ಒಎನ್‌ಜಿಸಿ ಸಂಕಷ್ಟಗಳು
ಭಾರತದ ಅತ್ಯಂತ ಲಾಭದಾಯಕವಾದ ಕಂಪೆನಿಯನ್ನು ಮೋದಿ ಸರಕಾರ ಸಾಲದ ಬೆಟ್ಟದ ಅಡಿಗೆ ತಳ್ಳಿದ್ದು ಹೇಗೆ?
1990ರ ದಶಕದ ಆರಂಭದಿಂದಲೇ ಕಾಂಗ್ರೆಸ್ ಮತ್ತು ಇತರ ಸರಕಾರಗಳು ಖಾಸಗಿ ಉದ್ಯಮಿಗಳ ಪರವಾಗಿ, ಒಎನ್‌ಜಿಸಿಯ ಹಿತಾಸಕ್ತಿಯನ್ನು ಕಡೆಗಣಿಸುತ್ತ್ತಾ ಬಂದವು. 1992-93ರಲ್ಲಿ, ಒಎನ್‌ಜಿಸಿ ಶೋಧಿಸಿ ಅಭಿವೃದ್ಧಿಪಡಿಸಿದ ಒಟ್ಟು 28 ತೈಲ ಮತ್ತು ಅನಿಲ ನಿಕ್ಷೇಪಗಳ್ನು ಖಾಸಗಿ ಕಂಪೆನಿಗಳಿಗೆ ಮೂರು ಕಾಸಿನ ಬೆಲೆಗೆ ಬಿಟ್ಟುಕೊಡಲಾಯಿತು.
ಸ್ವಲ್ಪವೇ ಸಮಯದ ಹಿಂದೆ, ಭಾರತದ ಅತ್ಯಂತ ಬೃಹತ್ತಾದ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಶೋಧ ಕಂಪೆನಿಯಾಗಿರುವ ಸರಕಾರಿ ಮಾಲಕತ್ವದ ‘ದಿ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್’ (ಒಎನ್‌ಜಿಸಿ) ಋಣಮುಕ್ತವಷ್ಟೇ ಅಲ್ಲ, ದೇಶದ ಅತ್ಯಂತ ಲಾಭದಾಯಕವಾದ ಕಂಪೆನಿ ಕೂಡ ಆಗಿತ್ತು. ಅಲ್ಲದೆ ಅದು ದೇಶದ ಅತ್ಯಂತ ಹೆಚ್ಚು ನಗದು-ಶ್ರೀಮಂತ (ಕ್ಯಾಶ್-ರಿಚ್) ಕಂಪೆನಿಗಳಲ್ಲಿ ಕೂಡ ಒಂದು ಕಂಪೆನಿಯಾಗಿತ್ತು.
ಇದೆಲ್ಲ ಈಗ ಬದಲಾಗಿದೆ. ಒಂದರ ನಂತರ ಮತ್ತೊಂದರಂತೆ ಸರಕಾರಗಳು ಹಿಂಡಿ ಹಿಪ್ಪೆಮಾಡಿದ ಬಳಿಕ ವಿಶೇಷವಾಗಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ತೈಲ ಮತ್ತು ಅನಿಲ ಶೋಧ ಕಂಪೆನಿ ಸಂಪೂರ್ಣವಾಗಿ ಒಣಗಿ ಹೋದಂತಾಗಿದೆ.
1950ರ ಮತ್ತು 60ರ ದಶಕಗಳಲ್ಲಿ ಪ್ರವರ್ಧ ಮಾನಕ್ಕೆ ತರಲಾದ ಸಾರ್ವಜನಿಕ ರಂಗದ ಒಂದು ಉದ್ಯಮವಾಗಿರುವ ಒಎನ್‌ಜಿಸಿ ಭಾರತದ ಇಂಧನ ಭದ್ರತೆಯ ಕೀಲಿ ಕೈ ಆಗಿದೆ.
