ನಾವು ತಿಳಿಯದ ಔರಂಗಝೇಬ್
ಈ ಹೊತ್ತಿನ ಹೊತ್ತಿಗೆ
ಈ ದೇಶಕ್ಕೆ ಮೊಗಲರು ಕೊಟ್ಟ ಕೊಡುಗೆಗಳು ಅನುಪಮ ವಾದುದು. ಆದರೆ ಮೊಗಲ್ ದೊರೆಗಳ ಹೆಸರುಗಳನ್ನು ಉಲ್ಲೇಖಿಸುವಾಗ ನಾವು ಅಕ್ಬರ್-ಔರಂಗಝೇಬ್ ಎನ್ನುವ ಎರಡು ಮಾನದಂಡವನ್ನು ಇಟ್ಟುಕೊಳ್ಳುತ್ತೇವೆ. ಅಕ್ಬರ್‌ನ ಕುರಿತಂತೆ ನಾವು ಇಟ್ಟುಕೊಂಡಿರುವ ಆರ್ದ್ರ ಭಾವ, ಔರಂಗಝೇಬ್‌ನ ಹೆಸರು ಬಂದಾಗ ಇರುವುದಿಲ್ಲ. ಔರಂಗಝೇಬ್‌ನನ್ನು ಖಳನಾಯಕನಾಗಿ ಗುರುತಿಸುತ್ತೇವೆ. ಮಹಾಮೂಲಭೂತವಾದಿಯೂ, ಹಿಂದೂಗಳ ಕಟು ವೈರಿಯೂ, ಕ್ರೂರಿಯೂ ಆಗಿದ್ದ ಎಂಬಂತೆ ಇತಿಹಾಸವನ್ನು ಓದುತ್ತೇವೆ. ಆದರೆ ಎಲ್ಲ ರಾಜರಂತೆಯೇ ಔರಂಗಝೇಬ್ ಕೂಡ ಒಬ್ಬ ಅರಸನಾಗಿದ್ದ. ಹೇಗೆ ಮರಾಠರು ಹಿಂದೂ ದೇವಾಲಯಗಳನ್ನು ಪುಡಿಗೈದು ಸಂಪತ್ತನ್ನು ಸೂರೆಗೈದಿದ್ದರೋ, ಹಾಗೆಯೇ ಔರಂಗಝೇಬ್ ಕೂಡ ದೇವಾಲಯ, ಮಸೀದಿಗಳೆರಡರ ಮೇಲೂ ದಾಳಿ ನಡೆಸಿದ್ದ. ಔರಂಗಝೇಬ್ ಅತ್ಯಂತ ಧಾರ್ಮಿಕನಾಗಿದ್ದ. ಆದರೆ ಆತನೂ ರಾಜಧರ್ಮವನ್ನು ಪಾಲಿಸಿದ್ದ. ಈ ಎಲ್ಲ ಅಂಶಗಳು ಶಾಶ್ವತವಾಗಿ ಇತಿಹಾಸದ ಕಸದಬುಟ್ಟಿ ಸೇರಿವೆ. ಈ ನಿಟ್ಟಿನಲ್ಲಿ, ಔರಂಗಝೇಬ್‌ನ ನಿಜ ವ್ಯಕ್ತಿತ್ವ ಏನು ಎನ್ನುವುದನ್ನು ವಿವರಿಸುವ ಪುಟ್ಟ ಕೃತಿಯೇ ‘ಹಿಂದೂ ಮಂದಿರಗಳು ಹಾಗೂ ಔರಂಗಝೇಬನ ಆದೇಶಗಳು’. ಉರ್ದುವಿನಲ್ಲಿ ಬಿ.ಎನ್. ಪಾಂಡೆ ಬರೆದಿರುವ ಈ ಕೃತಿಯನ್ನು ಹಸನ್ ನಯೀಂ ಸುರಕೋಡ್ ಅವರು ಕನ್ನಡಕ್ಕೆ ತಂದಿದ್ದಾರೆ. ಔರಂಗಝೇಬನನ್ನು ಹೇಗೆ ವರ್ತಮಾನದ ರಾಜಕೀಯ ಪ್ರಜ್ಞಾಪೂರ್ವಕವಾಗಿ ವಿರೂಪಗೊಳಿಸಿದೆ ಎನ್ನುವ ಅಂಶದ ಕಡೆಗೆ ಈ ಕೃತಿ ಗಮನ ಸೆಳೆಯುತ್ತದೆ.
