4,000 ಕೋಟಿ ರೂ. ವ್ಯಯಿಸಿದರೂ ಗಂಗೆ ಈಗ ಇನ್ನೂ ಹೆಚ್ಚು ಮಲಿನ!
ಗಂಗಾ ನದಿಯನ್ನು ಶುದ್ಧೀಕರಿಸಲು ನರೇಂದ್ರ ಮೋದಿ ಸರಕಾರವು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆದರೆ ನದಿ ನೀರಿನ ಬಗ್ಗೆ ನಿಗಾ ಇರಿಸಲಾದ ಹಲವಾರು ತಾಣಗಳಲ್ಲಿ ಮಾಲಿನ್ಯದ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಲ್ಲಿನ ನೀರು ಕುಡಿಯಲು, ಸ್ನಾನಕ್ಕೆ ಹಾಗೂ ಮನೆಬಳಕೆಯ ಉದ್ದೇಶಗಳಿಗೂ ಯೋಗ್ಯವಾಗಿಲ್ಲ.
ಗಂಗಾ ನದಿಯ ಶುದ್ಧೀಕರಣಕ್ಕಾಗಿ 4 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಆದರೆ ಮೋದಿಯ ಕಣ್ಗಾವಲಿನಲ್ಲಿ ಗಂಗೆಯು ಇನ್ನೂ ಹೆಚ್ಚು ಮಲಿನಗೊಂಡಿದೆ.
ಗಂಗಾನದಿಯ ಶುದ್ಧೀಕರಣಕ್ಕಾಗಿ ಹಲವಾರು ವರ್ಷಗಳ ಕಾಲ ಶ್ರಮಿಸಿದ್ದ ಪ್ರಮುಖ ಪರಿಸರವಾದಿ ಪ್ರೊಫೆಸರ್ ಜಿ.ಡಿ.ಅಗರ್‌ವಾಲ್ ಅಕ್ಟೋಬರ್ 11ರಂದು ನಿಧನರಾದರು. ಗಂಗಾನದಿಯ ಉಳವಿಗಾಗಿ ಕೇಂದ್ರ ಸರಕಾರ ಮಧ್ಯಪ್ರವೇಶ ಆಗ್ರಹಿಸಿ ಅಗರ್ವಾಲ್ 112 ದಿನಗಳ ಕಾಲ ನಿರಶನ ಸತ್ಯಾಗ್ರಹ ನಡೆಸಿದ್ದರು. ಗಂಗಾನದಿಯ ಅಬಾಧಿತ ಹರಿವನ್ನು ಖಾತರಿಪಡಿಸುವಂತೆ ಆಗ್ರಹಿಸಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರು ಬಾರಿ ಪತ್ರ ಬರೆದಿದ್ದರು. 2014ರಲ್ಲಿ ಮೋದಿ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ‘ತನ್ನನ್ನು ಗಂಗಾ ಮಾತೆ ಕರೆಸಿಕೊಂಡಿದ್ದಾರೆ’ ಎಂದು ಹೇಳಿದ್ದನ್ನು ಅಗರ್ವಾಲ್ ತನ್ನ ಪತ್ರದಲ್ಲಿ ನೆನಪಿಸಿಕೊಂಡಿದ್ದರು.
ಆದಾಗ್ಯೂ, ಪ್ರಧಾನಿ ಕಾರ್ಯಾಲಯವು ಅಗರ್ವಾಲ್ ಅವರ ಪತ್ರಕ್ಕೆ ಉತ್ತರ ನೀಡಿರಲಿಲ್ಲ. ಆಮರಣಾಂತ ಉಪವಾಸ ನಿರತರಾಗಿದ್ದರಿಂದ ಆರೋಗ್ಯ ಹದಗೆಟ್ಟು ಅಗರ್ವಾಲ್ ಕೊನೆಯುಸಿರೆಳೆದರು. ಗಂಗಾನದಿಯನ್ನು ಶುದ್ಧೀಕರಿಸುವ ಹಾಗೂ ಅದರ ಅಬಾಧಿತ ಹರಿವನ್ನು ಖಾತರಿಪಡಿಸುವ ತನ್ನ ಭರವಸೆಯನ್ನು ಈಡೇರಿಸುವಲ್ಲಿ ಮೋದಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂಬುದೀಗ ಪ್ರಶ್ನೆಯಾಗಿಬಿಟ್ಟಿದೆ.
