ವಿಚಾರವಾದಿಗಳ ಸಂಘಟನೆ ಹುಟ್ಟು, ಪವಾಡ ರಹಸ್ಯ ಬಯಲಿನ ಸುತ್ತ....
ನರೇಂದ್ರ ನಾಯಕ್ ಜೀವನ ಕಥನ
ಭಾಗ 59
ವಿಚಾರವಾದವನ್ನು ಜನರಿಗೆ ಮುಟ್ಟಿಸುವ ಒಂದು ಅತ್ಯುತ್ತಮ ವಿಧಾನವಾಗಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಆರಂಭಗೊಳ್ಳಲು ಹಾಗೂ ವಿಚಾರವಾದಿಗಳ ಸಂಘಟನೆ ಹುಟ್ಟಿಕೊಳ್ಳಲು ಪ್ರಮುಖ ಕಾರಣ. ವಿಚಾರವಾದಿಗಳ ಆಂದೋಲನ ವಿವಿಧ ಆಯಾಮಗಳೊಂದಿಗೆ ಕಾರ್ಯರೂಪಕ್ಕೆ ಬಂದಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಿದೆ. ದಕ್ಷಿಣ ಭಾರತದಲ್ಲಿ ಕೆಲ ಸಾಮಾಜಿಕ ಆಂದೋಲನಗಳ ಜತೆ ಸೇರಿಕೊಂಡರೆ, ಉತ್ತರ ಭಾರತದಲ್ಲಿ ಮುಂಬೈಯಲ್ಲಿ ವಿಚಾರವಾದಿಗಳ ಸಂಘಟನೆಯಾಗಿ ಹುಟ್ಟು ಪಡೆಯಿತು.
ದಕ್ಷಿಣ ಭಾರತದಲ್ಲಿ ಕೇರಳದಲ್ಲಿ ಹಾಗೂ ತಮಿಳುನಾಡಿನಲ್ಲಿ ಈ ಆಂದೋಲನಕ್ಕೆ ರೂಪು ನೀಡಲಾಯಿತು. ತಮಿಳುನಾಡಿಲ್ಲಿ ಸ್ವಯಂ ಗೌರವ ಆಂದೋಲನವಾಗಿ ವಿಚಾರವಾದಿಗಳ ಸಂಘಟನೆ ಹುಟ್ಟಿಕೊಂಡರೆ, ಕೇರಳದಲ್ಲಿ ನಾರಾಯಣ ಗುರು, ಮುತ್ತುರಾಜ್ ಜೋಸೆಫ್, ಅಯ್ಯಂಕಿಣಿ, ಸಹೋದರನ್ ಅಯ್ಯಪ್ಪನ್ ಮೊದಲಾದವರು ಈ ಆಂದೋಲನವನ್ನು ಆರಂಭಿಸಿದರು. ಮುಂಬೈಯಲ್ಲಿ ಅದು ವಿಸ್ತಾರ ರೂಪವನ್ನು ಪಡೆದುಕೊಂಡಿತು. ವೈದ್ಯರು, ಸಿಎಗಳು, ಇಂಜಿನಿಯರ್‌ಗಳು ಸೇರಿ ವಿಚಾರವಾದಿಗಳ ಅಸೋಸಿಯೇಶನ್ ಆರಂಭಿಸಿದರು. ಅಂದಿನ ಕಾಲದಲ್ಲಿ ಅವರ ಸಭೆಗಳು ಫೈವ್‌ಸ್ಟಾರ್ ಹೊಟೇಲ್‌ಗಳಲ್ಲಿ ನಡೆಯುತ್ತಿದ್ದುದು ವಿಶೇಷ. ರಾಷ್ಟ್ರೀಯ ವಿಚಾರವಾದಿಗಳ ಸಂಘಟನೆ (ಐಆರ್‌ಎ)ಮೊದಲು ಆರಂಭವಾದಾಗ ಜಸ್ಟಿಸ್ ಜಾಗೀರ್‌ದಾರ್‌ರವರು ಮಂಗಳೂರಿಗೆ ಬಂದಿದ್ದ ವೇಳೆ ಅವರ ಮ್ಯಾಗಝೀನ್‌ನ ಪ್ರತಿಯನ್ನು ನನಗೆ ನೀಡಿದ್ದರು. ಅದನ್ನು ಗಮನಿಸಿದರೆ, ಬಹಳ ವಿಸ್ತಾರ ರೂಪದಲ್ಲಿ ಆಂದೋಲನವನ್ನು ಆರಂಭಿಸಲಾಗಿತ್ತು. ನಿರಂತರ ಚರ್ಚೆ, ಸಭೆಗಳು ಅಲ್ಲದೆ, ಸರಕಾರಕ್ಕೆ ತಮ್ಮ ನಿಲುವುಗಳನ್ನು, ಅಭಿಪ್ರಾಯಗಳನ್ನು ಅವರು ಲಿಖಿತವಾಗಿ ನೀಡುತ್ತಿದ್ದರು. ಅತಿಮಾನುಷ ಶಕ್ತಿಗಳ ಬಗ್ಗೆ ವ್ಯಂಗ್ಯವಾದ ಬರಹಗಳ ಮೂಲಕ ಅವರು ಜನಸಾಮಾನ್ಯರ ಗಮನ ಸೆಳೆಯಲು ಯತ್ನಿಸಿದ್ದರು. ಸೊಲೊಮನ್ ಎಂಬ ಕೇರಳದ ವಿಚಾರವಾದಿ ಪ್ರಮುಖರಾಗಿದ್ದರು.
ಹೀಗೆ ಹುಟ್ಟಿಕೊಂಡ ಐಆರ್‌ಎ ತನ್ನ ಕಬಂಧಬಾಹುಗಳನ್ನು ರಾಷ್ಟ್ರದ ಉದ್ದಗಲಕ್ಕೆ ಚಾಚತೊಡಗಿತು. ಹಲವು ಗುಂಪುಗಳು, ಘಟಕಗಳ ಮೂಲಕ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ತಮಿಳುನಾಡಿನಲ್ಲಿ ಪೆರಿಯಾರ್‌ರವರ ಕಾರ್ಯಕ್ರಮದ ಸಂದರ್ಭ ಕೆಂಡದ ಮೇಲೆ ನಡೆಯುವ ಕಾರ್ಯಕ್ರಮ, ಆಂಧ್ರದ ವಿಜಯವಾಡದಲ್ಲಿ ನಾಸ್ತಿಕ ಕೇಂದ್ರದ ಮೂಲಕ ಗೋರಾ ಎಂಬವರು ತಮ್ಮ ಕುಟಂಬವನ್ನೇ ವಿಚಾರವಾದಿಗಳನ್ನಾಗಿ ಬೆಳೆಸಿದರು. ಅವರ ಮಕ್ಕಳಿಗೆ ದೇವರ ಹೆಸರನ್ನು ಬಿಟ್ಟು ಲವಣನ್, ವಿಜಯನ್, ಸಮರಂ, ಕೊನೆಯ ಅವರ ಒಂಬತ್ತನೆ ಪುತ್ರಿಗೆ ನೌ ಎಂದರೆ ಒಂಬತ್ತು ಎಂಬ ಹೆಸರಿಡುವ ಮೂಲಕ ಅಂದಿನ ಕಾಲದಲ್ಲಿ ಜನಸಾಮಾನ್ಯರು ಹುಬ್ಬೇರಿಸುವಂತೆ ಮಾಡಿದ್ದರು.ಗ್ರಹಣಗಳ ಸಂದರ್ಭ ತರಕಾರಿಗಳನ್ನು ಕತ್ತರಿಸುವುದು. ಜೀವನಲ್ಲಿ ವಿಚಾರವಾದಿ ವಿಚಾರವನ್ನು ಅಳವಡಿಸಿಕೊಂಡು ಪ್ರೇರಣೆ ನೀಡಿದರು. ಆದರೆ, ಸಾರ್ವಜನಿಕವಾಗಿ ಜನಸಾಮಾನ್ಯರನ್ನು ಮುಟ್ಟುವ ಕಾರ್ಯಕ್ರಮವನ್ನು ದಕ್ಷಿಣ ಭಾರತದಿಂದ ಆರಂಭಿಸಲಾಯಿತು. ಅತಿಮಾನುಷ ಶಕ್ತಿಗಳೆಂದು ಹೇಳಿಕೊಳ್ಳುವವರು ಮಾಡುತ್ತಿದ್ದ ಪವಾಡಗಳ ಬಗ್ಗೆ ಜನರಿಗೆ ತಿಳಿಸಲು ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳಿಗೆ ನಾಂದಿ ಹಾಡಲಾಯಿತು.