ಇಲ್ಲಿ ಔರಂಗಝೇಬನನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸುವ ಯಾವುದೇ ಪ್ರಯತ್ನಗಳಿಲ್ಲ. ಔರಂಗಝೇಬ ಹೊರಡಿಸಿದ ಆದೇಶಗಳ ಪ್ರತಿಗಳ ದಾಖಲೆಗಳೇ ಔರಂಗಝೇಬ್ ಏನು ಎನ್ನುವುದನ್ನು ಹೇಳುತ್ತದೆ. ಪಾಂಡೆಯವರ ಆಳವಾದ ಸಂಶೋದನೆಯಿಂದ ಈ ಕೃತಿ ಹೊರ ಬಂದಿದೆ. ಔರಂಗಝೇಬ್ ಹಿಂದೂ ವಿರೋಧಿಯಾಗಿರಲಿಲ್ಲ, ಅಷ್ಟೇ ಅಲ್ಲ ಅವನು ಮೂರ್ತಿ ಭಂಜಕನೂ ಆಗಿರಲಿಲ್ಲ ಎನ್ನುವುದನ್ನು ಪಾಂಡೆ ದಾಖಲೆ ಸಹಿತ ಹೊರ ತೆಗೆಯುತ್ತಾರೆ. ಉಜ್ಜೈನದ ಮಹಾಕಾಲೇಶ್ವರ ಮಂದಿರದಲ್ಲಿ ಹಗಲೂ ರಾತ್ರಿ ನಿರಂತರವಾಗಿ ನಂದಾ ದೀಪ ಉರಿಯುವಂತೆ ನೋಡಿಕೊಳ್ಳುವಲ್ಲಿ ಔರಂಗಝೇಬನ ಪಾತ್ರವಿದೆ. ಈ ದೀಪ ಬೆಳಗುತ್ತಿರಲೆಂದು ಸ್ಥಳೀಯ ಆಡಳಿತದ ಪರವಾಗಿ ಪ್ರತಿ ದಿನ ನಾಲ್ಕು ಸೇರು ತುಪ್ಪವನ್ನೊದಗಿಸುವಂತೆ ಮುರಾದ್ ಬಕ್ಷ್ ಜಾರಿ ಮಾಡಿದ ಆದೇಶದ ಪ್ರತಿ ಇಂದಿಗೂ ಉಳಿದುಕೊಂಡಿದೆ. ಶವ್ವಾಲ್ 5, ಹಿಜರಿ ಸನ್ 1061ರಂದು ತನ್ನ ತಂದೆಯ ಆಡಳಿತದ ಕಾಲದಲ್ಲಿ ಜಾರಿ ಮಾಡಿದ್ದ ಆದೇಶ ಇದು. ಮಹಾಕಾಲೇಶ್ವರದ ಮಾಜಿ ಅರ್ಚಕ ದೇವನಾರಾಯಣನ ನಿವೇದನೆ ಮೇರೆಗೆ ಶಹನ್ ಶಾಹ್‌ನ ಪರವಾಗಿ ಆ ಆದೇಶ ಜಾರಿಯಾಗಿತ್ತು. ಔರಂಗ ಜೇಬ ಹಿಂದೂ ವಿರೋಧಿ ಅರಸನಾಗಿದ್ದ ಎಂದು ಆರೋಪಿಸುವ ಸಂದರ್ಭದಲ್ಲಿ ಬನಾರಸ್ ಶಾಸನವೆಂದು ಪ್ರಸಿದ್ಧವಾಗಿರುವ ಅವನ ಆದೇಶ, ಬ್ರಾಹ್ಮಣರ ರಕ್ಷಣೆಗಾಗಿ ಆತನ ಕೊಡುಗೆಗಳನ್ನು ಹೇಳುತ್ತವೆ. ಔರಂಗಝೇಬ್ ಹಿಂದೂ ಮಂದಿರಗಳನ್ನು ನಿರ್ಮಿಸಲು ನಿರ್ಬಂಧ ಹೇರಿದ್ದ ಎಂಬ ಸುಳ್ಳು ಇತಿಹಾಸವನ್ನೂ ಈ ಕೃತಿ ನಿರಾಕರಿಸುತ್ತದೆ. ಮತ್ತು ಮಂದಿರಗಳನ್ನು ಕೆಡಹುವುದರ ವಿರುದ್ಧ ಜಾರಿಗೊಳಿಸಿದ್ದ ಆದೇಶಗಳ ದಾಖಲೆಗಳನ್ನು ಈ ಕೃತಿ ಮುಂದಿಡುತ್ತದೆ. ಅಂತೆಯೇ ಗೋಲ್ಕೊಂಡಾದ ಜಾಮಿಯಾ ಮಸೀದಿಯನ್ನು ಬೀಳಿಸಿದ ಪ್ರಸಂಗವನ್ನು ಹೇಳುತ್ತಾ, ಔರಂಗಝೇಬ್ ಕೂಡ ತನ್ನ ರಾಜಕೀಯ ಹಿತಾಸಕ್ತಿಗಳಿಗೆ ಪೂರಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದನೇ ಹೊರತು, ಧಾರ್ಮಿಕ ಹಿತಾಸಕ್ತಿಗಳಿಗೆ ಪೂರಕವಾಗಿ ಅಲ್ಲ ಎನ್ನುವುದನ್ನು ಕೃತಿ ಒತ್ತಿ ಹೇಳುತ್ತದೆ. ಹಾಗೆಯೇ ವಿಶ್ವನಾಥ ಮಂದಿರದ ಧ್ವಂಸಕ್ಕೆ ಕಾರಣವಾದ ಅಂಶವನ್ನೂ ಕೃತಿ ಗುರುತಿಸುತ್ತದೆ.
ಕೃತಿ ಔರಂಗಝೇಬನ ಕುರಿತಂತೆ ಹಲವು ಪೂರ್ವಗ್ರಹಗಳನ್ನು ನಿವಾರಿಸುತ್ತದೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 56. ಮುಖಬೆಲೆ 50 ರೂಪಾಯಿ. ಆಸಕ್ತರು 9480286844 ದೂರವಾಣಿಯನ್ನು ಸಂಪರ್ಕಿಸಬಹುದು.