ಕನ್ನಡದ ಪದಗಳಲ್ಲಿ ಕಪ್ಪು ಜನರ ಇತಿಹಾಸ
ಈ ಹೊತ್ತಿನ ಹೊತ್ತಿಗೆ
ಗುಲಾಮೀ ಪದ್ಧತಿಯ ಹೋರಾಟದ ಅಗ್ನಿಗೆ ಸಮಿತ್ತಾದವರ ಹೆಸರುಗಳು ಸಾಲು ಸಾಲಾಗಿ ಉಲ್ಲೇಖಿಸಬಹುದು. ಜಗತ್ತಿನಲ್ಲಿ ಇಂದು ಕರಿಯರು ಮನುಷ್ಯರಾಗಿ ಬದುಕುವುದಕ್ಕೆ ಹಲವು ಕರಿಯ ಹೋರಾಟಗಾರರ ಕೊಡುಗೆ ದೊಡ್ಡದಿದೆ. ವಿಶ್ವದಲ್ಲಿ ಮತ್ತೆ ಜನಾಂಗೀಯವಾದ ತಲೆಯೆತ್ತುತ್ತಿರುವ ಸಂದರ್ಭದಲ್ಲಿ, ಆ ಕರಿಯ ನೇತಾರರ ನೆನಪುಗಳನ್ನು ನಮ್ಮದಾಗಿಸಿಕೊಳ್ಳುವುದು ಮತ್ತು ಆ ಬೆಂಕಿಯನ್ನು ಒಡಲೊಳಗಿಟ್ಟುಕೊಂಡು ದ್ವೇಷ ರಾಜಕೀಯದ ವಿರುದ್ಧ ಪ್ರತಿರೋಧ ಒಡ್ಡುವುದು ಇಂದಿನ ಅಗತ್ಯವಾಗಿದೆ. ಬೂಕರ್ ಟಿ. ವಾಶಿಂಗ್ಟನ್ ತನ್ನ ಆತ್ಮಶಕ್ತಿಯಿಂದಲೇ ಎಲ್ಲ ಪ್ರತಿರೋಧಗಳನ್ನು ಮೆಟ್ಟಿನಿಂತು ಜನನಾಯಕನಾಗಿ ಬೆಳೆದವರು. ತಂದೆ ಯಾರೆಂದೇ ತಿಳಿಯದೇ, ತೋಟದ ದಾಸಿಯ ಹೊಟ್ಟೆಯಲ್ಲಿ ಹುಟ್ಟಿದವರು ಬೂಕರ್ ಟಿ. ವಾಶಿಂಗ್ಟನ್. ಹಸಿವು, ಸಂಕಷ್ಟ, ಅವಮಾನ, ದುಡಿಮೆಗಳ ನಡುವೆಯೇ ಶಿಕ್ಷಣವನ್ನು ತನ್ನದಾಗಿಸಿಕೊಳ್ಳುತ್ತಾ, ಬಳಿಕ ತನ್ನ ಜನಾಂಗದ ಶಿಕ್ಷಣಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟವರು. ಇಂದು ನಾವು ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾದ ಕುರಿತಂತೆ ಹೆಮ್ಮೆ ಪಡುತ್ತಿದ್ದರೆ ಅದರ ಹಿಂದೆ ಒಂದು ಸುದೀರ್ಘ ಆಂದೋಲನವಿದೆ. ಆ ಆಂದೋಲನದ ಹಿಂದೆ ಬೂರ್‌ರಂತಹ ಹಲವು ನಾಯಕರಿದ್ದಾರೆ.
