ನಿರ್ಗಲಿಕೆಯ ಮಾನದಂಡ
► ಬೆಳೆಯುವ ಪೈರು ► ಅಧ್ಯಯನ ಮತ್ತು ಅರಿವು
ಭಾಗ 3
ಕಲಿಕಾ ನ್ಯೂನತೆಗಳು
ನಿರ್ಗಲಿಕೆಯಂತಹ ಕಲಿಕಾ ನ್ಯೂನತೆಗಳನ್ನು ಔಷಧಿಗಳಿಂದಾಗಲಿ, ಯಂತ್ರ ಅಥವಾ ಮಂತ್ರಗಳಿಂದಾಗಲಿ ಸರಿಪಡಿಸಲು ಸಾಧ್ಯವಿಲ್ಲ. ಆದರೆ, ಕೆಲವು ವಿಶೇಷ ಕಲಿಕಾ ತಂತ್ರಗಳನ್ನು ಉಪಯೋಗಿಸಿಕೊಂಡು, ಕಲಿಸುವ ವಿಧಾನಗಳನ್ನು ಅಳವಡಿಸಿಕೊಂಡು ಅಂತಹ ಮಕ್ಕಳಿಗೆ ಕಲಿಕೆಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಬಹುದು.
ಚಿಕಿತ್ಸೆ ಎಂಬುದಿಲ್ಲ
ಡಿಸ್ಲೆಕ್ಸಿಯಾದ ಸಾಮಾನ್ಯ ಗುಣಲಕ್ಷಣಗಳನ್ನು ಗುರುತಿಸಿದ ಮೇಲೆ ಮುಖ್ಯವಾಗಿ ಶಿಕ್ಷಕರಾಗಲಿ ಪೋಷಕರಾಗಲಿ ನಿರ್ಗಲಿಕೆಯ ಮಕ್ಕಳಿಗೆ ಕಲಿಸುವುದು ಹೇಗೆಂದು ಕಲಿಯಬೇಕು. ಮುಖ್ಯವಾಗಿ ಡಿಸ್ಲೆಕ್ಸಿಯಾವನ್ನು ಗುಣಪಡಿಸುತ್ತೇನೆಂದು ಯಾರಾದರೂ ಭರವಸೆಯನ್ನು ನೀಡಿ ಔಷಧಿ ಅಥವಾ ಇನ್ನಾವುದಾದರೂ ಥೆರಪಿ ಮಾಡುತ್ತಾರೆಂದರೆ ಅದು ಸುಳ್ಳು ಮತ್ತು ಅಂತಹದ್ದಕ್ಕೆ ಮೋಸ ಹೋಗಬೇಡಿ. ಹ್ಯಾಂಡ್ ರೈಟಿಂಗ್ ಥೆರಪಿ ಮತ್ತು ಗಿಡಮೂಲಿಕೆಗಳ ಔಷಧಿಗಳಿಂದ ನಿರ್ಗಲಿಕೆಯನ್ನು ನಿವಾರಿಸಿ, ಕೆಲವೇ ತಿಂಗಳಲ್ಲಿ ಮಹಾಜ್ಞಾನಿಯನ್ನಾಗಿ ಮಾಡಿ ರ್ಯಾಂಕ್ ಸ್ಟೂಡೆಂಟಾಗಿ ಮಾಡುತ್ತೇನೆಂದು ಹೇಳಿಕೊಂಡರೆ ಅದು ಬರೀ ಸುಳ್ಳು. ಅದೊಂದು ಅವರ ವ್ಯಾಪಾರ ಮತ್ತು ವ್ಯವಹಾರದ ತಂತ್ರವಾಗಿರುತ್ತದೆ ಅಥವಾ ಅವರೇ ಅಂತಹ ಭ್ರಮೆಗೆ ಒಳಗಾಗಿರುತ್ತಾರೆ. ಏನೂ ಓದಲು ಬಾರದ, ಅಥವಾ ನಿರ್ಗಲಿಕೆಯ ಲಕ್ಷಣಗಳನ್ನು ಹೊಂದಿರುವ ಮಕ್ಕಳ ತಂದೆ ತಾಯಿಯರು ಎಷ್ಟು ಖರ್ಚಾದರೂ ಸರಿ ತಮ್ಮ ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡಿ ರ್ಯಾಂಕ್ ಸ್ಟೂಡೆಂಟ್ಗಳಾಗಿ ಮಾಡಿಸಲು ಪ್ರಯತ್ನಿಸುವ ಹಲವಾರು ನಿದರ್ಶನಗಳನ್ನು ಕಂಡಿದ್ದೇನೆ. ಬಾಲ್ ಪೆನ್ನ ನಿಬ್ ಬದಲಾಯಿಸಿ ಯಾವುದೇ ಪೆನ್ನನ್ನು ತೆಗೆದುಕೊಂಡರೂ ಅದೇ ನಿಬ್ಬನ್ನು ಬಳಸಿಕೊಂಡಿದ್ದರೆ, ಅವರು ಸರಾಗವಾಗಿ ಬರೆಯುತ್ತಾರೆ ಮತ್ತು ಆ ನಿರ್ದಿಷ್ಟವಾದ ಪೆನ್ನಿಂದ ಬರೆಯುವುದರಿಂದ ಓದಿದೆಲ್ಲವು ನೆನಪಿಗೆ ಬಂದು ಬಿಡುತ್ತದೆ ಎಂದೆಲ್ಲಾ ಕಪೋಲಕಲ್ಪಿತ ಕಥೆಗಳನ್ನು ಹುಟ್ಟು ಹಾಕಿದ್ದು, ಅದನ್ನು ಪಾಲಿಸಿಕೊಂಡು ಬಂದಿರುವವರನ್ನು ಕಂಡಿದ್ದೇನೆ. ಅಷ್ಟೇ ಅಲ್ಲದೇ ನಿರ್ದಿಷ್ಟ ಮಗುವಿಗೆ ನಿರ್ದಿಷ್ಟ ಔಷಧವನ್ನು ಕೊಡುತ್ತೇವೆ ಎಂದು ಸಾವಿರಾರು ರೂಪಾಯಿಗಳನ್ನು ಸುಲಿಯುವ ಕ್ವಾಕ್ ಡಾಕ್ಟರ್ಗಳನ್ನು ಇಲ್ಲಿ ನೋಡುತ್ತಿದ್ದೇವೆ. ಯಾವುದ್ಯಾವುದೋ ಆಯುರ್ವೇದ ಗಿಡಮೂಲಿಕೆಗಳನ್ನು ತೆಗೆದುಕೊಳ್ಳುವುದರಿಂದ ಬುದ್ಧಿ ಚುರುಕಾಗುತ್ತದೆ, ನೆನಪಿನ ಶಕ್ತಿ ಹೆಚ್ಚುತ್ತದೆ ಇತ್ಯಾದಿಗಳನ್ನು ನೋಡುತ್ತಿದ್ದೇವೆ. ಆದರೆ ಇಂತಹವಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಚುರುಕು ಬುದ್ಧಿ ಅಥವಾ ನೆನಪಿನ ಸಾಮರ್ಥ್ಯಗಳು ತಾಂತ್ರಿಕವಾಗಿ ರೂಢಿಸಿಕೊಂಡಿರುವ ಅಭ್ಯಾಸಗಳಿಂದ ಸಾಧ್ಯವೇ ಹೊರತು ಔಷಧಿಗಳಿಂದ ಎಂದಿಗೂ ಅಲ್ಲ. ಮೊದಲನೆಯದಾಗಿ ಮಕ್ಕಳು ಚುರುಕಾಗಿಲ್ಲದೇ ಇರುವುದು, ನೆನಪಿನಲ್ಲಿ ಇಟ್ಟುಕೊಳ್ಳದೇ ಇರುವುದು ಒಂದು ರೋಗವೇ ಅಲ್ಲ ಗುಣಪಡಿಸುವುದಕ್ಕೆ. ಅದು ಅವರವರ ಸ್ವಭಾವ ಮತ್ತು ಶಾಲೆಯ ಹಾಗೂ ಮನೆಯ ಪೂರಕ ವಾತಾವರಣಗಳ ಪ್ರಭಾವಗಳ ಮೇಲೆ ಅವಲಂಬಿತವಾಗಿರುತ್ತವೆ. ವಿದ್ಯೆ ಮತ್ತು ಬುದ್ಧಿಯ ಸಂವರ್ಧನೆಗಾಗಿ ಸರಸ್ವತಿ ಯಂತ್ರ ಧರಿಸುವುದರಿಂದ ಮತ್ತು ಪೂಜಿಸುವುದರಿಂದ ಅಥವಾ ಇನ್ನಾವುದೋ ಮಂತ್ರವನ್ನು ಹೇಳುವುದರಿಂದ ನಿರ್ಗಲಿಕೆಯಂತಹ ಯಾವುದೇ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಮಾನವ ಗಣಕಯಂತ್ರ ಎಂದೇ ಪ್ರಸಿದ್ಧವಾಗಿದ್ದ ಬೆಂಗಳೂರಿನ ಶಕುಂತಲಾ ದೇವಿಯೂ (ಅವರು ಈಗಿಲ್ಲ) ಕೂಡ ಸರಸ್ವತಿ ಯಂತ್ರ ಇತ್ಯಾದಿಗಳನ್ನು ಮಾಡುವುದು ಮತ್ತು ಮಾರುವುದು ಇತ್ಯಾದಿಗಳನ್ನು ಮಾಡುತ್ತಿದ್ದರು. ಜೊತೆಗೆ ಅದರ ಬಗ್ಗೆ ಜಾಹೀರಾತುಗಳನ್ನು ಪ್ರಕಟಿಸುತ್ತಿದ್ದದ್ದು ನನಗಂತೂ ತೀರಾ ಆಶ್ಚರ್ಯವಾಗುತ್ತಿತ್ತು. ತಮ್ಮ ಗಣಿತದ ಬಗ್ಗೆ ಇರುವ ಅಸಾಧಾರಣ ಪ್ರತಿಭೆೆಯನ್ನು ಇತರರಿಗೆ ಧಾರೆ ಎರೆಯುವ ಬದಲು ಈ ರೀತಿ ಯಂತ್ರಗಳನ್ನು ಮಾರಲು ಜಾಹೀರಾತಿಗೆ ಬಳಸಿಕೊಳ್ಳುತ್ತಿದ್ದುದ್ದು ತೀರಾ ಬೇಸರವಾಗುತ್ತಿತ್ತು. ಹಾಗೆ ನೋಡಲು ಹೋದರೆ, ಈಗ ಅಬಾಕಸ್ ಮತ್ತು ಇತರ ಬ್ರೈನ್ ಮ್ಯಾಥ್ಸ್ಗಳನ್ನು ಕಲಿಸುವವರು ತರಾವರಿ ತಂತ್ರಗಳನ್ನು ವೈಜ್ಞಾನಿಕವಾಗಿ ಬಳಸಿಕೊಂಡು ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ. ಅಂತಹದ್ದನ್ನು ನಾವು ಶಕುಂತಲಾ ದೇವಿಯಿಂದ ನಿರೀಕ್ಷಿಸಬಹುದಾಗಿತ್ತು. ಆದರೆ ಅದು ಹಾಗಾಗಲಿಲ್ಲ. ಮಂತ್ರಗಳನ್ನು ಹೇಳುವುದರಿಂದ ಅಥವಾ ಯಾವುದೇ ಪೂಜೆಗಳನ್ನು ಮಾಡುವುದರಿಂದ ಯಾವುದೇ ರೀತಿಯಲ್ಲಿ ಬುದ್ಧಿ ಚುರುಕಾಗುವುದಿಲ್ಲ ಮತ್ತು ಕಲಿಕೆಯ ಸಾಮರ್ಥ್ಯ ಹೆಚ್ಚಿಬಿಡುವುದಿಲ್ಲ. ಕಲಿಕೆಗೇ ವೌಢ್ಯವು ಮುಸುಕಿಕೊಂಡುಬಿಟ್ಟರೆ ಅವರಿನ್ನೇನು ಕಲಿತಾರು, ಅರಿತಾರು?
ಕಲಬುರಗಿಯ ಖ್ಯಾತ ಖ್ವಾಜಾ ಬಂದೇ ನವಾಝ್ ದರ್ಗಾದಲ್ಲಿ ಒಂದು ಗಿಳಿಯ ಉಬ್ಬುಚಿತ್ರವೊಂದನ್ನು ಕಲ್ಲಿನ ಮೇಲೆ ಕೆತ್ತಲಾಗಿದೆ. ಹಿಂದೊಂದು ಗಿಳಿಯಿತ್ತು. ಅದು ಹಾಫಿಸ್, ಅಂದರೆ ಇಡೀ ಕುರ್ಆನ್ನ್ನು ಕಂಠಸ್ಥ ಮಾಡಿಕೊಂಡಿತ್ತು. ಅದರ ಚಿತ್ರವದು ಎಂಬ ದಂತಕತೆ. ಅದರ ಮೇಲೆ ಸಕ್ಕರೆಯನ್ನು ಹಾಕಿರಲಾಗುತ್ತದೆ. ಆ ಸಕ್ಕರೆಯನ್ನು ತಿಂದರೆ ಉಗ್ಗು, ತೊದಲು ವಾಸಿಯಾಗುತ್ತದೆ ಎಂದು ನಂಬಲಾಗುತ್ತದೆ. ಇದೂ ಕೂಡಾ ಅದೇ ಬಗೆಯ ವೌಢ್ಯವೇ ಆಗಿರುತ್ತದೆ. ಉಗ್ಗು ಮತ್ತು ತೊದಲು ಇರುವಂತಹ ಮಕ್ಕಳಿಗೆ ಹೇಗೆ ವಿಶೇಷ ತಂತ್ರಗಾರಿಕೆಯ ಮತ್ತು ವಿಧಾನಗಳ ಕಲಿಕೆಯಾಗಬೇಕೋ ಹಾಗೆಯೇ ನಿರ್ಗಲಿಕೆಯ ಅಥವಾ ಚುರುಕಿರದ, ನೆನಪಿನ ಸಾಮರ್ಥ್ಯವಿರದ ಮಕ್ಕಳಿಗೂ ಕೂಡಾ ವಿಶೇಷವಾದಂತಹ ವಿಧಾನಗಳನ್ನು ಅನುಸರಿಸಬೇಕು.
