ಬೌದ್ಧ ಧರ್ಮವನ್ನು ಸ್ವೀಕರಿಸುವ ಮೊದಲು ಅಂಬೇಡ್ಕರ್ ಇಸ್ಲಾಂ ಧರ್ಮವನ್ನು ತನ್ನ ಆಯ್ಕೆಯ ಧರ್ಮವೆಂದು ಏಕೆ ಪರಿಗಣಿಸಿದ್ದರು?
ದಲಿತರಿಗೆ ಮತಾಂತರ ಒಂದು ಅಸ್ತಿತ್ವ ಅವಶ್ಯಕತೆ ಎಂದು ಅಂಬೇಡ್ಕರ್ ಮತಾಂತರಕ್ಕೆ ತಾನು ನೀಡಿದ ಕರೆಯನ್ನು ಸಮರ್ಥಿಸುತ್ತಾರೆ. ದಲಿತರು ಮತಾಂತರಗೊಳ್ಳುವ ಧರ್ಮಕ್ಕೆ ದೇಶದಲ್ಲಿ ಸಾಕಷ್ಟು ಜನಸಂಖ್ಯೆ ಇರಬೇಕಾದ್ದರಿಂದ ಅವರು ಇಸ್ಲಾಂ, ಕ್ರಿಶ್ಚಿಯನ್ ಹಾಗೂ ಸಿಖ್ ಧರ್ಮದ ಬಗ್ಗೆ ಯೋಚಿಸುತ್ತಾರೆ. 1928ರಿಂದ ಅವರು ಇಸ್ಲಾಂ ಧರ್ಮದ ಬಗ್ಗೆ ಮಾತಾಡುತ್ತಿದ್ದುದರಿಂದ, ಇಸ್ಲಾಂ ಧರ್ಮ ಅವರ ಆಯ್ಕೆಯ ಧರ್ಮದಂತೆ ಕಂಡಿತು.
ನಾಸಿಕ್ ಜಿಲ್ಲೆಯ ಯೆವೊಲದಲ್ಲಿ 1935ರ ಅಕ್ಟೋಬರ್ 13ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಒಂದು ಐತಿಹಾಸಿಕ ಘೋಷಣೆ ಮಾಡಿದರು. ‘‘ನಾನು ಹಿಂದೂ ಧರ್ಮ ತ್ಯಜಿಸುತ್ತೇನೆ’’ ಅವರು ಅಂದು ಘೋಷಿಸಿದರು. ನಾಸಿಕದ ಕಲಾರಾಮ ದೇವಸ್ಥಾನ ಪ್ರವೇಶ ಸತ್ಯಾಗ್ರಹದಿಂದ ಕಿರುಕುಳಕ್ಕೊಳಗಾದ ಸಂಪ್ರದಾಯ ಶರಣ ಹಿಂದೂಗಳು ಈ ಘೋಷಣೆಯಿಂದ ತುಂಬಾ ಖುಷಿ ಪಟ್ಟರು. ಆದರೆ ರಾಜಕೀಯ ಮನಸ್ಸಿನ ಹಿಂದೂಗಳು ಇದನ್ನು ಖಂಡಿಸಿದರು. ಇದರಿಂದ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಬೆದರಿಕೆ ಇದೆ ಎಂದು ಅವರು ಭಾವಿಸಿದರು. ಕೆಲವರು ಅಂಬೇಡ್ಕರ್ ಅವರಿಗೆ ಕೊಲೆ ಬೆದರಿಕೆ ಹಾಕಿದರು. ಹೀಗೆ ಅವರ ಘೋಷಣೆಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾದವು.
ಈ ಘೋಷಣೆಯ ಮುಂದುವರಿದ ಹೆಜ್ಜೆಯಾಗಿ ಮತ್ತು ಮುಂದೆ ಮಾಡಬೇಕಾದ ಕೆಲಸ ಕಾರ್ಯಗಳ ಒಂದು ನೀಲಿ ನಕ್ಷೆ ತಯಾರಿಸುವುದಕ್ಕಾಗಿ 1936ರ ಮೇ 30ರಿಂದ ಜೂನ್ 1ರ ವರೆಗೆ ಮುಂಬೈಯಲ್ಲಿ ‘ಮುಂಬೈ ಪ್ರಾಂತ ಮಹಾರ್ ಅಧಿವೇಶನ’ವೆಂಬ ಒಂದು ಅಧಿವೇಶನವನ್ನು ಸಂಘಟಿಸಲಾಯಿತು.