‘ಅಪ್ ಫ್ರಂ ಸ್ಲೇವರಿ’ ಬೂಕರ್ ಟಿ. ವಾಶಿಂಗ್ಟನ್ ಅವರ ಬದುಕಿನ ಗಾಥೆ. ಅಮೆರಿಕದ ಕಪ್ಪು ಮನುಜರ ಇತಿಹಾಸದಿಂದ ತೆರೆದುಕೊಳ್ಳುವ ಕೃತಿ, ಬೂಕರ್ ಅವರು ಎಂತಹ ವಾತಾವರಣದಲ್ಲಿ ಗುಲಾಮರಲ್ಲಿ ಗುಲಾಮರಾಗಿ ಹುಟ್ಟಿದರು ಎನ್ನುವುದನ್ನು ಮೊದಲ ಅಧ್ಯಾಯ ವಿವರಿಸುತ್ತದೆ. ಬಾಲ್ಯದ ದಿನಗಳು, ಶಿಕ್ಷಣಕ್ಕಾಗಿ ನಡೆಸಿದ ಹೋರಾಟದಿಂದ ಬಳಿಕ ತನ್ನ ಸಮುದಾಯವನ್ನು ಮೇಲೆತ್ತುವಲ್ಲಿ ರಚನಾತ್ಮಕವಾದ ಕಾರ್ಯಕ್ರಮಗಳನ್ನು ಹಾಕಿಕೊಂಡು ಅವರನ್ನು ಮೇಲೆತ್ತಲು ಶ್ರಮಿಸಿದ ಬಗೆಯನ್ನು ಕೃತಿ ಹೇಳುತ್ತದೆ. ಕಪ್ಪು ಜನರ ಬದುಕಲ್ಲಿ ರಚನಾತ್ಮಕ ಬದಲಾವಣೆ ತರಲು ಶಿಕ್ಷಣ ಮತ್ತು ಉದ್ಯೋಗಗಳ ಮೂಲಕ ಸಾಧ್ಯವೆಂದು ನಂಬಿದ ಅವರು, ಅದರಲ್ಲಿ ಯಶಸ್ವಿಯಾದರು. ಕರಿಯರ ಉದ್ಧಾರದಲ್ಲಿ ಬಿಳಿಯರ ಕಲ್ಯಾಣವಿರುವುದನ್ನು ಅತ್ಯಂತ ಮಾನವೀಯ ಮಾರ್ಗದಲ್ಲಿ ಅವರು ಪರಿಚಯಿಸಿದರು. ಬೂಕರ್ ಬದುಕು, ಭಾರತದ ದಲಿತ ಸಮುದಾಯದ ಬದುಕನ್ನು ಮೇಲೆತ್ತುವಲ್ಲೂ ಸ್ಫೂರ್ತಿಯನ್ನು ನೀಡಬಹುದಾಗಿದೆ.
ಮೂಲ ಆತ್ಮಕತೆಯನ್ನು ಅದರ ಸ್ವಾರಸ್ಯ ಕೆಡದಂತೆ ಕನ್ನಡಕ್ಕೆ ಅಷ್ಟೇ ಪರಿಣಾಮಕಾರಿಯಾಗಿ ತಂದಿದ್ದಾರೆ ಕೆ. ಪುಟ್ಟಸ್ವಾಮಿ. ಈಗಾಗಲೇ ಮಣಿಭೌಮಿಕ್, ಸಹಸ್ರಬುದ್ಧೆ, ಎಚ್. ಜಿ. ವೇಲ್ಸ್, ಜೂಲ್ಸ್ ವರ್ನ್ ಮೊದಲಾದವರ ಕೃತಿಗಳನ್ನು ಅನುವಾದಿಸಿ ಗುರುತಿಸಿಕೊಂಡಿರುವ ಪುಟ್ಟಸ್ವಾಮಿಯವರು ಬೂಕರ್ ಟಿ. ವಾಶಿಂಗ್ಟನ್ ಅವರ ಬದುಕಿನ ನೋವು ದುಮ್ಮಾನಗಳನ್ನು ತಮ್ಮದಾಗಿಸಿಕೊಂಡು ಕನ್ನಡ ಪದಗಳಲ್ಲಿ ಇಳಿಸಿದ್ದಾರೆ. ಬೂಕರ್ ಭಾರತದ ಭಾಷೆಯಲ್ಲಿ ಮತ್ತೊಮ್ಮೆ ಹುಟ್ಟಿದ್ದಾನೆ. ಅಭಿನವ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 212. ಮುಖಬೆಲೆ 200 ರೂಪಾಯಿ.