ಕೇರಳದಿಂದ ಶ್ರೀಲಂಕಾದಲ್ಲಿ ನೆಲೆಸಿದ್ದ ಅಬ್ರಹಾಂ ಕೋವೂರು ಎಂಬವರು ವಿಚಾರವಾದವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಹೊಸ ಪರಿಪಾಠವೊಂದನ್ನು ಕಂಡುಕೊಂಡರು. ದೈವಿಕ ಪವಾಡಗಳ ರಹಸ್ಯ ಬಯಲು (ಡಿವೈನ್ ಮಿರಾಕಲ್ ಎಕ್ಸ್‌ಪೋಶರ್ ಕ್ಯಾಂಪೇನ್) ಕಾರ್ಯಕ್ರಮದ ಮೂಲಕ ಅವರು ಉಪನ್ಯಾಸ ನೀಡುತ್ತಿದ್ದರು. ವೈಜ್ಞಾನಿಕ ವಿಸ್ಮಯ, ಸತ್ಯಗಳೊಂದಿಗೆ ಜೀವನದ ಅನುಭವಗಳನ್ನು ಅವರು ಸಾರ್ವಜನಿಕವಾಗಿ ತಿಳಿಸುತ್ತಿದ್ದರು. ಬಳಿಕ ನಾರಾಯಣನ್ ಎಂಬ ಆದಾಯ ತೆರಿಗೆ ಅಧಿಕಾರಿಯಾಗಿದ್ದವರು ಹಿಪ್ನೋಟಿಸಂ ಮೂಲಕ ಯಾವ ರೀತಿಯಲ್ಲಿ ಮನಸ್ಸನ್ನು ಸೆಳೆಯಬಹುದು ಎಂಬುದನ್ನು ತಿಳಿಸುತ್ತಿದ್ದರು. ಅವರ ಜತೆ ಸ್ವಾಮಿನಾಥನ್ ಎಂಬ ಜಾದೂಗಾರ ಅವರು ಪವಾಡಗಳನ್ನು ಮಾಡಿ ತೋರಿಸುತ್ತಿದ್ದರು. ಅಂದರೆ, ಶೂನ್ಯದಿಂದ ಬೂದಿ, ವಿವಿಧ ವಸ್ತುಗಳ ಸೃಷ್ಟಿಯನ್ನು ಮಾಡಿ ತೋರಿಸುತ್ತಿದ್ದರು. ಹೊಟ್ಟೆಯಿಂದ ಶಿವಲಿಂಗ ತೆಗೆಯುವುದನ್ನೂ ಅವರು ತೋರಿಸುತ್ತಿದ್ದರು. ಸುಳ್ಳು ಪವಾಡ ಪುರುಷರ ಮೋಸವನ್ನು ಬಯಲಿಗೆಳೆಯುವ ಕಾರ್ಯ ಈ ಮೂಲಕ ನಡೆಯುತ್ತಿತ್ತು. ಪವಾಡ ಮಾಡುವುದೆಂದರೆ ಅದೊಂದು ಮೋಸ. ಅದನ್ನು ನಾನು ಮಾಡಿ ತೋರಿಸುತ್ತೇನೆ. ಪವಾಡ ಪುರುಷರು ತಮ್ಮಲ್ಲಿ ವಿಶೇಷ ಶಕ್ತಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಾನು ಹೇಳುವುದೇನೆಂದರೆ ಈ ಪವಾಡಕ್ಕೆ ಯಾವುದೇ ಶಕ್ತಿಯ ಅಗತ್ಯವಿಲ್ಲ’ ಎಂಬ ವಿಶ್ಲೇಷಣೆಯೊಂದಿಗೆ ಈ ಪವಾಡಗಳ ರಹಸ್ಯವನ್ನು ಕಾರ್ಯಕ್ರಮಗಳ ಮೂಲಕ ಬಯಲಿಗೆಳೆಯುವ ಕಾರ್ಯಗಳು ಅಲ್ಲಲ್ಲಿ ನಡೆಯಲಾರಂಭಿಸಿದವು. ಹೀಗೆ, ಅಬ್ರಹಾಂ ಕೋವೂರು ಅವರ ಡಿವೈನ್ ಮಿರಾಕಲ್ ಎಕ್ಸ್‌ಪೋಶರ್ ಕ್ಯಾಂಪೇನ್ ಅತ್ಯಲ್ಪ ಕಾಲದಲ್ಲೇ ಜನವ್ಯಾಪಿಯಾಯಿತು.