ಈ ಅಧಿವೇಶನದಲ್ಲಿ ಅಂಬೇಡ್ಕರ್ ವಿವರವಾದ ಹಾಗೂ ಭಾವಪೂರ್ಣವಾದ ಒಂದು ಭಾಷಣ ಮಾಡಿದರು ಇದು ಬಳಿಕ ‘ಮುಕ್ತಿ ಕೋನ್ ಪಥೆ?’ (ಮುಕ್ತಿಗೆ ಯಾವ ದಾರಿ?) ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು. ಇದರಲ್ಲಿ ದಲಿತರು ಯಾಕೆ ತಮ್ಮ ಧರ್ಮವನ್ನು ಬದಲಿಸಬೇಕು ಮತಾಂತರಗೊಳ್ಳಬೇಕು ಎಂದು ವ್ಯವಸ್ಥಿತವಾಗಿ ವಿವರಿಸಲು ಪ್ರಯತ್ನಿಸಿದರು. ‘ಜಾತಿಯ ನಿರ್ಮೂಲನ’ ಎಂಬ ಅವರ ಕೃತಿಯಲ್ಲಿ ಚರ್ಚಿಸಿ ಅವರು ಅಂತಿಮವಾಗಿ ಒಂದು ತೀರ್ಮಾನಕ್ಕೆ ಬಂದಿದ್ದರು: ‘‘ಹಿಂದೂ ಧರ್ಮದ ನಿಯಮಗಳ ಭಾಗವಾಗಿರುವ ಮತ್ತು ಧರ್ಮ ಶಾಸ್ತ್ರಗಳಿಂದ (ಸ್ಮತಿ ಹಾಗೂ ಪುರಾಣಗಳಿಂದ) ಅಂಗೀಕಾರ ಪಡೆದಿರುವ ಜಾತಿಗಳನ್ನು ನಿರ್ಮೂಲನ ಮಾಡಬೇಕಾದರೆ, ನಾಶ ಮಾಡಬೇಕಾದರೆ ಧರ್ಮಶಾಸ್ತ್ರಗಳನ್ನು ನಾಶ ಮಾಡಬೇಕು.’’
ಅವರು ಹಿಂದೂ ಧರ್ಮದ ಶಾಸ್ತ್ರಗ್ರಂಥಗಳನ್ನು ಎರಡು ಭಾಗಗಳಾಗಿ ವಿಭಜಿಸಿದರು: ನಿಯಮಗಳ ಧರ್ಮ ಮತ್ತು ತತ್ವಗಳ ಧರ್ಮ. ವೇದಗಳಲ್ಲಿ ಹಾಗೂ ಉಪನಿಷತ್ತುಗಳಲ್ಲಿ ತತ್ವಗಳ ಧರ್ಮವನ್ನು ನೀಡಲಾಗಿದೆ. ಇದು ಆಚರಣೆಯಲ್ಲಿರುವ ಧರ್ಮದ ಮೇಲೆ ಹೆಚ್ಚು ಪ್ರಭಾವ ಬೀರಲಿಲ್ಲ. ಧರ್ಮಶಾಸ್ತ್ರಗಳನ್ನು ನಾಶ ಮಾಡಲು ಹಿಂದೂಗಳು ಎಂದೂ ಸಿದ್ಧವಾಗುವುದಿಲ್ಲವಾದ್ದರಿಂದ ಅಂಬೇಡ್ಕರ್ ತಾನೇ ಹಿಂದೂ ಧರ್ಮವನ್ನು ತ್ಯಜಿಸಲು ನಿರ್ಧರಿಸಿದ್ದರು. ಹೀಗೆ, ಹಿಂದೂ ಧರ್ಮದ ಒಳಗೆ ಗೌರವಾನ್ವಿತವಾದ ಒಂದು ಜೀವನವನ್ನು ನಡೆಸುವ ಭರವಸೆ ಅಸ್ಪೃಶ್ಯರಿಗೆ ಇಲ್ಲವಾದ್ದರಿಂದ ಅವರಿಗೆ ತಮ್ಮ ಜಾತಿ ಜೀತದಿಂದ, ಬಂಧನದಿಂದ ಬಿಡುಗಡೆಯಾಗಲಿರುವ ಒಂದೇ ದಾರಿ ಎಂದರೆ ಹಿಂದೂ ಧರ್ಮವನ್ನು ತ್ಯಜಿಸುವುದು ಎಂದು ಅಂಬೇಡ್ಕರ್ ವಾದಿಸಿದ್ದರು.