ಒಟ್ಟಾರೆ ಇಲ್ಲಿ ಹೇಳಬೇಕಾಗಿರುವುದು ಇಷ್ಟೇ. ನಿರ್ಗಲಿಕೆಯಂತಹ ಕಲಿಕಾ ನ್ಯೂನತೆಗಳನ್ನು ಔಷಧಿಗಳಿಂದಾಗಲಿ, ಯಂತ್ರ ಅಥವಾ ಮಂತ್ರಗಳಿಂದಾಗಲಿ ಸರಿಪಡಿಸಲು ಸಾಧ್ಯವಿಲ್ಲ. ಆದರೆ, ಕೆಲವು ವಿಶೇಷ ಕಲಿಕಾ ತಂತ್ರಗಳನ್ನು ಉಪಯೋಗಿಸಿಕೊಂಡು, ಕಲಿಸುವ ವಿಧಾನಗಳನ್ನು ಅಳವಡಿಸಿಕೊಂಡು ಅಂತಹ ಮಕ್ಕಳಿಗೆ ಕಲಿಕೆಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಬಹುದು.
ನಿರ್ಗಲಿಕೆಯ ಪರೀಕ್ಷೆಗಳು
ಒಂದು ಮಾತು ನೆನಪಿನಲ್ಲಿಟ್ಟುಕೊಳ್ಳೋಣ. ಮಕ್ಕಳು ತೀರಾ ಸಣ್ಣವರಿರುವಾಗ ಅವರು ಓದಲು, ಬರೆಯಲು, ನೆನಪಿನಲ್ಲಿಟ್ಟುಕೊಳ್ಳಲು ಅಥವಾ ನಿರ್ದೇಶನಗಳನ್ನು ಅನುಸರಿಸಲು ಕಷ್ಟಪಡುತ್ತಿದ್ದಾರೆಂದರೆ ಡಿಸ್ಲೆಕ್ಸಿಯಾ ಅಥವಾ ನಿರ್ಗಲಿಕೆ ಇದೆ ಎಂಬ ನಿರ್ಧಾರಕ್ಕೆ ಬರಬಾರದು. ಏಕೆಂದರೆ, ವಯೋಸಹಜವಾಗಿಯೂ ಕೂಡ ಕೆಲವು ಮಕ್ಕಳು ಕಲಿಕೆಗೆ ತೆರೆದುಕೊಳ್ಳಲು ತಡಮಾಡುತ್ತಾರೆ. ಅದನ್ನೆಲ್ಲಾ ನಿರ್ಗಲಿಕೆ ಎಂದುಬಿಡಬಾರದು.
ಓದುವ ಮತ್ತು ಬರೆಯುವ ಹಂತಕ್ಕೆ ಬಂದಾಗ, ಶಾಲೆಯಲ್ಲಿ ಮಗುವು ಸಮಸ್ಯೆಯನ್ನು ಎದುರಿಸುತ್ತಿದೆ ಎಂದಾದಾಗ, ಮನೆಯಲ್ಲಿಯೂ ಕೂಡಾ ಅದನ್ನು ಗಮನಿಸಿಕೊಂಡು ನಿರ್ಗಲಿಕೆಯನ್ನು ನಿಭಾಯಿಸುವಂತಹ ಕಲಿಕಾವಿಧಾನವನ್ನು ಅನುಸರಿಸಬೇಕು.
1.ಮಗುವು ಓದುವ ಸಾಮರ್ಥ್ಯವನ್ನು ಹೊಂದಿದೆಯೇ ಇಲ್ಲವೇ ಎಂಬ ಸರಳ ಮುನ್ನೋಟದ ಪರೀಕ್ಷೆ.
ಮುನ್ನೋಟದ ಪರೀಕ್ಷೆ ಎಂದು ಹೆಸರೇ ತಿಳಿಸುವಂತೆ ಮಗುವು ಅಕ್ಷರಗಳನ್ನು ಅಥವಾ ಚಿತ್ರಗಳನ್ನು ನೋಡಿ ಅದಕ್ಕೆ ಸಂಬಂಧಿಸಿರುವಂತಹ ಪದಗಳನ್ನು ಗುರುತಿಸುವ ಅಥವಾ ಓದಲಾಗದಿರುವುದನ್ನು ಪರೀಕ್ಷಿಸುವುದು. ಸುಮಾರು ಸಲ ಅವುಗಳನ್ನು ನೋಡಿದ್ದರೂ ಅವುಗಳನ್ನು ಗುರುತಿಸುತ್ತಿಲ್ಲವೆಂದರೆ ಸಮಸ್ಯೆಯನ್ನು ಸೂಕ್ಷ್ಮವಾಗಿ ಗ್ರಹಿಸಬಹುದಾಗಿದೆ.
2.ಓದು ಮತ್ತು ಬರಹದ ನ್ಯೂನತೆಗಳ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು.
ಅಕ್ಷರಗಳು ತೀರಾ ಸಾಮ್ಯತೆ ಇರುವುದನ್ನು ತಪ್ಪಾಗಿ ಗುರುತಿಸುವುದು ನ್ಯೂನತೆಯೇನಲ್ಲ. ‘ಪ’ ಮತ್ತು ‘ವ’ ಗಳನ್ನು ತಪ್ಪಾಗಿ ಗುರುತಿಸುವುದು. ಅದು ಗೊಂದಲ. ಆದರೆ, ಯಾವುದೋ ಅಕ್ಷರವನ್ನು ಮತ್ತಾವುದೋ ಅಕ್ಷರದಿಂದ ಗುರುತಿಸುವುದು ಏನನ್ನು ಸೂಚಿಸುತ್ತದೆ ಎಂದರೆ, ಮಗುವಿಗೆ ಆ ಎರಡೂ ಅಕ್ಷರಗಳು ಗೊತ್ತಾಗಿಲ್ಲ ಎಂಬುದು. ಉದಾಹರಣೆಗೆ ‘ಉ’ ಅಕ್ಷರವನ್ನು ರ ಎಂದು ಗುರುತಿಸಿತು ಎಂದಿಟ್ಟುಕೊಳ್ಳಿ. ಆಗ ಆ ಮಗುವಿಗೆ ‘ಉ’ ಮತ್ತು ‘ರ’ ಎರಡೂ ತಿಳಿದಿಲ್ಲ ಎಂದರ್ಥವಾಗುತ್ತದೆ. ಜೊತೆಗೆ ಯಾವುದೋ ಅಕ್ಷರಕ್ಕೆ ಯಾವುದನ್ನೋ ಗುರುತಿಸುವುದು, ಯಾವುದೋ ಪದಕ್ಕೆ ಯಾವುದೋ ಪದವನ್ನು ಊಹಿಸಿಕೊಂಡು ಹೇಳುವುದು ಕೂಡಾ ಆಗಬಹುದು.
3.ಆಯಾ ವಯೋಮಿತಿಯ ಮಟ್ಟಕ್ಕಿರುವ ಸಾಹಿತ್ಯವನ್ನು ಓದಲಾಗದೇ ಹೋಗುವುದು.
ಸಾಮಾನ್ಯವಾಗಿ ನಾಲ್ಕರಿಂದ ಆರು, ಏಳರಿಂದ ಒಂಬತ್ತು, ಒಂಬತ್ತರಿಂದ ಹನ್ನೊಂದು, ಹನ್ನೆರಡರಿಂದ ಹದಿನಾಲ್ಕು, ಹದಿನೈದರಿಂದ ಹದಿನೇಳು; ಹೀಗೆ ಓದುವ ಸಾಹಿತ್ಯವನ್ನು ಮತ್ತು ವಿಷಯಗಳನ್ನು ನಾವು ವಿಂಗಡಿಸಬಹುದಾಗಿರುತ್ತದೆ. ಅದರಲ್ಲೂ ವಿಷಯ ಯಾವುದಾಗಿದ್ದರೂ ಸಾಮಾನ್ಯವಾಗಿ ಬರವಣಿಗೆಯ ಶೈಲಿ ಮತ್ತು ಶಬ್ದ್ಧಸಂಪತ್ತನ್ನು ಆಧರಿಸಿ ಸಾಹಿತ್ಯ ರಚನೆ ಮಾಡಿರಲಾಗುತ್ತದೆ. ಹಾಗಿರುವಂತಹ ಸಾಹಿತ್ಯಗಳಲ್ಲಿ ಯಾವುದೋ ಕೆಲವು ಪದಗಳನ್ನು, ವಾಕ್ಯಗಳನ್ನು ತಪ್ಪಿಸಬಹುದೇ ಹೊರತು ಇನ್ನುಳಿದಂತೆ ಸರ್ವೇಸಾಧಾರಣವಾಗಿ ಶಾಲೆಗೆ ಹೋಗುವ ಮಗುವಿಗೆ ಓದಲು ಸಾಧ್ಯವಾಗಬೇಕಾಗಿರುತ್ತದೆ. ಒಂದು ವೇಳೆ ಅಂತಹ ವಯಸ್ಸಿನ ಗುಂಪಿಗೆ ಸೇರಿರುವ ಸಾಹಿತ್ಯವನ್ನು ಓದಲು ತೀರಾ ಕಷ್ಟಪಡುತ್ತಿದೆ ಎಂದರೆ, ಅಥವಾ ಓದಲು ಸಾಧ್ಯವೇ ಆಗುತ್ತಿಲ್ಲ ಎಂದರೆ ನಿರ್ಗಲಿಕೆಯ ಸೂಚನೆ ಇದೆ ಎಂದೇ ಅರ್ಥ. ಇದೇ ರೀತಿಯಲ್ಲಿ ಪೆನ್ಸಿಲ್ ಹಿಡಿದುಕೊಳ್ಳುವ, ಸಾಮಾನ್ಯ ಸೂಚನೆಗಳನ್ನು ಅನುಸರಿಸುವ ವಿಷಯಗಳಲ್ಲಿ ಮಗುವು ಪುನರಾವರ್ತಿತವಾಗಿ ಎಡವುತ್ತಿದೆ ಎಂದರೆ ಡಿಸ್ಲೆಕ್ಸಿಯಾ ಅಥವಾ ನಿರ್ಗಲಿಕೆ ಎಂಬ ನಿರ್ಧಾರಕ್ಕೆ ಬರಬಹುದು. ಮಗುವು ತೀರಾ ಚಿಕ್ಕದಾಗಿದ್ದರೂ ಕೂಡಾ ಡಿಸ್ಲೆಕ್ಸಿಯಾ ಎಂದು ನಿರ್ಧಾರ ಮಾಡದಿರುವಂತಹ ಸಂದರ್ಭಗಳಲ್ಲಿಯೂ ಕೂಡಾ ಡಿಸ್ಲೆಕ್ಸಿಯಾ ಅಥವಾ ನಿರ್ಗಲಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೋಧನಾ ಮತ್ತು ಕಲಿಕೆಯ ಕ್ರಮಗಳನ್ನು ಅನುಸರಿಸುವಂತಹ ಪದ್ಧತಿಯೇನೂ ತಪ್ಪಲ್ಲ. ಅದರಿಂದ ಏನೂ ತೊಂದರೆಯಾಗುವುದಿಲ್ಲ. ರೋಗವಿರದಿದ್ದರೂ ಅದಕ್ಕೆ ಸಂಬಂಧಿಸಿರುವಂತಹ ಔಷಧಿಗಳನ್ನು ತೆಗೆದುಕೊಳ್ಳುವುದು ತಪ್ಪಾಗುತ್ತದೆ. ಆದರೆ ನಿಧಾನ ಕಲಿಕೆಯ ಮಗುವನ್ನು ನಿರ್ಗಲಿಕೆಯ ಮಗುವೆಂದು ಗ್ರಹಿಸಿ, ನಿರ್ಗಲಿಕೆಯಲ್ಲಿನ ಕಲಿಕಾ ವಿಧಾನಗಳನ್ನು ಅನುಸರಿಸಿದರೆ ಪ್ರಮಾದವೇನೂ ಆಗುವುದಿಲ್ಲ. ಏಕೆಂದರೆ, ಇದು ಔಷಧಿಯೋ, ಚಿಕಿತ್ಸೆಯೋ ಆಗಿರದೇ ಬರಿದೇ ಕಲಿಕೆಯ ತಂತ್ರ ಮತ್ತು ಕಲಿಸುವ ವಿಧಾನವಷ್ಟೇ ಆಗಿರುತ್ತದೆ. ಯಾವುದೇ ಶಾಲೆಯಲ್ಲಿ ಮಗುವಿನ ಕಲಿಕೆಯ ಸಾಮರ್ಥ್ಯವನ್ನು ಅಳೆಯುವಂತಹ ಪರೀಕ್ಷೆಗಳನ್ನು ಮಾಡಬೇಕಾಗಿರುವುದು ಅತ್ಯವಶ್ಯವಾಗಿರುತ್ತದೆ. ಇದರಿಂದಾಗಿ ಮಗುವಿನ ಸಮಸ್ಯೆ ಮತ್ತು ಸಾಮರ್ಥ್ಯವನ್ನು ಗುರುತಿಸಬಹುದಾಗಿರುತ್ತದೆ. ಹಾಗೆಯೇ ಅದಕ್ಕೆ ತಕ್ಕಂತಹ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿರುತ್ತದೆ. ಸಾಮಾನ್ಯವಾಗಿ ನಮ್ಮ ಶಾಲೆಗಳಲ್ಲಿ ಪ್ರಶ್ನೆಗಳಿಗೆ ಉತ್ತರ ಗೊತ್ತಿದೆಯೋ ಇಲ್ಲವೋ ಎಂಬುದಷ್ಟೇ ಮಗುವಿನ ಪ್ರತಿಭೆ ಮತ್ತು ಕಲಿಕೆಯ ಮಾನದಂಡವಾಗಿರುತ್ತದೆ. ಇದು ಬಹಳ ದೊಡ್ಡ ತಪ್ಪು. ಮಗುವಿನ ಉಚ್ಚಾರಣೆ, ಸ್ವಂತ ವಾಕ್ಯಗಳನ್ನು ರಚಿಸುವುದು, ಗಣಿತ, ನಿರ್ದೇಶನಗಳನ್ನು ಗಮನಿಸುವ ಮತ್ತು ಅನುಸರಿಸುವ ರೀತಿ; ಇವೆಲ್ಲವೂ ಕೂಡ ಮುಖ್ಯವಾಗಿದ್ದು, ಮಗುವಿನ ಕಲಿಕೆಗೆ ಸಂಬಂಧಪಟ್ಟಂತೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಅದೇ ಮುಖ್ಯ. ಅದನ್ನು ಆಧರಿಸಿಯೇ ಮಗುವಿಗೆ ಯಾವ ಕಲಿಕಾ ತಂತ್ರವನ್ನು ಪ್ರಯೋಗಿಸಬಹುದು ಎಂಬುದನ್ನು ಗುರುತಿಸಬಹುದು. ಮಾಡುವಂತಹ ಹಲವು ಪರೀಕ್ಷೆಗಳಲ್ಲಿ ಮಗುವನ್ನು ಗಮನಿಸಿದ ಮೇಲೆ, ಅವನು ಸಾಧಾರಣ, ಸಾಧಾರಣಕ್ಕಿಂತ ಮೇಲಿನ ಹಂತಗಳನ್ನು ಮತ್ತು ಸಾಧಾರಣಕ್ಕಿಂತ ಕೆಳಗಿನ ಹಂತಗಳನ್ನು ಗುರುತಿಸಬಹುದು. ಅಲ್ಲದೇ ಇಂತಹ ಪರೀಕ್ಷೆಗಳನ್ನು ನಡೆಸುವುದರಿಂದ ಕಲಿಸುವವರಿಗೂ ಒಂದು ನಿರೀಕ್ಷೆಯನ್ನು ಹೊಂದಲು ಸಾಧ್ಯವಾಗುತ್ತದೆ. ತಮ್ಮದೇ ನಿರೀಕ್ಷೆಯ ಮಟ್ಟವನ್ನು ಮಗುವು ತಲುಪಿದೆಯೋ ಇಲ್ಲವೋ ಎಂಬುದನ್ನು ನೋಡಿದಾಗ ಮಗುವು ಯಾವ ಹಂತದಲ್ಲಿದೆ ಎಂಬುದು ತಿಳಿಯುತ್ತದೆ. ಹಾಗೆಯೇ ಕಲಿಸುವವರೂ ಕೂಡ ತಮ್ಮ ಕಲಿಸುವ ವಿಧಾನವನ್ನು ಪರೀಕ್ಷಿಸಿಕೊಳ್ಳಬಹುದು. ಯಾವುದೇ ರೀತಿಯ ಪರೀಕ್ಷೆಗಳನ್ನು ನಡೆಸಿದರೂ ಮತ್ತು ಅದನ್ನು ಅಳೆದರೂ ಅದನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿಲ್ಲ. ಏಕೆಂದರೆ ಅದು ಶಿಕ್ಷಕರು ಮಾತ್ರವೇ ತಮ್ಮ ಕಲಿಕೆಯ ವಿಧಾನದ ರೀತಿ ನೀತಿಗಳನ್ನು ಪರೀಕ್ಷಿಸಿಕೊಳ್ಳುವುದು. ತಮ್ಮ ನಿರೀಕ್ಷೆ ಎಷ್ಟಿದೆ ಎಂದು ಮಗುವಿಗೆ ಹೇಳುವಷ್ಟೇನಿಲ್ಲ.