‘ದಿ ವೈರ್’ ಪತ್ರಿಕೆಯು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಯು ಗಂಗಾ ನದಿಯ ಮಾಲಿನ್ಯ ಸಮಸ್ಯೆಗೆ ಸಂಬಂಧಿಸಿ ಕೆಲವಷ್ಟು ಮಟ್ಟಿಗೆ ಉತ್ತರವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 2013ರಿಂದೀಚೆಗೆ ನದಿಯ ಮಾಲಿನ್ಯದ ಮಟ್ಟವು ಹಲವಾರು ಸ್ಥಳಗಳಲ್ಲಿ ಏರಿಕೆಯಾಗಿದೆ. 2014 ಹಾಗೂ ಜೂನ್ 2018ರ ನಡುವೆ ಗಂಗಾನದಿಯ ಶುದ್ಧೀಕರಣಕ್ಕಾಗಿ 5,523 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದ ನಿಧಿಯಲ್ಲಿ ಈಗಾಗಲೇ 3,867 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ.
ಹಲವೆಡೆ ಮಾಲಿನ್ಯದ ಮಟ್ಟದಲ್ಲಿ ಏರಿಕೆ
ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಕುರಿತ ಸಚಿವಾಲಯದ ಅಧಿಕಾರವ್ಯಾಪ್ತಿಗೊಳಪಡುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಒದಗಿಸಿದ ಮಾಹಿತಿಯ ಪ್ರಕಾರ 2017ರಲ್ಲಿ ಗಂಗಾನದಿಗೆ ಜೈವಿಕ ರಾಸಾಯನಿಕ ಆಮ್ಲಜನಕದ ಬೇಡಿಕೆ ಅತ್ಯಧಿಕ ಪ್ರಮಾಣದಲ್ಲಿತ್ತು. ಹೆಚ್ಚಿನ ಸ್ಥಳಗಳಲ್ಲಿ ಗಂಗಾನದಿ ನೀರಿನಲ್ಲಿ ಕರಗಿದ ಆಮ್ಲಜನಕ ಪ್ರಮಾಣವು ನಿರಂತರವಾಗಿ ಕಡಿಮೆಯಾಗುತ್ತಿದೆ.
ನೀರಿನಲ್ಲಿ ಅನಗತ್ಯವಾದ ಸಾವಯವ ವಸ್ತುವನ್ನು ತೊಡೆದುಹಾಕಲು ಜೈವಿಕವರ್ಗಗಳಿಗೆ ಅಗತ್ಯವಿರುವ ಅಮ್ಲಜನಕದ ಪ್ರಮಾಣವನ್ನು ಬಿಒಡಿ ಎಂದು ಕರೆಯಲಾಗುತ್ತದೆ. ಬಿಒಡಿಯು ಅಧಿಕ ಪ್ರಮಾಣದಲ್ಲಿದ್ದರೆ, ನೀರಿನಲ್ಲಿ ವೇಗಗತಿಯ ಆಮ್ಲಜನಕದ ಪ್ರಮಾಣವು ಕಡಿಮೆಯಾಗಲಿದೆ. ಬಿಒಡಿ ಅಧಿಕ ಮಟ್ಟದಲ್ಲಿದ್ದರೆ ನದಿ ಹಾಗೂ ಅದರಲ್ಲಿ ವಾಸಿಸುವ ಜೀವವರ್ಗಕ್ಕೆ ಅಪಾಯಕಾರಿಯಾಗುವುದು.
ಕರಗಿದ ಆಮ್ಲಜನಕದ ಪ್ರಮಾಣ(ಡಿಒ)ವು ನದಿ ನೀರಿನ ಮಾಲಿನ್ಯವನ್ನು ಅಳೆಯಲು ಬಳಸಲಾಗುವ ಇನ್ನೊಂದು ಮಾನದಂಡವಾಗಿದೆ. ಕರಗಿದ ಆಮ್ಲಜನಕದ ಪ್ರಮಾಣವು ಅಧಿಕಮಟ್ಟದಲ್ಲಿದ್ದರೆ, ಆ ನದಿ ನೀರಿನ ಮಾಲಿನ್ಯದ ಪ್ರಮಾಣ ಕಡಿಮೆಯಾಗಿರುತ್ತದೆ ಎಂದರ್ಥ. ಒಂದು ವೇಳೆ ನದಿ ನೀರಿನ ಮಾಲಿನ್ಯವು ಹೆಚ್ಚಾದಂತೆ, ಅದರಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗ ತೊಡಗುತ್ತದೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು 1980ರಿಂದೀಚೆಗೆ ಗಂಗಾ ನದಿನೀರಿನ ಗುಣಮಟ್ಟವನ್ನು ಪರೀಕ್ಷಿಸುತ್ತಲೇ ಬಂದಿದೆ. ಪ್ರಸ್ತುತ, 2,525 ಕಿ.ಮೀ. ವಿಸ್ತೀರ್ಣದ ಗಂಗಾನದಿಯ 80 ತಾಣಗಳನ್ನು ಮಾಲಿನ್ಯಪೀಡಿತವೆಂದು ಗುರುತಿಸಿದೆ. ಕೆಲವು ವರ್ಷಗಳ ಹಿಂದೆ ಗಂಗಾನದಿಯ ಮಾಲಿನ್ಯ ಪೀಡಿತ ಸ್ಥಳಗಳ ಸಂಖ್ಯೆ 62 ಆಗಿತ್ತು.
2017ರಲ್ಲಿ, ಗಂಗಾನದಿಯ 80 ತಾಣಗಳ ಪೈಕಿ 36ರಲ್ಲಿ ಬಿಒಡಿ ಮಟ್ಟವು ಪ್ರತಿ ಲೀಟರ್‌ಗೆ 3 ಮಿಲಿಗ್ರಾಂ, ಉಳಿದ 30ರಲ್ಲಿ ಪ್ರತಿ ಲೀಟರ್‌ಗೆ 2-3 ಮಿಲಿಗ್ರಾಂ ಆಗಿತ್ತು. 31 ಸ್ಥಳಗಳಲ್ಲಿ ಅದು ಪ್ರತಿ ಲೀಟರ್‌ಗೆ 3 ಮಿಲಿಗ್ರಾಂ ಹಾಗೂ 24ರಲ್ಲಿ ಪ್ರತಿ ಲೀಟರ್‌ಗೆ 2-3 ಮಿಲಿಗ್ರಾಂ ಅಧಿಕವಾಗಿತ್ತು.
ಸಿಪಿಸಿಬಿ ಮಾನದಂಡದ ಪ್ರಕಾರ, ನೀರಿನ ಬಿಒಡಿ ಮಟ್ಟವು ಪ್ರತಿ ಲೀಟರ್‌ಗೆ 2 ಮಿಲಿಗ್ರಾಂ ಅಥವಾ ಅದಕ್ಕಿಂತ ಕಡಿಮೆಯಾಗಿದ್ದಲ್ಲಿ ಹಾಗೂ ಕರಗಿದ ಆಮ್ಲಜನಕದ ಮಟ್ಟವು ಪ್ರತಿ ಲೀಟರ್‌ಗೆ 6 ಮಿಲಿಗ್ರಾಂಗೆ ಅಧಿಕವಿದ್ದಲ್ಲಿ, ಆ ನೀರು ಯಾವುದೇ ಸಂಸ್ಕರಣೆಯಿಲ್ಲದೆ ಕುಡಿಯಲು ಯೋಗ್ಯವಾದುದಾಗಿದೆ. ಒಂದು ವೇಳೆ ಬಿಒಡಿ ಮಟ್ಟವು ಪ್ರತಿ ಲೀಟರ್‌ಗೆ 2ರಿಂದ 3 ಮಿಲಿಗ್ರಾಂ ಆಗಿದ್ದಲ್ಲಿ ಅಂತಹ ನೀರಿನ ಸಂಸ್ಕರಣೆ ಅತ್ಯಗತ್ಯವಾಗಿದೆ. ಒಂದು ವೇಳೆ ಅಂತಹ ನೀರನ್ನು ಸಂಸ್ಕರಣೆಗೊಳಪಡಿಸದೆ ಸೇವಿಸಿದಲ್ಲಿ ಗಂಭೀರ ರೋಗಗಳಿಗೆ ಕಾರಣವಾಗಲಿದೆ.
ಒಂದು ವೇಳೆ ಬಿಒಡಿ ಮಟ್ಟವು ಪ್ರತಿ ಲೀಟರ್‌ಗೆ 3 ಮಿಲಿಗ್ರಾಂಗೂ ಅಧಿಕವಾಗಿದ್ದಲ್ಲಿ ಆ ನೀರು ಸ್ನಾನಕ್ಕೂ ಯೋಗ್ಯವಾಗಿಲ್ಲ. ಗಂಗಾ ನದಿ ನೀರು ಪರೀಕ್ಷಿಸಲ್ಪಟ್ಟ ಬಹುತೇಕ ಅರ್ಧಾಂಶದಷ್ಟು ತಾಣಗಳಲ್ಲಿ ಆ ನೀರು, ಮನೆಬಳಕೆಯ ಉದ್ದೇಶಗಳಿಗೆ ಅಸುರಕ್ಷಿತವಾಗಿದೆ.
ಉತ್ತರಾಖಂಡದಲ್ಲಿ ಮಾತ್ರ ಗಂಗೆ ಸುರಕ್ಷಿತ
ಗಂಗಾನದಿಯ ಉಗಮಸ್ಥಾನವಾದ ಗಂಗೋತ್ರಿಯಿಂದ ಹಿಡಿದು ಪಶ್ಚಿಮಬಂಗಾಳದವರೆಗೆ ಗಂಗಾನದಿ ನೀರಿನ ಗುಣಮಟ್ಟದ ಬಗ್ಗೆ ಸಿಪಿಸಿಬಿ ಕಣ್ಗಾವಲು ನಡೆಸಿದೆ. ಗಂಗೋತ್ರಿ, ರುದ್ರಪ್ರಯಾಗ, ದೇವಪ್ರಯಾಗ ಹಾಗೂ ಋಷಿಕೇಶಗಳಲ್ಲಿ ಪರಿಶುದ್ಧವಾಗಿದ್ದು, ಅಲ್ಲಿ ಬಿಒಡಿ ಮಟ್ಟವು ಪ್ರತಿ ಲೀಟರ್‌ಗೆ 1 ಮಿ.ಗ್ರಾಂ.ನಷ್ಟಿದೆ ಹಾಗೂ ಡಿಒ ಮಟ್ಟವು ಲೀಟರ್‌ಗೆ 9 ಮತ್ತು 10ರ ನಡುವೆ ಇದೆ.
ಆದಾಗ್ಯೂ, ಗಂಗಾ ನದಿಯು ಹರಿದು ಸಾಗುತ್ತಿರುವಂತೆಯೇ, ಅದರ ಮಾಲಿನ್ಯದ ಮಟ್ಟದಲ್ಲೂ ಏರಿಕೆಯಾಗುತ್ತಿದೆ. ಉತ್ತರಾಖಂಡದ ಪ್ರಸಿದ್ಧ ಯಾತ್ರಾಸ್ಥಳವಾದ ಹರಿದ್ವಾರದಲ್ಲಿ, ಪರಿಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಅಲ್ಲಿ ಬಿಒಡಿ ಮಟ್ಟವು ಲೀಟರ್‌ಗೆ 6.6 ಮಿಲಿಗ್ರಾಂ ಆಗಿದೆ. ಆದಾಗ್ಯೂ 2013ರಲ್ಲಿ ಅದರ ಇಳಿಕೆಯು ಪ್ರತಿ ಲೀಟರ್‌ಗೆ 7.8 ಮಿಲಿಗ್ರಾಂ ಆಗಿದೆ.
