿಚಾರ ಎನ್ನುವುದನ್ನು ಇಲ್ಲಿ ಗ್ರಹಿಸಬೇಕು.