1990ರ ದಶಕದ ಆರಂಭದಿಂದಲೇ ಕಾಂಗ್ರೆಸ್ ಮತ್ತು ಇತರ ಸರಕಾರಗಳು ಖಾಸಗಿ ಉದ್ಯಮಿಗಳ ಪರವಾಗಿ, ಒಎನ್‌ಜಿಸಿಯ ಹಿತಾಸಕ್ತಿಯನ್ನು ಕಡೆಗಣಿಸುತ್ತ್ತಾ ಬಂದವು. 1992-93ರಲ್ಲಿ, ಒಎನ್‌ಜಿಸಿ ಶೋಧಿಸಿ ಅಭಿವೃದ್ಧಿಪಡಿಸಿದ ಒಟ್ಟು 28 ತೈಲ ಮತ್ತು ಅನಿಲ ನಿಕ್ಷೇಪಗಳ್ನು ಖಾಸಗಿ ಕಂಪೆನಿಗಳಿಗೆ ಮೂರು ಕಾಸಿನ ಬೆಲೆಗೆ ಬಿಟ್ಟುಕೊಡಲಾಯಿತು. ಆದರೂ ಭಾರತದ ದೇಶೀಯ ಉತ್ಪಾದನೆಯ ಸುಮಾರು ಶೇ.70%ರಷ್ಟು ಪೂರೈಸುತ್ತ ಒಎನ್‌ಜಿಸಿ ದೇಶದ ಟಾಪ್ ಕ್ಯಾಶ್ ರಿಚ್ ಕಂಪೆನಿಗಳಲ್ಲಿ ಒಂದು ಕಂಪೆನಿಯಾಗಿ ಉಳಿದಿತ್ತು.
ಸಂಪನ್ಮೂಲ ಖಾಲಿ
ಅದೇನಿದ್ದರೂ, ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಹೊಸ ಹೊಸ ರೀತಿಗಳಲ್ಲಿ ಸಾರ್ವಜನಿಕ ರಂಗದ ಕಂಪೆನಿಗಳಿಂದ ನಗದನ್ನು ಹೀರಿ ತೆಗೆದುದರ ಪರಿಣಾಮವಾಗಿ, ಈಗ ಒಎನ್‌ಜಿಸಿ ತನ್ನ ಸಂಚಯಿತ ನಗದನ್ನು ಕಳೆದುಕೊಂಡು ಸಾಲದ ಹೊರೆಯನ್ನು ಹೊತ್ತು ಕುಳಿತಿದೆ. ಕಂಪೆನಿಯ ಕಳೆದ ನಾಲ್ಕು ವರ್ಷಗಳ ಬ್ಯಾಲೆನ್ಸ್ ಶೀಟ್‌ಗಳು ಒಎನ್‌ಜಿಸಿಯ ಅವನತಿಯ ಕತೆಯನ್ನು ಹೇಳುತ್ತವೆ. 2018ರ ಮಾರ್ಚ್ ವೇಳೆಗೆ ಒಎನ್‌ಜಿಸಿಯ ನಗದು ಮಟ್ಟಗಳು ಅತ್ಯಂತ ಕೆಳಕ್ಕೆ ಇಳಿದಿದ್ದವು. ಮತ್ತು ಒಂದೇ ವರ್ಷದಲ್ಲಿ ಶೇ.90ಕ್ಕೂ ಹೆಚ್ಚು ಕುಸಿತ ಕಂಡಿದ್ದವು. 2014-15ರಲ್ಲಿ, 2014ರಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಮೊದಲ ಆರ್ಥಿಕ ವರ್ಷದಲ್ಲಿ, ನಗದು ಮಟ್ಟಗಳಲ್ಲಿ ಸುಮಾರು ಶೇ.74ರಷ್ಟು ಕುಸಿತವಾಯಿತು. ಒಎನ್‌ಜಿಸಿಯನ್ನು ಹಿಂದಿಕ್ಕಿ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಗರಿಷ್ಠ ಲಾಭ ಗಳಿಕೆಯ ಕಂಪೆನಿಯಾಗಿ ಮೊದಲ ಸ್ಥಾನ ಪಡೆದದ್ದು ಅದೇ ವರ್ಷದಲ್ಲಿ. ಒಎನ್‌ಜಿಸಿ ಆ ವರ್ಷ ಗಳಿಸಿದ ನಿವ್ವಳ ಲಾಭ 18,334 ಕೋಟಿ ರೂ. ಆದರೂ ಅದು ತೃತೀಯ ಸ್ಥಾನಕ್ಕೆ ಇಳಿಯಿತು. ಅದೇನಿದ್ದರೂ, 2016-17ರಿಂದ 2017-18ವರೆಗಿನ ಅವಧಿಯಲ್ಲಿ ಕಂಪೆನಿಯ ನಗದು ಮಟ್ಟಗಳು ಶೇ. 92ರಷ್ಟು ಗಣಿನೀಯ ಕುಸಿತವನ್ನು ದಾಖಲಿಸಿದವು. ಇದ್ಯಾಕೆ ಹೀಗಾಯಿತು ಎಂದರೆ ಇದಕ್ಕೆ ಹಲವು ಕಾರಣಗಳಿದ್ದವು. ಒಎನ್‌ಜಿಸಿ ಅತ್ಯಧಿಕ ಡಿವಿಡೆಂಡ್ ನೀಡುವ ಸಾರ್ವಜನಿಕ ರಂಗದ ಕಂಪೆನಿಗಳಲ್ಲಿ ಒಂದು ಕಂಪೆನಿಯಾಗಿದೆ. 2013-14ರಲ್ಲಿ, ಅದು ಒಟ್ಟು ರೂ.8,127 ಕೋಟಿ ಡಿವಿಡೆಂಟ್ ನೀಡಿತು. 2016-17ರಲ್ಲಿ ಈ ಮೊತ್ತ ರೂ.7,764 ಕೋಟಿ ರೂ.2017-18ರಲ್ಲಿ ಅದು ನೀಡಿದ ಡಿವಿಡೆಂಡ್‌ನಲ್ಲಿ ಗರಿಷ್ಠ ಮೊತ್ತವಾದ ರೂ. 8,470 ಕೋಟಿ ಡಿವಿಡೆಂಡ್ ನೀಡಿತು.