‘ಮುಕ್ತಿ ಕೋನ್ ಪಥೆ?’ಯಲ್ಲಿ ಧರ್ಮವನ್ನು ಬದಲಾಯಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಎರಡು ವಿಷಯಗಳನ್ನು ಪ್ರಸ್ತಾಪಿಸಿದರು. ಅಸ್ತಿತ್ವವಾದಿ ಮತ್ತು ಆಧ್ಯಾತ್ಮಿಕ ಅಸ್ತಿತ್ವವಾದಿ ವಿಷಯವನ್ನು ವಿವರಿಸುವಾಗ ಅವರು ಮುಖ್ಯವಾಗಿ ದಲಿತರ ಶೋಚನೀಯ ಸ್ಥಿತಿಯನ್ನು, ಶೋಚನೀಯ ಅಸ್ತಿತ್ವವನ್ನು ಪರಿಗಣಿಸಿದರು. ‘‘ಸವರ್ಣೀಯ ಹಿಂದೂಗಳಿಂದ ಅವರು ಜಾತಿ ಸಂಹಿತೆಯ ಸಣ್ಣಪುಟ್ಟ ಉಲ್ಲಂಘನೆಗಾಗಿ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಇದನ್ನು ಅಂಬೇಡ್ಕರ್ ವರ್ಗ ತಿಕ್ಕಾಟ, ವರ್ಗ ಘರ್ಷಣೆ/ ತುಮುಲ ಎಂದು ಕರೆದರೂ ಸ್ಪೃಶ್ಯ ಮತ್ತು ಅಸ್ಪೃಶ್ಯರ ನಡುವಿನ ತಿಕ್ಕಾಟ ಶಾಶ್ವತ ಸ್ವರೂಪದ್ದಾಗಿದ್ದು, ಅದು ಎಂದೆಂದಿಗೂ ಹೀಗೆಯೇ ಉಳಿಯುತ್ತದೆ. ಯಾಕೆಂದರೆ ಹಿಂದೂಗಳ ಪ್ರಕಾರ ಅದು ಸನಾತನ ಧರ್ಮ. ಅದರಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ.’’ ಎಂದು ಅಂಬೇಡ್ಕರ್ ಹೇಳಿದರು ಈ ಸಮಸ್ಯೆಯ ಅಸ್ತಿತ್ವವಾದಿ ಅಂಶವನ್ನು ವಿಶ್ಲೇಷಿಸುತ್ತಾ, ‘‘ಈ ತಿಕ್ಕಾಟದ ಸತತ ಮುಂದುವರಿಕೆಗೆ ದಲಿತರಲ್ಲಿರುವ ಶಕ್ತಿಯ ಕೊರತೆಯೇ ಮೂಲ ಕಾರಣ’’ವೆಂದು ಅಂಬೇಡ್ಕರ್ ಹೇಳಿದರು.
‘‘ಮನುಷ್ಯರಲ್ಲಿಬೇಕಾದ ಈ ಕೆಳಗಿನ ಮೂರು ಶಕ್ತಿಗಳಲ್ಲಿ ಯಾವುದೇ ಶಕ್ತಿಯನ್ನು ಅವರು ಹೊಂದಿಲ್ಲ: ಸಂಖ್ಯಾ ಶಕ್ತಿ, ಸಂಪತ್ತಿನ ಶಕ್ತಿ ಮತ್ತು ಮನೋಶಕ್ತಿ. ದಲಿತರು ಹಲವಾರು ಜಾತಿಗಳಾಗಿ ವಿಭಜಿಸಲ್ಪಟ್ಟು ಪರಸ್ಪರ ದೂರ ದೂರದ ಹಳ್ಳಿಗಳಲ್ಲಿರುವ ಅಲ್ಪಸಂಖ್ಯಾಕರಾಗಿರುವುದರಿಂದ ಸಂಖ್ಯೆಗಳ ದೃಷ್ಟಿಯಿಂದ ಅವರು ದುರ್ಬಲರಾಗಿದ್ದಾರೆ. ಅವರ ಬಳಿ ಜಮೀನು ಅಥವಾ ವ್ಯಾಪಾರೋದ್ಯಮ ಅಥವಾ ಕೈತುಂಬ ವೇತನ ತರುವ ಉದ್ಯೋಗ ಇಲ್ಲದೇ ಇರುವುದರಿಂದ ಅವರಲ್ಲಿ ಸಂಪತ್ತಿನ ಶಕ್ತಿಯಿಲ್ಲ. ಶತಮಾನಗಳಿಂದ ಅವರು ಸವರ್ಣೀಯ ಹಿಂದೂಗಳು ಎಸಗಿದ ಅವಮಾನ ಹಾಗೂ ತುಳಿತಕ್ಕೊಳಗಾಗಿರುವುದರಿಂದ ಅವರಲ್ಲಿ ಮನಸ್ಸಿನ ಶಕ್ತಿ ಕೂಡ ಇಲ್ಲ. ಅವರು ತಮ್ಮದೇ ಆದ ಶಕ್ತಿಯನ್ನು ಅವಲಂಬಿಸಿ ಕೂತರೆ ಅವರು ತಮ್ಮ ಚಿಂತಾಜನಕ ಸ್ಥಿತಿಯಿಂದ ತಪ್ಪಿಸಿಕೊಳ್ಳಲಾರರು’’ ಹೀಗೆ ವಾದಿಸಿದ ಅಂಬೇಡ್ಕರ್ ರೈತರನ್ನು ಮುಸ್ಲಿಮರೊಂದಿಗೆ ಹೋಲಿಸುತ್ತಾರೆ. ‘‘ದಲಿತರ ಹಾಗೆ ಮುಸ್ಲಿಮರು ಕೂಡ ಅಲ್ಪಸಂಖ್ಯಾತರು. ಆದರೂ ಹಿಂದೂಗಳು ದಲಿತರನ್ನು ನಡೆಸಿಕೊಂಡ ಹಾಗೆ ಮುಸ್ಲಿಮರನ್ನು ನಡೆಸಿಕೊಳ್ಳುವುದಿಲ್ಲ.