ಜನವರಿ ಅಥವಾ ಫೆೆಬ್ರವರಿ ಅಷ್ಟರಹೊತ್ತಿಗೆ ಪ್ರಾರಂಭಿಕ ಪದಗಳನ್ನು ಓದಲು ಕಲಿಸಿರುತ್ತೇನೆ. ಅವುಗಳ ಕಾಗುಣಿತವನ್ನು ಕಲಿಸಿರುತ್ತೇನೆ, ಹೀಗೆ ರೂಪಿಸಿಕೊಳ್ಳಬಹುದು.
ಡಿಸ್ಲೆಕ್ಸಿಯಾವನ್ನು ಗುರುತಿಸಿದ ನಂತರ ಕೆಲವೊಂದು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
1.ಮಗುವಿನ ಹಿನ್ನೆಲೆ ಏನಿದೆ. ಮಗುವಿಗೆ ಎಂತಹ ಕೌಟುಂಬಿಕ ವಾತಾವರಣವಿದೆ. ಅವರ ಮನೆಯವರ ವಿದ್ಯಾಭ್ಯಾಸಗಳು, ಕಸುಬುಗಳು. ಅವರಲ್ಲಿ ಯಾವುದಾದರೂ ನ್ಯೂನತೆಗಳಿವೆಯೇ, ಇತ್ಯಾದಿ.
2.ಸಾಧಾರಣ ಬುದ್ಧಿಮತ್ತೆಯ ಪರೀಕ್ಷೆಯನ್ನೂ ಮತ್ತು ಸರ್ವೇ ಸಾಧಾರಣವಾದಂತಹ ಸನ್ನಿವೇಶಗಳಲ್ಲಿ ಮಗುವು ಎಂತಹ ಪ್ರತಿಕ್ರಿಯೆಗಳನ್ನು ನೀಡುತ್ತದೆ.
3.ಮಗುವು ಮಾತಾಡುವ ಕೌಶಲ್ಯ ಸಾಧಾರಣವಾಗಿ ಹೇಗಿದೆ? ಅದರ ಪದ ಸಂಪತ್ತು ಎಷ್ಟರಮಟ್ಟಿಗಿದೆ. ಪದಗಳನ್ನು ಎಷ್ಟರ ಮಟ್ಟಿಗೆ ಗುರುತಿಸುತ್ತದೆ, ಇತ್ಯಾದಿ.
4.ತಿಳಿಯದೇ ಇರುವಂತಹ ಅಥವಾ ಉಪಯೋಗಿಸದೇ ಇರುವಂತಹ ಹೊಸ ಪದಗಳನ್ನು ಹೇಗೆ ಬಿಡಿಸಿ ನೋಡುತ್ತದೆ. ಇಂಗ್ಲಿಷ್ನಲ್ಲಾದರೂ ಸರಿಯೇ ಅಥವಾ ತನ್ನ ಮಾತೃಭಾಷೆಯಲ್ಲಾದರೂ ಸರಿಯೇ. ಇದನ್ನು ಡೀಕೋಡಿಂಗ್ ಎನ್ನುತ್ತಾರೆ. ಹೊಚ್ಚ ಹೊಸ ಶಬ್ದವನ್ನು ಕಾಗುಣಿತದ ಮೂಲಕ ಓದಲು ಗುರುತಿಕೊಳ್ಳುತ್ತದೆ. ಹಾಗೆಯೇ ಅದನ್ನು ಗುರುತಿಸಲು ಯತ್ನಿಸುತ್ತದೆ. ಇದು ಎಷ್ಟರ ಮಟ್ಟಿಗಿದೆ ಎಂದು ನೋಡಿಕೊಳ್ಳಬೇಕು.
5.ಓದಿದ್ದನ್ನು ಅಥವಾ ಕೇಳಿದ್ದನ್ನು ಎಷ್ಟರ ಮಟ್ಟಿಗೆ ಮನವರಿಕೆ ಮಾಡಿಕೊಂಡು ಅದನ್ನು ಮರಳಿ ತನ್ನ ಮಾತಿನಲ್ಲಿ ಹೇಗೆ ಹೇಳುತ್ತದೆ ಎಂಬುದನ್ನು ಪರೀಕ್ಷಿಸಬೇಕು. ಇಷ್ಟೆಲ್ಲಾ ಪರೀಕ್ಷೆಗಳನ್ನು ಮಾಡಿದ ನಂತರ ನಿರ್ಗಲಿಕೆಯ ಮಕ್ಕಳಿಗೆ ಕಲಿಸುವ ವಿಧಾನಗಳನ್ನು ರೂಪಿಸಿಕೊಳ್ಳಬೇಕು.