ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಹುಡುಕುವವರಿಗೆ ತೊಂದರೆ ನೀಡುತ್ತಿದೆ ಭಾರತದ ಇ-ಮೈಗ್ರೇಟ್ ವೆಬ್ಸೈಟ್
ನಾಲ್ಕು ವರ್ಷಗಳ ಹಿಂದೆ ಭಾರತದಿಂದ ಕೊಲ್ಲಿ ರಾಷ್ಟ್ರಗಳಿಗೆ ಕೆಲಸಗಾರರನ್ನು ಕಳುಹಿಸುವ ಏಜೆಂಟಾಗಿ ಮುಂಬೈಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಝರ್ನ ವ್ಯವಹಾರ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ಆದರೆ 2015ರಿಂದ ಈ ಉದ್ಯೋಗಾವಕಾಶಗಳು ಸೊರಗಿ ಹೋಗಿದೆ. ಕಾರಣ, ದಿನವೊಂದಕ್ಕೆ ಪ್ರತಿಯೊಬ್ಬ ಏಜೆಂಟ್ ಎಮಿಗ್ರೇಶನ್ ಕ್ಲಿಯರೆನ್ಸ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್ (ಪಿಒಎ) ಕಚೇರಿಗಳಿಗೆ ಗರಿಷ್ಠ 60 ಪಾಸ್ಪೋರ್ಟ್ ಗಳನ್ನು ಮಾತ್ರ ಕಳುಹಿಸಬಹುದಾಗಿದೆ. 10ನೇ ತರಗತಿಯ ಪರೀಕ್ಷೆ ತೇರ್ಗಡೆಯಾದವರಿಗೆ ವಿದೇಶಗಳಿಗೆ ಹೋಗಲು ಸರಕಾರದ ಅನುಮತಿ ದೊರಕಬೇಕಾದರೆ ಈ ಕ್ಲಿಯರೆನ್ಸ್ ಬೇಕೇಬೇಕು.
‘‘ನಾಲ್ಕು ವರ್ಷಗಳ ಹಿಂದೆ ಈ ಕ್ಲಿಯರೆನ್ಸ್ಗೆ ಅಝರ್ಗೆ ದಿನವೊಂದರ 70ರಷ್ಟು ಪಾಸ್ಪೋರ್ಟ್ಗಳು ಬರುತ್ತಿದ್ದವು. ಈಗ ಮೂರು ಪಾಸ್ಪೋರ್ಟ್ ಬಂದರೆ ನಮಗೆ ಅದೇ ದೊಡ್ಡ ಅದೃಷ್ಟ ಎನ್ನುವಂತಾಗಿದೆ’’ ಎನ್ನುತ್ತಾರೆ ಅಝರ್. ತೈಲ ಬೆಲೆ ಕುಸಿತದಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೌಕರಿಯ ಅವಕಾಶಗಳು ಕಡಿಮೆಯಾಗಿರುವುದೇ ಇದಕ್ಕೆ ಕಾರಣವೆಂದು ಸರಕಾರ ಹೇಳುತ್ತದೆ. ಆದರೆ ನೇಮಕಾತಿ ಏಜೆಂಟರು ಇದಕ್ಕೆ ಕಾರಣ ಬೇರೆಯೇ ಇದೆ ಎನ್ನುತ್ತಾರೆ. ಅವರು ಹೇಳುವಂತೆ ಕೇಂದ್ರ ಸರಕಾರ ವಲಸೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದ ತಂದ ಡಿಜಿಟಲೀಕರಣ ವ್ಯವಸ್ಥೆಯೇ ಇದಕ್ಕೆ ಕಾರಣ. ಆದರೆ ಈ ಹೊಸ ವ್ಯವಸ್ಥೆಯ ಉದ್ದೇಶಕ್ಕೆ ವಿರುದ್ಧವಾಗಿ ಅದು ವಿದೇಶಿ ಉದ್ಯೋಗದಾತರಿಗೆ ಪೇಪರ್ ವರ್ಕ್ ಜಾಸ್ತಿಯಾಗುವಂತೆ, ಹತ್ತಾರು ಫಾರ್ಮುಗಳನ್ನು ತುಂಬುವಂತೆ ಮಾಡಿದೆ. ಪರಿಣಾಮವಾಗಿ, ಈಗ ಇಂತಹ ಹೆಚ್ಚುವರಿ ರಗಳೆಗಳಿಲ್ಲದ ಬಾಂಗ್ಲಾದೇಶದ ಕೆಲಸಗಾರರಿಗೆ ಈ ನೌಕರಿಗಳು ಹೋಗುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ 2014ರಲ್ಲಿ ವಲಸೆ ಕಚೇರಿಗಳು 8 ಲಕ್ಷ ಕ್ಲಿಯರೆನ್ಸ್ಗಳನ್ನು ನೀಡಿದ್ದು 2017ರಲ್ಲಿ ಈ ಸಂಖ್ಯೆ ಸುಮಾರು 3.9 ಲಕ್ಷಕ್ಕೆ ಇಳಿಯಿತು. ಅದೇ ವೇಳೆ ಕೊಲ್ಲಿ ರಾಷ್ಟ್ರಗಳಿಗೆ ಬಾಂಗ್ಲಾದೇಶದಿಂದ ಹೋಗುವ ವಲಸೆ ಕೆಲಸಗಾರರ ಸಂಖ್ಯೆ ಹೆಚ್ಚಿತು.