ಇದಲ್ಲದೆ ಅದು, ಸರಕಾರ ಗ್ರಾಹಕರಿಗೆ ನೀಡುವ ಇಂಧನ ಸಬ್ಸಿಡಿಯ ಮೊತ್ತವನ್ನು ಹಂಚಿಕೊಳ್ಳಬೇಕೆಂಬ ಸರಕಾರದ ನಿಗದಿತ ಸೂಚನೆಯಂತೆ, 2014 ರಲ್ಲಿ ದಾಖಲೆ ಮೊತ್ತವಾದ 56,384 ಕೋಟಿ ರೂ. ಯನ್ನು ಸಬ್ಸಿಡಿಯಾಗಿ ನೀಡಿತ್ತು. ಹೀಗೆ, ಭಾರೀ ಮೊತ್ತದ ಡಿವಿಡೆಂಡ್ ಹಾಗೂ ಸಬ್ಸಿಡಿ ಪಾವತಿಗಳು ಅದರ ಖಜಾನೆಯನ್ನು ಬರಿದು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವು.2017-18 ರಲ್ಲಿ ಮೋದಿ ಸರಕಾರವು ಒಎನ್‌ಜಿಸಿಯ ನಗದು ಸ್ಥಿತಿ ಮತ್ತು ಅದರ ಭವಿಷ್ಯಕ್ಕೆ ಸಂಬಂಧಿಸಿ ಎರಡು ಅತ್ಯಂತ ವಿನಾಶಕಾರಿ ಹೆಜ್ಜೆಗಳನ್ನಿಟ್ಟಿತು. 2017 ರಲ್ಲಿ ಒಎನ್‌ಜಿಸಿಯು, ಗುಜರಾತ್ ಸರಕಾರದ ಮಾಲಕತ್ವದ ಗುಜರಾತ್ ರಾಜ್ಯ ಪೆಟ್ರೋಲಿಯಂ ನಿಗಮದ ಎಲ್ಲ ಶೇ.80ರಷ್ಟು ಶೇರುಗಳನ್ನು ಕೊಂಡುಕೊಳ್ಳುವಂತೆ ಮಾಡಲಾಯಿತು. ಇದಕ್ಕಾಗಿ ಅದು ಸುಮಾರು 8,000 ಕೋಟಿ ರೂ. ನೀಡಬೇಕಾಯಿತು. ಹಾಗೆಯೇ, 2018 ರ ಜನವರಿಯಲ್ಲಿ, ಮೋದಿ ಸರಕಾರವು ತನ್ನ ಹಣಕಾಸು ಕೊರತೆಯ ಗುರಿಯನ್ನು ಸಾಧಿಸು ವುದಕ್ಕಾಗಿ, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟಿಡ್ (ಎಚ್‌ಪಿಸಿಎಲ್)ನಲ್ಲಿರುವ ಕೇಂದ್ರ ಸರಕಾರದ ಶೇ.51.11 ಸಂಪೂರ್ಣ ಇಕ್ವಿಟಿಯನ್ನು ತೆಗೆದುಕೊಳ್ಳುವಂತೆ ಒಎನ್‌ಜಿಸಿಯನ್ನು ಬಲಾತ್ಕಾರಪೂರ್ವಕವಾಗಿ ಒತ್ತಾಯಿಸಲಾಯಿತು. ಇದಕ್ಕಾಗಿ ಅದು ಮಾರುಕಟ್ಟೆ ದರಕ್ಕಿಂತ ಶೇ.14ರಷ್ಟು ಹೆಚ್ಚಿನ ದರದಲ್ಲಿ 36,915 ಕೋಟಿ ರೂ. ನೀಡಬೇಕಾಯಿತು. ಈ ವ್ಯವಹಾರವು ಅದನ್ನು ಭಾರೀ ಸಾಲದ ಹೊರೆ ಹೊರುವಂತೆ ಮಾಡಿತು. ಈ ಬೃಹತ್ ಮೊತ್ತವನ್ನು ಅದು ನಾಲ್ಕು ಸಾರ್ವಜನಿಕ ರಂಗದ ಬ್ಯಾಂಕ್ ಹಾಗೂ ಮೂರು ಖಾಸಗಿ ಬ್ಯಾಂಕ್‌ಗಳಿಂದ ಅಲ್ಪ-ಕಾಲಿಕ ಸಾಲವಾಗಿ ಪಡೆದಿದೆ. ಈಗ ಅದರ ಸಾಲದ ಒಟ್ಟು ಮೊತ್ತ 25,592.2 ಕೋಟಿ ರೂ. ಆಗಿದೆ.
ತನ್ನ ಸಾಲ ತೀರಿಸಲು ಅದೀಗ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮತ್ತು ಜಿಎಐಎಲ್‌ನಲ್ಲಿ ತನ್ನ ಶೇರುಗಳನ್ನು ಮಾರಾಟ ಮಾಡಲು ಯೋಜಿಸುತ್ತಿದೆ.
ಇತ್ತೀಚೆಗೆ, ಎಂಟು ವರ್ಷಗಳಲ್ಲಿ ,ಮೋದಿ ಸರಕಾರವು ಮೊದಲ ಬಾರಿಗೆ ತೈಲ ಮತ್ತು ನೈಸರ್ಗಿಕ ಅನಿಲ ಶೋಧದ ಬ್ಲಾಕ್‌ಗಳನ್ನು ಹರಾಜು ಹಾಕಿ, ಒಟ್ಟು 55 ಬ್ಲಾಕ್‌ಗಳಲ್ಲಿ 41 ಬ್ಲಾಕ್‌ಗಳನ್ನು ಅನಿಲ್ ಅಗರ್‌ವಾಲ್ ಮೂಲಕತ್ವದ ವೇದಾಂತ ರಿಸೋರ್ಸಸ್‌ಗೆನೀಡಿತು. ಇದೇ ವೇಳೆ ಗುಜರಾತ್‌ನ ಒಎನ್‌ಜಿಸಿ ನೌಕರರ ಕಾರ್ಮಿಕ ಸಂಘ (ಮಜ್ದ್ದೂರ್ ಸಭಾ) ಸೆಪ್ಟಂಬರ್ 4ರಂದು ಬರೆದ ಒಂದು ಪತ್ರದಲ್ಲಿ ಸರಕಾರದ ನಿರಂತರವಾದ ಹಸ್ತಕ್ಷೇಪವು ಒಎನ್‌ಜಿಸಿಯನ್ನು ನಗದು ಶ್ರೀಮಂತ ಕಂಪೆನಿಯಿಂದ ಭಾರೀ ಸಾಲದ ಹೊರೆ ಇರುವ ಒಂದು ಕಂಪೆನಿಯ ಸ್ಥಾನಕ್ಕೆ ಇಳಿಸಿದೆ ಎಂದು ಹೇಳಿದೆ. ತನ್ನ ಹಸ್ತಕ್ಷೇಪವನ್ನು ಸರಕಾರ ನಿಲ್ಲಿಸದೇ ಇದ್ದಲ್ಲಿ ಕಂಪೆನಿಯ ಕಾರ್ಮಿಕ ಸಂಘಟನೆಗಳು ಇನ್ನು ಯಾವುದೇ ನೋಟಿಸ್ ನೀಡದೆ ನೇರ ಕ್ರಮಕೈಗೊಳ್ಳಲಿವೆ ಎಂದೂ ಅವುಗಳು ಮೋದಿ ಸರಕಾರಕ್ಕೆ ಮೂರು ತಿಂಗಳ ಗಡುವು ನೀಡಿದೆ.
ಕೃಪೆ: scroll.in