ವಾರಣಾಸಿ, ಅಲಹಾಬಾದ್, ಕನೌಜ್, ಕಾನ್ಪುರ, ಪಾಟ್ನಾ, ರಾಜ್‌ಮಹಲ್, ದಕ್ಷಿಣೇಶ್ವರ, ಹೌರಾ ಹಾಗೂ ದರ್ಭಾಂಗ ಘಾಟ್‌ನಲ್ಲಿ ಮಾಲಿನ್ಯವು ಉನ್ನತ ಮಟ್ಟದಲ್ಲಿದೆ. ಪ್ರಧಾನಿ ಮೋದಿಯವರ ಸ್ವಕ್ಷೇತ್ರವಾದ ವಾರಣಾಸಿಯಲ್ಲಿ 2013ರಲ್ಲಿ ಗಂಗಾನದಿಯ ಬಿಒಡಿ ಮಟ್ಟವು ಲೀಟರ್‌ಗೆ ಗರಿಷ್ಠ 5.1 ಮಿಲಿಗ್ರಾಂ ಆಗಿದೆ. 2017ರಲ್ಲಿ ಅದು ಲೀಟರ್‌ಗೆ 6.1 ಮಿಲಿಗ್ರಾಂ ಆಗಿದೆ. ಅದೇ ರೀತಿ ಅಲಹಾಬಾದ್‌ನಲ್ಲಿ 2013ರಲ್ಲಿ ಬಿಒಡಿ ಮಟ್ಟವು ಲೀಟರ್‌ಗೆ 4.4 ಮಿಲಿಗ್ರಾಂ ಆಗಿದ್ದು, ಅದು ಲೀಟರ್‌ಗೆ 5.7 ಮಿಲಿಗ್ರಾಂಗೆ ಏರಿಕೆಯಾಗಿದೆ.
ಉತ್ತರಪ್ರದೇಶದ ಅಲಿಗಡ ಹಾಗೂ ಬುಲಂದ್‌ಶಹರ್ ನಗರಗಳ ಹೊರತಾಗಿ ತ್ರಿವೇಣಿ, ಡೈಮಂಡ್‌ಹಾರ್ಬರ್ ಹಾಗೂ ಪಶ್ಚಿಮಬಂಗಾಳದ ಇತರ ಹಲವಾರು ಸ್ಥಳಗಳಲ್ಲಿ ಗಂಗಾನದಿಯ ಬಿಒಡಿ ಮಟ್ಟದಲ್ಲಿ ಏರಿಕೆಯಾಗಿದೆ.
2015ರ ಮೇನಲ್ಲಿ ಮೋದಿ ಸರಕಾರವು ತನ್ನ ಮಹತ್ವಾಕಾಂಕ್ಷೆಯ ‘ನಮಾಮಿ ಗಂಗೆ’ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಯಡಿ ಗಂಗಾನದಿಯ ಶುದ್ಧೀಕರಣಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಯಿತು. ನಗರಗಳಲ್ಲಿ ಚರಂಡಿ ನೀರಿನ ವಿಲೇವಾರಿ, ಕೈಗಾರಿಕಾ ಮಾಲಿನ್ಯದ ವಿಲೇವಾರಿ, ನದಿಯ ಮೇಲ್ಮೈಯ ಶುದ್ಧೀಕರಣ, ಗ್ರಾಮೀಣ ನೈರ್ಮಲ್ಯ, ನದಿಮುಖದ ಅಭಿವೃದ್ಧಿ, ನದಿ ದಂಡೆಗಳು ಹಾಗೂ ಅಂತ್ಯಸಂಸ್ಕಾರದ ಘಾಟ್‌ಗಳ ನಿರ್ಮಾಣ, ಗಿಡನೆಡುವಿಕೆ ಹಾಗೂ ಜೀವವೈವಿಧ್ಯತೆಯ ರಕ್ಷಣೆ ಇದರಲ್ಲಿ ಸೇರಿದೆ.