ಸಮಸ್ಯಾತ್ಮಕ ವೆಬ್ಸೈಟ್
ಕೇಂದ್ರ ಸರಕಾರವು 2015ರಲ್ಲಿ ತನ್ನ ಇ-ಮೈಗ್ರೇಟ್ ವೆಬ್ಸೈಟ್ಗಳನ್ನು ಆರಂಭಿಸಿತ್ತು. ಎಮಿಗ್ರೇಶನ್ ಕ್ಲಿಯರೆನ್ಸ್ನ ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ಗೆ ವರ್ಗಾಯಿಸುವುದು ವೆಬ್ಸೈಟ್ನ ಉದ್ದೇಶವಾಗಿತ್ತು. ದಿನವೊಂದರ ನಾಲ್ಕು ಸಾವಿರ ಅರ್ಜಿಗಳ ವಿಲೇವಾರಿಗೆ ಬದಲಾಗಿ 10,000 ಅರ್ಜಿಗಳ ವಿಲೇವಾರಿ ಮಾಡುವುದು ವೆಬ್ಸೈಟ್ಗಳ ಗುರಿಯಾಗಿತ್ತು. ಆದರೆ ‘‘ವೆಬ್ಸೈಟ್ನ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ಅದರ ವಿನ್ಯಾಸವೇ’’ ಎಂದಿದ್ದಾರೆ ಓರ್ವ ನೇಮಕಾತಿ ಏಜೆಂಟ್ ಖುರೇಶಿ ಅಥರ್ ಸಲೀಂ. ವೇಗ ಹೆಚ್ಚುವ ಬದಲು ಕಡಿಮೆಯಾಗಿದೆ. ಪ್ರತಿ ವಲಸೆ ಕಚೇರಿ ದಿನವೊಂದರ ಕೇವಲ ನೂರು ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡುತ್ತದೆ. ದೇಶದಲ್ಲಿ ಇಂತಹ ಒಟ್ಟು ಹತ್ತು ಕಚೇರಿಗಳು ಮಾತ್ರವೇ ಇವೆ. 1984ರ ಒಂದು ವಲಸೆ ಕೈಪಿಡಿಯ ಪ್ರಕಾರ ವೆಬ್ಸೈಟ್ನ್ನು ವಿನ್ಯಾಸಗೊಳಿಸಲಾಯಿತು. ಆದರೆ ಈ ಕೈಪಿಡಿ ಈಗ ಹಳತಾಗಿ ನಿರುಪಯೋಗಿಯಾಗಿರುವ ಸ್ಥಿತಿ ತಲುಪಿದೆ. ಅದರ ಹಲವು ದೋಷಗಳನ್ನು ಸರಿಪಡಿಸಲಾಗಿದೆಯಾದರೂ ಇನ್ನೂ ಹಲವು ಹಾಗೆಯೇ ಉಳಿದಿದೆ. ಅಝರ್ರ ಕಂಪೆನಿಗೆ ಹೊಡೆತ ನೀಡಿದ ಅಂತಹ ಒಂದು ದೋಷವೆಂದರೆ, ಕೆಲವೇ ಮಂದಿ ಕೆಲಸಗಾರರನ್ನು ಸೇರಿಸಿಕೊಳ್ಳುವ ಉದ್ಯೋಗದಾತರು ಮಾಡಬೇಕಾದ ವಿಪರೀತ ಪೇಪರ್ ವರ್ಕ್ಸ್, ನಾನಾ ಅರ್ಜಿಗಳಲ್ಲಿ ವಿವರಗಳನ್ನು ತುಂಬುವ ಕೆಲಸ. ಇದರಿಂದ ಬೇಸತ್ತ ಹಲವು ಉದ್ಯೋಗದಾತರು ಭಾರತಕ್ಕೆ ವಿದಾಯ ಹೇಳಿ ಇತರ ದೇಶಗಳಿಂದ ನೌಕರರನ್ನು ಕರೆಸಿಕೊಳ್ಳಲಾರಂಭಿಸಿದರು.