ಯಾಕೆಂದರೆ ಭಾರತದಲ್ಲಿ ಓರ್ವ ಮುಸ್ಲಿಮನಿಗೆ ಸಮಗ್ರ ಮುಸ್ಲಿಂ ಸಮುದಾಯದ ಬೆಂಬಲವಿದೆ ಎಂದು ಅವರಿಗೆ ಗೊತ್ತಿತ್ತು. ಗೊತ್ತಿದೆ. ಎಲ್ಲಿಯಾದರೂ ಒಬ್ಬ ಹಿಂದೂ ಒಬ್ಬ ಮುಸ್ಲಿಮನ ಮೇಲೆ ಕೈ ಮಾಡಿದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮುಸ್ಲಿಂ ಸಮುದಾಯ ಅವನ ಬೆಂಬಲಕ್ಕೆ ನಿಲ್ಲುತ್ತದೆ. ದಲಿತರಿಗೆ ಯಾರಿಂದಲೂ ಅಂತಹ ಬೆಂಬಲವಿಲ್ಲವೆಂದು ಗೊತ್ತಿರುವುದರಿಂದಲೇ ಹಿಂದೂಗಳು ದಲಿತರ ಮೇಲೆ ದೌರ್ಜನ್ಯ ನಡೆಸುತ್ತಾ ಬಂದಿದ್ದಾರೆ.’’ ಇಷ್ಟೇ ಅಲ್ಲದೆ ದಲಿತರು ಮತ್ತು ಅವರನ್ನು ಧಮನಿಸುವವರು ಇಬ್ಬರೂ ಹಿಂದೂಗಳೇ ಆಗಿರುವುದರಿಂದ ಇತರರಿಗೆ ಅಲ್ಲಿ ಮಧ್ಯ ಪ್ರವೇಶಿಸಲು ಅವಕಾಶವೇ ಇಲ್ಲ. ಆದ್ದರಿಂದ ಅಂಬೇಡ್ಕರ್ ಪ್ರಕಾರ ದಲಿತರು ಹೊರಗಿನಿಂದ ತಮ್ಮ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿತ್ತು. ಇನ್ಯಾವುದೋ ಧಾರ್ಮಿಕ ಸಮುದಾಯದೊಂದಿಗೆ ಸೇರಿಕೊಳ್ಳುವ ಮೂಲಕ, ಆ ಸಮುದಾಯದ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಮಾತ್ರ ದಲಿತರಿಗೆ ಈ ಶಕ್ತಿ ಬರುವುದು ಸಾಧ್ಯ. ಹೀಗೆ ದಲಿತರಿಗೆ ಮತಾಂತರ ಒಂದು ಅಸ್ತಿತ್ವ ಅವಶ್ಯಕತೆ ಎಂದು ಅಂಬೇಡ್ಕರ್ ಮತಾಂತರಕ್ಕೆ ತಾನು ನೀಡಿದ ಕರೆಯನ್ನು ಸಮರ್ಥಿಸುತ್ತಾರೆ. ದಲಿತರು ಮತಾಂತರಗೊಳ್ಳುವ ಧರ್ಮಕ್ಕೆ ದೇಶದಲ್ಲಿ ಸಾಕಷ್ಟು ಜನಸಂಖ್ಯೆ ಇರಬೇಕಾದ್ದರಿಂದ ಅವರು ಇಸ್ಲಾಂ, ಕ್ರಿಶ್ಚಿಯನ್ ಹಾಗೂ ಸಿಖ್ ಧರ್ಮದ ಬಗ್ಗೆ ಯೋಚಿಸುತ್ತಾರೆ. 1928ರಿಂದ ಅವರು ಇಸ್ಲಾಂ ಧರ್ಮದ ಬಗ್ಗೆ ಮಾತಾಡುತ್ತಿದ್ದುದರಿಂದ, ಇಸ್ಲಾಂ ಧರ್ಮ ಅವರ ಆಯ್ಕೆಯ ಧರ್ಮದಂತೆ ಕಂಡಿತು.
ಕೃಪೆ: scroll.in