ಯಶಸ್ಸನ್ನೂ ಕಂಡಿತು. ಕೋವೂರು ಅವರಿಗೆ ಬರುತ್ತಿದ್ದ ಭಾಷೆ ಮಲಯಾಳಂ ಮತ್ತು ಇಂಗ್ಲಿಷ್. ಹಾಗಾಗಿ ಕೆಲವೊಂದು ಕಡೆ ಕಾರ್ಯಕ್ರಮಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಅವರ ಮಾತು, ಹೇಳಿಕೆಗಳನ್ನು ಭಾಷಾಂತರಿಸಿ ಜನಸಾಮಾನ್ಯರನ್ನು ಮುಟ್ಟುವ ಪ್ರಯತ್ನ ನಡೆಸಲಾಗುತ್ತಿತ್ತು. 1976ರಲ್ಲಿ ಅವರನ್ನು ಮಂಗಳೂರಿಗೆ ಕರೆಸಲು ಇಲ್ಲಿನ ಸಣ್ಣ ಪ್ರಮಾಣದಲ್ಲಿದ್ದ ವಿಚಾರವಾದಿಗಳ ಗುಂಪು ಮುಂದಾಯಿತು. ಆಗ ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕೆಗಳಿಗೆ ರಾಜಕೀಯ ಸುದ್ದಿಗಳನ್ನು ಪ್ರಕಟಿಸುವಂತಿರಲಿಲ್ಲ. ಆಗ ಇದ್ದಿದ್ದೂ ಬೆರಳೆಣಿಕೆಯ ಪತ್ರಿಕೆಗಳು. ಯಾವುದೇ ಸುದ್ದಿ ಹಾಕುವ ಮೊದಲು ಸೆನ್ಸಾರ್ ಅಧಿಕಾರಿಯಿಂದ ಅನುಮತಿ ಪಡೆಯಬೇಕಿತ್ತು. ಅವರಿಂದ ಅನುಮತಿ ದೊರಕಿದ ಬಳಿಕವಷ್ಟೆ ಅದನ್ನು ಪ್ರಕಟಿಸಬೇಕಾಗಿತ್ತು. ಆ ಸಮಯದಲ್ಲಿ ಸಾಮಾಜಿಕ ವಿಷಯಗಳಿಗೆ ಹೆಚ್ಚು ಒತ್ತು ನೀಡಲಾಯಿತು. ಆ ಸಂದರ್ಭ ಪವಾಡ ಪುರುಷರೆಂದು ಹೇಳಿಕೊಂಡು ಮೋಸ ಮಾಡುವವರ ಹಾವಳಿ ಜೋರಾಗಿತ್ತು. ದೇಶದ ಮೂಲೆಮೂಲೆಗಳಿಂದಲೂ ಕೋವೂರು ಅವರಿಗೆ ಪ್ರದರ್ಶನಕ್ಕಾಗಿ ಕರೆ ಬರಲಾರಂಭಿಸಿತು.