ಈ ಕಾರ್ಯಕ್ರಮದಡಿ 22,238 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ತನಕ 221 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳ ಪೈಕಿ 105 ಯೋಜನೆಗಳು, ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ಸಂಬಂಧಿಸಿದ್ದಾಗಿದ್ದು, ಅವನ್ನು 17,485 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. 67 ಯೋಜನೆಗಳು ನದಿಮುಖಜ ಪ್ರದೇಶದ ಅಭಿವೃದ್ಧಿಗೆ, ನದಿದಂಡೆಗಳು ಹಾಗೂ ಘಾಟ್‌ಗಳ ನಿರ್ಮಾಣ ಹಾಗೂ ನದಿತಪ್ಪಲಿನ ಶುದ್ಧೀಕರಣಕ್ಕೆ ಸಂಬಂಧಿಸಿದ್ದಾಗಿದ್ದು, ಅವುಗಳಲ್ಲಿ ಕೇವಲ 24ನ್ನು ಮಾತ್ರವೇ ಪೂರ್ಣಗೊಳಿಸಲಾಗಿದೆ.
ಪ್ರೊಫೆಸರ್ ಅಗರ್ವಾಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದಿದ್ದ ಪತ್ರದಲ್ಲಿ ಸರಕಾರವು ಆರಂಭಿಸಿರುವ ಗಂಗಾ ಶುದ್ಧೀಕರಣ ಯೋಜನೆಗಳ ದಕ್ಷತೆಯ ಬಗ್ಗೆ ತಮ್ಮ ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಗಂಗಾ ಶುದ್ಧೀಕರಣದಂತಹ ಯೋಜನಗಳು ಕೇವಲ ಕಾರ್ಪೊರೇಟ್ ವಲಯ ಹಾಗೂ ಉದ್ಯಮ ವಲಯಕ್ಕೆ ಪ್ರಯೋಜನಕಾರಿಯಾಗಿವೆ ಹಾಗೂ ಗಂಗಾನದಿಯ ಅಬಾಧಿತ ಹರಿವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಅವು ಅಲ್ಪಮಟ್ಟದ ಪ್ರಯತ್ನವನ್ನು ಮಾಡಿವೆ.
ಇದರ ಜೊತೆಗೆ, ಕಂಟ್ಟ್ರೋಲರ್ ಹಾಗೂ ಆಡಿಟರ್ ಜನರಲ್ (ಸಿಎಜಿ) ಕೂಡಾ ಇವುಗಳ ಪೈಕಿ ಕೆಲವು ಯೋಜನೆಗಳ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ‘‘ಭಾರತೀಯ ತಂತ್ರಜ್ಞಾನ ಸಂಸ್ಥೆಯ ಜೊತೆಗೆ ಒಪ್ಪಂದ ಅಂತಿಮಗೊಂಡು ಆರೂವರೆ ವರ್ಷಗಳಾದರೂ, ಸ್ವಚ್ಛಗಂಗಾ (ಎನ್‌ಎಂಸಿಜಿ) ಯೋಜನೆಗಾಗಿನ ದೀರ್ಘಾವಧಿಯ ಕಾರ್ಯಯೋಜನೆಗಳನ್ನು ಪೂರ್ಣ ಗೊಳಿಸಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ಗಂಗಾ ನದಿ ತಪ್ಪಲು ಪ್ರಾಧಿಕಾರ ರಚನೆಯಾಗಿ ಎಂಟು ವರ್ಷಗಳೇ ಕಳೆದರೂ, ಈತನಕ ಎನ್‌ಎಂಸಿಜಿಯು ಯಾವುದೇ ನದಿ ತಪ್ಪಲು ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿಲ್ಲ’’ ಎಂದು ಅವರು ಹೇಳಿದ್ದಾರೆ.