ವಲಸೆ ಪ್ರಕ್ರಿಯೆ
ಅನಿಯಂತ್ರಿತ ವಲಸೆ ಅಸಮರ್ಪಕ ದಾಖಲೆಗಳು ಮತ್ತು ನಿಯಂತ್ರಕ ಕಾರ್ಮಿಕ ಕಾನೂನುಗಳಿಂದಾಗಿ ಕೂಲ್ಲಿ ರಾಷ್ಟ್ರಗಳಿಗೆ ಹೋಗುವ ಅರೆ ಕೌಶಲ್ಯವುಳ್ಳ ಹಾಗೂ ಯಾವುದೇ ಕೌಶಲ್ಯವಿಲ್ಲದ ವಲಸಿಗರು ಜೀತ ಪದ್ಧತಿಯಂತಹ ಪರಿಸ್ಥಿತಿಗಳಿಗೆ ತಳ್ಳಲ್ಪಟ್ಟು ಸ್ವದೇಶಕ್ಕೆ ಮರಳುವ ಸಾಧ್ಯತೆ ಇಲ್ಲದ ಸ್ಥಿತಿಗೆ ತಲುಪುತ್ತಾರೆ. ಭಾರತೀಯ ನಾಗರಿಕರಿಗೆ ವಲಸೆ ಕ್ಲಿಯರೆನ್ಸ್ ಗೆ ಸಂಬಂಧಿಸಿ ಸರಕಾರ ಎರಡು ರೀತಿಯ ಪಾಸ್ಪೋರ್ಟ್ಗಳನ್ನು ನೀಡುತ್ತದೆ. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗದವರಿಗೆ ‘ಇಸಿಆರ್’ ಅಥವಾ ‘ಎಮಿಗ್ರೇಷನ್ ಚೆಕ್ ರಿಕ್ವಯರ್ಡ್’ ಎಂದು ಮುದ್ರೆ ಒತ್ತುತ್ತದೆ. ಈ ವರ್ಗದ ಪಾಸ್ಪೋರ್ಟ್ ಹೊಂದಿದವರು ದೇಶದಲ್ಲಿರುವ ಹತ್ತು ವಲಸೆ ಕಚೇರಿಗಳಲ್ಲಿ ಯಾವುದಾದರೂ ಒಂದರಿಂದ ಕ್ಲಿಯರೆನ್ಸ್ ಪಡೆಯಬೇಕಾಗುತ್ತದೆ.
ವೆಬ್ಸೈಟ್ ಗೋಳುಗಳು
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅಭಿವೃದ್ಧಿಪಡಿಸಿರುವ ಇ-ಮೈಗ್ರೇಟ್ ವೆಬ್ಸೈಟ್ ಈ ವಲಸೆ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿದೆ, ದುಸ್ತರವಾಗಿಸಿದೆ ಎನ್ನುತ್ತಾರೆ ನೇಮಕಾತಿ ಏಜೆಂಟರು. ಇದುವರೆಗೆ ಭಾರತ ಸರಕಾರಕ್ಕೆ ತಮ್ಮ ಉದ್ಯಮ ವಿವರಗಳನ್ನು ನೀಡಬೇಕಾಗಿಲ್ಲದ ವಿದೇಶಿ ಉದ್ಯೋಗದಾತರು ಈಗ ವೆಬ್ಸೈಟ್ನಲ್ಲಿ ಆ ವಿವರಗಳನ್ನೆಲ್ಲ ನೋಂದಾಯಿಸಬೇಕು ಮತ್ತು ಭಾರತ ಸರಕಾರಕ್ಕೆ 2,500 ಡಾಲರ್ಗಳ ಬ್ಯಾಂಕ್ ಗ್ಯಾರಂಟಿಯನ್ನು ನೀಡಬೇಕು. ಆ ಬಳಿಕ ಪ್ರತೀ ನೌಕರರಿಗೆ ತಾವೆಷ್ಟು ವೇತನ ನೀಡುತ್ತೇವೆ. ಪ್ರತೀ ವಲಸಿಗನ ವಿವರಗಳು, ನೌಕರಿ ಕಾಂಟ್ರ್ಯಾಕ್ಟ್ನ ಪ್ರತಿ ಇತ್ಯಾದಿಗಳನ್ನೆಲ್ಲ ಇ-ಮೈಗ್ರೇಟ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು.
ನೇಮಕಾತಿ ಮಾಡಿಕೊಳ್ಳುವ ದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಪ್ರತಿಯೊಬ್ಬ ವಲಸಿಗನ ಕಾಂಟ್ರಾಕ್ಟನ್ನು ಅಟೆಸ್ಟ್ ಮಾಡಬೇಕು. ಇದಕ್ಕೆ ಪ್ರತೀ ಕಾಂಟ್ರಾಕ್ಟ್ಗೆ ಸುಮಾರು 5,000 ರೂ. ತೆರಬೇಕು. ವಾಸ್ತವದಲ್ಲಿ ಮೇಜಿನ ಕೆಳಗೆ ಇದಕ್ಕಿಂತ ಹೆಚ್ಚಿನ ಮೊತ್ತವನ್ನು ತೆರಬೇಕಾಗುತ್ತದೆ ಎಂದು ಏಜೆಂಟರು ಹೇಳುತ್ತಾರೆ. ವೆಬ್ಸೈಟ್ಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳ ಕುರಿತಾದ ವದಂತಿಗಳಿಗೆ ಟಿಸಿಎಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಮಧ್ಯೆ ಹೆಚ್ಚುತ್ತಿರುವ ಅಕ್ರಮ ವಲಸಿಗರ, ಮುಖ್ಯವಾಗಿ ನಿರ್ಮಾಣ ಕಾರ್ಮಿಕರ ಸಮಸ್ಯೆಯನ್ನೂ ಪರಿಹರಿಸಬೇಕಾಗಿದೆ.
ಕೃಪೆ: scroll.in