ಗಂಗಾ ನೀರು ಗೃಹಬಳಕೆಗೆ ಅಥವಾ ನೀರಾವರಿಗೂ ಅಸುರಕ್ಷಿತ
ಬಿಒಡಿ ಅಥವಾ ಡಿಒ ಮಟ್ಟದ ಜೊತೆಗೆ ಗಂಗಾನದಿ ನೀರಿನ ಗುಣಮಟ್ಟವು ಫೆಕಾಲ್ ಕಾಲಿಫಾರ್ಮ್ ಹಾಗೂ ಒಟ್ಟು ಕಾಲಿಫಾರ್ಮ್ ಬ್ಯಾಕ್ಟೀರಿಯಾ ಮಟ್ಟ, ಪಿಎಚ್ ಮಟ್ಟ ಹಾಗೂ ವಾಹಕತೆಯನ್ನು ಆಧರಿಸಿ ಗಂಗಾ ನದಿಯ ನೀರಿನ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ.
ಪ್ರತಿ 100 ಮಿ.ಲೀ. ಕುಡಿಯುವ ನೀರಿನಲ್ಲಿ ಕಾಲಿಫಾರ್ಮ್ ಬ್ಯಾಕ್ಟೀರಿಯಾ ಪ್ರಮಾಣವು 50 ಎಂಪಿಎನ್ (ಅತ್ಯಂತ ಸಂಭಾವ್ಯ ಸಂಖ್ಯೆ) ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿರಬೇಕು. ಒಂದು ವೇಳೆ ಕುಡಿಯುವ ನೀರಿನಲ್ಲಿ ಅಧಿಕ ಮಟ್ಟದ ಕಾಲಿಫಾರ್ಮ್ ಬ್ಯಾಕ್ಟೀರಿಯಾ ಇದ್ದಲ್ಲಿ, ತಲೆಸುತ್ತುವಿಕೆ, ವಾಂತಿ, ಜ್ವರ ಹಾಗೂ ಅತಿಸಾರ ರೋಗಗಳಿಗೆ ಕಾರಣವಾಗುತ್ತದೆ.
ಗಂಗಾ ನದಿಯ ಶುದ್ಧೀಕರಣಕ್ಕಾಗಿನ ಯೋಜನೆಗಳು ಕೇವಲ ಕಾರ್ಪೊ ರೇಟ್ ವಲಯ ಹಾಗೂ ಉದ್ಯಮಸಂಸ್ಥೆಗಳಿಗೆ ಮಾತ್ರವೇ ಅನು ಕೂಲಕವಾಗಿದ್ದು, ಗಂಗಾನದಿಯ ಅಬಾಧಿತ ಹರಿವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಅವುಗಳಿಗೆ ಹೆಚ್ಚೇನೂ ಸಾಧಿಸಲು ಸಾಧ್ಯವಾಗಿಲ್ಲವೆಂದು ಅಗರ್ವಾಲ್ ಭಾವಿಸಿದ್ದರು.
ಉತ್ತರಾಖಂಡದ ಗಂಗೋತ್ರಿ, ರುದ್ರಪ್ರಯಾಗ ಹಾಗೂ ದೇವ ಪ್ರಯಾಗವನ್ನು ಹೊರತುಪಡಿಸಿ ಉಳಿದೆಡೆ ಗಂಗಾನದಿಗೆ, ತನ್ನ ನೀರಿನ ಗುಣಮಟ್ಟದ ಮಾನದಂಡ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಹರಿದ್ವಾರದಲ್ಲಿ ಎಂಪಿಎನ್ ಪ್ರಮಾಣವು 1,600 ಇದ್ದರೆ, ಅಲಹಾಬಾದ್‌ನಲ್ಲಿ 48 ಸಾವಿರ, ವಾರಣಾಸಿಯಲ್ಲಿ 70 ಸಾವಿರ ಹಾಗೂ ಕಾನ್‌ಪುರದಲ್ಲಿ 1.30 ಲಕ್ಷ ಆಗಿದೆ. ಬಿಹಾರದ ಬಕ್ಸಾರ್‌ನಲ್ಲಿ ಎಂಪಿಎನ್ ಮಟ್ಟವು ಪಾಟ್ನಾದಷ್ಟೇ ಸಮವಾಗಿ ಅಂದರೆ 1.60 ಲಕ್ಷ ಆಗಿದೆ. ಪಶ್ಚಿಮಬಂಗಾಳದ ಹೌರಾದಲ್ಲಂತೂ ಎಂಪಿಎನ್ ಆಘಾತಕಾರಿ ಮಟ್ಟವನ್ನು ತಲುಪಿದ್ದು 2.40 ಲಕ್ಷ ಆಗಿದೆ.
ನೀರಿನ ಆಮ್ಲೀಯತೆಯ ಮಟ್ಟ (ಪಿಎಚ್)ವು ಅದು ನೀರಾವರಿಗೆ ಯೋಗ್ಯವೇ ಎಂಬುದನ್ನು ನಿರ್ಧರಿಸುತ್ತದೆ. ನೀರಿನ ಪಿಎಚ್ ಮಟ್ಟವು 6ರಿಂದ 8.5 ಆಗಿದ್ದರೆ ಅದು ಕೃಷಿ ಬಳಕೆಗೆ ಯೋಗ್ಯವಾದುದಾಗಿದೆ. ಆದಾಗ್ಯೂ 2017ರಲ್ಲಿ ಪ್ರಕಟವಾದ ವರದಿಯೊಂದು ಗಂಗಾ ನದಿ ನೀರಿನ ಪಿಎಚ್ ಮಟ್ಟವು ಕೆಲವು ಸ್ಥಳಗಳಲ್ಲಿ 8.5 ಆಗಿದ್ದು, ನೀರಾವರಿಗೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ತಿಳಿಸಿ
ಗಂಗಾ ನದಿಯು ಐದು ರಾಜ್ಯಗಳನ್ನು ಹಾದುಹೋಗುತ್ತದೆ. ಪ್ರತಿಯೊಂದು ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯು ಆ ನದಿಯ ಗುಣಮಟ್ಟದ ತಪಾಸಣೆ ನಡೆಸುತ್ತದೆ ಹಾಗೂ ಅದರ ವರದಿಯನ್ನು ಸಿಪಿಸಿಬಿಗೆ ಕಳುಹಿಸುತ್ತದೆ. ಸಂಗ್ರಹವಾದ ಸರಾಸರಿ ದತ್ತಾಂಶವನ್ನು ಆಧರಿಸಿದ ಅಂತಿಮ ವರದಿಯನ್ನು ಕೇಂದ್ರ ಮಂಡಳಿಯು ಸಂಕಲನ ಮಾಡುತ್ತದೆ.
ಮಾಸಿಕವಾಗಿ ಗಂಗಾ ನದಿಯ ನೀರಿನ ಗುಣಮಟ್ಟವನ್ನು ವಿಶ್ಲೇಷಿಸಿದಲ್ಲಿ, ನಮಗೆ ಸಿಗುವ ಚಿತ್ರಣವು ಅತ್ಯಂತ ಭಯಾನಕವಾದುದಾಗಿದೆ. ನಿರ್ದಿಷ್ಟ ತಿಂಗಳುಗಳಲ್ಲಿ ಮಾಲಿನ್ಯದ ಪ್ರಮಾಣವು ಸರಾಸರಿಗಿಂತ ಅಧಿಕವಾಗಿರುವುದು. ನಿರಂತರವಾಗಿ ಸುರಿಯಲಾಗುತ್ತಿರುವ ಕೈಗಾರಿಕಾ ಮಾಲಿನ್ಯ ಹಾಗೂ ಗೃಹ ತ್ಯಾಜ್ಯಗಳು, ಗಂಗಾನದಿಯ ಶೋಚನೀಯ ಸ್ಥಿತಿಯ ಹಿಂದಿರುವ ಪ್ರಮುಖ ಕಾರಣಗಳೆಂದು ಗುರುತಿಸಲಾಗಿದೆ.
ಕೃಪೆ: thewire